Sep 30, 2018

ಅಬ್ಳಿ ಭಟ್ರು ಮತ್ತು ಜೈಲು

ಮುನ್ನುಡಿ - ಬಹಳ ವರ್ಷಗಳ ಹಿಂದಿನ ಘಟನೆಯಿದು. ಈಗ ನೆನಪಾಗಲು ಕಾರಣ ದತ್ ಶೆಟ್ಟಿ. ಅದ್ಯಾವಾಗಲೋ ವಂದು ದಿನ ಹಳೆಯ ವಿದ್ಯಾರ್ಥಿಗಳ ಗುಂಪೊಂದರಲ್ಲಿ ಇದೇ ವಿಷಯವ ತಿರುಚಿ ಪ್ರಸ್ತಾಪ ಮಾಡಿಬಿಟ್ಟಿದ್ದ. ಅದು ಆತನ ದೌರ್ಬಲ್ಯವೋ... ನನ್ನ ಮೇಲನ (ನಾನರಿಯದ) ಕೋಪವೋ... ಹಿಂದಿರುವ ಕಾಣದ ಕೈಗಳ ಕೈವಾಡವೋ ಇರಬೇಕು ಎಂದುಕೊಳ್ಳುತ್ತೇನೆ ನಾನು.

ಆದರೆ ಆ ವಿಷಯದ ನೆನಪೀಗ ಕೆಣಕಿತಲ್ಲ. ಹಾಗಾಗಿ ಬಹುದಿನಗಳ ನಂತರ ಬರೆಯ ಕೂತೆ. ಇದೊಂದು ಕುತೂಹಲಕ್ಕಾಗಿ ವ್ಯಕ್ತಿಯೊಬ್ಬರ ಮೇಲನ ಅಕ್ಕರೆ ಮತ್ತು ಸಲುಗೆ ತಗೊಂಡು ಮಾಡಿದ ಪ್ರಾಯೋಗಿಕ ಹಾಸ್ಯ [practical joke] ವಷ್ಟೇ ಎಂದುಕೊಂಡು ಓದಿ. ಖುದ್ದು ಆ ಮನುಷ್ಯ ಕೂಡ ಸದ್ರಿ ಘಟನೆಯನ್ನು ಅವರು ಸಾಯುವವರೆಗೂ ನಾ ಭೇಟಿಯಾದಾಗಲೆಲ್ಲ ನೆನಪಿಸಿಕೊಂಡು ನಗುತ್ತಿದ್ದರು.

---1---
"ಅಬ್ಳಿ ಭಟ್ರು", ಚೌಕಗ್ರಾಮದ ಆಸುಪಾಸಿನ ಊರಿನಲ್ಲಿ ಪರಿಚಯ ಹೇಳಬೇಕಾದ ಅವಶ್ಯಕತೆಯಿಲ್ಲದ ಹೆಸರದು. ಹೆಚ್ಚಿನವರಿಗೆ ಅವರ ಅಸಲೀ ಹೆಸರು "ಶ್ರೀಪಾದ ಹೆಗಡೆ" ಎಂದೇ ಗೊತ್ತಿಲ್ಲ. "ಅಬ್ಳಿ ಹೆಗಡೆ"ರ ಮನೆ ಅವರ ಮನೆತನದ ಹೆಸರು. ಊರು ಅಂಸಳ್ಳಿ. ದೇವತೆಕೆರೆಯ ಮೂಲೆಯಲ್ಲಿತ್ತು ಅವರ ಮೂಲ ಮನೆ.

ಜವಿಕದ ಮಕ್ಕಳ ಬಾಯಲ್ಲವರು 'ಅಂಗಡಿ ಭಟ್ರಾ'ದರೆ ... ಹಿರಿಯರ ಬಾಯಲ್ಲವರು 'ಅಬ್ಳಿ ಮಾಣಿ'. ಜವಿಕದ ಕೆಳಗಡೆ ಅವರ 'ಚಾದಂಗಡಿ'. ಪಿನ್ನು ಪೆನ್ನಿನಿಂದ ಹಿಡಿದು ಮನುಷ್ಯರ, ಜಾನುವಾರುಗಳ ಹಿಂಡಿಯವರೆಗೂ ಸಿಗಬಲ್ಲ ಹೊಟೇಲಲ್ಲದ ಅಂಗಡಿಗೆ 'ಚಾದಂಗಡಿ'ಯೇ ಸೂಕ್ತ ಪದ... ವಾಡಿಕೆಯೂ ಕೂಡ.

ಶಾಲೆಯ ಹೆಚ್ಚಿನ ಮಕ್ಕಳ ಮಧ್ಯಾಹ್ನದ ಭೋಜನವೇ ಇವರ ರುಚಿಕಟ್ಟಾದ 'ಮಿಸಳ್ ಭಾಜಿ'. ಕೆಲವರು 'ಕೊಳ್ತ ಬಟಾಟೆ ಉಳ್ಳಾಗಡ್ಡೆಯ ಭಾಜಿ' ಎಂದು ಆಡಿಕೊಂಡರೂ... ಬಾಯಿಚಪ್ಪರಿಸಿ ತಿನ್ನುತ್ತಿದ್ದರು ಎಂಬುದು ಸಾರ್ವಕಾಲಿಕ ಸತ್ಯವೇ!.

-----2-----
ರಜೆಯೆಂಬುದೇ ಇಲ್ಲದ ಇಂಥ ಅಬ್ಳಿ ಭಟ್ಟರು ಒಮ್ಮೆ ವಾರಾಂತ್ಯದಲ್ಲಿ ಕರ ಹಾಕಿಬಿಟ್ಟರು.  ಎಪ್ರಿಲ್ ತಿಂಗಳ  ಶನಿವಾರ ಎಂದು ನೆನಪು. ಸಂಜೆ ನಾವು ಗೆಳೆಯರೆಲ್ಲ ಕೂಡಿ ಆಡುವ ಸಮಯ. ಯಾರೋ ಕೇಳಿದರು...
"ಅಬಾ ಅಬ್ಳಿ ಭಟ್ರು ಬಾಗ್ಲ ತೆಗಿಲೇ ಇಲ್ಲಕ!".
ಉದ್ಘಾರ ಸಹಜವೇ... ಯಾವತ್ತೂ ರಜೆ ಮಾಡದ ಅಂಗಡಿಯದು.
ನನಗೆ ಆ ದಿನ ಕಿಡಿಗೇಡಿ ಕುಚೋದ್ಯ ಬುದ್ಧಿ ಕೆಣಕಿತ್ತು ಬಹುಶಃ... ಗಂಭೀರವಾಗಿ ರಹಸ್ಯದ ವಿಷಯ ಹೇಳುವ ಹಾಗೆ ಹೇಳಿದೆ...
"ಏ ! ನಿಂಗೊತ್ತಾಗಲಿಲ್ಲವ ವಿಷಯ ?... ನಿನ್ನೆ ರಾತ್ರಿ ಪೋಲೀಸರು ಬಂದು ಭಟ್ರ ಹಿಡ್ಕಂಡೋಗಾರೆ...  !"
ಗೆಳೆಯರ ಗ್ವಾಲೆಲಿ ಕುತೂಹಲ ನೂರ್ಮಡಿಸಿತ್ತು.
"ಯಂತಕೆ ?! ಯಂತ ಆಯ್ತಂತೆ ?! ಯಂತ ಭಾನಗಡಿ ?!" ಇಡೀ ಗ್ವಾಲೆಯೇ ಕೇಳಿತು.
"ಅದೆಂತದೋ ಪಟ್ಟಿ ವ್ಯವಾರವಂತೆ ಮಾರಾಯಾ !" ಎಂದಿದ್ದು ಅಬ್ಳಿ ಭಟ್ಟರ ಅಂಗಡಿಯರಿತ ಅವರೆಲ್ಲರ ನಂಬುಗೆಯ ಬಲಪಡಿಸಲು ಸಾಕಿತ್ತು... ಆದರೂ ಸೇರಿಸಿದೆ.
"ಇವತ್ತು ಎರಡನೇ ಶನಿವಾರ, ನಾಳೆ ರವಿವಾರ... ಇನ್ನು ಸೋಮಾರ ಕೋರ್ಟ್ ಓಪನ್ ಆದಮೇಲೇ ಜಾಮೀನು.. ಪಾಪ ಭಟ್ರ ಯಾರೋ ಶಿಕ್ಸಾಕಾರೆ... ಯಾ ಸತ್ತವರೇನ ?!" ಬಲಗೊಂಡ ನಂಬುಗೆಯ ಜೊತೆ ಜೊತೆಗೇ ವಿಷಯವೂ ಬಲವಾಯ್ತು.

ಇಷ್ಟೇ ನಡೆದ ಘಟನೆ.

ಆದರೆ ನನ್ನ ಅದೃಷ್ಟವೋ, ಗ್ರಹಚಾರವೋ ಕಾಣೆ... ಮರುದಿನ ರವಿವಾರವೂ ಚಾದಂಗಡಿ ಮುಚ್ಚಿಯೇ ಇದ್ದದ್ದು.... ಪಸರಿಸಿದ ಸುದ್ದಿ ನಂಬುಗೆಯಲ್ಲಿ ಮಾರ್ಪಡಲು ಸಾಕಾಯ್ತು.
'ಪಾಪ' ಎಂದರು ಕೆಲವರು..
'ಹೌದೇನಾ ?!' ಎಂದರು ಇನ್ನು ಕೆಲವರು..
'ಸಮಾ ಆಯ್ತು' ಎಂದವರೂ ಇಲ್ಲದಿಲ್ಲ.

ಕೆಲ ಹತ್ತಿರದವರು ಮಾಡಬಹುದಾದ ಪ್ರಯತ್ನವನ್ನೂ ಮಾಡಿ ಹತಾಶರಾದರು.

----3-----
ಮೂರನೆಯ ದಿನ ಬೆಳಿಗ್ಗೆ ಅಬ್ಳಿ ಭಟ್ರು ಎಂದಿನಂತೇ ಅಂಗಡಿ ಬಾಗಿಲು ತೆರೆದರು. ಅವರು ಬರುವುದನ್ನೇ ಕಾಯುತ್ತಿದ್ಜ ಕೆಲವರು ಅವರನ್ನೇ ಗುರು ಗುರು ನೋಡುವುದ ಕಂಡು ಅವರಿಗೆ ಸ್ವಲ್ಪ ಸೋಜಿಗವೆನಿಸಿದರೂ 'ಎರಡು ದಿನ ಬಾರದುದಕ್ಕೆ ಇವರೆಲ್ಲ ಹೀಗೆ ಪ್ರಶ್ನಾರ್ಥಕವಾಗಿ ನೋಡುತ್ತಿರಬೇಕೆನೆಸಿ' ಅವರಾಗಿಯೇ ಸಮಝಾಯಿಸಿ ನೀಡಲೆತ್ನಿಸಿದರು.
"ಹಾ ಆರಾಮನ್ರೋ ?.. ಎರಡ್ ದಿನ ಅಪರೂಪಕ್ಕೆ ತಿರಗಾಟಕ್ಕೆ ಹೋಗಿದ್ದೆ.. ಹಂಗಾಗಿ ಅಂಗಡಿ ತೆಗೂಲಾಯ್ದಿಲ್ಲೆ "
ಎದುರಿದ್ದ ಗೃಹಸ್ಥರಿಗೆ ಏನೂ ವಿಚಾರಿಸದೇ ಬಂದ ಈ ಸಮಝಾಯಿಸಿ 'ಜೈಲಿಗೆ ಹೋಗಿಬಂದವನಿಂದ ಸರಿಯೇ' ಎಂದೆನಿಸಿ ಸಮಾಧಾನ ಮಾಡುವ ಪ್ರಯತ್ನ ಪಟ್ಟರು
"ಆಗತ್ರ ಭಟ್ರೇ... ಇಂತದರಲ್ಲೆಲ್ಲ ಇಪ್ದೇಯ... ಎಲ್ಲ ಸೆಟಲ್ ಆತು ಹೌದ ಅಲ್ದ.. ಆಗಲಿ ಸುರಳೀತ ಬಂದ್ರಲಿ ಸಾಕು"
ಭಟ್ರಿಗೆ ಹೊಳೆಲಿ ಮಳೆ ಹೊಯ್ದಂಗಾದರೂ ವಂತರಾ ನಕ್ಕು ಹುಂ ಗುಟ್ಟರು.

ಸಂಜೆ ನಾನು ಮತ್ತು ನಮ್ಮ ಗ್ವಾಲೆಯ ಭಟ್ರ ಕಾಲೆಳೆಯುವ ಸರದಿ. 
ಮೊದಲಿಗೆ ನಾನೇ ಅನುಕಂಪದ ಶೈಲಿ ಶುರು ಮಾಡಿದೆ
"ಭಟ್ರೇ ಎಲ್ಲ ಸುರಳೀತ ಆತ ? ಸುಮಾರು ತೆತ್ತಿಕ್ಕೇ ಬಂದ್ರ ?"
ಅವರಿಗೆ ತಲೆಬುಡ ಅರ್ಥವಾಗದು ಪಾಪ.
ನಕ್ಕು "ಎಂತ ಹೇಳತ್ಯ ನೀನು ಅರ್ಥಾಗತಿಲ್ಯಪ! ಯಂತ ಸುರಳೀತ ? ಯಂತ ತೆತ್ತುದು ?!"
ಅಷ್ಟರಲ್ಲಿ ಇನ್ನೊಬ್ಬ ಬಾಯಿ ಹಾಕಿದ
"ಅಲಾ ನಾಟಕ ಮಾಡಬೇಡಿ, ಇಡೀ ಊರಿಗೇ ಗೊತ್ತಾಗದೆ.. ಅಲ್ಲಾ ಅಂತ ಸಂದರ್ಭದಲ್ಲೂ ನಾವೆಲ್ಲ ಹಂಬಲಾಗೂದಿಲ್ಲ ನಿಮಗೆ ? ವಂದ್ ಫೋನ್ ಮಾಡಿದ್ರೆ ಬಿಡಸ್ಕ ಬರೂದಿಲ್ಲಾಗಿತ್ತು ? " ಎಂದ

ಭಟ್ರು ಅವಾಕ್ಕಾಗಿ ನಿಂತ್ರು. "ಯಂತ ಹೇಳತಿದ್ರ ನೀವೆಲ್ಲವ... ತಲೆ ಬುಡ ಹರೂದಿಲ್ಲಪ... ನಾನು ಎರ್ಡ್ ದಿನ ನೆಂಟರ ಮನೆಗೆ... ರಾಶೀ ದಿಸದಿಂದ ಹೇಳತಿದಿದ್ದ ಹೋಗಿದ್ದೆ"

"ಅದೆಲ್ಲ ಬೇಡ ಶುಕ್ರವಾರ ಸಂಜೆ ನಿಮ್ಮನ ಪೋಲಿಸರು ಹೊತ್ಗ ಹೋಗಲಿಲ್ಲ ? ಸುಳ್ ಯಂತಕೆ ಹೇಳತ್ರಿ?" ಎಂದ ಇನ್ನೊಬ್ಹ.

"ಹ್ಹೇಂ !! ಯಾರು ಈ ಸುಳ್ ಸುದ್ದಿ ಹಬ್ಸದವರು ?" ತೆರೆದ ಬಾಯಿಯ  ಭಟ್ಟರ ಉದ್ಘಾರವಿಷ್ಟೇ.

ಅದಕೂ ನಂತರ ತಗಳಿ ... ಗ್ವಾಲೆಯ ಪ್ರಶ್ನೆಗಳ ಸರಮಾಲೆ.
"ಭಟ್ರೇ ಎಲ್ ಬಿತ್ರ ?"
"ಭಟ್ರೇ ಏರೋಪ್ಲೇನ್ ನೋಡ್ಲಿಲ್ಲಾಗಿತ್ತಲಾ ನೀವು ?!"
"ಭಟ್ರೇ ಲಾಠಿ ರುಚಿ ಇರ್ತದ್ರ"
"ಸಾಕ ಬೇಕ ?"

ಈ ಕಾಲೆಳೆತ ಬಹುದಿನಗಳವರೆಗೆ ಮುಂದುವರಿದಿತ್ತು.
-----
ಭಟ್ಟರಿಗೆ ವಿಷಯ ಅರ್ಥವಾದರೂ ಬಹುದಿನಗಳ ವರೆಗೆ ಈ ವಿಷಯ ಪಸರಿಸಿದವರ್ಯಾರು ಅಂತ ತಿಳಿದಿರಲಿಲ್ಲ.
ಗ್ವಾಲೆಗೆ ಭಟ್ಟರು ಜೈಲಿಗೆ ಹೋಗಿ ಬಂದಿಲ್ಲವೆಂದೂ... ನಿಜವಾಗಿ ನೆಂಟರ ಮನೆಗೇ ಹೋಗಿದ್ದರೆಂದೂ ತಿಳಿದಿರಲಿಲ್ಲ.

ಆಮೇಲೆ ವಂದು ದಿನ ಭಟ್ರಿಗೂ, ಗ್ವಾಲೆಗೂ  ಸುಳಿವು ಹತ್ತಿ ನಾನೇ ವಿಷಯ ಉಸುರಿದ್ದೆ.

ಈಗ ಭಟ್ಟರು ನಮ್ಮನ್ನಗಲಿ ವರ್ಷವಾಯ್ತು. ಪ್ರತೀ ಸಲ ನಾ ಭೇಟಿಯಾದಾಗ ನೆನೆಸಿಕೊಳ್ತಿದ್ದರು. ಕ್ಷಮಿಸಿದ್ದರು ನನ್ನ. ಅವರ ಗುಣವೇ ಹಾಗಿತ್ತು. ಸಲುಗೆಯಿತ್ತು ನನ್ನಲ್ಲಿ. ಆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲೆಂಬ ಆಶಯದೊಂದಿಗೆ.

- ಶ್ಯಾಮ ಭಟ್ಟ, ಭಡ್ತಿ