May 17, 2020

ಗುನಗನ ಕಷ್ಟ ಗುನಗಂಗೆ

ಹಣೆಬರಹ:
        'ಗುನಗ' ಎಂಬ ಅಡ್ಡ ಹೆಸರಿನ (Sirname) ಒಂದು ಪಂಗಡ ಇದೆ ಘಟ್ಟದ ಕೆಳಗೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ವಾಲಗಕ್ಕೆ ಬಂಡಾರರು ಇರುವಂತೆಯೇ ಮೂಲತಃ ಈ ಗುನಗರೂ ಕೂಡ ದೇವರ ಸೇವೆಗಾಗಿಯೇ ಮುಡಿಪಾದ ಪ್ರಾಮಾಣಿಕ ಜನಾಂಗ.
     ಕೆಲವು ದೇವಸ್ಥಾನ ಗಳಲ್ಲಿ ಅದೂ ಸಾಮಾನ್ಯವಾಗಿ ಹೊರಾಂಗಣದ ದೇವರುಗಳಾದ ಜಟಗ, ಮಾಸ್ತಿ, ನಾಗರ,
ಚೌಡಿ ಇತ್ಯಾದಿಗಳನ್ನು ಕ್ಷುದ್ರ ದೇವತೆಗಳು ಅಥವಾ ಪರಿವಾರ ದೇವತೆಗೆಂದು ಕರೆಯುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಕೀಳ್ ದೇವರು ಅಂತಾರೆ. ಆ ವಿಷಯಕ್ಕೆ ನಾ ಹೋಗುವುದಿಲ್ಲ.
       ಸಾಮಾನ್ಯವಾಗಿ ಈ ಕ್ಷುದ್ರದೇವತೆಗಳ ಸ್ಥಾನಗಳಲ್ಲಿ ವಾರ್ಷಿಕವಾಗಿ ಬಂಡಿ ಹಬ್ಬವೆಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಬಂಡಿ ಹಬ್ಬದ ಆಕರ್ಷಕ ಸಂಪ್ರದಾಯ ವಿಶೇಷವೆಂದರೆ ಶ್ರೀ ದೇವರ ಕಲಶ ಮತ್ತು ಕೆಂಡ ಹಾಯುವ ಪ್ರಕ್ರಿಯೆ.       
       ಸಾಮಾನ್ಯವಾಗಿ ಈ ಶ್ರೀ ದೇವರ ಅಲಂಕೃತ ಕಲಶ ಹೊರುವವರು ಮೂಲತಃ ಗುನಗರ ವಂಶಜರು. ಇನ್ನು ಕೆಲವೆಡೆ ಬ್ರಾಹ್ಮಣರೇ ಗುನಗರ ಕೆಲಸ ಮಾಡುವುದೂ ಇದೆ. 
      ಕೆಂಡ ಹಾಯುವವರು ಸಾಮಾನ್ಯವಾಗಿ ಗೌಡರು ಮತ್ತೆ ಪಟಗಾರರು.
------

     ವಂದಾನೊಂದು ಕಾಲದಲ್ಲಿ ಹೀಂಗಿರ್ಪ ವಂದು ಬಂಡಿ ಹಬ್ಬದಲ್ಲಿ ... ಗುನಗನ ಕಷ್ಟದ ಕಥೆ ವ್ಯಥೆ ಇದು.
      ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ವಂದ್ ವಾರ ಮದಲೇ ಎಲ್ಲಾ ತರದ ವೃತ ಮಾಡಿಕೊಂಡು... ದೇವಸ್ಥಾನ ಭಟ್ಟರೇ ಮಂತ್ರಿಸಿಕೊಟ್ಟ ಹೊಸ ಜನಿವಾರ ಧರಿಸಿ ಕಲಶ ಹೊರಲು ಸನ್ನದ್ಧರಾಗ್ತಾರೆ.
ಅವರ ಮಾತಿನಲ್ಲೇ ಹೇಳುವುದಾದರೆ "ರಾಶೀ ನಮನಿ ವೃತ ಅದೇ" ಎನ್ನುತ್ತಾರವರು.
ಆದರೆ ದೇವಸ್ಥಾನ ಭಟ್ಟರ ಕೇಳಿದರೆ "ಎಂತದೂ ಇಲ್ಲೇ ಬೆಳಿಗ್ಗೆ ಮಿಂದ್ಕ ಬಂದ್ರಾತು" ಎಂಬ ಉತ್ತರವಿರುತ್ತಿತ್ತು.

      ಆ ವರ್ಷದ ಬಂಡಿ ಹಬ್ಬದ ಸಮಯದಲ್ಲಿ ಪ್ರತೀ ವರ್ಷದಂತೇ ಕಲಶ ಹೊರುವ ಮುದುಕ ಗುನಗನ ಆರೋಗ್ಯ ಸರಿಯಿಲ್ಲದ ಕಾರಣ ಆತ ತನ್ನ ಮಗನಿಗೆ ಆ ಜವಾಬ್ದಾರಿ ವಹಿಸಿದ. ಈ ವರ್ಷ ಮೊದಲ ಬಾರಿಗೆ ಕಲಶ ಹೊರುವ ಅವಕಾಶ ಸಿಕ್ಕ ಮಗನಿಗಾದರೋ ಒಂಥರ ಹೆಮ್ಮೆ, ನೆಲದ ಮೇಲಿರಲಿಲ್ಲ ಆತ. ಹಾಗಾಗಿ ಈ ಮರಿ ಗುನಗ ಬಂಡಿ ಹಬ್ಬದ ದಿನ ಬೆಳಗಾ ಬೆಳಗ್ಗೆ ಎದ್ದು ಮಿಂದು ಗಿಂದು ತಯಾರಾದ.. ಅವಂಗೆ ಆ ದಿನ ಜೀವನದಲ್ಲೇ ಸಿಗದ ರಾಜ ಮರ್ಯಾದೆ. ಹಾರ ತುರಾಯಿ ಹಾಕಿ ದೇವರ ಹಂಗೇ ನೋಡುತ್ತಾರಲ್ಲ. ಆತನ ಖುಷಿಗೆ ಪಾರವೇ ಇಲ್ಲ.

     ಬೆಳಗಾ ಬೆಳಗ್ಗೆ ಎದ್ದು ಹೊಸದಾಗಿ ಖರೀದಿಸಿದ ಮಡಿಯನ್ನು ಭಟ್ಟರ ಹಂಗೇ ಉಡುವ ವಿಫಲ ಪ್ರಯತ್ನ ಮಾಡಿ.. ಅಂತೂ ಅಪ್ಪನ ಸಹಾಯದಿಂದ ಉಟ್ಟು... ದೇವಸ್ಥಾನದ ಬಾಗಿಲಲ್ಲಿ ಬಂದು ಕುಂತ ಮರಿ ಗುನಗ.
       ಭಟ್ಟರು ಯಾವಾಗಲೂ 'ಸಣ್ಣ ಗುನಗಾ ಬಂದ್ಯನಾ' ಎಂದು ಏಕವಚನದಲ್ಲಿ ಕರೆವವರು.. ಇಂದು ಮಡಿ ಉಟ್ಟ ಗುನಗಂಗೆ ಸಲ್ಪ ಜಾಸ್ತಿನೇ ಮರ್ಯಾದೆ ಕೊಟ್ಟು ಮಾತಾಡಿಸಿದರು.
"ಸಣ್ಣ ಗುನಗರೇ.. ಬಂದ್ರಾ?" ಎಂದು
"ಹೌದ್ರಾ ಭಟ್ರೇ" ಅಂದ ಗುನಗ.
"ಇಷ್ಟ್ ಬೇಗ ಮಡಿ ಹಚ್ಗ ಎಂತಾ ಮಾಡ್ತ್ರಿ ಗುನಗರೇ... ಮಧ್ಯಾಹ್ನ 4 ಗಂಟೆಗೆ ಮಡಿ ಹಚ್ಚಿರೆ ಸಾಕಾಗಿತ್ತನ" ಅಂದ್ರು ಭಟ್ಟರು
ಈತ ಇನ್ನೂ ಮೂರಿಂಚು ಏರಿ ಹೋದ.
"ಇಲ್ಲ ಇಲ್ರಾ.. ತೊಂದರಿಲ್ರಾ" ಅಂದ.
"ಸರಿ" ಅಂದ್ರು ಭಟ್ರು.
       ಸರಿ ಮಧ್ಯಾಹ್ನ ಕಲಶ ಹೊರುವ ಹೊತ್ತಾಯಿತು. ಮಡಿಯ ಸಮಸ್ಯೆ ಗೊತ್ತಿದ್ದ ಭಟ್ರು ಹೇಳಿದ್ರು... "ಗುನಗರೇ... ಮೂತ್ರ ಗೀತ್ರಕ್ಕೆ ಹೋಗುದಿದ್ರೆ ಮಡಿ ಬಿಚ್ಚಾಯ್ಕಂಡು ಹೋಗ್ ಬಂದ್ ಬುಡಿ.. ಕಡೆಗೆ ಕಲಶ ಹೊತ್ತ ಮೇಲೆ ಆಗೂದಿಲ್ಲ"
"ಇಲ್ರಾ ತೊಂದ್ರಿಲ್ಲರಾ" ಅಂದ ಗುನಗ

        ತಲೆಗೆ ಮಡಿಯನ್ನೇ ಮುಂಡಾಸಿನಂತೆ ಕಟ್ಟಿ ಕಲಶ ಇವನ ತಲೆ ಮೇಲಿಡಲಾಯ್ತು.
        ತಲೆಗೆ ಕಲಶ ಏರಿದ್ದೇ ತಡ... ತಗಳಿ ಗುನಗನಿಗೆ ಶುರುವಾಯ್ತು - 'ಭಾರ'.
'ಹುಂ ಹು ಹುಂ' ಎಂದು ನುಲಿತ ಶುರು ಮಾಡಿಕೊಂಡ.
         ಖಾಯಂ ಪದ್ದತಿ ಅದು ... ಅವನ ಅಜ್ಜನೂ.. ಅಪ್ಪನೂ ಹಾಗೆಯೇ ಮಾಡುವುದ ಚಿಕ್ಕಂದಿನಿಂದ ಕಂಡಿದ್ದ. ಹಾಂಗಾಗಿ ಇವನೂ ಮಾಡ್ದ.
         ಈ ಕಲಶ ಅಂದ್ರೆ .. ದೇವರ ಸಣ್ಣ ಮೂರ್ತಿಯ ಕಲಶದಲ್ಲಿಟ್ಟು ಶೃಂಗಾರಲಂಕಾರ ಮಾಡಿ ತಲೆಯ ಮೇಲೆ ಹೊತ್ತು ಇಡೀ ಊರ ತುಂಬ ನಿಗದಿತ ಸ್ಥಳಕ್ಕೆ ನಡೆದು ಹೋಗಿ... ಅಲ್ಲಲ್ಲಿ ಅದಕ್ಕೇ ಆದ ವಿಶೇಷ ಪೂಜೆ ಸ್ವೀಕರಿಸಿ ವಾಪಸ್ ಬರುತ್ತದೆ ಕಲಶ.
         ಈ ಪೂರಾ ಪ್ರಕ್ರಿಯೆಗೆ ಸುಮಾರು 5-6 ತಾಸಾದರೂ ಆಗುತ್ತದೆ. ಕಲ್ಪನೆ ಮಾಡಿಕೊಳ್ಳಿ... ಹೊತ್ತವನ ಅವಸ್ಥೆಯ. ಆ ಕಲಶ ಹೊತ್ತಷ್ಟು ಹೊತ್ತೂ ಆತ ಬಹಿರ್ದೆಶೆಗೆ ಕೂಡ ಹೋಗುವ ಹಾಗಿಲ್ಲ ಪಾಪ. ಅದಕ್ಕಾಗಿಯೇ ಭಟ್ಟರು ಆಗಲೇ ಹೇಳಿದ್ದರು. ಎಷ್ಟಂದ್ರೂ ಪೂಜೆ ಪುನಸ್ಕಾರಗಳ ಅನುಭವ ಅವರದ್ದು.

        ಹೀಗೆ ಕಲಶ ಹೊತ್ತು ಹೊರಟ ಗುನಗನಿಗೆ ಎರಡು ಮೂರು ಬದಿಯ ಪೂಜೆ ಪುನಸ್ಕಾರ ಮುಗಿಯುವಷ್ಟರಲ್ಲೇ ಮೂತ್ರ ಭಾಧೆ ಶುರುವಾಯ್ತು. ಪಾಪ ಬೆಳಗಿನಿಂದ ಭಟ್ರು ಹೇಳಿದರೂ ಕೇಳದೇ ಮಡಿ ಉಟ್ಟು ಕುಂತ ಪರಿಣಾಮ.
ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಅನುಭವಿಯಾದ ಆತನ ಅಪ್ಪನೂ ಹೇಳಿರಲಿಲ್ಲ. ಹೇಳಬೇಕಿತ್ತು ... ಆದರೆ ಮರೆತಿರಬೇಕು. ಇವನೇನು ಮಾಡಬೇಕು ಪಾಪ. ಗುನಗನಿಗೆ ತಡೆಯಲಾರದ ಒತ್ತಡ ಶುರುವಾಯ್ತು.
ತಲೆಯ ಮೇಲೆ ಶ್ರೀ ದೇವರ ಕಲಶ. ಭಕ್ತಿ ಭಾರ ಎರಡೂ ಬರ್ತ್ತಾ ಇಲ್ಲ. ಧ್ಯಾನವೆಲ್ಲ ಆ ಒತ್ತಡದ ಕಡೆಯೇ.

          ಆಗ ಅಚಾನಕ್ಕಾಗಿ ಆತನ ತಲೆಯಲಿ ಒಂದು ಉಪಾಯ ಹೊಳೆಯಿತು !!
       ಸಾಮಾನ್ಯವಾಗಿ ಕೆಲವು ಬಾರಿ ಕಲಶ ಹೊತ್ತಾಗ 'ಭಾರ' ಬರುತ್ತದೆ ಹೊತ್ತವನಿಗೆ. ಭಾರ ಅಂದ್ರೆ ದೇವರೇ ಮೈ ಮೇಲೆ ಆಹ್ವಾಹನೆಯಾಗುವುದು.

         ಅಲ್ಲೇ ದಾರಿಯ ಪಕ್ಕದಲ್ಲಿನ ಒಂದು ಕೆರೆಯ ಹತ್ತಿರ ಬಂದಿದ್ದೇ ತಡ.. ಕಲಶಕ್ಕೆ ವಿಪರೀತ 'ಭಾರ'ದ ಆಹ್ವಾಹನೆಯಾಯ್ತು. ಮುಂದೆ ಹೋಗದೇ ಅಲ್ಲೇ ಸುತ್ತ ಗಿರಿಗಿರಿ ಸುತ್ತಲು ಶುರು ಮಾಡಿದ ಗುನಗ.
ಏನೇ ಪ್ರಯತ್ನ ಮಾಡಿದರೂ ಮುಂದೆ ಹೋಗುತ್ತಿಲ್ಲ ಕಲಶ.
         ಇಂಥ 'ಭಾರ' ಬಂದ ಪರಿಸ್ಥಿತಿಯಲ್ಲಿ ಅರ್ಚಕರು ಆ ದೇವರ ಹತ್ರ ಹೇಳಾಣೇಳಿಕೆ ಮಾಡಿಕೊಳ್ಳುತ್ತಾರೆ.... ಅವರಿಗೆ ದೇವರ ಭಾಷೆ ಅರ್ಥ ಆಗ್ತದೆ.
         ಸರಿ... ಭಟ್ಟರು ಹೇಳಾಣೇಳಿಕೆ ಶುರು ಮಾಡಿಕೊಂಡರು.
"ಶಾಂತ ಆಗಬೇಕು.. ಶಾಂತ ಆಗಬೇಕು... ಎಂತಾ ತಪ್ಪು ಆಯ್ತು ಹೇಳಿ ಹೇಳಬೇಕು.. ಯಾರು ನೀವು?"
"ಚೌಡೀ" ಅಂತು ಕಲಶ.
"ಯಾವ ಚೌಡಿ? ಏನಾಯ್ತು? ಸರಿಯಾಗಿ ಹೇಳಬೇಕು" ಭಟ್ರು ಮತ್ತೆ ಕೈ ಮುಗಿದರು.
"ಪ್ರತಿಷ್ಠೆ... ಚೌಡಿ" ಎಂದಿತು ಮತ್ತೆ ಕಲಶ ಕುಣಿಯುತ್ತ.
"ಕಳೆದ ವರ್ಷ ಅಷ್ಟೇ.. ಕಳಾಹೀನ ಆದ ಚೌಡಿಯ ಮೂರ್ತಿ ತೆಗದು ಹೊಸ ಮೂರ್ತಿ ಯಥಾ ಯೋಗ್ಯ ಪ್ರತಿಷ್ಠೆ ಮಾಡಿ ಆಗದೆ.. ಮತ್ತೆಂತ ಆಗಬೇಕು ಸ್ವಾಮಿನ್" ಅಂದ್ರು ಭಟ್ರು.
"ಹಳೇ ಮೂರ್ತಿ..." ಎಂದಿತು ದೇವರು.

ಆಗ ಭಟ್ಟರಿಗೆ 'ಧಸಕ್' ಎಂದು ಅರ್ಥ ಆಗಿ ಹೋಯ್ತು. ಎಷ್ಟಂದ್ರೂ ಮಂತ್ರ ತಂತ್ರಗಳ ಅರಿವಿದ್ದ ಅನುಭವಸ್ತ ಪೂಜಾರಿ ಅವರು.
"ಹೌದು ಮಹಾ ದೇವರೇ.. ಹಳೇ ಮೂರ್ತಿ ಇಲ್ಲೇ ಇದೇ ಕೆರೆಯಲ್ಲೇ ವಿಸರ್ಜನೆ ಮಾಡಿ ಆಗದೆ... ಈಗ ಎಂತಾ ಆಗಬೇಕು?" ಭಟ್ಟರ ಪ್ರಶ್ನೆ ಮತ್ತೆ.
"ಸೊಂಟ ಮುಳುಗುವಷ್ಟು ಎದೆ ಮಟ್ಟಕ್ಕೆ ನಿಲ್ಸೂ" ದೇವರ ಆಗ್ರಹ
ತಗಳಿ, ಅಷ್ಟು ಹೇಳಿದ್ದೇ ತಡ... ಭಟ್ರು ಬಂಡಾರಿಗಳಿಗೆ ಸಂಜ್ಞೆ ಮಾಡಿದರು.
ಕಲಶ ಕೆರೆಯತ್ತ ಹೊರಟಿತು. 

....ಅಲ್ಲಿಗೆ.....
ಎದೆಮಟ್ಟ ನೀರಿನಲ್ಲಿ ನಿಂತ ಕಲಶ ಹೊತ್ತ ಗುನಗನ ಜಲಬಾಧೆಯೂ ತೀರಿತ್ತು... ಚೌಡಿಯೂ ಶಾಂತವಾಗಿದ್ದಳು.

ಹಾಗಾಗಿ ಅದಕ್ಕೂ ನಂತರ ಈ ಗಾದೆ ನಮ್ಮಲ್ಲಿ ಚಾಲ್ತಿಯಲ್ಲಿದೆ.
"ಗುನಗನ ಕಷ್ಟ ಗುನಗಂಗೆ"
-------

ಅಫಿಡವಿಟ್:
ಇದು ಕಥೆಯಲ್ಲ ... ನಡೆದ ಘಟನೆ ಎಂದು ಹಿರಿಯರು ಹೇಳ್ತಿದ್ದರು. ಹಲವು ದಿನಗಳ ಹಿಂದೆ ಹಿರಿಯ ಶ್ರೀಕಾಂತ ಭಟ್ಟರು ಅವರದ್ದೇ ಮೂಡ್ ನಲ್ಲಿ ಈ ಕಥೆ ಹೇಳಿ ಮತ್ತೆ ನೆನಪಿನ ಮೆಲುಕು ಹಾಕಿದ್ದರು. ಮತ್ತೆ ಮೊನ್ ಮೊನ್ನೆ ಆದಿತ್ಯ ಸುಬ್ರಹ್ಮಣ್ಯ ಮತ್ತೆ ನೆನಪು ಮಾಡಿಕೊಟ್ಟ. ಅವರೆಲ್ಲರಿಗೂ ಧನ್ಯ.
ಇಂತಹ ಗ್ರಾಮೀಣ ಕಥೆಗಳ ಕಾಪಿಡುವ ಪ್ರಯತ್ನ ಅಷ್ಟೇ. ಯಾವುದೇ ಜನಾಂಗವ ಟೀಕಿಸುವುದಾಗಲೀ ... ವಿಮರ್ಶಿಸುವುದಾಗಲೀ ಅಥವಾ ಪರಿಚಯಕ್ಕಾಗಲೀ ಈ ಬರಹ ಅಲ್ಲ.

ನಮಸ್ಕಾರ.
ಶ್ಯಾಂ ಭಟ್, ಭಡ್ತಿ
17-05-2020


4 comments:

  1. ಗಾದೆ ಗೊತ್ತಿತ್ತು, ಗಾದೆಯ ಹುಟ್ಟಿಗೆ ಕಾರಣವಾದ ಘಟನೆಯ ಬಗ್ಗೆ ಗೊತ್ತಿತ್ತಿಲ್ಲೇ. ಇಂತಾದ್ದನ್ನು ಎಲ್ಲೂ record ಮಾಡದೇ ಇದ್ರೆ ಮುಂದಿನ ಜನಾಂಗಕ್ಕೆ ಗಾದೆಯ ವಾಚ್ಯಾರ್ಥ ಗೊತ್ತಾಗದೆ ಹಾಸ್ಯಾಸ್ಪದ ಆಗೋ ಸಾಧ್ಯತೆ ಇರ್ತು. ಖಂಡಿತಾ ಒಳ್ಳೇ ಪ್ರಯತ್ನ.

    ReplyDelete
  2. ಧನ್ಯವಾದ ಸುದರ್ಶನ್

    ReplyDelete
  3. ಗಾದೆಯನ್ನು ಕೇಳಿದ ನೆನಪಿತ್ತು. ಆದರೆ ನಿಮ್ಮ ಬರಹ ಓದಿದ ಮೇಲೆ ಅದರ ನಿಜವಾದ ಅರ್ಥ ತಿಳಿಯಿತು. ಚೆನ್ನಾಗಿ ಬರೆದಿದ್ದೀರಿ

    ReplyDelete
  4. ಒಳ್ಳೆ ಮಜಾ ಮಾಡಿ ಬರೆದಿದ್ರಿ. ದೇಶದ ಇನ್ನಾವುದೇ ಪ್ರದೇಶಗಳಲ್ಲಿ ಕಾಣಸಿಗದ ಈ ಗುನಗರು ಜೈನ ಮೂಲದವರಾಗಿದ್ದು ಅವರು ಪೂಜೆ ಮಾಡುವ ದೇವರುಗಳು ರೂಪಾಂತರಗೊಂಡ ಜೈ ನ ಶಕ್ತಿ ದೇವರುಗಳೆಂದು ಹೇಳಲಾತ್ತದೆ. ಈ ಗುಣಗರು ಉತ್ತರ ಕನ್ನಡದ ಅಸ್ಮಿತೆ.

    ReplyDelete