ತುಪ್ಪ ಬೆಲ್ಲದ ರುಚಿ ಗೊತ್ತಿಲ್ದೋದ ಹೈಗರಿಲ್ಲೆ. ದಿನ ಬೆಳಗಾದರೆ ದೋಸೆ ಸಂತಿಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿಗೆ. ಬೆಳಗಿನ ತಿಂಡಿಗೆ 'ಆಸರಿಗೆ' ಹೇಳದೇ ಸರಿಯಾದ ಹವ್ಯಕ ಶಬ್ದ.
ಶಣ್ಣುಡ್ರಿಗೆ ಸಾಮಾನ್ಯವಾಗಿ ಊಟ ಅಂದರೆ ವಾಯಾರ.. ಆಸರಿಗೇನೇ ಪ್ರೀತಿ. ಯಂಗೂ ಹಂಗೇಯ. ಬೆಳಿಗ್ಗೆ - ಮಧ್ಯಾಹ್ನ- ಸಂಜೆ ಹೇಳೆಲ್ಲ ಸಂಬಂಧಿಲ್ಲೆ.. ಇಡೀ ದಿನ ಊಟದ ಬದಲಿಗೆ ಆಸರಿಗೇ ಕೊಡ್ಲಾಗಿತ್ತು.. ಈ ದೊಡ್ಡವಕೆಲ್ಲ ತಲೆ ಇಲ್ಲೆ ಅನಸ್ತಿತ್ತು 😳
ಸಂಜೆ ಶಾಲೆಮನೆ ಬಿಟ್ಟು ಮನೆಗೆ ಬಂದಕೂಡ್ಲೇಯ ಆ ಕ್ಷಣದ ದಿಡೀರ್ ಆಸರಿ - ಬೆಳಿಗ್ಗೆ ಎರೆದಿಟ್ಟು ಉಳಿದ ವಣಾ ದೋಸೆ ಅಥವಾ ವಣಾ ತೆಳ್ಳೇವು... ಜತಿಗೆ ತುಪ್ಪ-ಬೆಲ್ಲ. ಬಡಸದು ಯಾರು? - ಅಜ್ಜಿ ! ಅಮ್ಮ ಹೇಳಿ ಕರೆಯದು ರೂಢಿ. ಅದೇ ಕಾರಣಕ್ಕೆ ಈ ಅಜ್ಜಿ ಅಂದ್ರೆ ಯಂಗೆ ರಾಶೀ ಇಷ್ಟನೂವ... ಕಷ್ಟನೂವ !😀
ಮೇ ರಜೆಲೆಲ್ಲವ ಯಂಗಕ್ಕೆ ಸಂಜೆ 4 ಘಂಟೆಗಿಂತ ಮೊದಲೇ ಅರಕಲು ಗದ್ದೆ ಬೈಲಲ್ಲಿ ಆಟ ಆಡಲೆ ಹೋಪ ಗಡಬಡೆ. ಆದರೆ ಅಜ್ಜಿಯ ಕಾನೂನಿನ ಪ್ರಕಾರ ಆಸ್ರಿಗೆ ಕೊಡಲೆ 5 ಗಂಟೆ ಆಗವು. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಶ್ವಾಗೋಗ್ತು" ಹೇಳ್ತಿತ್ತು. ಒಂದು ವೇಳೆ ಆಸರಿ ಕುಡಿದೇ ಆಡಲೆ ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಹೇಳೂ ಕಾಳಜಿ ಮಾಡ್ತಿತ್ತು. ಅಜ್ಜಿಯ ಈ 'ಘಂಟೆ'ಯ ಮಿತಿ ಯಂಗೆ ಮುಖ್ಯವಾಗಿ ಆಟ ಆಡಲೋಪಲೆ ಅಲವರಕೆಯಾಗಿತ್ತು.
ಆ ದಿನ ಈ ಸಂಕಟಕ್ಕೆ ವಂದು ಉಪಾಯ ಹುಡಕ್ದೆ. ಸುಮಾರು 4 ಘಂಟೆಯಪ್ಪ ಹೊತ್ತಿಗೇ ಗಡಿಯಾರದ ಮುಳ್ಳ 5 ಘಂಟೆಯಪ್ಪ ಹಂಗೇ ತಿರುಗ್ಸದು. ಆಗ ಅಜ್ಜಿ ಆಸರಿಗೆ ಕೊಡ್ತಲೀ!.. ಹೇಳಿ ಲೆಕ್ಕ ಹಾಕ್ದಿ. ಗೋಡೆ ಗಡಿಯಾರ ಸಸಾರಕ್ಕೆ ಕೈಮುಟ್ಟತಿತ್ತಿಲ್ಲೆ.. ಸರ್ಕಸ್ಸೇ ಮಾಡಕಾತು. ಮನೆಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲು - ಮಣಭಾರ.... ಅದನ ಹೇಂಗೆ ವಕ್ಕ ಬಂಜ್ನ ಈಗಲೂ ನೆನೆಸ್ಕಂಡ್ರೆ ಆಶ್ಚರ್ಯ ಆಗ್ತು. ಆ ಕಷ್ಟ ಯಂಗೇ ಗೊತ್ತು. ಇದೆಲ್ಲ ಯಾರಿಗೂ ಕಾಣದೋದಂಗೆ ಮಾಡವು ಮತೇ. ಹಶವು ಮನಷ್ಯನತ್ರ ಎಂತೆಂತ ಮಾಡಸ್ತು ಹದಾ! 😝
ಅಂತೂ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಮಾ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?" ಹೇಳಿ ಭಾವನಾತ್ಮಕ ಪ್ರಶ್ನೆ ಹಾಕಿ... ಪಾಪ ಭಾವಾರ್ಥಿ ಅಜ್ಜಿ ಹತ್ರ ಆಸರಿ ಗಿಟ್ಟಸಗಂಡು ಆಟ ಆಡಲೆ ಪಾರ್ಗೆಲೆ.
ಆಟ ಮುಗಿಸಿ ವಾಪಸ್ ಬರಕಾರೆ ರಸ್ತೆಯ ಮೇಲೆ ಡಾಕ್ಟರ್ ಮಾವನ ರಾಜದೂತ ನಿಂತಿದ್ದು. ಮನೆಗೆ ಹೋಗಿ ನೋಡಿರೆ, ಅಜ್ಜಿ ಹಾಸಿಗೆಲಿ ಮಲಗಿದ್ದು. ಡಾಕ್ಟರ್ ಮಾವನೂ ಇದ್ದ. ಆಯಿಯ ಕೇಳ್ದಿ "ಅಮ್ಮಂಗೆಂತಾ ಆತೇ ಆಯಿ?" 😳
ಆಯಿ ಹೇಳಿದ್ದು....
ನಾನು ಆಡಲೆ ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲೆ ಹೋಜಡ ಪಾಪ ಪ್ರತೀದಿನ ಹೋಪಂಗೇ (ಗಡಿಯಾರದ) 6 ಘಂಟೆಗೆ !! ಆದರೆ ಯನ್ನ ಯಾಪಾರ ಗಡಿಯಾರ ಮುಂದಿತ್ತ ಇಲ್ಯ... ಹಾಲು ಕರೆಯ ಟೈಮಲ್ಲ. ಒಂತಾಸು ಮದ್ಲೇ ಹೋಜು ಅಜ್ಜಿ. ಎಮ್ಮೆ ಚಾಳಿ ಮಾಡಿದ್ದು.... ಎಮ್ಮೆ ಸೊರದ್ದಿಲ್ಲೆ - ಅಜ್ಜಿ ಬಿಟ್ಟಿದ್ದಿಲ್ಲೆ.... ಮತ್ತೂ ಜಗ್ಗಿಕ್ಕು. ತಗ ಎಮ್ಮೆ ಒದ್ದಿಗಿದು - ಅಜ್ಜಿ ಬಿದ್ದಿಗಿದು. 😳😀
ಅಂತೂ ಅಜ್ಜಿ ಒಂದು ವಾರ ಹಾಸಿಗೆ ಹಿಡತ್ತು. ದಿನಾ ಅದ್ರ ಸೊಂಟ ತಿಕ್ಕಿದ್ದಿ... ಪಾಪ ಪರಿಹಾರ ಆಗವಲೀ ಯಂಗೂವ.
ಯಂಗೋ ವಳಗೊಳಗೇ ಖುಷಿಯೋ ಖುಷಿ ಒಂದಬದಿಗೆ. ಆಯಿ ಆದ್ರೆ ತುಪ್ಪಕ್ಕೆ ಕಂಜೂಸಿ ಮಾಡ್ತಿಲ್ಲೆ. ಅಜ್ಜಿ ಬಿದ್ಕಂಡಿದ್ದಷ್ಟೂ ಚೊಲೋ. 😝
ಒಂದೇ ವಾರದಲ್ಲಿ ಅಜ್ಜಿ ಚುಪರಾಗೋತು. ಗಟ್ಟಿ ಜೀಂವ ಮತೇ.
ಆದರೆ ಈ ಘಟನೆಯ ನಂತರ ಎಂತಕ ಏನೇನ.... ಯಂಗೆ ಗಡಿಯಾರ ಮುಂದಿಡ ಮನಸ್ಸಾಜಿಲ್ಲೆ. ಹಾಂಗೇಯ ಅಜ್ಜಿಗೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತ ಏನೇನ... ನಾ ಕೇಳಿದಾಗೆಲ್ಲ ಆಸ್ರಿಗೆ ಕೊಡತಿತ್ತು.. ತುಪ್ಪನೂ ಕಂಜೂಸಿ ಮಾಡದ್ದೇ ಬಡಸತಿತ್ತು !
- ಶಾಂ ಭಟ್, ಭಡ್ತಿ
21/04/2022, #ಹವಿಹಾಸ್ಯ - ಲಘುನಗು
No comments:
Post a Comment