May 17, 2020

ಗುನಗನ ಕಷ್ಟ ಗುನಗಂಗೆ

ಹಣೆಬರಹ:
        'ಗುನಗ' ಎಂಬ ಅಡ್ಡ ಹೆಸರಿನ (Sirname) ಒಂದು ಪಂಗಡ ಇದೆ ಘಟ್ಟದ ಕೆಳಗೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ವಾಲಗಕ್ಕೆ ಬಂಡಾರರು ಇರುವಂತೆಯೇ ಮೂಲತಃ ಈ ಗುನಗರೂ ಕೂಡ ದೇವರ ಸೇವೆಗಾಗಿಯೇ ಮುಡಿಪಾದ ಪ್ರಾಮಾಣಿಕ ಜನಾಂಗ.
     ಕೆಲವು ದೇವಸ್ಥಾನ ಗಳಲ್ಲಿ ಅದೂ ಸಾಮಾನ್ಯವಾಗಿ ಹೊರಾಂಗಣದ ದೇವರುಗಳಾದ ಜಟಗ, ಮಾಸ್ತಿ, ನಾಗರ,
ಚೌಡಿ ಇತ್ಯಾದಿಗಳನ್ನು ಕ್ಷುದ್ರ ದೇವತೆಗಳು ಅಥವಾ ಪರಿವಾರ ದೇವತೆಗೆಂದು ಕರೆಯುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಕೀಳ್ ದೇವರು ಅಂತಾರೆ. ಆ ವಿಷಯಕ್ಕೆ ನಾ ಹೋಗುವುದಿಲ್ಲ.
       ಸಾಮಾನ್ಯವಾಗಿ ಈ ಕ್ಷುದ್ರದೇವತೆಗಳ ಸ್ಥಾನಗಳಲ್ಲಿ ವಾರ್ಷಿಕವಾಗಿ ಬಂಡಿ ಹಬ್ಬವೆಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಬಂಡಿ ಹಬ್ಬದ ಆಕರ್ಷಕ ಸಂಪ್ರದಾಯ ವಿಶೇಷವೆಂದರೆ ಶ್ರೀ ದೇವರ ಕಲಶ ಮತ್ತು ಕೆಂಡ ಹಾಯುವ ಪ್ರಕ್ರಿಯೆ.       
       ಸಾಮಾನ್ಯವಾಗಿ ಈ ಶ್ರೀ ದೇವರ ಅಲಂಕೃತ ಕಲಶ ಹೊರುವವರು ಮೂಲತಃ ಗುನಗರ ವಂಶಜರು. ಇನ್ನು ಕೆಲವೆಡೆ ಬ್ರಾಹ್ಮಣರೇ ಗುನಗರ ಕೆಲಸ ಮಾಡುವುದೂ ಇದೆ. 
      ಕೆಂಡ ಹಾಯುವವರು ಸಾಮಾನ್ಯವಾಗಿ ಗೌಡರು ಮತ್ತೆ ಪಟಗಾರರು.
------

     ವಂದಾನೊಂದು ಕಾಲದಲ್ಲಿ ಹೀಂಗಿರ್ಪ ವಂದು ಬಂಡಿ ಹಬ್ಬದಲ್ಲಿ ... ಗುನಗನ ಕಷ್ಟದ ಕಥೆ ವ್ಯಥೆ ಇದು.
      ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ವಂದ್ ವಾರ ಮದಲೇ ಎಲ್ಲಾ ತರದ ವೃತ ಮಾಡಿಕೊಂಡು... ದೇವಸ್ಥಾನ ಭಟ್ಟರೇ ಮಂತ್ರಿಸಿಕೊಟ್ಟ ಹೊಸ ಜನಿವಾರ ಧರಿಸಿ ಕಲಶ ಹೊರಲು ಸನ್ನದ್ಧರಾಗ್ತಾರೆ.
ಅವರ ಮಾತಿನಲ್ಲೇ ಹೇಳುವುದಾದರೆ "ರಾಶೀ ನಮನಿ ವೃತ ಅದೇ" ಎನ್ನುತ್ತಾರವರು.
ಆದರೆ ದೇವಸ್ಥಾನ ಭಟ್ಟರ ಕೇಳಿದರೆ "ಎಂತದೂ ಇಲ್ಲೇ ಬೆಳಿಗ್ಗೆ ಮಿಂದ್ಕ ಬಂದ್ರಾತು" ಎಂಬ ಉತ್ತರವಿರುತ್ತಿತ್ತು.

      ಆ ವರ್ಷದ ಬಂಡಿ ಹಬ್ಬದ ಸಮಯದಲ್ಲಿ ಪ್ರತೀ ವರ್ಷದಂತೇ ಕಲಶ ಹೊರುವ ಮುದುಕ ಗುನಗನ ಆರೋಗ್ಯ ಸರಿಯಿಲ್ಲದ ಕಾರಣ ಆತ ತನ್ನ ಮಗನಿಗೆ ಆ ಜವಾಬ್ದಾರಿ ವಹಿಸಿದ. ಈ ವರ್ಷ ಮೊದಲ ಬಾರಿಗೆ ಕಲಶ ಹೊರುವ ಅವಕಾಶ ಸಿಕ್ಕ ಮಗನಿಗಾದರೋ ಒಂಥರ ಹೆಮ್ಮೆ, ನೆಲದ ಮೇಲಿರಲಿಲ್ಲ ಆತ. ಹಾಗಾಗಿ ಈ ಮರಿ ಗುನಗ ಬಂಡಿ ಹಬ್ಬದ ದಿನ ಬೆಳಗಾ ಬೆಳಗ್ಗೆ ಎದ್ದು ಮಿಂದು ಗಿಂದು ತಯಾರಾದ.. ಅವಂಗೆ ಆ ದಿನ ಜೀವನದಲ್ಲೇ ಸಿಗದ ರಾಜ ಮರ್ಯಾದೆ. ಹಾರ ತುರಾಯಿ ಹಾಕಿ ದೇವರ ಹಂಗೇ ನೋಡುತ್ತಾರಲ್ಲ. ಆತನ ಖುಷಿಗೆ ಪಾರವೇ ಇಲ್ಲ.

     ಬೆಳಗಾ ಬೆಳಗ್ಗೆ ಎದ್ದು ಹೊಸದಾಗಿ ಖರೀದಿಸಿದ ಮಡಿಯನ್ನು ಭಟ್ಟರ ಹಂಗೇ ಉಡುವ ವಿಫಲ ಪ್ರಯತ್ನ ಮಾಡಿ.. ಅಂತೂ ಅಪ್ಪನ ಸಹಾಯದಿಂದ ಉಟ್ಟು... ದೇವಸ್ಥಾನದ ಬಾಗಿಲಲ್ಲಿ ಬಂದು ಕುಂತ ಮರಿ ಗುನಗ.
       ಭಟ್ಟರು ಯಾವಾಗಲೂ 'ಸಣ್ಣ ಗುನಗಾ ಬಂದ್ಯನಾ' ಎಂದು ಏಕವಚನದಲ್ಲಿ ಕರೆವವರು.. ಇಂದು ಮಡಿ ಉಟ್ಟ ಗುನಗಂಗೆ ಸಲ್ಪ ಜಾಸ್ತಿನೇ ಮರ್ಯಾದೆ ಕೊಟ್ಟು ಮಾತಾಡಿಸಿದರು.
"ಸಣ್ಣ ಗುನಗರೇ.. ಬಂದ್ರಾ?" ಎಂದು
"ಹೌದ್ರಾ ಭಟ್ರೇ" ಅಂದ ಗುನಗ.
"ಇಷ್ಟ್ ಬೇಗ ಮಡಿ ಹಚ್ಗ ಎಂತಾ ಮಾಡ್ತ್ರಿ ಗುನಗರೇ... ಮಧ್ಯಾಹ್ನ 4 ಗಂಟೆಗೆ ಮಡಿ ಹಚ್ಚಿರೆ ಸಾಕಾಗಿತ್ತನ" ಅಂದ್ರು ಭಟ್ಟರು
ಈತ ಇನ್ನೂ ಮೂರಿಂಚು ಏರಿ ಹೋದ.
"ಇಲ್ಲ ಇಲ್ರಾ.. ತೊಂದರಿಲ್ರಾ" ಅಂದ.
"ಸರಿ" ಅಂದ್ರು ಭಟ್ರು.
       ಸರಿ ಮಧ್ಯಾಹ್ನ ಕಲಶ ಹೊರುವ ಹೊತ್ತಾಯಿತು. ಮಡಿಯ ಸಮಸ್ಯೆ ಗೊತ್ತಿದ್ದ ಭಟ್ರು ಹೇಳಿದ್ರು... "ಗುನಗರೇ... ಮೂತ್ರ ಗೀತ್ರಕ್ಕೆ ಹೋಗುದಿದ್ರೆ ಮಡಿ ಬಿಚ್ಚಾಯ್ಕಂಡು ಹೋಗ್ ಬಂದ್ ಬುಡಿ.. ಕಡೆಗೆ ಕಲಶ ಹೊತ್ತ ಮೇಲೆ ಆಗೂದಿಲ್ಲ"
"ಇಲ್ರಾ ತೊಂದ್ರಿಲ್ಲರಾ" ಅಂದ ಗುನಗ

        ತಲೆಗೆ ಮಡಿಯನ್ನೇ ಮುಂಡಾಸಿನಂತೆ ಕಟ್ಟಿ ಕಲಶ ಇವನ ತಲೆ ಮೇಲಿಡಲಾಯ್ತು.
        ತಲೆಗೆ ಕಲಶ ಏರಿದ್ದೇ ತಡ... ತಗಳಿ ಗುನಗನಿಗೆ ಶುರುವಾಯ್ತು - 'ಭಾರ'.
'ಹುಂ ಹು ಹುಂ' ಎಂದು ನುಲಿತ ಶುರು ಮಾಡಿಕೊಂಡ.
         ಖಾಯಂ ಪದ್ದತಿ ಅದು ... ಅವನ ಅಜ್ಜನೂ.. ಅಪ್ಪನೂ ಹಾಗೆಯೇ ಮಾಡುವುದ ಚಿಕ್ಕಂದಿನಿಂದ ಕಂಡಿದ್ದ. ಹಾಂಗಾಗಿ ಇವನೂ ಮಾಡ್ದ.
         ಈ ಕಲಶ ಅಂದ್ರೆ .. ದೇವರ ಸಣ್ಣ ಮೂರ್ತಿಯ ಕಲಶದಲ್ಲಿಟ್ಟು ಶೃಂಗಾರಲಂಕಾರ ಮಾಡಿ ತಲೆಯ ಮೇಲೆ ಹೊತ್ತು ಇಡೀ ಊರ ತುಂಬ ನಿಗದಿತ ಸ್ಥಳಕ್ಕೆ ನಡೆದು ಹೋಗಿ... ಅಲ್ಲಲ್ಲಿ ಅದಕ್ಕೇ ಆದ ವಿಶೇಷ ಪೂಜೆ ಸ್ವೀಕರಿಸಿ ವಾಪಸ್ ಬರುತ್ತದೆ ಕಲಶ.
         ಈ ಪೂರಾ ಪ್ರಕ್ರಿಯೆಗೆ ಸುಮಾರು 5-6 ತಾಸಾದರೂ ಆಗುತ್ತದೆ. ಕಲ್ಪನೆ ಮಾಡಿಕೊಳ್ಳಿ... ಹೊತ್ತವನ ಅವಸ್ಥೆಯ. ಆ ಕಲಶ ಹೊತ್ತಷ್ಟು ಹೊತ್ತೂ ಆತ ಬಹಿರ್ದೆಶೆಗೆ ಕೂಡ ಹೋಗುವ ಹಾಗಿಲ್ಲ ಪಾಪ. ಅದಕ್ಕಾಗಿಯೇ ಭಟ್ಟರು ಆಗಲೇ ಹೇಳಿದ್ದರು. ಎಷ್ಟಂದ್ರೂ ಪೂಜೆ ಪುನಸ್ಕಾರಗಳ ಅನುಭವ ಅವರದ್ದು.

        ಹೀಗೆ ಕಲಶ ಹೊತ್ತು ಹೊರಟ ಗುನಗನಿಗೆ ಎರಡು ಮೂರು ಬದಿಯ ಪೂಜೆ ಪುನಸ್ಕಾರ ಮುಗಿಯುವಷ್ಟರಲ್ಲೇ ಮೂತ್ರ ಭಾಧೆ ಶುರುವಾಯ್ತು. ಪಾಪ ಬೆಳಗಿನಿಂದ ಭಟ್ರು ಹೇಳಿದರೂ ಕೇಳದೇ ಮಡಿ ಉಟ್ಟು ಕುಂತ ಪರಿಣಾಮ.
ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಅನುಭವಿಯಾದ ಆತನ ಅಪ್ಪನೂ ಹೇಳಿರಲಿಲ್ಲ. ಹೇಳಬೇಕಿತ್ತು ... ಆದರೆ ಮರೆತಿರಬೇಕು. ಇವನೇನು ಮಾಡಬೇಕು ಪಾಪ. ಗುನಗನಿಗೆ ತಡೆಯಲಾರದ ಒತ್ತಡ ಶುರುವಾಯ್ತು.
ತಲೆಯ ಮೇಲೆ ಶ್ರೀ ದೇವರ ಕಲಶ. ಭಕ್ತಿ ಭಾರ ಎರಡೂ ಬರ್ತ್ತಾ ಇಲ್ಲ. ಧ್ಯಾನವೆಲ್ಲ ಆ ಒತ್ತಡದ ಕಡೆಯೇ.

          ಆಗ ಅಚಾನಕ್ಕಾಗಿ ಆತನ ತಲೆಯಲಿ ಒಂದು ಉಪಾಯ ಹೊಳೆಯಿತು !!
       ಸಾಮಾನ್ಯವಾಗಿ ಕೆಲವು ಬಾರಿ ಕಲಶ ಹೊತ್ತಾಗ 'ಭಾರ' ಬರುತ್ತದೆ ಹೊತ್ತವನಿಗೆ. ಭಾರ ಅಂದ್ರೆ ದೇವರೇ ಮೈ ಮೇಲೆ ಆಹ್ವಾಹನೆಯಾಗುವುದು.

         ಅಲ್ಲೇ ದಾರಿಯ ಪಕ್ಕದಲ್ಲಿನ ಒಂದು ಕೆರೆಯ ಹತ್ತಿರ ಬಂದಿದ್ದೇ ತಡ.. ಕಲಶಕ್ಕೆ ವಿಪರೀತ 'ಭಾರ'ದ ಆಹ್ವಾಹನೆಯಾಯ್ತು. ಮುಂದೆ ಹೋಗದೇ ಅಲ್ಲೇ ಸುತ್ತ ಗಿರಿಗಿರಿ ಸುತ್ತಲು ಶುರು ಮಾಡಿದ ಗುನಗ.
ಏನೇ ಪ್ರಯತ್ನ ಮಾಡಿದರೂ ಮುಂದೆ ಹೋಗುತ್ತಿಲ್ಲ ಕಲಶ.
         ಇಂಥ 'ಭಾರ' ಬಂದ ಪರಿಸ್ಥಿತಿಯಲ್ಲಿ ಅರ್ಚಕರು ಆ ದೇವರ ಹತ್ರ ಹೇಳಾಣೇಳಿಕೆ ಮಾಡಿಕೊಳ್ಳುತ್ತಾರೆ.... ಅವರಿಗೆ ದೇವರ ಭಾಷೆ ಅರ್ಥ ಆಗ್ತದೆ.
         ಸರಿ... ಭಟ್ಟರು ಹೇಳಾಣೇಳಿಕೆ ಶುರು ಮಾಡಿಕೊಂಡರು.
"ಶಾಂತ ಆಗಬೇಕು.. ಶಾಂತ ಆಗಬೇಕು... ಎಂತಾ ತಪ್ಪು ಆಯ್ತು ಹೇಳಿ ಹೇಳಬೇಕು.. ಯಾರು ನೀವು?"
"ಚೌಡೀ" ಅಂತು ಕಲಶ.
"ಯಾವ ಚೌಡಿ? ಏನಾಯ್ತು? ಸರಿಯಾಗಿ ಹೇಳಬೇಕು" ಭಟ್ರು ಮತ್ತೆ ಕೈ ಮುಗಿದರು.
"ಪ್ರತಿಷ್ಠೆ... ಚೌಡಿ" ಎಂದಿತು ಮತ್ತೆ ಕಲಶ ಕುಣಿಯುತ್ತ.
"ಕಳೆದ ವರ್ಷ ಅಷ್ಟೇ.. ಕಳಾಹೀನ ಆದ ಚೌಡಿಯ ಮೂರ್ತಿ ತೆಗದು ಹೊಸ ಮೂರ್ತಿ ಯಥಾ ಯೋಗ್ಯ ಪ್ರತಿಷ್ಠೆ ಮಾಡಿ ಆಗದೆ.. ಮತ್ತೆಂತ ಆಗಬೇಕು ಸ್ವಾಮಿನ್" ಅಂದ್ರು ಭಟ್ರು.
"ಹಳೇ ಮೂರ್ತಿ..." ಎಂದಿತು ದೇವರು.

ಆಗ ಭಟ್ಟರಿಗೆ 'ಧಸಕ್' ಎಂದು ಅರ್ಥ ಆಗಿ ಹೋಯ್ತು. ಎಷ್ಟಂದ್ರೂ ಮಂತ್ರ ತಂತ್ರಗಳ ಅರಿವಿದ್ದ ಅನುಭವಸ್ತ ಪೂಜಾರಿ ಅವರು.
"ಹೌದು ಮಹಾ ದೇವರೇ.. ಹಳೇ ಮೂರ್ತಿ ಇಲ್ಲೇ ಇದೇ ಕೆರೆಯಲ್ಲೇ ವಿಸರ್ಜನೆ ಮಾಡಿ ಆಗದೆ... ಈಗ ಎಂತಾ ಆಗಬೇಕು?" ಭಟ್ಟರ ಪ್ರಶ್ನೆ ಮತ್ತೆ.
"ಸೊಂಟ ಮುಳುಗುವಷ್ಟು ಎದೆ ಮಟ್ಟಕ್ಕೆ ನಿಲ್ಸೂ" ದೇವರ ಆಗ್ರಹ
ತಗಳಿ, ಅಷ್ಟು ಹೇಳಿದ್ದೇ ತಡ... ಭಟ್ರು ಬಂಡಾರಿಗಳಿಗೆ ಸಂಜ್ಞೆ ಮಾಡಿದರು.
ಕಲಶ ಕೆರೆಯತ್ತ ಹೊರಟಿತು. 

....ಅಲ್ಲಿಗೆ.....
ಎದೆಮಟ್ಟ ನೀರಿನಲ್ಲಿ ನಿಂತ ಕಲಶ ಹೊತ್ತ ಗುನಗನ ಜಲಬಾಧೆಯೂ ತೀರಿತ್ತು... ಚೌಡಿಯೂ ಶಾಂತವಾಗಿದ್ದಳು.

ಹಾಗಾಗಿ ಅದಕ್ಕೂ ನಂತರ ಈ ಗಾದೆ ನಮ್ಮಲ್ಲಿ ಚಾಲ್ತಿಯಲ್ಲಿದೆ.
"ಗುನಗನ ಕಷ್ಟ ಗುನಗಂಗೆ"
-------

ಅಫಿಡವಿಟ್:
ಇದು ಕಥೆಯಲ್ಲ ... ನಡೆದ ಘಟನೆ ಎಂದು ಹಿರಿಯರು ಹೇಳ್ತಿದ್ದರು. ಹಲವು ದಿನಗಳ ಹಿಂದೆ ಹಿರಿಯ ಶ್ರೀಕಾಂತ ಭಟ್ಟರು ಅವರದ್ದೇ ಮೂಡ್ ನಲ್ಲಿ ಈ ಕಥೆ ಹೇಳಿ ಮತ್ತೆ ನೆನಪಿನ ಮೆಲುಕು ಹಾಕಿದ್ದರು. ಮತ್ತೆ ಮೊನ್ ಮೊನ್ನೆ ಆದಿತ್ಯ ಸುಬ್ರಹ್ಮಣ್ಯ ಮತ್ತೆ ನೆನಪು ಮಾಡಿಕೊಟ್ಟ. ಅವರೆಲ್ಲರಿಗೂ ಧನ್ಯ.
ಇಂತಹ ಗ್ರಾಮೀಣ ಕಥೆಗಳ ಕಾಪಿಡುವ ಪ್ರಯತ್ನ ಅಷ್ಟೇ. ಯಾವುದೇ ಜನಾಂಗವ ಟೀಕಿಸುವುದಾಗಲೀ ... ವಿಮರ್ಶಿಸುವುದಾಗಲೀ ಅಥವಾ ಪರಿಚಯಕ್ಕಾಗಲೀ ಈ ಬರಹ ಅಲ್ಲ.

ನಮಸ್ಕಾರ.
ಶ್ಯಾಂ ಭಟ್, ಭಡ್ತಿ
17-05-2020


Jan 22, 2020

ಮುಂಬಯಿ

ಮಾಯಾನಗರಿ ಮುಂಬಯಿಯ ಜೀವಾಳ (ಲೈಫ್ ಲೈನ್) ಎಂದೇ ಕರೆಸಿಕೊಳ್ಳುವ ಲೋಕಲ್ ರೈಲಿನ ಪ್ರಯಾಣ ಅದೂ ಮಹಿಳೆಯರಿಗೆ ಎಷ್ಟು ಕಷ್ಟವೆ೦ಬುದನ್ನು ದಿನವೂ ಪ್ರಯಾಣಿಸುವ ನನ್ನ೦ತಹವರು ಮಾತ್ರವೇ ಹೇಳಬಲ್ಲರು. . ದಾದರ್ ನ ಆ ಜನನಿಭಿಢ ಸೆ೦ಟ್ರಲ್ ರೈಲ್ವೇ ಸ್ಟೇಶನ್ನಿನ ಪ್ಲಾಟ್ ಫಾರ್ಮ್ ನ ಕಡೆಗೆ ಲೋಕಲ್ ’ಹಿಡಿಯುವ’ ತರಾತುರಿಯಲ್ಲಿ ಓಡತೊಡಗಿದ್ದೆ. ಬಾ೦ದ್ರಾ ದಿ೦ದ ಥಾಣೆ ಗೆ ದಿನವೂ ಪ್ರಯಾಣ ನನ್ನ ನಿತ್ಯಕರ್ಮ. 8:14ರ ಫಾಸ್ಟ್ ಲೋಕಲ್ ತಪ್ಪಿದರೆ ನಾನು ಸಮಯಕ್ಕೆ ಸರಿಯಾಗಿ ನನ್ನ ಕರ್ತವ್ಯಕ್ಕೆ ತಲುಪಲಾರೆ. ತಲುಪಿಲ್ಲವೆ೦ದಾದರೆ.. ಎಂದೆಲ್ಲ ಮನದಲ್ಲಿ ಬ೦ದು ಓಡುವ ವೇಗ ತನ್ನಿ೦ತಾನೇ ಜಾಸ್ತಿಯಾಯ್ತು. ಮನೆ ಬಿಡಲು ಮೊದಲೇ ತಡವಾಗಿತ್ತು. ಬೆಳ್ಳಿಗ್ಗೆ ಜಗಳ ಮಾಡಿದ ತಮ್ಮನ ಮೇಲಿನ ಸಿಟ್ಟು ಇನ್ನೂ ತಣಿದಿರಲಿಲ್ಲ.

ಗಾಡಿ ಬ೦ದು ನಿ೦ತುಬಿಟ್ಟಿತ್ತಾದ್ದರಿ೦ದ... ಮಹಿಳೆಯರ ಕ೦ಪಾರ್ಟ್ಮೆ೦ಟ್ ವರೆಗೆ ತಲುಪುವುದು ಅಸಾಧ್ಯವೆ೦ದುಕೊ೦ಡು ಸಾಮಾನ್ಯ ಡಬ್ಬಕ್ಕೇ ನುಗ್ಗುವುದೆ೦ದುಕೊ೦ಡೆ . ಆ ತರಾತುರಿಯಲ್ಲಿ ಅಕ್ಕಪಕ್ಕದವರು ಗಮನಕ್ಕೆ ಬರುವುದಿಲ್ಲ. ಗಮನಿಸಿದರೆ ನೀವು ಗಾಡಿ ತಪ್ಪಿಸಿಕೊಳ್ಳುವುದು ಪಕ್ಕಾ... ನುಗ್ಗಾಟದ ಭರದಲ್ಲಿ ನನ್ನ ಬಲಗಡೆಯಿ೦ದ ಯಾರೋ ಒಬ್ಬ ನನ್ನನ್ನು ದಬ್ಬಿದ.. ಸಾಮಾನ್ಯವಾಗಿ ಲೋಕಲ್ ನಲ್ಲಿ ಇದು ಸಾಮಾನ್ಯವೇ ಆದರೂ ಹುಡುಗಿಯೊಬ್ಬಳನ್ನು ಹುಡುಗನೊಬ್ಬ ತಳ್ಳಿದನೆ೦ದರೆ ಅದು ಸಾಮಾನ್ಯ ವಿಷಯವಾಗಲಾರದು.

ತಮ್ಮನ ಮೇಲಿನ ಸಿಟ್ಟು ಇಮ್ಮಡಿಯಾಯ್ತು. ತಳ್ಳಿದ ಅನಾಮಧೇಯನಿಗೆ ಬಯ್ಯುವ ವಿವೇಚನೆಗೂ ಮೊದಲೇ ನನ್ನ ಕೈ ’ಚಟಾರ್’ ಎ೦ಬ ಶಬ್ದದೊ೦ದಿಗೆ ಆತನ ಕೆನ್ನೆಯನ್ನ ತಾಡಿಸಿತ್ತು. ಆತನ ಕಣ್ಣಿಗೆ ಹಾಕಿದ್ದ ಕಪ್ಪು ಗಾಜಿನ ಕನ್ನಡಕ ಬಿದ್ದು ಚೂರಾಯ್ತು.
ಆಗಲೂ ನನ್ನ ಸಿಟ್ಟು ಕಮ್ಮಿಯಾಗಲಿಲ್ಲ... ಮತ್ತೊ೦ದು ಬಿಡೋಣವೆ೦ದು ಅವನ ಕೆನ್ನೆಯ ಕಡೆಗೇ ಕೈ ಚಲಿಸಲಿತ್ತು. ಆಗಲೇ ನಾನು ಆತನ ಮುಖದತ್ತ ನನ್ನ ಗಮನ ಹರಿಯಿತು. -
ಎಡ ಪಾರ್ಶ್ವದ ಕಣ್ಣೇ ಇರಲಿಲ್ಲವಲ್ಲ ಅವನಿಗೆ. !!!!
ಆದ್ದರಿ೦ದಲೇ ಮು೦ದಿನ ಎಡ ಪಾರ್ಶ್ವ ಕಾಣುತ್ತಿರಲಿಲ್ಲ !!! ಅವನು ದಬ್ಬಿದ್ದರಲ್ಲಿ ಆತನ ತಪ್ಪಿರಲಿಲ್ಲ. "sorry ಮೇಡಮ್" ಎ೦ದ ಆತ ಒಡೆದುಹೋದ ಕನ್ನಡಕ ಹಾಗೂ ಅದರ ಚೂರುಗಳನ್ನು ಆಯ್ದುಕೊಳ್ಳತೊಡಗಿದ.

ಒಮ್ಮೆಲೇ ಕುಸಿದು ಹೋದೆ. ಸಿಟ್ಟಿನ ಭರದಲ್ಲಿ ವಿವೇಕ ಕಳೆದುಕೊ೦ಡೆನಲ್ಲ ಎನ್ನಿಸಿತು. ಮನಸ್ಸು ’ಛೀ’ ಎ೦ದ೦ತಾಯಿತು ಒಮ್ಮೆ.
ಕನ್ನಡಕದ ಚೂರುಗಳನ್ನು ಆಯ್ದು ಹೆಕ್ಕಿ ಕಸದ ಬುಟ್ಟಿಗೆ ಹಾಕಿಬ೦ದು "ಕ್ಷಮಿಸಿ ಮೇಡಮ್" ಎ೦ದ ಆತನ ಆ ಬಲಗಣ್ಣಿನ ಹೊಳಪಿನಲ್ಲಿ ತಪ್ಪಿನ ಭಾವ ಸರಿಯಾಗಿಯೇ ವ್ಯಕ್ತವಾಗುತ್ತಿತ್ತು.

  ನನ್ನ ಕಣ್ಣುಗಳು ತೇವವಾಗಿದ್ದವು... ಮ೦ಜಾಗಿದ್ದವು. ಮು೦ದಿನ ೩ ಟ್ರೈನ್ ಗಳನ್ನು ಹಿಡಿಯದಾದೆ.

12/06/2011 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು )

ಒಲವಿನ ಓಲೆ

ಪ್ರೀತಿಯ ಪುಟಾಣಿ ...


ನನ್ನ ಪ್ರೀತಿಯ ಹೇಗೆ ವರ್ಣಿಸಲಿ? ವರ್ಣನೆ ಬಿಡು - ಹೇಗೆ ತಿಳಿಸಿ ಹೇಳಲಿ ? ನಾನೆಷ್ಟು ನಿನ್ನ ಪ್ರೀತಿಸುವೆನೆಂದು ನಿನಗೆ ಅರ್ಥ ಮಾಡಿ ಹೇಳುವಷ್ಟು ಬುದ್ಧಿಯೂ ನನಗಿಲ್ಲ ಎನ್ನಲೇ? ಅಥವಾ ನನ್ನ ಭಾಷೆ ನಿನಗೆ ಅರ್ಥವಾಗದಷ್ಟು ಕೆಟ್ಟದಾಗಿದೆ ಎನ್ನಲೇ? ನಿನ್ನನ್ನೆಷ್ಟು ಪ್ರೀತಿಸುತ್ತೇನೆಂದು ಹೇಗೆ ಹೇಳಲಿ ಚಿನ್ನಾ?


ಹಾಗಂತ ನಿನ್ನ ನನ್ನ ಪ್ರೇಮ ಎಷ್ಟು ಗಾಢವಾದದ್ದೆಂದು ನಾವಿಬ್ಬರೇ ಅಲ್ಲ ನಿನ್ನಮ್ಮನೂ ಬಲ್ಲಳು. ನಿನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖ ನಾನಲ್ಲ. ನಿನ್ನೆ ನನ್ನೆದೆಯ ಮೇಲೆ ಮಲಗಿ ನಿದ್ದೆ ಹೋದೆಯಲ್ಲ ಆಗಲೇ ಗೊತ್ತಾಯ್ತ ನಿನ್ನ ಪ್ರೀತಿಯ ಆಳ. ಇಂದು ನಿನ್ನ ಆ ಪುಟ್ಟ ಕೈಗಳ ಮೇಲೆ ನ ತಲೆಯಿಟ್ಟು ಮಲಗಿ ನಿನ್ನ ಭವಿಷ್ಯದ ಕನಸು ಕನಸಿದೆನಲ್ಲ - ನಿನ್ನ ಅದ್ಯಾವುದೋ ಭಾಷೆಯಿಂದ ನೀ ಏನೇನೋ ಗೊಣಗಿದೆಯಲ್ಲ... ಆ ಭಾಷೆ ನನಗರ್ಥವಾಗದಿದ್ದರೂ ನಿನ್ನ ಪ್ರೀತಿಯ ಅರಿತೆ ಮುದ್ದೂ . ಆ ನಿನ್ನ ಮೂಕ ಭಾಷೆಯಲ್ಲಿ ಎಷ್ಟೊಂದು ಒಲವಿತ್ತು !! ಆ ನಿನ್ನ ಒಂದೇ ಒಂದು ನಗು ನನ್ನ ಎಲ್ಲ ಚಿಂತೆಗಳನ್ನ ದೂರ ಮಾಡುತ್ತಲ್ಲ !! ಆಶ್ಚರ್ಯವಾಗ್ತಿದೆ ನನಗೆ.


ನಿನ್ನ ಮೇಲಿನ ನನ್ನ ಪ್ರೀತಿ.. ಅದು ಪ್ರೀತಿಯಾ?? ಪ್ರೇಮವಾ? ವಾತ್ಸಲ್ಯವಾ? ಅರಿಯಲಾರದಷ್ಟು ಅಜ್ಞಾನಿ ನಾನು. ನಿನಗೇನಾದರೂ ಅರ್ಥವಾದರೆ ದಯವಿಟ್ಟು ನನ್ನ ಭಾಷೆಯಲ್ಲಿ ... ನಂಗೆ ಅರ್ಥವಾಗುವ ತರಾ ಹೇಳ್ತೀಯ? ನಿನ್ನ ಭಾಷೆಯನ್ನು ಅರ್ಥೈಸಿಕೊಳ್ಳುವಷ್ಟು ಜ್ಞಾನ ನನಗಿಲ್ಲ ಪುಟ್ಟೀ.


I Love u .


27/3/2009 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು)

ಪ್ರೇಮಪತ್ರ

ನಲ್ಮೆಯ ನಲ್ಲೆ ......
ಸೂರ್ಯವಂಶಿಯಾದ ನನ್ನ, ಬೆಳ್ಳಿ ಮೂಡುವ ಮೊದಲೇ ಏಳುವಂತೆ ಮಾಡಿದ ಓ ಪ್ರಿಯೇ....
ತೋಟವನ್ನೇ ಕಂಡರಿಯದ ನನ್ನ ಬೆಳ್ಳ ಬೆಳಿಗ್ಗೆ ಎದ್ದು ತೋಟಕ್ಕೆ ಬರುವಂತಹ ಸೆಳೆತವನ್ನಿತ್ತ ಸಖಿಯೇ ....
ಅಲ್ಲಿ ಲಂಗದ ನೆರಿಗೆಯನ್ನೆತ್ತಿ ಓಡೋಡಿ ಬರುತ್ತಿದ್ದ ನಿನ್ನ ಆ ಸುಂದರ ಕಂಗಳಲ್ಲಿ ಸೇರುವ ತವಕವಿತ್ತಲ್ಲ ಈಗಲೂ ಅದನ್ನು ನಾ ಹೇಗೆ ಮರೆಯಲಿ ಚಿನ್ನ? ಅಕ್ಕ ಪಕ್ಕ ಕುಳಿತು ಬೆರೆತ ಆ ಎರಡು 
ಕಂಗಳ ಮಾತುಕತೆಗೆ ಅದೇ ತೋಟವೇ ತಾನೇ ಸಾಕ್ಷಿ? ಒಂದೊಂದು ದಿನವೂ ಅದೇ ಬಾಳೆ, ತೆಂಗು, ಕಂಗಿನ ಮರಗಳು ತಮ್ಮ ಎಲೆ - ಗರಿಗಳ ಮಧ್ಯೆ ಅಡಗಿಸಿ ರಕ್ಷಿಸಿದುವಲ್ಲ.. ಅವಕ್ಕೆ ಹೇಗೆ ಕೃತಜ್ಞತೆ ಅರ್ಪಿಸಲಿ?
ನಮ್ಮೀರ್ವರ ಚುಂಬನವ ನೋಡಿ ಸಹಿಸ
ಲಾರದೆ ಎರಡು ಯುವ ಅಡಿಕೆ ಸಸಿಗಳು ತಮ್ಮ ಮುಂಡವನ್ನು ಚುಂಬಿಸಿಕೊಳ್ಳುತ್ತಿದ್ದವಲ್ಲ - ನೆನೆಪಿದೆಯ ನಿಂಗೆ? ಹಿರಿಯ ತೆಂಗಿನ ಮರಗಳು ನಮ್ಮಾಲಿಂಘನವ ನೋಡಿಯೂ ನೋಡದಂತೆ ಮೂಕಸಾಕ್ಷಿ ಯಾಗಿಯೇ ಉಳಿದವಲ್ಲ ! ನಮ್ಮ ಗಾಢ ಆಲಿಂಘನವ ಬೇರ್ಪಡಿಸುವ ಅವುಗಳ ಸುಯ್ಯಿ ಸದ್ದು ನಮ್ಮೀರ್ವರ ಎಚ್ಚರಿಕೆಯ ಗಂಟೆಗಳಾಗಿದ್ದವಲ್ಲ ! ನಮ್ಮನ್ನು ಎಲ್ಲೇ ಮೀರದಂತೆ ಕಾಯ್ದವಲ್ಲ ! ಅವಕ್ಕೆ ಹೇಗೆ ಕೃತಜ್ಞತೆ ಅರ್ಪಿಸಲಿ ಮುದ್ದೂ ?
ಈಗ ನಮ್ಮ ಪ್ರೇಮಕ್ಕೆ ಎಷ್ಟು ವರ್ಷವಾಯ್ತೋ ನಾನರಿಯೆ. ಈಗಲೂ ಮಡದಿಯಾಗಿಯೂ ಅದೇ ಪ್ರೇಮದ ಹೊಸತನದ ಸವಿ ನ
ಮ್ಮೀರ್ವರಲ್ಲಿ ಇದೆಯಲ್ಲ.. ಇಂಥಹ ನಿಸ್ವಾರ್ಥ ಪ್ರೇಮ ಕೊಟ್ಟ ನಿನ್ನನ್ನು ಹೇಗೆ ಅಭಿನಂದಿಸಲಿ ಪ್ರಾಣೇಶ್ವರೀ?
ನಿನ್ನವ - ಕೋಟಿಗೊಬ್ಬ

25/2/2009 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು)

Jan 19, 2020

ಹನುಮನ ಶನಿ

ಇಂದು ಬೆಳಿಗ್ಗೆ ನನ್ನ ಬೆಂಗಳೂರಿನ ಹೆಡ್ಡಾಪೀಸಿನ ಕೆಲಸ ಮುಗಿಸಿ ಹೈದರಾಬಾದಿನ ಅಣ್ಣನ ಮನೆಯಲ್ಲಿರುವ ಅಮ್ಮನ ಕಾಲನ್ನು ಮುಟ್ಟಿದ ಕೈಯ ಕಿವಿಗೆ ತಾಗಿಸಿಕೊಂಡು ಬರೋಣವೆಂದು ಹೋದೆ.

ಬಹುದಿನಗಳ ನಂತರ ಸೇರಿದ್ದೆವು. ಮಾತಿನ ಮಧ್ಯ ತಮಾಷೆಯಾಗಿ ಅಣ್ಣ ಹೇಳಿದ ... ಶನಿಯ ಇನ್ನೊಂದು ಸಣ್ಣ ಕಥೆಯ.

ಒಮ್ಮೆ ಶನಿ ಹನುಮನಿಗೆ ಕಾಡಲು ಹೊರಟ. ಜೀವಮಾನದಲ್ಲೊಮ್ಮೆ ಯಾದರೂ ಕಾಡಲೇಬೇಕಲ್ಲ ಶನಿ! ....ಹಾಗಾಗಿ. 

ಹನುಮ ಬೀಜಿ ಇದ್ದ. ಲಂಕೆಗೆ ಸೇತುವೆ ಕಟ್ಟುವ ಸಮಯವದು. ಕೆಲಸ ಭರದಿಂದ ಸಾಗಿತ್ತು. ಅಷ್ಟರಲ್ಲಿ ಶನಿ ಹನುಮನ ಎದುರು ಪ್ರತ್ಯಕ್ಷನಾದ. ಕೇಳಿದ.
'ಹನುಮಾ... ಜೀವಮಾನದಲ್ಲೊಮ್ಮೆಯಾದರೂ ಪ್ರತೀ ವ್ಯಕ್ತಿಯನ್ನು ಕಾಡುವುದು ನನ್ನ ಧರ್ಮ ಮತ್ತು ನಿಮ್ಮ ಖರ್ಮ. ಹಾಗಾಗಿ ನಿನ್ನನ್ನು ಈಗ ಕಾಡಲು ಬಂದಿದ್ದೇನೆ. ಹಾಗಾಗಿ ಹೇಳು ಎಲ್ಲಿಂದ ಪ್ರಾರ0ಭಿಸಲಿ?'

ಮೊದಲೇ ಹನುಮ ಕೆಲಸದ ತಲೆಬಿಸಿಯಲ್ಲಿದ್ದ... ಹಾಗಾಗಿ ಹೇಳಿದ.... 'ಥೋ ಮಾರಾಯಾ ... ನಿನಗೂ ಹೊತ್ತೂ ಗೊತ್ತೂ ವಂದೂ ಇಲ್ಲ... ಬಾ ನೀನೂ ನನ್ನ ತಲೆ ಮೇಲೆಯೇ ಕೂತಗೋ.'

ತಗಳಿ... ಶನಿಗೆ ಅಷ್ಟೇ ಸಾಕಿತ್ತು ಹನುಮನ ತಲೆಯೇರಿಯೇಬಿಟ್ಟ. ಹನುಮನಾದರೋ... ರಾಮ ಭಕ್ತ... ಒಡೆಯ ಹೇಳಿದ ಕೆಲಸ ಪೂರೈಸದೇ ಇನ್ಯಾವ ಕಡೆಯೂ ಗಮನವಿಲ್ಲ ಆತನಿಗೆ. ಸೇತುವೆಗಾಗಿ ಸಮುದ್ರ ದಡದಿಂದ ದೊಡ್ಡ ದೊಡ್ಡ ಕಲ್ಲನ್ನು ಹೊತ್ತು ತಂದು ಸೇತುವೆಗೆ ಹಾಕುವ ಕೆಲಸ... ಅವನಷ್ಟಕ್ಕೆ ಅವ ಮಾಡುತ್ತಿದ್ದ.
ದೊಡ್ಡ ಕಲ್ಲೊಂದನ್ನು ತಲೆಯ ಮೇಲಿಟ್ಟು ಹಾರಿ ಬರುವುದು ... ಸೇತುವೆಗೆ ಹಾಕುವುದು..ಮತ್ತೆ ಇನ್ನೊಂದು.. ಮತ್ತೊಂದು ಮಗದೊಂದು... ಹೀಗೆ... ನಡೆಯುತ್ತ ಇತ್ತು...

10-15 ಕಲ್ಲುಗಳಾಗುವಷ್ಟರಲ್ಲಿ ಅದೇ ಕುಂತಿದ್ದನಲ್ಲ, ತಲೆಯ ಮೇಲೆ ಶನಿ... ಕಲ್ಲಿನ ಭಾರ ಮತ್ತು ಪೆಟ್ಟಿನ ನೋವನ್ನು ತಾಳಲಾರದಾದ... ಇನ್ನೂ ಕಪ್ಪಗಾದ... 'ಯೇ ಮಾರಾಯಾ ಸಾಕೋ ನಿನ್ ಸಾವಾಸ... ನಿನ್ನ ಕಾಡಲು ಬಂದರೆ ನನ್ನನ್ನೇ ಕಾಡಿಬಿಟ್ಟೆ ಮಾರಾಯಾ... ಸಾಕು ಸಾಕು' ಎನ್ನುತ್ತ ತಡ ಮಾಡದೇ ಕೂಡಲೇ ಇಳಿದು ಹೊರಟುಹೋದ.

ಹೀಗೇ ಶನಿ ಬಹು ಬಾರಿ ಹನುಮಂತನನ್ನು ಕಾಡಲು ಪ್ರಯತ್ನ ಪಟ್ಟು, ವಿಫಲನಾಗಿ ಮರಳಿದ ಕಾರಣದಿಂದಾಗಿ ಇಂದು ಶನಿವಾರದಂದು ... ನಾವು (ಹುಲು ಮಾನವರು) ಪೂಜಿಸುತ್ತೇವೆ.

ಇದೊಂದು ಕಾಲ್ಪನಿಕ ಕಥೆಯಾಗಿರಲೂ ಬಹುದು. ಕಥೆಗೆ ಪ್ರೇರಣೆ ಅಣ್ಣ. ಆದರೆ ವಿವೇಚಿಸಿದರೆ ಕಥೆಗೊಂದು ನ್ಯಾಯಯುತ ನೀತಿ ಒದಗಿಸಬಹುದು ನಾವು. ನೋಡಿ... ನಮ್ಮ ಜೀವನದಲ್ಲಿ ಶನಿ ಯಾವಾಗಲೆಲ್ಲ ಕಾಡಿದ್ದಾನೆ? ನಮ್ಮ ಕಷ್ಟ ಕಾಲದಲ್ಲೆಲ್ಲ ಶನಿ ಯ ನೆನೆಸಿಕೊಂಡಿದ್ದೇವೆ ನಾವು ಅಲ್ಲವಾ?! ಅಂದರೆ ನಾವು ಬೀಜಿಯಾಗಿರುವಾಗ... ನಾವು ನಮ್ಮ ಕೆಲಸಗಳಲ್ಲಿ ನಿರತರಾಗಿರುವಾಗ... ಆ ಕೆಲಸದಲ್ಲಿ ತೃಪ್ತಿ ಕಂಡಿರುವಾಗ... ಆ ಕೆಲಸದಲ್ಲಿ ಮಗ್ನರಾಗಿ ಸಫಲರಾದಾಗ ಇದೇ ಶನಿ ನಮ್ಮನ್ನ 'ಕಾಡಿಲ್ಲ'. ಆವಾಗ ನಾವು 'ಓ ಶನಿ ಮಹಾರಾಜಾ... ನನ್ನ ಸಫಲ ಕಾರ್ಯಗಳಲ್ಲಿ ನೀನು ಹಸ್ತಕ್ಷೇಪ ಮಾಡದೇ ಇರುವುದರಿಂದ ನನ್ನ ಕಾರ್ಯ ಸಫಲವಾಗಿದೆ... ಇದೋ ನಿನ್ನ ಚರಣಗಳಿಗೆ ವಂದಿಸಿರುವೆ' ಎಂದು ನಾವು ಎಂದಾದರೂ ನೆನೆಗುಣದಲ್ಲಿ ಕಾಣಿಕೆ ಹಾಕಿ ಬಂದಿದ್ದೇವಾ?! ಇಲ್ಲ ಅಲ್ಲವಾ?!

ಬಹುಶಃ ನಮ್ಮ ಅಸಫಲ ಕಾರ್ಯಗಳಲ್ಲಿ... ನಮಗೆ ಕೆಲಸ ಇಲ್ಲದಿರುವಾಗ... ಮಾತ್ರ ನಮಗೆ ಶನಿ 'ಕಾಡಿದ್ದಾನೆ'. ಆಗ ನಾವು ಶನಿ ಮಂದಿರಕ್ಕೋ, ಹನುಮನ ಗುಡಿಗೋ ಹೋಗಿದ್ದೇವೆ... ಕಾಣಿಕೆ ಹಾಕಿದ್ದೇವೆ.. ಶನಿ ಜಪವೋ... ಹೋಮ ಹವನವೋ... ಶಾಂತಿಯನ್ನೋ ಮಾಡಿದ್ದೇವೆ...

ಯೋಚಿಸಿ.........

ಅಂದರೆ, ಅಣ್ಣ ಹೇಳಿದ ಈ ಮೇಲಿನ ಕಥೆಯ ಮೂಲ ಉದ್ದೇಶ ವ ಸಂದರ್ಭ ಏನೇ ಇರಲಿ ... ಕಥೆಯ ಹುರುಳು ಅದೇ...
ನಾವು ಯಾವತ್ತೂ ಕಾರ್ಯ ತತ್ಪರರಾಗಿರಬೇಕು... ಕಾಯಕವೇ ಕೈಲಾಸ ... ಕರ್ಮವ ಮಾಡು ಫಲ ತನ್ನಿಂತಾನೇ ಸಿಗುತ್ತದೆ. ಮಾಡುವ ಕಾರ್ಯದಲ್ಲಿ ಗಮನವಿದ್ದರೆ ಮತ್ತೆಲ್ಲೂ ಗಮನ ಹೋಗದು.

ಯೋಚಿಸಿ

ನಮಸ್ಕಾರ
19/01/2020, 8:47 PM (ವಿಮಾನದಲ್ಲಿ ಹಾರುತ್ತ)

Jan 2, 2020

ಹುಲಿ ನುಂಗಿತು

ನಮಗೆ ಈ ತರದ ಕನಸುಗಳೇಕೆ ಬೀಳುತ್ತವೆ? ಕೆಲವೊಮ್ಮೆ ನಾವು ಯೋಚಿಸಿಯೂ ಇರದ, ನಮ್ಮ ಕಲ್ಪನೆಗೂ ನಿಲುಕದ ಕೆಲವು ಕನಸುಗಳು ಧೃತಿಗೆಡಿಸುತ್ತವೆ ಯಾಕೆ?!

ಕನಸುಗಳು ನಮ್ಮ ಮನದ ವಿಕಾರಗಳಾ?! ಅಲ್ಲ. 
ನಿನ್ನೆ ರಾತ್ರಿ ಪ್ರವೀಣಣ್ಣ ಬರುವ ಮೇ ನಲ್ಲಿ ಸಂಸಾರದೊಟ್ಟಿಗೆ ಲೇಹ್ ಲದ್ದಾಕ್ ಗೆ ಹೋಗೋಣವೆಂದು ಪ್ರಸ್ತಾಪ ಮಾಡಿದ್ದ. ಅಷ್ಟೇ ನಾನು ಈ ಕನಸಿಗೆ ಕನೆಕ್ಟ್ ಮಾಡಬಹುದಾದ ಬಿಂದು ಎಂದರೆ.

ಬೆಳಿಗ್ಗೆ 6:30 ರ ಸಮಯ. ಯಾಕೋ ಎಚ್ಚರವಾಯ್ತು.ಚಳಿಗಾಲವಾದ್ದರಿಂದ ಬೆಳಕು ಹರಿದಿರಲಿಲ್ಲ. ನೀರು ಕುಡಿದು ಮಲಗಿದೆ. ಸಲ್ಪ ಹೊತ್ತು ಮನದ ರಾಜಕುಮಾರಿಯ ನೆನೆಯುತ್ತ. ಆಮೇಲೆ ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ.

ನಾವು ಮೂವರು ಅಂದರೆ ನಾನು ನನ್ನ ಮನದನ್ನೇ ವಿದ್ಯಾ ಮತ್ತು ನಾನು ಇಲ್ಲೇ ಹತ್ತಿರದ ಯಾವುದೋ ಅಡವೆಂಚರ್ ಲ್ಯಾ0ಡಿಗೆ ವಾರಾಂತ್ಯಕ್ಕೆ ಮನೋರಂಜನೆಗೋಸ್ಕರ ಹೋಗ್ತೀವಿ. ಅಲ್ಲಿ ನಮ್ಮನ್ನು ಹುಲಿಗಳು ಸಿಂಹಗಳಿರುವ ಕಾಡೊಂದರಲ್ಲಿ ಬಿಡುತ್ತಾರೆ. ಈ ವಿದ್ಯಾ ಮತ್ತೆ ನಿಮಿಷರಿಗೆ ಆ ಹುಲಿ ಸಿಂಹಗಳ ನಡುವೆ ಹೋಗುವಾಸೆ. ಕಾಡಿನ ನಡುವೆ ರಸ್ತೆಯಲ್ಲಿ ನಡಕೊಂಡು ಹೋಗುತ್ತಾ ಇರುವಾಗ ಮುಂದಿನಿಂದ ಬಂದ ಸಿಂಹವೊಂದು ನಮಗಿಂತಲೂ ಮುಂದೆ ಹೋಗುತ್ತಿರುವ ಮಗುವೊಂದನ್ನು ನಾವು ನೋಡುತ್ತಿದ್ದಂತೆ ತಿಂದು ಬಿಡುತ್ತದೆ. ಸಿನೆಮಾ ನೋಡಿದ ತರಹದ ರೋಮಾಂಚನ ನಮಗೆಲ್ಲ. ಆದರೂ ಭಯ ಲವಲೇಶವಿಲ್ಲ. ಅದನ್ನು ನೋಡಿದ ನಾನು ಎಚ್ಚರಿಕೆ ಹೇಳುತ್ತೇನೆ ಇಬ್ಬರಿಗೂ... ಆದರೂ ಇಬ್ಬರೂ ಕಿವಿಗೆ ಹಾಕಿಕೊಂಡಂತಿಲ್ಲ. ಮುಂದೆ ಕೆಲವೇ ಕ್ಷಣಗಳಲ್ಲಿ ವಿದ್ಯಾ "ನಾನೂ ಹೋಗ್ತೇ" ಎನ್ನುತ್ತಾ ಮೇಲೆ ಬೆಟ್ಟ ಏರಿ ಹೋದಳು. ಅದನ್ನು ನೋಡಿದ ನಿಮಿಷಾ  ಕೂಡ "ನಾನೂ ಹೋಗವು" ಎನ್ನುತ್ತಾಳೆ. ನಾನು ಬೇಡ ಎನ್ನುತ್ತೇನೆ. "ಅಮ್ಮ ಬರಲಿ ತಡೆ" ಎನ್ನುತ್ತಾ "ಇದನ್ನೂ ಕರ್ಕಂಡ್ ಹೋಗೆ"  ಎಂದೂ ಸೇರಿಸುತ್ತೇನೆ. ಅಷ್ಟರಲ್ಲೇ ಹಿಡಿದ ಕೈ ತಪ್ಪಿಸಿಕೊಂಡ ಕೂಸು ಕೂಡ ಬೆಟ್ಟ ಹತ್ತಿ ಹೋಗಿದ್ದಷ್ಟೇ ಕಾಣುತ್ತದೆ ನನಗೆ. ಆಮೇಲೆ ಇಬ್ಬರೂ ಎಲ್ಲಿ ಮಾಯವಾದರೊ ಕಾಣಲಿಲ್ಲ. ಹೋಗಲಿ ಅಪ್ಪನಾದ ನಾನು ಆ ಚಿಕ್ಕ ಮಗುವಿನ ಸಹಾಯವಾಗಿ ಅವಳ  ಹಿಂದೆ ಹೋಗಬೇಕಿತ್ತು ... ಯಾಕೋ ಗೊತ್ತಿಲ್ಲ. ಹೋಗಲಿಲ್ಲ... 'ಬರ್ತಾರೆ ಬಿಡು ಎಂಬ ಭಾವ, ಆ ವಿಶ್ವಾಸ ಅವರ ಮೇಲೆ. 

ನಂತರ ನಾನು ಅದೇ ಏರು ರಸ್ತೆಯ ಸಾಗಿ ಮುಂದೆ ಮೇಲಿನ ಮೈದಾನ ಪ್ರದೇಶ ಸೇರಿದರೆ ನೂರಾರು ಸಿಂಹಗಳು. 'ಅಯ್ಯೋ ಈ ಹುಡುಗಿಯರು ಇಲ್ಲಿ ಇಷ್ಟೊಂದು ಹುಲಿ ಸಿಂಹಗಳಿರುವಾಗ ಅಲ್ಲಿರುವ ಒಂದೇ ಒಂದು ಸಿಂಹಕ್ಕೋಸ್ಕರ ಬೆಟ್ಟ ಹತ್ತಿದರಲ್ಲ... ಇಲ್ಲಿ ನೋಡು ಎಷ್ಟೊಂದು ಒಂದೇ ಕಡೆ ಇದೆ' ಎಂದುಕೊಳ್ಳುತ್ತೇನೆ. ಸಲ್ಪ ಹೊತ್ತು ಅಲ್ಲಿ ಸಮಯ ಕಳೆದ ನಂತರ ಅಲ್ಲಿ ಕಳವಳದ ವಾತಾವರಣ ಶುರು ಆಗುತ್ತದೆ... ಎಲ್ಲ ನನ್ನಂತೆ ತಮ್ಮ ತಮ್ಮ ಪರಿವಾರ ಹುಡುಕುತ್ತಿದ್ದಾರೆ. ಅಲ್ಲಿನ ಜನರನ್ನು ಕೇಳಿದಾಗ "ನಡೆಯಿರಿ ಕೆಳಗಡೆ ಠಿಕಾಣಿಗೆ.. ಅಲ್ಲಿ ನೋಡೋಣ" ಎಂಬ ಉತ್ತರ ಬರುತ್ತದೆ

ಸರಿ ನಾನು ಎಲ್ಲರೊಡನೆ ನಮ್ಮೆಲ್ಲರ ಠಿಕಾಣಿ ಸೇರುತ್ತೇನೆ. ಅಲ್ಲಿ ಹುಡುಕಾಟ ಪ್ರಾರಂಭವಾಗಿದೆ. ಯಾರ್ಯಾರ ಪರಿವಾರದ ಜನ ಬಂದಿಲ್ಲ... ಯಾರು ಕಾಣೆಯಾಗಿದ್ದಾರೆ ಎಂಬೆಲ್ಲ ವಿವರ ಸಂಗ್ರಹಿಸುತ್ತಿದ್ದಾರೆ.. ನಾನಂದುಕೊಂಡೆ ಅವರು ಹುಡುಕುತ್ತಾರೆ ಎಂದು. ಆದರೆ ವಿಷಯ ಹಾಗಿಲ್ಲ.. ಅವರು ಕೇವಲ ಕಾಣೆಯಾದವರು ಇನ್ನು ನಿಮಗೆ ವಾಪಸ್ಸು ಸಿಗುವುದಿಲ್ಲ... ಅರಣ್ಯದಲ್ಲಿ ಹೋದವರು ವಾಪಸ್ ಬರುವುದಿಲ್ಲ ಎಂಬ ಸಹಜ ಪ್ರತಿಕ್ರಿಯೆ ಅವರದ್ದು. ಅಲ್ಲಿ ಸೇರಿದ ಜನ ಕೂಡ ಅದು ಸಹಜವೇ ಎಂಬಂತೆ ತಲೆದೂಗುತ್ತಿದ್ದಾರೆ. 
ಯಾರೊಡನೆ ಹೊಡೆದಾಡಲಿ ಬಡಿದಾಡಲಿ? ಯಾರೂ ಕೇಳುವವರಿಲ್ಲ. ಅಲ್ಲಿ ಹೋಗುವ ಮುನ್ನವೇ ಇದೆಲ್ಲ ನಮಗೆ ತಿಳಿದಿರಬೇಕಂತೆ. ನನಗೇ ಗೊತ್ತಿರಲಿಲ್ಲ. 

ಅಳುತ್ತಾ ಹೊರಬಂದೆ. ಅಯ್ಯೋ ಮಗುವೇ.. ಅಯ್ಯೋ ನನ್ನ ಮಡದಿಯೇ.. ಮುಗ್ಧರು ನೀವು. ಪಾಪಿ ನಾನು ಎನ್ನುತ್ತಾ ಅಲ್ಲಿಂದ ಹೊರಬರಬೇಕಾಯ್ತು. ನನ್ನೊಡನೆ ನನ್ನ ಪರಿಚಯದ ಕೆಲವರೂ ನನ್ನಂತ ನತದೃಷ್ಟರಿದ್ದರು. ಅವರೂ ಕೂಡ ಈ ಬಗ್ಗೆ ಆ ಸಂಸ್ಥೆಯ ವಿರೋಧದ ಬಗ್ಗೆ ಮಾತಾಡಲೇ ಇಲ್ಲ. ನಾನು ಅಂದುಕೊಂಡೆ ಹೋರಾಡೋಣ.. ಅದು ಹೇಗೆ ಮುಗ್ಧ ಜನರ ಮುಗ್ಧತೆಯೊಂದಿಗೆ ಆಟ ಆಡುತ್ತಾರಿವರು?! ಎಂದು ರೋಷಗೊಂಡರೆ... ಇನ್ನೊಂದು ಕಡೆ ದುಃಖ 'ಕಳಕೊಂಡವರು ವಾಪಸ್ ಬಂದಾರೆಯೇ' ಎನ್ನುತ್ತಾ ಗೋಳಿಡುತ್ತಿತ್ತು.

ಅಳುತ್ತಾ ಮನೆಗೆ ಬಂದೆ. ಯಾರಿಗೋಸ್ಕರ ಈ ಬದುಕು?!

ಇದೆಂತಾ ಕನಸು. ಬೆಳಿಗ್ಗಿನ ಕನಸು. ಯಾಕೆ ಬಿತ್ತು?! ಮನಸು ಭಾರವಾಗಿದೆ ಯಾಕೋ. ವಿದ್ಯಾ ನಿಮಿಷಾ ಇಬ್ಬರೂ ರಜಾಯಿಯ ಒಳಗೆ ಹಾಯಾಗಿ ನಿದ್ರಿಸುತ್ತಿದ್ದಾರೆ. ನಾನು ಬರೆಯುತ್ತಿದ್ದೇನೆ. 

ಯಾಕೆ ಹೀಗೆ?! ಕನಸು ಯಾಕೆ ಬಿದ್ದಿರಬಹುದು?! ತಳಮಳವಿದೆ ಮನದಲ್ಲಿ. ಏನು ಮಾಡಲೂ ಮನ ಬಾರದು. ಆಪೀಸಿಗೆ ಹೋಗಿಲ್ಲ ಇನ್ನೂ. ಸ್ನಾನ ಮಾಡಿಲ್ಲ. ನನ್ನ ಜೀವನದಲ್ಲಿ ಕನಸಿನ ಮಹತ್ವ ಏನಾದರೂ ಇರಬಹುದಾ?! ಇದಕ್ಕೆ ಪರಿಹಾರ ಏನು?!

ಬಗೆಹರಿಯದ ಯೋಚನೆಗಳು. 
ಮಹಾ ಮೃತ್ಯುಂಜಯ.. ನೆನಪಾಗುತ್ತಾನೆ. 

ಓಂ ತೃಯಂಬಕಂ ಯಜಾಮಹೇ
ಸುಗಂಧಿಮ್ ಪುಷ್ಟಿವರ್ಧನಂ
ಊರ್ವಾ ಋಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್. 


3/1/20 9:55 AM