Feb 20, 2012

ಕೂಸಿನ ಕಥೆಗಳು - ವ್ಯಥೆ - ವಂದು ಪಿಟೀಲು

"ಕೂಸಿನ ಕಥೆ" ಅಂದಮಾತ್ರಕ್ಕೆ ಅದು ಕೂಸಿನ ಮಲಗಿಸವು ಹೇಳಿ ಹೇಳಿದ ಬಂಡು ಕಥೆ ಅಥವ ಮಕ್ಕಳ ಕಥೆ ಹೇಳಿ ತಿಳಕಂಬದು ಸಹಜ. ’ಕೂಸು’ ಅಂದರೆ ನನ್ನ ಮಗಳು ಹೇಳಿ ಸಾಮಾನ್ಯದ ಅರ್ಥ ಅಲ್ಲ. ’ಮಗು’ ಎಂಬ ಸಮಷ್ಟಿಯ ಅರ್ಥದಲ್ಲಿ ಹೇಳಿದ್ದು ಇಲ್ಲಿ. ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ದೊಡ್ಡ ಮಾಡಕಾರೆ ಇದೊಂದು ಪ್ರಮುಖ ಹಂತ. ಈ ಕಥೆಗಳು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ನಾವು ಪಾಲಕರು ಕೊಡಬಹುದಾದ ವಂದು ಸಣ್ಣ ಕೊಡುಗೆ. ಈ ಕಥೆಯೊಳಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ತುಂಬಿ ಆ ಮಗುವಿಗೆ ಉಣ್ಣಿಸಲಕ್ಕು.

 ಇನ್ನು ಇವತ್ತಿಗೆ... ಈ ’ನಿಮಿಷ’ಕ್ಕೆ ಪುರಾಣ ಪುರುಷರ ಬಗ್ಗೆ ಒಲವು - ಆಸಕ್ತಿ ಬಂಜು ... ಟಿವಿಯಲ್ಲಿ ಬಪ್ಪ ರಾಮಾಯಣ ಮಹಾಭಾರತ, ಕೃಷ್ಣ - ಹನಮಂತರ ನೋಡುಲೆ ಹಾತವರಿತು ಕೂಸು ಹೇಳಾದರೆ ಅದಕ್ಕೆ ಮೂಲ ಕಾರಣನೇ ಪ್ರತೀ ರಾತ್ರಿ ಆಕಳಿಸ್ತವ ಯಾ ಹೇಳ್ವ ಈ ಕೂಸಿನ ಕಥೆಗಳು.

ಈ ಕಥೆಗಳಲ್ಲಿ ಕೆಲವು ನೀತಿಪಾಠಗಳನ್ನು ಹೇಳುವ ಪ್ರಯತ್ನ ಮಾಡಿದ್ದೆ. ಕಥೆನ ಕೂಸಿಗೆ ಹೇಳಕಾರೆ ಏನೋ  ಮನಸ್ಸಲ್ಲಿ ಹೊಳೆದ ಕಥೆ ಕೆಲವಾದರೆ.. ಇನ್ನು ಕೆಲವು ಕರ್ಮ ಧರ್ಮ ಸಂಯೋಗದಿಂದ "ಕವಿ ಸಮ್ಮೇಳನ"ದಲ್ಲಿ ಕಿಮಿಗೆ ತಾಗಿ  ಹೋದ (ನಾಟಿದ) ಕಥೆಗಳು ಕೆಲವು. ಆ ಕಥೆಗೇ ಸಲ್ಪ ಬೆಣ್ಣೆ, ಉಪ್ಪು, ಖಾರ (ಮಸಾಲೆ) ಹಚ್ಚಿ ಶಣ್ಣದೊಂದು ಕಥೆಯ ರಾತ್ರಿ ಹಲವು ’ನಿಮಿಷ’ಗಳ ಕಥೆಯಾಗಿ ಹೇಳಕಾಗತು. ಅದು ನಂದೊಂದೇ ಅಲ್ಲ ...ಎಲ್ಲ ಅಪ್ಪ ಅಮ್ಮಂದಿರ ಖರ್ಮ. !!

 ಮಕ್ಕಳ ಕಥೆಗಳಲ್ಲಿ ಹಕ್ಕಿ ಹಾರಸೂಲಾಗತಿಲ್ಲೆ.... ಕೋಗಿಲೆ ಕೂಗತಿಲ್ಲೆ. ಅಂದರೆ ಸಾಹಿತ್ಯವಾಗಿ ಇದನ್ನ ನೋಡಿರೆ ಕೇವಲ ಕಥೆಗಳನ್ನಿಸಗು. ಆದರೆ ಈ ಕಥೆಗಳಲ್ಲಿ ನಾವು ಬದುಕಿದ - ಬದುಕುವ .. ನಮ್ಮ ಬದುಕಿನ ಚಿತ್ರಣಗಳ ಕೊಡುವ ಪೂರ್ಣ ಪ್ರಯತ್ನ ಮಾಡಲಕ್ಕು. ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿಪ್ಪ ಹಾಸ್ಯ... ಸೃಷ್ಟಿ ರೂಪ-ಕುರೂಪಗಳೇ ಇಲ್ಲಿ ಸಾಹಿತ್ಯವಪ್ಪದನ್ನ ಒಳಗಣ್ಣಿಂದ ನೋಡಲಕ್ಕು. 

 ಕಥೆಗಳ ಮಧ್ಯೆ  ಮಕ್ಕಳ ಸಂಶಯ ನಿವಾರಣೆನೂ ಮಾಡಕಾಗತು. ಯಾವುದೋ ವಂದು ಅರ್ಥವಾಗದ ಪದ ಬಂದರೆ ಅದಕ್ಕೇ ಹೇಳೇ ಬೇರೊಂದು ಕಥೆಯ ಹೇಳಕಾಗತು. ಇಲ್ಲಿ ನಮಗೆ ತಾಳ್ಮೆ-ಸಹನೆ ಎರಡೂ ಅವಶ್ಯ. ಇಲ್ಲದಿದ್ದರೆ ಕಥಾಭಾಗದ ಮುಂದರಿಕೆಗೆ ಹುಡ್ರು ಅವಕಾಶ ಕೊಡದೇ ನಂಗಳ ಇಡೀ ರಾತ್ರಿ ನಿದ್ದೆಗೆಡಿಸ ಸಂದರ್ಭನೂ ಇರಲಕ್ಕು ಮತೇ. ಎಷ್ಟೋ ಸಲ ಇನ್ನುಮುಂದೆ ಯಾವ ಕಥೆಯಲ್ಲೂ ಹೊಸ ಪದಗಳ ಪ್ರಯೋಗ ಮಾಡೂಲಾಗ ಹೇಳಿ ತೀರ್ಮಾನ ಅಲ್ಲ ಯೋಚನೆ ಮಾಡಿದ್ದು ಇದ್ದು. (ಅಲ್ಲ ತೀರ್ಮಾನನೇ ಮಾಡಿರೂವ ಅಪ್ಪ ಹೋಪ ಕೆಲಸಲ್ಲ ಅದು) !! 

ಹುಂ ಇನ್ನು ಕೆಲವು ಸಲ ನಮ್ಮ ಕಥೆಯ ಓಘ ಮತ್ತು ಧ್ವನಿಯ ಏರಿಳಿಕೆಯ ಗಮನಿಸ್ತ ಹುಡ್ರು. ಕೆಲವೊಂದು ಸಲ ಗೊತ್ತಾಗದ್ದೇ ಇದ್ದ ಶಬ್ದಕ್ಕೆ ಪ್ರಶ್ನೆ ವಗದರೂವ  ನಮ್ಮ ಧ್ವನಿ ಏರತ ಇದ್ದು ಹೇಳದನ್ನ ಗಮನಿಸಿ ’ಬಯ್ಸಗಂಬದು ಬ್ಯಾಡ’ ಹೇಳಿ ಹೊಂದಕತ್ತ. ಅದು ಹುಡುಗರಲ್ಲಿಪ್ಪ ಆ ಸಮಯದ ಮೂಡನ ಮೇಲಿರತು.  ’ತಡೆ ಮಲಯಾಳಕ್ಕೆ ಹೋಪಕಿಂತ ಮೊದಲೇ ಕಿಮಿ ಹರ್ಕಳಡಾ, ಹೇಳತೆ’ ಹೇಳಿರೆ ಕೆಲವೊಂದು ಸಲ ಸುಮ್ಮನಾಗತ. ಅದು ಮೊದಲೇ ಹೇಳದಾಂಗೇ ಅವರ ಮೂಡು ಮತ್ತು ನಾವು ಹೇಳುವ ಕಥೆಯ ಕುತೂಹಲದ ಪ್ರಮಾಣದ ಮೇಲೇ ಅವಲಂಬಿಸಿರತು. 

ಕೆಲವೊಂದು ಸಲ ಕಥೆ ಬೋರಿಂಗ್ ಆಗಿದ್ದಾಗ ಹುಡ್ರು ಬೇಗ ಮಲಗಿಬುಡತ. ಹಾಂಗೇಳಿ ಬೋರ್ ಆದರೆ ಬೇಗ ಮಲಗತ ಹೇಳಿ ತಿಳಕಂಡು ಬೋರಿಂಗ್ ಕಥೆನೇ ಹೇಳಿರೆ ಪಡ್ಚ. ಯೆಂತ ಮಾಡಿರೂ ಕಷ್ಟ ಮಕ್ಕಗೆ. ವಂದೊಂದು ಸಲ ಕಥೆ ಕುತೂಹಲಕಾರಿ ಆಗಿದ್ರೂ ಪಾಪ ತ್ರಾಸಾಗಿದ್ದಕ್ಕ ಏನ ....(ಇಡೀ ದಿನ ಗೆಯ್ಯತ್ವಲೀ ಹುಡ್ರು) ವರಗಿಬುಟಿರತ. ಆವಾಗ ಮತ್ತೊಂದು ಕಷ್ಟ ಯೆಂತು ಗೊತ್ತಿದ್ದ?? ನಾಳೆ ಬೆಳಗ್ಗಿಂದನೇ ಶುರುವಾಗತು ವರಾತ. ’ನಿನ್ನೆ ಹೇಳಿದ ಕಥೆಯ ಮತ್ತೊಂದು ಸಲ ಹೇಳು’  ...ಸರಿ ಹೇಳಿ ನಿಂಗವು ಮರದಿನನೂ ಅದೇ ಕಥೆ ಶುರು ಮಾಡಿರೆ...... ಹುಶಾರಾಗಿರವು. ಮುಂಚಿನ ದಿನ ಹೇಳದಾಂಗೇ ಹೇಳವು. ಹನಿ ಹೆಚ್ಚು ಕಮ್ಮಿ ಆತ... ಕೆಟ್ಟಾಂಗೇಯ.. ’ ಹಾಂಗಲ್ಲ ಪಪ್ಪಾ ಹೀಂಗೆ’ ನಮಗೇ ಕಲಿಸ್ತ. ಎಷ್ಟೋ ಸಲಿ ಮನಸಲ್ಲೇ ಅಂದಕಂಡಿದ್ದು ಇದ್ದು... ’ನೀ ಹುಟ್ಟುವ ೩೦ ವರ್ಷ ಮೊದಲೇ ಹುಟ್ಟಿದ್ದೆ ಯಾನು... ಯಂಗೇ ಕಲಿಸ್ತ್ಯ’ ಹೇಳಿ.... ಆದರೆ ಹುಡ್ರ ಎದರಿಗೆ ಧೈರ್ಯ ಬತ್ತಿಲ್ಲೆ... ಅದೂ ರಾತ್ರಪಾಗ!!

ಹುಂ .. ಕಥೆ ಹೇಳಿ ನಿಂಗಕ್ಕೆ ಬೇಜಾರು ಬಂದರೂವ... ಮಗು ಮಲಗತ ಹೇಳಿ ನೋಡೂಲಿಲ್ಲೆ.... ಆ ಪ್ರಯತ್ನನೇ ಯಾವ ಕಾರಣಕ್ಕೂ ಮಾಡೂಲಾಗ. ಮಾಡಿರೆ ಅವರ ವರಕನ ಮುಂದೂಡಿದ (ಪೋಸ್ಟ್ ಪೋನ್) ಹಾಂಗೇಯ. ಮತ್ತೊಂದು ಕಥೆ ಹೇಳುವ ಪ್ರಸಂಗ ಬಂದ್ರೂ ಬಂತು. ಸುಮ್ಮ ಸುಮ್ಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬಲಾಗ ಹೌದ

 ಕೊನೆಯದಾಗಿ ಆದರೆ ಮುಖ್ಯವಾಗಿ (ಲಾಸ್ಟ್ ಬಟ್ ನಾಟ್ ಲೀಸ್ಟ್)  ’ವ್ಯಥೆ’ ಅಂದ ಮಾತ್ರಕ್ಕೆ ಅದು ನಿಜವಾದ ವ್ಯಥೆ ಹೇಳಿ ತಿಳಕಳವು ಹೇಳಿಲ್ಲೆ. ಇದು ಇಛ್ಚಾ ಪ್ರಾರಬ್ದ ಹೇಳತ್ವಲೀ .. ಹಾಂಗೇಯ. ಕಿವಿಗೆ ಮೂಗಿಗೆ ಚುಚ್ಚಿಸಗಂಡರೆ ನೋವಾಗತು ಹೇಳಿ ಗೊತ್ತಿದ್ದೂ ಚುಚ್ಚಿಸಗಂಡು ಆಗತಿಲ್ಯ? ಅದು ಸುಖಕ್ಕೆ ಬೇಕು ಹೇಳಿ. ಹಾಂಗೇಯ... ಕೂಸು(ಮಗು) ಬೇಕು ಹೇಳಿ ಮಾಡಕಂಡದ್ದು. ಅದಕ್ಕೆ ಕಥೆ ಹೇಳೂ ಖರ್ಮನೂ ವಂತರ ಸುಖ ... ಅನುಭವಿಸಿದಾಗೇ ಗೊತ್ತಾಗವು.

 ಈ "ಕೂಸಿನ ಕಥೆಗಳು" ಹೇಳ ಶೀರ್ಷಿಕೆಯ ಯೆಲ್ಲ ಕಥೆಗಳನ್ನೂ ಓದಿ. ಓದಿರೆ ಮಾತ್ರ ಇದೆಲ್ಲ ಅರ್ಥ ಆಗತು... ಹವ್ಯಕ ಭಾಷೆ ಓದುಲೆ ಮೊದ ಮೊದಲು ಕಷ್ಟ ಆದರೂವ ಬರ ಬರತ ಯನ್ನ ಭಾಷೆ ವಗ್ಗತು ಹೇಳಿ ನಂಬಿಕೆ ಇದ್ದು. ಮಜಾ ಬರಲಕ್ಕು ಹೇಳಿ ಆಶೆ. ನೋಡ್ವ.

Feb 15, 2012

ಮರ್ಯಾದಾ ಪುರುಷೋತ್ತಮ ರಾಮ


ವಂದು ಸಲವಾ ರಾವಣ ಗೋಳೋ ಹೇಳಿ ಹತ್ತು ಬಾಯಿಂದ ತೀಡತ ಕುಂತಿರತ. ಊಟನೂ ಮಾಡತ್ನಿಲ್ಲೆ.  ರಾವಣನ ಹೆಂಡತಿ ಮಂಡೋದರಿ ಎಷ್ಟೇ ವತ್ತಾಯ ಮಾಡಿರೂ ಊಟ ಮಾಡತ್ನಿಲ್ಲೆ. ’ಯಂಗೆ ಹಶಿವಿಲ್ಲೆ” ಹೇಳತ.

ಮಂಡೋದರಿ ಆದರೂ ಬಿಡದೇ ಪ್ರೀತಿ ಮಾಡಕಂಡು ’ಎಂತಾ ಆತೂ ಅದನಾರೂ ಹೇಳಿ... ಸುಮ್ ಸುಮ್ಮನೇ ಹಶಿವಿಲ್ಲೆ ಅಂದರೆ ಯಾ ನಂಬತ್ನಿಲ್ಲೆ .. ಹತ್ ಬಾಯಲ್ಲಿ ಹತ್ ಮಣ ಅನ್ನ ತಿಂಬವು ನೀವು.. ಯಂಗೊತ್ತಿಲ್ಯ... ಇವತ್ತೆಂತೋ ಬೇಜಾರಲ್ಲಿ ಬಂಜ್ರಿ... ಯೆಂತ ಆತು ಹೇಳಕಳಿ.... ಮನಸೂ ಹಗೂರಾಗತು’ ಹೇಳತು 

'ಎಂತ ಹೇಳಕಂಬದೇ? ಸಾಯಲಿ... ಆ ಸೀತೆ ಯಂಗೆ ವಲೀತಿಲ್ಲೆ..... ಯೆಂತ ಮಾಡವೇ ಯಾನು.... ಅದು ವಂದ್ ಸತಿ ಕಣ್ಣೆತ್ತಿ ಯನ್  ಮೊಕ ನೋಡಬುಟಿದ್ರೆ ಉದ್ದಾರಾಗೋಗತಿದ್ದೆ... ಅದಕ್ ಹಠ... ನೋಡುಲೇ ತಯಾರಿಲ್ಲೆ’ ಹೇಳತ ರಾವಣ.

’ಅಯ್ಯ ಇಷ್ಟಕ್ಕೇ ತೀಡೂದ? ನಿಮಗೆ ಹೇಕೊಡವ? ಮಾಯಾ ರಾವಣ ಹೇಳಿ ಕರೆತ ನಿಮಗೆ ಯೆಲ್ಲವ...ಮಾವನ್ನೇ ಚಿನ್ನದ ಜಿಂಕೆ ಮಾಡಿದ್ರಿ ...ರಾಮನ ಹಾಂಗೇ  ವೇಷ ಹಾಯ್ಕಂಡು ಹೋಗಿ ಸೀತೆ ಹತ್ರಕ್ಕೆ... ನಿಮ್ಮನೇ ರಾಮ ಹೇಳಿ ತಿಳಕಂಡು ವಲೀಗು’ ಹೇಳಿ ಐಡಿಯಾ ಕೊಡತು ಮಂಡೋದರಿ. ಎಷ್ಟಂದರೂ ರಾವಣ ಬುದವಂತ.... ಸಾವಾಸದಿಂದ ಮಂಡೋದರಿನೂ ಹುಶಾರಾಗಿತ್ತು. 

’ಅಯ್ಯ ಮಳ್ ಮಂಡೋದರಿ... ಯಾ ಯೆಂತ ದಡ್ಡ ಮಾಡಕಂಬುಟ್ಯ?? ಅದೆಲ್ಲ ಮಾಡಿ ನೋಡಿದ್ನೇ... ಆಗತಿಲ್ಲೆ... ನಾ ರಾಮನ ವೇಷ ಹಾಯ್ಕಂಡು ಹೋಗವು ಹೇಳಿ ಸುಮಾರು ಸಲ ಪ್ರಯತ್ನ ಮಾಡಿದ್ದೆ.... ಆದರೆ ಯಾವಾಗ ನಾ ರಾಮನ ವೇಷ ಹಾಯ್ಕತ್ನ ಆವಾಗೆಲ್ಲ ಕಂಡ ಕಂಡ ಹೆಂಗಸರೆಲ್ಲ ಅಮ್ಮನ ಹಾಂಗೇ ಕಾಣತ್ವೇ. ಆ ರಾಮ ಯೆಂಥ ಮಹಾಪುರುಷ ಹೇಳಿ ಅರ್ಥ ಆತೇ ಈಗ’ ಅಂದ್ನಡಾ

(" ರಾಮನ ವೇಷ ಹಾಯ್ಕಂಡ್ರೇ ರಾಮನ ಗುಣ ಬತ್ತು ಹೇಳಾದರೆ ಖುದ್ದು ರಾಮ ಎಷ್ಟು ಆದರ್ಶ ಆಗಿಕ್ಕು...ರಾಮನ ವ್ಯಕ್ತಿತ್ವಕ್ಕೆ ಇದಕ್ಕಿಂತ ಉದಾಹರಣೆ ಬೇಕ?" ಹೇಳಿ ಮುಗಿಸಕಾಗಿತ್ತು ಕಥೆಯ... ಆದರೆ ಯಾವಾಗನ ಹಾಂಗೇಯ ಕೆಲ ಕ್ಲಿಷ್ಟ ಪದ ನಮಗೇ ಮುಳ್ಳಾಗತಲೀ ಹೇಳಿ ಮನಸಲ್ಲಿ ಬಂತು. ಸುಮ್ಮಂಗಾದೆ)
 (ಇಷ್ಟು ಕಥೆ ಕೇಳತ ಕೇಳತ ಬಹುಶಃ ಮಲಗಿಕ್ಕು ಕೂಸು ಹೇಳಿ ಮೊಕ ನೋಡೀರೇ ಕಣ್ಣು ಮುಚ್ಚಕಂಡೇ ಇತ್ತು ಕೂಸು. ಸರಿ ಹೇಳಿ ನಾನೂ ಕಣ್ ಮುಚ್ಚುವ ತಯಾರಿ ಮಾಡದೆ.... ೫-೬ ಸೆಕೆಂಡಲ್ಲೇ.... ’ಇಷ್ಟ್ ಸಣ್ ಕಥೇ.... ಮತ್ತೊಂದು ಹೇಳು ಟೂ ಟೂ ಕಥೆ ಹೇಳು ಪಪ್ಪಾ’ ಹೇಳಿದ್ದ ಕೇಳಿ ಕಣ್ ಬಿಡಕಾತು. ”ಹಣೇಬರವೇ.... ಮಧ್ಯಾಹ್ನ ಜಾಸ್ತಿನೇ ಮಲಗ್ಸ್-ಬುಟಿತ್ತಕು ಯಮ್ಮನೆ ಪ್ರಾಣಿ ಥೋ’ ಹೇಳಿ ಮನಸಲ್ಲೇಯ ಹೆಂಡತಿಗೆ ಶಾಪ ಹಾಯ್ಕಂಡು ಮತ್ತೊಂದು ಕಥೆ ಹೆಣದೆ ...ಹೆಣಗಾಡದೆ.)

ಮತ್ತೊಂದ್ ಬದೀಗೇ ಬೀಚ್ ನಲ್ಲಿ ವಾನರ ಸೇನೆ ಹನಮಂತನ ಮುಂದಾಳತ್ವದಲ್ಲಿ ಲಂಕೆಗೆ ಹೋಪುಲೆ ದಾರಿ ಬೇಕಾತಲೀ..... ರಾವಣನ ಸೋಲಸಿ ಸೀತೆ ಕರ್ಕ ಬಪ್ಪುಲೆ. ಅದಕೆಯ ಸೇತುವೆ (ಬ್ರಿಜ್) ಕಟ್ಟೂ ತಯಾರಿ ಮಾಡತ ಇರತ. ಬ್ರಿಜ್  ಕಟ್ಟುಲೆ ದೊಡ್ ದೊಡ್ ಕಲ್ಲ ಗುಡ್ಡದಿಂದ ತಗಂಬಂದು ಸಮುದ್ರಕ್ಕೆ ಹಾಕತ ಇರತ. ಆದರೆ ಪಾಪ ಎಷ್ಟ್ ಕಲ್ಲ್ ಹಾಕಿರೂವ ಹಾಕಿದ ಕಲ್ಲೆಲ್ಲವಾ ಮುಳಗೇ ಹೋಗತು ಪಾಪ. ಆ ಸಮುದ್ರಕ್ಕೆ ಯಾವ ಕಲ್ಲೂ... ಎಷ್ಟ್ ದೊಡ್ ಕಲ್ಲೂ ತಾಗತಿಲ್ಲೆ. ಹನಮಂತಂಗೆ ತಲೆಬಿಶೀ ಆಗೋಗತು. ರಾಮ್ ರಾಮಾ ಹೇಳಕತ್ತ ರಾಮನ ಹತ್ರ ಬತ್ತ. 
"ವಡ್ಯ, ವಾನರ ಸೇನೆ ಸೇತುವೆ ಕಟ್ಟವು ಹೇಳಿ ಹೆಣಗಾಡತ ಇದ್ದು. ಆದರೆ ಯೆಂತ ಮಾಡವು ಹೇಳೇ ಗೊತ್ತಾಗತ ಇಲ್ಲೆ. ಸಮುದ್ರಕ್ಕೆ ಹಾಕಿದ ಕಲ್ಲೆಲ್ಲವ ಮುಳಗಿ ಹೋಗತಿದ್ದು. ಯೆಂತಾರೂ ಮಾಡಿ ಸ್ವಾಮಿನ" ಹೇಳಿ ಕೈ ಮುಗದ್ನಡ.  

(ಇಲ್ಲಿ ಕಥೆಯ ಹೆಣೆತ ಮತ್ತು ಓಘದ ಮದ್ಯೆ ’ವಡ್ಯ’ ಹೇಳೂ ಶಬ್ದ ಕೂಸಿಗೆ ಹೊಸದು ... ಹೊಸ ಶಬ್ದ ಪ್ರಯೋಗ ಮಾಡೂಲಾಗ ಹೇಳೂದೇ ಮರತೋಗಿತ್ತು. ಸಿಕ್ ಬಿದ್ದಿದ್ದೆ. "ಹೇ ಹೆ... ವಡ್ಯಾ... ವಡ್ಯ ಹೇಳಿ ಯಾರಿಗೆ ಹೇಳತ ಹನಮಂತ? ಯೆಂತಕೆ ಹೇಳತ?" ಹೇಳಿ ವಟ್ಟೊಟ್ಟಿಗೇ ಬಂದ ಪ್ರಶ್ನೆಗೆ ಆಹುತಿ ಆದೆ. "ವಡ್ಯ ಅಂದರೆ ಬಾಸ್ ಹೇಳದಾಂಗೆ... ಸರ್ ಹೇಳದಾಂಗೇ.... ಹನಮಂತ ರಾಮಂಗೆ ಹಾಂಗೇ ಕರೆತಿದ್ದ" ಹೇಳಿ ಒಕ್ಕಣೆ ಕೊಡಕಾತು. ಇದರಿಂದ ಕೂಸಿನ ವರ್ಕಕ್ಕೂ ಪೋಸ್ಟ್ ಪೋನ್ ಕೊಟ್ಟಂಗಾತು....”ದೇವರೇ ಮೂರನೇ ಕಥೆ ಹೇಳೂ ಪ್ರಸಂಗ ಬರದೇ ಇರಲಪ’ ಹೇಳಿ ಬೇಡಕಂಡೆ) 

 ಆವಾಗ ರಾಮ ಹನಮಂಗೆ ಹೇಳತ.... ’ಹೆದರಡ ಹನಮಂತ..ನಿಂಗೆ ವಂದು ಕಲ್ಲ ಮಂತ್ರಿಸಿ ಕೊಡತೆ... ಸಮುದ್ರ ರಾಜಂಗೆ ಕೈ ಮುಕ್ಕಂಡು ಸಮುದ್ರಕ್ಕೆ ಹಾಕು.. .ಎಲ್ಲ ಸುರಳೀತ ಆಗತು’ ಹೇಳಿ ವಂದು ಕಲ್ಲ ಮುಟ್ಟಿ ಮಂತ್ರ ಮಾಡಿ ಹನಮಂತಂಗೆ ಕೊಡತ. ಹನಮ ಭಕ್ತಿಯಿಂದ ಆ ಕಲ್ಲ ಹೆಗಲ ಮ್ಯಾಲೆ ಹೊತಗಂಡು ಹೋಗಿ ಆ ಕಲ್ಲಿನ ಮ್ಯಾಲೆ ’ಶ್ರೀರಾಮ’ ಹೇಳಿ ಬರದು ಸಮುದ್ರಕ್ಕೆ ಹಾಕತ.... ಆಕಲ್ಲು ಮುಳುಗದೇಯ ಗಟ್ಟಿ ಕುಂತಗತ್ತು.

ಕಡೆಗೆ ಹನಮಂತ ಅವನ ವಾನರ ಸೇನೆ ಯೆಲ್ಲ ಕಲ್ಲಿನ ಮ್ಯಾಲೂವ ’ಶ್ರೀರಾಮ’ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕತ... .ಕಲ್ಲಿನ ಸೇತುವೆ ತಯಾರಾಗತು.

(ಕೂಸು ಮಲಗತ ಹೇಳಿ ಪರೀಕ್ಷೆ ಮಾಡಿ ನೋಡ್ವ ಕಂಡತು... ತಂಗೀ ನಿದ್ ಬಂತ ಕೇಳಿದ್ದಕ್ಕೆ ಉತ್ತರ ಬರದ್ದೇ... ’ಮುಂದ್ ಹೇಳು’ ಹೇಳಿ ಆರ್ಡರ್ ಬಂತು. ವಟೂ ಇವತ್ತು ಕಷ್ಟಿದ್ದಪ ಅನ್ಸಿ ಹೋತು)

ಸೇತುವೆ ತಯಾರಾದ ಸುದ್ದಿ ಲಂಕೆವರೆಗೂ ಮುಟ್ಟತಡ.  ಲಂಕೆಯ ಎಲ್ಲ ಜನ  ಮಾತಾಡಕಂಬಲೆ ಶುರು ಮಾಡದ್ವಡ. ಹೀಂಗಡಾ ಹಾಂಗಡಾ.. ರಾಮನ ಹೆಸರು ಬರದ್ರೆ ಕಲ್ಲು ತೇಲತಡಾ ಹೇಳಿ ಸುದ್ದಿ ಆಗಿ ಜನ ಸಮುದ್ರ ದಂಡೆಗೆ ಹೋಗಿ ರಾಮ ರಾಮ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕಿ ಪರೀಕ್ಷೆ ಮಾಡೂಲೆ ಹಣಕದ್ವಡ. ಆದರೆ ವಂದು ಕಲ್ಲೂ ತೇಲಿದ್ದಿಲ್ಯಡ ಲಂಕೆಯ ಸಮುದ್ರದಲ್ಲಿ.

ಈ ಅಡಾಪಡಾ ಸುದ್ದಿ ಮಂಡೋದರಿ ಕಿವಿಗೂ ಬಿತ್ತು ಹೇಳಾತು... ಹೆಂಗಸರಿಗೇ ಮೊದಲು ಸುದ್ದಿ  ಗೊತ್ತಪ್ಪುದು. ರಾವಣನ ಹತ್ರ ಬಂದು ಹೇಳತಡ.. ’ಹೌದಾ .. ಕೇಳತಾ?? ನೋಡಕಾಗಿತ್ತು.. ಅದು ಹೇಂಗೆ ತೇಲತು ಹೇಳಿ.... ಆದರೆ ಇಲ್ಲಿ ರಾಮ ಹೇಳಿ ಬರದು ಹಾಕದ ಕಲ್ಲು ತೇಲತಿಲ್ಯಡ... ಯೆಂತನ ವಿಚಿತ್ರನಪಾ!’ 
ರಾವಣ ’ಓ ಅದೇನು ಮಹಾ.... ಮಳೀ ಅಲ್ಲಿ ರಾಮನ ಜಾಗ ಅವನ ಹೆಸರಿನ ಕಲ್ಲು ತೇಲತು... ಲಂಕೆ ಯಂದಲ್ಲದನೇ... ಇಲ್ಲಿ ರಾವಣ ಹೇಳಿ ಬರದ್ರೆ ತೇಲತು... ಆ ಜನಕ್ಕೆ ಬುದ್ದಿಲ್ಲೆ ಹೇಳೀ ನಿಂಗೂ ತಲೆಲಿ ಯೆಂತೂ ಇಲ್ಯನೇ?’ ಅಂದ್ನಡ.

ಮಂಡೋದರಿಗೆ ತಡಕಂಬಲೇ ಆಜಿಲ್ಯಡ. ’ಒಹೋ ಹಾಂಗ?... ಹಾಂಗರೆ ವಂದು ಸಲ ನೋಡಕಾಗಿತ್ರ ಯಂಗೂವ’ ಅಂತಡ. 
’ಹೆದರಡ... ನೀ ಕೇಳೂದೆಚ್ಚ... ನಾ ತೋರಸೂದೆಚ್ಚ .. ಬಾ ತೋರಸ್ತೆ.... ಯಾನೇ ಖುದ್ ಬತ್ತೆ. ಬಾ’ ಹೇಳಿ ಸಮುದ್ರ ದಂಡೆಗೆ ಕರಕಂಡು ಹೋದ್ನಡ.
 ಹೋಗಿ ವಂದು ದೊಡ್ ಕಲ್ಲು ತಗಂಡು ಅದ್ರ ಮೇಲೆ ’ರಾವಣ’ ಹೇಳಿ ಬರದು ಯೆಂತೆಂತೋ ಮಂತ್ರ ಮಾಡದಾಂಗೆ ಮಾಡಿ ಸಮುದ್ರಕ್ಕೆ ಹೊತಾಕದ್ನಡ. ನೋಡೀರೆ ಪವಾಡದಾಂಗೇಯ ಆ ಕಲ್ಲೂ ತೇಲುಲೆ ಹಣಕತಡ. 


(ಮಧ್ಯ ವಂದ್ ಸಲ ಕೂಸು ಮಲಗತ ನೋಡ್ವ ಹೇಳಿ ಕುತೂಹಲ ಬಂದ್ರೂವ ಎದಬುಟ್ರೆ ಹೇಳಿ ಹೆದರಿಕೆಯಿಂದ ...ಸುಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬೂದೆಂತಕೆ ... ಕಥೆನೇ ಮುಂದವರಸುದು ಲಾಯಕ್ಕು ಕಂಡತು)

ಮಂಡೋದರಿಗೆ ಆಶ್ಚರ್ಯ ... ಆದರೂ ವನ್ನಮನಿ ಸಂಶಯ. ’ಯಮ್ಮನೇವು ಯೆಂತಾರೂ ಕಿತಾಪತಿ ಮಾಡದ್ದೇ ಇಪ್ಪವಲ್ಲ .. ಯೆಂತೋ ಮಾಡಿರವು’ ಹೇಳಿ ಮನಸಲ್ಲಿ ಅದಕೆ. ಮನೆಗೆ ಬರಕಾರೆ ತಡಕಂಬಲಾಗದೇ ’ಅದೇಂಗೆ ತೇಲವಂಗೆ ಮಾಡಿದ್ರಿ?? ಖರೇ ಹೇಳಿ.... ರಾಮ ಆದರೆ ದೇವರು - ಯೆಂತೂ ಮಾಡಲಕ್ಕು.. ನೀವೆಂತ ಕುತಂತ್ರ ಮಾಡಿದ್ರಿ... ಯನ್ ಮೇಲೆ ಆಣೆ’ ಅಂತಡ. 

ಸುಮ್ನಿರೇ ಯೆಂತೂ ಇಲ್ಲೆ.... ಆ ಕಲ್ಲಿಗೆ ಮಂತ್ರ ಗಿಂತ್ರ ಯೆಂತು ಹಾಕಿದ್ನಿಲ್ಲೆ..... ಹಾಕಕಾರೆ ಕಲ್ಲಿಗೆ ಹೇಳಿದಿದ್ದೆ.. ’ನೀ ಮುಳಗಿದರೆ ಶ್ರೀ ರಾಮನ ಆಣೆ’ ಹೇಳಿ.. .ಅದಕೇ ಅದು ತೇಲತಿದ್ದು ಮಳೂ.’ನೀ ಯನ್ನ ಸರೀ ಅರ್ಥ ಮಾಡಕಂಜ್ಯೇ ಮಾರಾಯ್ತಿ’  ಅಂದ್ನಡ.

ನೋಡು ಹೌದ... ರಾಮ ಅಂದ್ರೆ ಮರ್ಯಾದಾ ಪುರುಷೋತ್ತಮ... ಕಲ್ಲಿಗೂ ಅವನ ಮ್ಯಾಲೆ ಗೌರವ ಇದ್ದು ಅಂದ್ರೆ ಅಂವ ಯೆಷ್ಟು ದೊಡ್ಡ ದೇವರಾಗಿಕ್ಕು ಹೌದ.. ಅದಕೇಯ ರಾಮನ ಭಜನೆ ಯಾವಾಗಲೂ ಮಾಡವು... ಮಲಗಕಾರೆ ಹೇಳವು
"ಶ್ರೀ ರಾಮ ಜಯರಾಮ ಜಯ ಜಯ ರಾಮ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ"
(ಹೇಳಿ ಮುಗಿಸಕಾರೆ ಅಂದಾಜು ಹಾಕಿದಿದ್ದೆ... ಮದ್ ಮಧ್ಯ ವಂದೊಂದು ಹೊಸ ಪದ ಬಂದರೂ ಪ್ರಶ್ನೆ ಯೆಜ್ಜಿಲ್ಲೆ... ಅಂದರೆ ಕೂಸು ಸುಖನಿದ್ರೆಗೆ ಜಾರಿಕ್ಕು ಹೇಳಿ .... ಅದು ಹೌದು .... ಹರೇ ರಾಮ ರಾಮ)

Feb 14, 2012

ಗ್ವಾಕರ್ಣ ಮಜಗೆ

ಪೀಟೀಲು (ಪೀಠಿಕೆ)
ಗಂಗಂಣನ ’ಬೆಟ್ಟೆಟ್ಟು ಬಿಸ್ನೀರು’ ನ ಪ್ರಭಾವಕ್ಕೆ ಒಳಗಾಗಿ ನೆನಪು ಮರುಕಳಿಚಿದ ಮಜ್ಜಿಗೆನೇ ’ಗ್ವಾಕರ್ಣ ಮಜ್ಜಿಗೆ’

ಬಂದ್ಯನ? ಆಸ್ರಿಗ? ಕೇಳದು ಹವ್ಯಕರ ಪದ್ದತಿ - ಸಂಸ್ಕೃತಿ. ಘಟ್ಟದ ಮ್ಯಾಲಣ ಹವೆ ತಂಪಾಗಿಪ್ಪದರಿಂದ ಆಗಿರವು ಅಲ್ಲಿ ಬೆಟ್ಟೆಟ್ ಬಿಸ್ನೀರು ಸರ್ವೇ ಸಾಮಾನ್ಯ. ಆದರೆ ಘಟ್ಟದ ಕೆಳಗೆ ಕರಾವಳಿಯ ಬಿಸಿ ಹವೆ ಆಸರಾಗಿ ಬಂದ ನೆಂಟಂಗೆ ಮಜಗೆಯೇ ಆಸರಿ ಆಗತು. ಮನೆಯ ಕೊಟಗೇಲಿ ಯೆಮ್ಮೆ ಬತಸಗಂಡ್ರೂವ ಬಂದವಕೆ ಹುಳಿ ಮಜಗೆನಾದರೂ ಕೊಟ್ಟು ಸಮಾಧಾನ ಮಾಡಕಾತಲೀ. ಇದು ಹೈಗತಿಯ ಕಷ್ಟ ಪಾಪ. ಅದಕೇ ಈ ಗ್ವಾಕರ್ಣ ಮಜಗೆ. 

(ಗಂಗಂಣನ ಕ್ಷಮೆ ಮತ್ತು ಅನುಮತಿ ಕೇಳತವಾ... ಅವಂದೇ ನಿರೂಪಣೆಯಲ್ಲಿ) 

  ಗ್ವಾಕರ್ಣ ಮಜಗೆ ಮಾಡುವ ವಿಧಾನ:
========================

ಅ) ಬೇಕಾಗುವ ಸಲಕರಣೆ

=========================================
) ಕೌಳಗೆ
) ಲೋಟ (ಉದ್ದೀದು)
) ಹುಳ್ ಮಜಗೆ ಶಿಕ್ಕ

ಆ) ಬೇಕಾಗುವ ಸಾಮಾನುಗಳು
=========================================
) ನೀರು
) ಮಜಗೆ (ಹತ್ರ ನೆ೦ಟರಿಗೆ ಮಾತ್ರ )
) ಉಪ್ಪು

ಇ) ಮಾಡುವ ವಿಧಾನ
=========================================
) ಬ೦ದವರ ಮಾತಾಡಸವು
) ಬ೦ದವ್ವು ದೂರದವ್ವ ಹತ್ತರದವ್ವ ನೋಡವು
) ಕ೦ಚಿನ ಕೊಡಪಾನದಿಂದ ಕೌಳಗೆ ನೀರು ಎರಸವು.

) ಅದಾದ ಮೇಲೆ ಹುಳ್ ಮಜ್ಗೆ ಶಿಕ್ಕದ ಹತ್ರೆ ಬರವು. ಶೀಂ ಮಜಗೆ ಶಿಕ್ಕದ ಹತ್ರ ಹೋಪಲಾಗ... ಮನೆಯವಕೆ ಬೇಕಾಗತು.
) ಅಲ್ಲಿ ದೂರದ ನೆ೦ಟ ಆದ್ರೆ ಮಜ್ಗೆ ಶಿಕ್ಕದಿಂದ ನೀರಿಗೆ ಹುಳ್ ಮಜಗೆ ತೋರಿಸವು. ಹೆಚ್ಚು ಅಂದ್ರೆ ನೀರಿನ ಬಣ್ಣ ಹೋಪಸ್ಟು ಮಾತ್ರ ಮಜ್ಗೆ ಹಾಕವು
) ರಾಶಿ ಬೆಳಿಕೆ ಆಪಲಾಗ. ಯಮ್ಮಿಗೆ ಕಣ್ ಬಿದ್ದೊಗ್ತು.
) ಈಗ ತಗ೦ಡು ಹೊರಗೆ ಬರವು
) ಹೊರಗೆ ಬಪ್ಪಕಿದ್ರೆ ಪ್ರಧಾನ ಭಾಗ್ಲ ದಾಟತವ ಕೌಳಗೆಯಿಂದ ಲೋಟಕ್ಕೆ - ಲೋಟದಿಂದ ಕೌಳಗೆಗೆ ಎರಡ್ -ಮೂರ್ ಸತಿ ನೊರೆ ಬಪ್ಪಾಂಗೇ (ಹುಳಿ ಇರತಲೀ ಹ್ಯಾಂಗೂವ) ಮೇಲೇ ಕೆಳಗೆ ಮಾಡಿ ಹೊಡೆಯವು.  
) ಉಪ್ಪ ಹದಾಕೆ ಹಾಕಿರೆ ಸಾಕು ಬಿಲ.
) ತ೦ದು ಹೊರಗೆ ಅಡವರ್ಯವು.

ಈ) ಸೂಚನೆ:

=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಉಪ್ಪು ಸಾಕನ ತಮ ಹೇಳವು
) "ಯಮ್ಮಲ್ಲಿ ಉಪ್ಪು ಕಮ್ಮಿ ತಿ೦ತ್ಯ" ಹೇಳವು.
) ನೆಂಟಂಗೆ ಕುಡದಾದ ಮ್ಯಾಲೆ ತಂಪಿದ್ದನ ಕೇಳವು.
) ಈ ಶೆಕೆಲಿ ಮಜಗೆ ಹುಳಿಯಾದ್ರೂ ಕುಡದಷ್ಟೂ ಆರಾಮು ಹೇಳವು.
) ಇದಕ್ಕೆ ಗ್ವಾಕರ್ಣ ಮಜಗೆ ಹೇಳಿ ಹೆಸರಿಟ್ಟ೦ವ ಆನಲ್ಲ. ಆ ಶಣ್ಣಿರಕಾರಿಂದ ಕೇಳಿದ ಹೆಸರೇ ಇದು. ನಾಮಕರಣ ಮಾಡಿದ ಪುಣ್ಯಾತ್ಮ ಯಾರ.
) ಇದು ಗಂಗಂಣನ ನಿರೂಪಣೆ ಆಗಿದ್ದರಿಂದ ಆಶಿರ್ವಾದಪೂರ್ವಕವಾಗಿ ಪೀಜು  ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಗ್ವಾಕರ್ಣ ಮಜಗೆ ಸರ್ವೇ ಸಾಮಾನ್ಯ.
) ಶ್ರೀ ಕ್ಷೇತ್ರ ಗೋಕರ್ಣಕ್ಕೂ ಈ ಮಜಗೇಗೂ ಸಂಬಂಧ ಅಸ್ಪಷ್ಟ. (ಕ್ಷಮಿಸಿ) 

ಕೆಂಪೀ ಹನಮಾ

’ಹನಮಂತ ಕೆಂಪಕೆ ಯೆಂತಕಿದ್ದಾ?’ ಹೇಳ ಪ್ರಶ್ನೆ ಮರುದಿನ ನೆನಪಾತು ಕೂಸಿಗೆ. ಅದೂ ಬೆಳಗ್ಗೆ ಎದ್ದ ಕೂಡಲೇಯ. ’ಈಗಲ್ಲ ಮುದ್ದೂ...ಈಗ ನೀ ಶಾಲೆಗೆ ಹೋಗಿ ಬಂದು  ಊಟ ಮಾಡಕಂಡು ಮಲಗಿ ಎದ್ದಕ. ಅಷ್ಟರ ಒಳಗೆ ಪಪ್ಪ ಬತ್ತೆ...ಸಂಜಪಾಗ ಮಲಗಕಾರೆ ಕಥೆ ಹೇಳತೆ’ ಹೇಳಿ ಸಮಾಧಾನ ಮಾಡಿದ ಮ್ಯಾಲೆ ಕೂಸು ಸುಮ್ಮಂಗಾತು ಅಂತೂವ. ’ದ್ಯಾವರೇ ಏನ್ ಕಷ್ಟಾ’ ಅಂತು ಯಮ್ಮನೆ ಪ್ರಾಣಿ.

ಸಂಜೆ ಊಟ ಮಾಡಿ ಮಲಗ ಹೊತ್ತಲ್ಲಿ ಶುರು ಆತು ವರಾತ. ’ಪಪ್ಪಾ... ಕಹಾನೀ ಸುನಾವ್... ನೀ ಸುಬಹ್ ಹೇಳಿದ್ಯಲ. ನಾನು ಲಂಚ್ ಡಿನ್ನರ್ ಎಲ್ಲ ಮಾಡಿದ್ದೆ. ದೂದೂ ಕುಡದ್ದೆ.... ನೌ ಸ್ಟೋರೀ’ ಹೇಳಿ ಹಿಂದಿ ಇಂಗ್ಲೀಷ್ ಮಿಸಳ್ ಹೈಗ ಭಾಷೆಲಿ. ವಂದ್ ನಮನಿ ಯೋಚನೆ ಮಾಡಿರೆ ಯನ್ ಮಗಳು ಎರಡು ಮೂರು ಭಾಷೆಲಿ ಮಾತಾಡತು ಹೇಳಿ ಖುಷಿ ಆದರೂವ...ಮತ್ತೊನ್ನಮನಿ ಯೋಚನೆ ಮಾಡೀರೇ... ’ಅಯ್ಯ ರಾಮ ಎಲ್ಲ ಭಾಷೆಯ ಮರ್ಯಾದೆ ತೆಗತ್ತಲೀ ಇದು’ ಅನ್ಸಿ ಹೋಗತು ಆ ಪ್ರಶ್ನೆ ಬ್ಯಾರೆ.  ಆದರೆ ವಂದ್ ಮಾತ್ರ ಸುಳ್ಳಲ್ಲ...ಈ ಮೂರೂ ಭಾಷೆಯ ಯಾವುದೇ ಶಬ್ದ ಕೇಳಿರೂವ ಅದರ ಅರ್ಥ ಗೊತ್ತಿದ್ದು ಅದ್ಕೆ ಬಿಲ.. ಅದೆಂತದೋ ತರ್ಜುಮೆ ಹೇಳತ್ವಲೀ... ವಾಕ್ಯ ತರ್ಜುಮೆ ಮಾಡುಲೆ ಬರದ್ದೇ ಇದ್ರೂವ... ಶಬ್ದದ ತರ್ಜುಮೆ ಮಾಡತು ಹೇಳೇ ಖುಷಿ ನಮಗೆ.
ಸರಿ ’ಕೆಂಪಿ ಹನಮ’ ಈಗ (ಹಲಗೇರಿಯ ನಮ್ಮ ಮಾಣಿ - ಹ ನ ಮಾ ಅಲ್ಲ ಇಂವ)

ಸಾಮಾನ್ಯವಾಗಿ ಸೀತೆಗೆ ಟೈಮ್ ಪಾಸಿಗೆ .. ಹೊತ್ ಹೋಗತಿಲ್ಲೆ ಹೇಳಾದಾಗ ಮಾತಾಡೂಲ್ ಸಿಕ್ಕುದು ಹನಮಂತ ವಬ್ಬನೇಯ. ಪಾಪ ಅಂವ ರಾಮ ಭಕ್ತ ... ಸೀತೆ ರಾಮನ ಹೆಂಡತಿ ಹೇಳಿ ಗೌರವ. ಹೀಂಗೇ ಮಾತಾಡತ ಮಾತಾಡತ ... ಸುದ್ದಿ ಮಧ್ಯದಲ್ಲಿ ಹನಮಂಗೆ ವಂದು ಸಂಶಯ ಬಂತು... ಯೆಂತಪಾ ಅಂದ್ರೆ.... ’ಹೌದು ಈ ಮದುವೆಯಾದ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ (ಸಿಂಧೂರ) ಇಟಗತ್ತ ಯೆಂತಕೆ?’ ಹೇಳಿ. 

ಕೇಳೇಬುಡ್ವ ಮತ್ತೆಂತದು ಹೇಳಿ ಸೀತಾಮಾತೆ ಹತ್ರ ಕೇಳೇಬುಟನಡ. "ಅಮ್ಮ (ಅಂವ ಸೀತೆಗೆ ಅಮ್ಮ ಹೇಳೇ ಕರೇತಿದ್ದ) ನಿಂಗ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ ಯೆಂತಕೆ ಇಟಗತ್ರಿ? ಯಾ ಸುಮಾರು ದಿನದಿಂದ ಕೇಳವು ಮಾಡಿದಿದ್ದೆ... ಕಾಲ ಕೂಡಿ ಬಂದಿತ್ತಿಲ್ಲೆ. ಯಾ ಕೇಳವು ಮಾಡದಾಗ ನೀ ಸಿಗತಿದ್ದಿಲ್ಲೆ.... ನೀ ಸಿಕ್ಕದಾಗ ಯಂಗೆ ಮರವು ಸಾಯಲಿ.. ಅದೆಂತಕೆ ಇಟಗತ್ರಿ ನಿಂಗ?" 

ಸೀತೆ ಹೇಳತಡಾ - "ಹನಮಾ... ಹೆಂಗಸರ ಹಣೆ ಮೇಲೆ ಕುಂಕುಮ ಇದ್ರೆ ಗಂಡನ ಆಯುಷ್ಯ ಜಾಸ್ತಿ ಆಗತಡ. ಗಂಡಂಗೇ ಹೇಳಿ ಕುಂಕುಮ ಇಟಗಂಬದು. ವಂದು ಹೆಣ್ಣಿಗೆ ಗಂಡ ಅಂದರೆ ಸರ್ವಸ್ವ. ಈಗ ನಾ ಹಣೆಗೆ ಕುಂಕುಮ ಇಟಗಂಬದು ನಮ್ಮನೆಯವ್ಕೆ ಹೇಳಿ  ಗೊತ್ತಾತ". 

ಹನಮ ಹೇಳದ್ನಡ " ಒಹೋ ಹಾಂಗರೆ ಆಚೆಮನೆ ಮಂಥರಜ್ಜಿ  ಹಣೆ ಮ್ಯಾಲೆ ಕುಂಕುಮ ಇಟಗಳದ್ದೇ ಇದ್ದಿದ್ದಕ್ಕೇಯ ಅದರ ಗಂಡಾ ದೇವರತ್ರ ಹೋದನ? ತಲೆ ಬೋಳಿಸಗಂಡು ತಲೆ ಮ್ಯಾಲೆ ಸೆರಗು ಹಾಯ್ಕಂಡು ಬ್ಯಾರೆ ಇರತು ಮಳ್ ವೇಷಾ" 
ಸೀತೆಗೆ ನೆಗೆ ಬಂದೋತಡ.."ಹೋಗಾ ಮಳಾ ಹನಮಂತಾ... ಹಾಂಗೆಲ್ಲ ಹೇಳೂಲಾಗ ಪಾಪ" ಅಂತಡಾ.
" ತಪ್ಪಾತು ..ಅಮ್ಮ.... ಸರಿ ಹಾಂಗಾರೆ ಈಗ ಯಾನು ಕುಂಕುಮ ಇಟಗಂಡರೆ ಯಾರು ಯಂಗೆ ಸರ್ವಸ್ವನೋ ಅವರ ಆಯುಷ್ಯ ಜಾಸ್ತಿ ಆಗ್ತು ಹೇಳಾತು. ಯಾನೂವ ರಾಮಂಗೆ ಹೇಳಿ ಕುಂಕುಮ ಇಟಗತ್ತೆ ಇವತ್ತಿಂದವ" ಅಂದ್ನಡ ಹನಮ. 
" ಹೂಂ...ಮೈತುಂಬ ಕುಂಕುಮ ಬಡಕ ಹೋಗು. ಮಳೂ...ಹಾಂಗೆಲ್ಲ ಗಂಡಸರೆಲ್ಲ ಹಣೆಮ್ಯಾಲೆ ಕುಂಕುಮ ಇಟಗತ್ವಿಲ್ಲೆ" ಅಂತಡ. 


ಹನಮ ಕೇಳವ... ಸೀತೆ ಹೇಳಿದ್ದು ಹೌದು ಮಾಡಕಂಡನಡಾ. ಹೋಗ್ ಹೋಗಿ ಮದಲೇ ಮಂಗ... ಸೀದ ಹೋದವನೇಯ ಕುಂಕುಮದ ಮರಗೆ ತಗಂಡು ಇಡೀ ಮೈತುಂಬ ಕುಂಕುಮ ಬಡಕಂಡುಬುಟನಡಾ. 


ಅದಕೇಯ ಮಂದಿರದಲ್ಲಿ ಇಪ್ಪ ಹನಮಂತ (ಹನುಮಾನಜೀ) ಕೆಂಪ. ರಾಮನ ಭಕ್ತ ಅಂವ. ರಾಮಂಗೆ ಹೇಳಿ ಕೆಂಪಕ್ಕೆ ಕುಂಕುಮ ಹಚಗಂಡು ಇರತ ಹದಾ. 

(ಗೊರಕೆ ಸೊಗೀತಿತ್ತು ಕೂಸು.... ಯನ್ನ ಕಥೆ ಬೇಜಾರು ಬಂತ ಯೇನ)
 



Feb 12, 2012

ಕರಿ ಶನಿ

  ದಿಲ್ಲಿ ಹೇಳಲ್ಲ.... ಸಾಮಾನ್ಯವಾಗಿ ಪೂರ ಉತ್ತರ ಭಾರತ ನಮಗೆ ಎಲ್ಲಾ ರೀತಿಯಲ್ಲೂ ವಿಭಿನ್ನ ಅನಿಸಿಹೋಗತು. ಆದರೆ ಬ್ರಾಹ್ಮಣರ ವಿಷಯಕ್ಕೆ ಬಂದರೆ ಈ ಯುಪಿ (ಉತ್ತರ ಪ್ರದೇಶ) ಮತ್ತು ಉತ್ತರಾಖಂಡಗಳ ಬ್ರಾಹ್ಮಣರ ಪದ್ದತಿ.. ಆಚಾರ ವಿಚಾರಗಳಲ್ಲಿ ಅಲ್ಪ ಸಲ್ಪ ವ್ಯತ್ಯಾಸ ಕಂಡರೂವ ಅವರ ಹಾವ ಭಾವ ಮತ್ತು ದೇಹಭಾಷೆ (Body language) ನಮಗೆ ಸಮಾನತೆ ಇದ್ದಿಕ್ಕ ಹೇಳೂ ಸಂಶಯ ಹುಟ್ಟಿಸೂದೂ ಸುಳ್ಳಲ್ಲ ಮತೇ.
 
   ದಿಲ್ಲಿಯಲ್ಲಿ ಸಾಮಾನ್ಯವಾಗಿ ಪಂಜಾಬಿ ಹರಿಯಾಣಿಗಳೇ ತುಂಬಕಂಡು....ಪಂಜಾಬೀ ಪ್ರೇರಿತ ಭಾಷೆ ಇದ್ದರೂವಾ ಪ್ರತೀ ವಸತಿ ಸಂಕೀರ್ಣ ಮತ್ತು ಬ್ಲಾಕಿನಲ್ಲೂ ಕನಿಷ್ಠ ವ೦ದು ಮಂದಿರ ಸರ್ವೇ ಸಾಮಾನ್ಯವಾಗಿ ಇರತು - ಇದ್ದು ಹೇಳುದು ನ೦ಗಳ ಪೂರ್ವಾರ್ಜಿತ ಪುಣ್ಯ ಫಲವೇ ಆಗಿರವು. ಸಾಮಾನ್ಯವಾಗಿ ಇಪ್ಪವು ಪಂಜಾಬಿಗಳೇ ಆದರೂ ಮಂದಿರ ಮಾಡಿದಷ್ಟು ಸಲೀಸಾಗಿ - ಸುಲಭವಾಗಿ ಗುರುದ್ವಾರ ಮಾಡಲಾಗತಿಲ್ಲೆ ಹೇಳ ಕಾರಣಕ್ಕ ಏನ... ದಿಲ್ಲಿ ಸರಕಾರ ಪ್ರತೀ ಬ್ಲಾಕಲ್ಲಿ ವಂದಾದರೂ ಮಂದಿರ ಇರವು ಹೇಳಿ ಕಾಯದೆ ಮಾಡಿಟ್ಟಿದ್ದು ಬಹುಶಃ. ಈ ಪಂಜಾಬಿಗಳಿಗೆ ಅದರಲ್ಲೂ ಪಂಜಾಬೀ ಹೆಂಗಸರಿಗೆ ಮಂದಿರದ ಮೇಲೆ ಶೃದ್ಧೆ ಹೇಳದಕಿಂತವ ದೈತ್ಯಾಕಾರದ ಮೈ ಹೊತಗಂಡು ದೂರದಲ್ಲಿಪ್ಪ ಗುರುದ್ವಾರಕ್ಕೆ ಹೋಗಿ ’ಮಾಥಾ ಟೇಕ’ದಕ್ಕಿಂತ*  ಹತ್ತಿರದಲ್ಲೇ ಇಪ್ಪ ಮಂದಿರಕ್ಕೆ ಹೋಪದು ಸಸಾರ ಹೇಳೇ ಮಂದಿರ ದರ್ಶನ ಮಾಡತವನ ಹೇಳುದು ನನ್ನ ತರ್ಕ. ತರ್ಕ ತಪ್ಪೂ ಆಗಿರಲಕ್ಕು ಮತ್ತೇ !

ನಮ್ಮ ಬ್ಲಾಕಿನ ಮಂದಿರಕ್ಕೆ ಪದೇ ಪದೇ ನಿಯಮಿತವಾಗಿ ಹೋಪದು ನಂಗಕೆ ರೂಢಿ ಆತು. ಸಾಮಾನ್ಯವಾಗಿ ಉತ್ತರ ಭಾರತದ ಮಂದಿರದಲ್ಲಿ ದೇವರ ಮೂರ್ತಿ ಬಣ್ಣ ಬಣ್ಣದ ಬೊಂಬೆಗಳ ಹಾಂಗೇ (ನಂಬದೀ ಮಾಸ್ತಿ ಮನೆಯ ಹಾಂಗೆ) ಅಮೃತಶಿಲೆಗಳಿಂದ ಮಾಡಿದ್ದಾದರೂವ ಈ ಶನಿ ಮಹಾತ್ಮನ ಮೂರ್ತಿ ಮಾತ್ರ ಕಪ್ಪು... ಅಥವ ಕಪ್ಪು ಶಿಲೆಯಿಂದ ಮಾಡಿದ್ದೇ ಇರತು. ಮತ್ತೇ ಈ ಶನಿಗೆ ಭಕ್ತಮಹಾಜನ ಎಣ್ಣೆ ಹಚ್ಚತ.. ಬೆಲ್ಲ ಮುಕ್ಕಿಸ್ತ. ’ಚೇ ಸುಮ್ ಸುಮ್ಮನೇ ಆ ದೇವರ ಮೂರ್ತಿಗೆ ಯೆಣ್ಣೆ ಗಿಣ್ಣೆ ಹಚ್ಚಿ ಹೊಲಸು ಮಾಡತ್ವಲೀ’ ಹೇಳಿ ಮನಸಲ್ಲೂ ಇತ್ತು. ಹನುಮಂತನ ಮೂರ್ತಿ ಯಾವ ಕಲ್ಲಿಂದ ಮಾಡಿದ್ದ ಏನ... ಮೂರ್ತಿ ಮಾತ್ರ ಕುಂಕುಮದ (ಸಿಂಧೂರದ) ಬಣ್ಣ.. ಇದ್ ಎರಡೂ ವಿಷಯ ಹೀ೦ಗ್ ವಿಭಿನ್ನ ಎಂತಕೆ ಹೇಳಿ ಕುತೂಹಲ ಯಂಗೆ.

ವಂದಿನ ನಾನು ಹೊಸ ಬೈಕ್ ತಗಂಡು ಪೂಜೆ ಮಾಡಸವು ಹೇಳಿ ಹೋಗಿ ಪೂಜೆ ಮಾಡಸಗ೦ಡು ಚಿಲ್ಲರೆ ಇಲ್ಲದೇಯ ೧೦೦ ರೂಪಾಯಿಯ ನೋಟನೇ ದಕ್ಷಿಣೆ ಹೇಳಿ ಕೊಟ್ಟಿದಿದ್ನ ಇಲ್ಯ... ಆ ಯುಪಿಯ ಪಂಡಿತ್ ಜೀಗೆ ವನ್ನಮನಿ ನಂಗ ಅಂದ್ರೆ ಖುಷಿ.   ಪಂಡಿತ್ ಜೀಗೆ ಇಲ್ಲಿ ವಂದು ಪೂಜೆಗೆ ೧೦ ರಿಂದ ೨೦ ರೂಪಾಯಿ ಕೊಟ್ಟರೆ ಹೆಚ್ಚು ಬಿಲ. ಅದೇ ಕಾರಣಕ್ಕೆ ಇಲ್ಲಿನ ಭಟ್ಟರು ನಂಬದಿಯ ಭಟ್ಟರಾಂಗೇ ಸ್ಕೂಟರಲ್ಲಿ ಬಪ್ಪಷ್ಟು ಅನುಕೂಲಸ್ತರಲ್ಲ. ಪ್ರಸಾದ ಕೊಡೂದಿದ್ದರೂ ನಂಗಳನ್ನೇ ಹುಡುಕಿ ಸಲ್ಪ ಜಾಸ್ತಿನೇ  ಕೊಡತಿದ್ರು. ವನಮನೀ ಸಲಗೆ ಆಗೋಗಿತ್ತಪಾ.. ಆ ಸಲಿಗೆ ಇದ್ದದ್ದರಿಂದ ಆ ದಿನ ಪಂಡೀತಜೀ ಹತ್ರ ’ಶನಿ ಯೆಂತಕೆ ಕಪ್ಪು?? ಯೆಂತಕೆ ಯೆಳ್ಳೆಣ್ಣೆ ಹಚ್ಚತ?? ಬೆಲ್ಲ ಮುಕ್ಕಿಸ್ತ ?? ಹನಮಂತ ಯೆಂತಕೆ ಕೆಂಪ? ಸಿಂಧೂರದ ಬಣ್ಣ?? ಶನಿವಾರ ಯೆಂತಕೆ ಹನುಮಂತನ ಪೂಜೆ ಮಾಡತ??ಏಸಾ ಕ್ಯೋಂ?’ ಹೇಳಿ ಕೇಳಿದಿದ್ದೆ.

ಪಂಡಿತಜೀಯ ಹೇಳಿದ ಆ ವನಮನೀ ನಂಬಿಕೆಯ ಮೂಲಕಥೆಯೇ ಈ ಕೂಸಿಗೆ ಎರಡೆರಡು ಕಥೆಯಾತು ರಾತ್ರಪಾಗ.



ವಂದ್ ಸಲವಾ  ಶನಿ ಮಹಾರಾಜ ಜನಕ್ಕೆ ಸುಮ್ಮಸುಮ್ಮನೇ ಭಯಂಕರ ತ್ರಾಸ್ ಕೊಡತ ಇದ್ದಿದ್ನಡ. ತ್ರಾಸು ಕೊಡೂದೇ ಅವನ ಕೆಲಸ. ಸಾಮಾನ್ಯ ಎಲ್ಲ ಜನಕ್ಕೂ ಶನಿ ಹಿಡದೋತು. ಎಲ್ಲ ಕಂಗಾಲಾಗೋದವಡ. ಯೆಲ್ಲ ಅವರವರ ಭಕ್ತಿಗೆ ತಕ್ಕಾಂಗೇ ಪೂಜೆ ಮಾಡುಲೆ ಹಣಕದ್ವಡ. ಯಾವ ದೇವರ ಮಾತೂ ಕೇಳಿದ್ನಿಲ್ಲೆ ಶನಿ ದೇವ. 

ಆವಾಗ ಜನ ಎಲ್ಲ ಹೋಗಿ ಹನುಮಂತನ ಹತ್ರ ಕಷ್ಟ ಹೇಳಕಂಡು ತೀಡದ್ವಡ. ಹನುಮಂತಂಗೆ ಜನರ ಕಷ್ಟ ನೋಡಿ ಪಾಪ ಅನಿಸ್ತಡ. ಗಧೆ ಹಿಡಕಂಡು ಬಾಯಿ ಉಬ್ಬಿಸಗಂಡು ಹೊಂಟೇಬುಟ್ನಡ. ಹೋಗಿ ಶನಿಗೆ ಯಗ್ಗಾ ಮುಗ್ಗಾ ಹೊಡದ್ನಡ. ಇನ್ನೇನು ಶನಿ ಪಾಪ ಹನಮಂತ ಹೊಡೆದರೆ ಕೇಳವ...ಎದಕಂಬಲೂ ಆಗದೇ ’ತಪ್ಪಾತೋ ಮಾರಾಯ.. ಹನಮಾ... ಯೆಂತಕೆ ಹೊಡೆತಿದ್ದೆ ಹೇಳಿ ಹೇಳಕಂಡಾರೂ ಹೊಡೆಯ’ ಅಂದ್ನಡ.


’ನೀನು ಪಾಪದ ಜನಕ್ಕೆ ಯೆಂತಕೆ ತ್ರಾಸ್ ಕೊಡತ್ಯ? ಶನಿ ಹಿಡೀತೆ? ಇನ್ನು ಮುಂದೆ ಮತ್ತೆ ಶನಿ ಹಿಡದ್ರೆ ನಿಂಗೆ ಶನಿ ಬಿಡ್ಸ್-ಬಿಡವೆ.... ಹುಶಾರ್’ ಹೇಳಿ ಧಮಕಿ ಕೊಟನಡ. 

ಪಾಪ ಶನಿ ಹೆದರಕಂಡು.. ’ಥೋ ತಪ್ಪಾತೋ ಮಾರಾಯ. ಇನ್ನು ಮುಂದೆ ಯಾರಿಗೂ ಸುಮ್ ಸುಮ್ಮನೇ ಎಲ್ಲ ತ್ರಾಸ್ ಕೊಡತ್ನಿಲ್ಲೆ .. ಅದೂ ನಿನ್ನ ಭಕ್ತರಿಗೆ ಮಾತ್ರ ಕಣ್ಣೆತ್ತೂ ನೋಡತ್ನಿಲ್ಲೆ.... ಯಂಗೆ ಹೊಡೆಯಡ... ತಪ್ಪಾತು ಆಂಜನೇಯ’ ಹೇಳಿ ಹನಮಂತನ ಕಾಲಿಗೆ ಬಿದ್ನಡ. 

’ಸರಿ ಬದಕ್ಕ ಹೋಗು’ ಹೇಳಿ ಹನುಮಂತ ಹೊಂಟನಡ. ಆವಾಗ ಶನಿ ಮಹಾರಾಜ ಹನಮಂತನ ಕಾಲು ಹಿಡಕಂಡು- ’ಮಾರಾಯ ನೀ ಯೇನೋ ಯಂಗೆ ಹೊಡದುಬುಟೆ .. ಈಗ ಯನ್ನ ಮೈಯಲ್ಲಾದ ಗಾಯ ಗುಣಮಾಡವ್ವು ಯಾರು? ರಕ್ತ ಬ್ಯಾರೆ ಬತ್ತಿದ್ದು’ ಹೇಳಿ ಗೋಳೋ ಹೇಳಿ ತೀಡುಲೆ ಹಿಡದ್ನಡ.


ಆವಾಗ ಹನುಮಂತ ಶನಿದೇವಂಗೆ ವಂದು ವರ ಕೊಟನಡ... ’ಇವತ್ತಿಂದ ಯಾರು ನಿನ್ನ ಮೈಗೆ ಎಣ್ಣೆ ಹಚ್ಚಿ ನಿಂಗೆ ಬೆಲ್ಲ ತಿನ್ನಿಸ್-ತ್ವೋ ಅವಕೆ ನೀ ಕಾಡೂಲಾಗ.. ತ್ರಾಸು ಕೊಡುಲಾಗ... ಹೆದರಡ ಕಮ್ಮಿ ಆಗತು’ ಹೇಳಿ. 

ಅದಕೇಯ ಆವತ್ತಿಂದವಾ ಪ್ರತೀ ಶನಿವಾರ (ಶನಿಯ ದಿನ) ಶನಿ ದೇವರಿಗೆ ಎಣ್ಣೆ ಹಚ್ಚಿ ಬೆಲ್ಲ ತಿನ್ನಸಿ ಅವಂಗೆ ಖುಷಿಪಡಿಸ್ತ ಜನ. ಮತೇ ಹನಮಂತಂಗೆ ಶನಿ ಹೆದರತ ಹೇಳಿ ಹನಮಂತನ ಪೂಜೆನೂ ಮಾಡತ.. ಕೈ ಮುಗಿತ. 

(ನಿದ್ದೆ ಬಂದೋಗಿತ್ತು ಅಷ್ಟೊತ್ತಿಗೆ)

*ಮಾಥಾ ಟೇಕನಾ - ಕೈ ಮುಗಿಯುವುದು, ದೇವರಿಗೆ ಅಥವ ಸಾಮಾನ್ಯವಾಗಿ ಗುರುದ್ವಾರದಲ್ಲಿ ಮಂಡಿಯೂರಿ ಹಣೆಯನ್ನ ನೆಲಕ್ಕೆ ಜಪ್ಪುವ ಪದ್ದತಿ, ನೆಲಕ್ಕೆ ಹಣೆ ಜಪಗಂಬದು, to bow,

Feb 11, 2012

ಹೊಕ್ಕುಳ ಬಳ್ಳಿ ಕಾಯ್ದಿಡಿ

Preserve cord (umbilical cord) blood cells  

  umbilical cord – baby cord which connects to mothers body - ಅದೇ ಹೊಕ್ಕುಳ ಬಳ್ಳಿ

ಮುಂದೆ ಅಪ್ಪ ಅಮ್ಮ ಆಗುವ, ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ... ಅಥವ ಸದ್ಯವೇ ಮಕ್ಕಳಾದವರಿಗೆ.... ಸಣ್ಣ ಮಕ್ಕಳ ಅಪ್ಪ ಅಮ್ಮಂದಿರಿಗೆ.... ಈ ಮಾಹಿತಿ ಉಪಯೋಗಿ..... 

ಹೌದು cord ಅಥವ umbilical cord ಅಂದರೆ ಶಿಶು ಹುಟ್ಟುವಾಗ ತಾಯಿಯ ದೇಹದ ಜೊತೆಗೆ ಸಂಪರ್ಕ ಹೊಂದಿರುವ ನಾಳವೇ ಹೊಕ್ಕುಳ ಬಳ್ಳಿ. ಇದನ್ನು ಸಾಮಾನ್ಯವಾಗಿ ಎಲ್ಲ ಪಾಲಕರೂ ಕಾಪಾಡಿ ಇಡುತ್ತಾರೆ. ಅಥವ ಎಲ್ಲೋ ತಗಂಡು ಹೋಗಿ ಭೂಮಿಯಲ್ಲಿ ಹುಗಿಯುವ ಪದ್ದತಿಯೂ ಇದೆ. ಆ ವಿಷಯ ಅಲ್ಲ ಈಗ ನಾ ಹೇಳತ ಇರುವುದು. 

ಹೊಕ್ಕುಳ ಬಳ್ಳಿಯಲ್ಲಿ ಅಡಗಿರುವ ರಕ್ತದ ಕೋಶಗಳು ಮುಂದೆ ಆ ಮಗುವಿನ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ. ಮುಂದೆ ಆ ಮಗುವಿಗೆ ಬರುವ ಮಾರಣಾಂತಿಕ ರೋಗಗಳನ್ನ ಗುಣಪಡಿಸುವ ನಿಟ್ಟಿನಲ್ಲಿ (ಅಲ್ಲ ಮಾರಣಾಂತಿಕ ರೋಗಗಳು ಬಂದೇಬಿಡುತ್ತವೆ ಎಂದಲ್ಲ... ಬರುವುದೂ ಬೇಡ) ಈ ಜೀವಕೋಶಗಳು ಅತೀ ದೊಡ್ಡ  ಪಾತ್ರ ವಹಿಸುತ್ತವೆ.
ಪ್ರಸ್ತುತ ಸಂಶೋಧಕರ (Researchers) ಪ್ರಕಾರ ಅಪಘಾತಗಳಲ್ಲಿ ಆದ ಬೆನ್ನು ಮೂಳೆಯ ಮುರಿತದ ಜೋಡಣೆಯಲ್ಲಿ...  ಹೃದಯದ ಗೋಡೆಯ ರಿಪೇರಿಯಲ್ಲಿ.... ಡಯಾಬಿಟೀಸ್ ನ ನಿಯಂತ್ರಣದಲ್ಲಿ.... ಕಳಕೊಂಡ ಅಂಗದ ಮರು ಕಸಿಯಲ್ಲಿ (Grafting - ದೇಹದ ವಂದು ಭಾಗದ ಗಾಯ ಗುಣವಾಗದೇ ಇರುವ ಪರಿಸ್ಥಿತಿ ತಲುಪಿದಾಗ ದೇಹದ ಬೇರೆ ಭಾಗದ ಮಾಂಸವನ್ನು ತೆಗೆದು ಕಸಿ ಮಾಡುವ ವಿಧಾನ. ಬೋನ್ ಮ್ಯಾರೋ ಕೂಡ ಈ ಕೋಶಗಳಿಂದ ಶ್ರೀಮಂತವಾಗಿರುತ್ತಾದರೂ ಆ ಕೋಶಗಳನ್ನು ಪಡೆಯಲು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ) ಈ ಮೂಲ ಕೋಶಗಳು ಅತೀ ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಇದೆ. ಸಂಶೋಧನೆ ಪ್ರಾಥಮಿಕ ಹಂತದಲ್ಲೇ ಇದ್ದರೂ ಪಾಲಕರಿಗೆ ಈ ಕೋಶಗಳನ್ನು ಕಾಯ್ದಿಡುವ ಆಯ್ಕೆ ಮತ್ತು ಅವಕಾಶ ಕೊಡುವುದು ಉತ್ತಮ ಸಲಹೆ ಎಂಬುದು ಈ ಸಂಶೋಧಕರ ಅಭಿಪ್ರಾಯ.  

ಈಗಾಗಲೇ ಮಕ್ಕಳ ಪಾಲಕರಾದವರು ’ಅಯ್ಯೋ ರಾಮ ನಮ್ಗೆ ಗೊತ್ತೇ  ಇರಲಿಲ್ಲ... ಅವಕಾಶ ತಪ್ಪಿ ಹೋಯಿತಲ್ಲ’ ಎಂದು ಅಲವತ್ತುಕೊಳ್ಳುವ ಅವಶ್ಯಕತೆಯಿಲ್ಲ.. ಅಂಥವರಿಗೆ ಇನ್ನೊಂದು ಉಪಾಯ ಅಥವ ಅವಕಾಶ ಇದೆ. Milk tooth's stem cells are very rich in curing  diseases. ಹಾಂಗಾಗಿ ಹೆದರುವ ಅವಶ್ಯಕತೆ ಇಲ್ಲ... ಮಕ್ಕಳ ಹಾಲು ಹಲ್ಲು ಬೀಳುವ ಮುನ್ನ ಎಚ್ಚರ ವಹಿಸಿ.... ಹಲ್ಲಿನ ಡಾಕ್ಟರ ಹತ್ರ ಹೋಗಿ ಹಲ್ಲು ಕೀಳಿಸಿ.. ಮತ್ತೆ ಕೀಳಿಸುವ ಮೊದಲು ಆ ಡೆಂಟಿಸ್ಟನ ಹತ್ರವೇ ಕೇಳಿದರೆ ಆತ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ... ಈ ಹಲ್ಲಿನ Stem cells ನ ಹೇಗೆ ಕಾಪಾಡಬಹುದು ಎಂಬ ಆ ನಿಯಮಿತ ವ್ಯವಸ್ಥೆಯ ಪೂರಾ ವಿವರ ಇರುತ್ತದೆ ಆತನಲ್ಲಿ (ಇರಲೇಬೇಕು). ರಕ್ತದ ಬ್ಯಾಂಕ್ ಇರುವ ಹಾಗೇಯೇ ಈ ಕೋಶ ಕಾಪಿಡುವ ಬ್ಯಾಂಕಗಳೂ ಇರುತ್ತವೆ. ಅಲ್ಲಿ ಅದನ್ನ ನಿಮ್ಮ ಮಕ್ಕಳ ಹೆಸರಲ್ಲಿ ಜೋಪಾನ ಮಾಡಿ ಇಡಬಹುದು.  ಆ ಹಲ್ಲು ಕಿತ್ತ ಡೆಂಟಿಸ್ಟ ..ಕಿತ್ತ ಹಲ್ಲನ್ನ ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಿ ಆ ಬ್ಯಾಂಕಿಗೆ ಕಳಿಸುತ್ತಾನೆ.... ಮತ್ತು ನಿಮಗೆ ವಂದು ಅಕೌಂಟ್ ನಂಬರ್ ಸಹಿತ ಪಾಸ್ ಪುಸ್ತಕ ಕೊಡುತ್ತಾನೆ.... ಅದನ್ನ ಜೋಪಾನ ಮಾಡಿ ಇಟ್ಟುಕೊಳ್ಳಿ.

ಈ ಕೋಶ ಕಾಪಾಡಿಡುವ ಕೆಲಸ ಈಗಷ್ಟೇ ಪ್ರಾರಂಬಿಕ ಹಂತದಲ್ಲಿರುವ ಕಾರಣದಿಂದ ವೆಚ್ಚ ಸಲ್ಪ ಜಾಸ್ತಿಯೆನ್ನಬಹುದು. ಈ ಪ್ರಕ್ರಿಯೆಯ ವಟ್ಟೂ ವೆಚ್ಚ ಸರಿ ಸುಮಾರು ರೂ.75 ಸಾವಿರದಿಂದ ರೂ.1 ಲಕ್ಷದವರೆಗೂ ಆಗಬಹುದು. ಮುಂದೆ ಬರ ಬರತಾ ಈ ವೆಚ್ಚ ಕಮ್ಮಿ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷಗಟ್ಟಲೇ ತೆರುವ ನಮಗೆ ಮಕ್ಕಳ ಭವಿಷ್ಯದ ಆರೋಗ್ಯಕ್ಕಾಗಿ ಈ ಮತ್ತೊಂದು ಲಕ್ಷ ಅಲಕ್ಷವೇ ಸೈ.

(ಈ ವಿಷಯದಲ್ಲಿ ನಮಗೆ ಪ್ರಾಮಾಣಿಕ ಮತ್ತು ನುರಿತ ಅನುಭವೀ ಡಾಕ್ಟರ ಅವಶ್ಯಕತೆ ಇದೆ....
 ಆದರೆ ಈ ಕಾಲದಲ್ಲಿ ಆ ಪ್ರಾಮಾಣಿಕ ನುರಿತ ಅನುಭವೀ ಡಾಕ್ಟರ ಎಲ್ಲಿ ಸಿಗಬಹುದೆಂಬುದು ಯಕ್ಷಪ್ರಶ್ನೆ.  ಡಾಕ್ಟರಗಳ ಬಗ್ಗೆ ಹೇಳುವುದಾದರೆ ನಮ್ಮ ದೇಶದ ಅತೀ ದೊಡ್ಡ ಸುಲಿಗೆಕೋರ ಎಂಬುದು ಸತ್ಯ ವಿಚಾರ... ಸಾಮಾನ್ಯವಾಗಿ ಅಲ್ಲಿ ಇಲ್ಲಿ ವಬ್ಬಿಬ್ಬ ವಳ್ಳೆಯ ಡಾಕಟರೂ ಇಲ್ಲದಿಲ್ಲ... ಆದರೆ ಮೋಸಗಾರರೇ ಜಾಸ್ತಿ... ಅದೂ ಪಟ್ಟಣಗಳಲ್ಲಿ ಮೆಟ್ರೋಗಳಲ್ಲಿ ಯಾವ ಡಾಕ್ಟರನ ನಂಬಬಹುದು ಯಾರನ್ನ ನಂಬಬಾರದು ಎಂದು ತೀರ್ಮಾನಿಸುವುದೇ ಕಷ್ಟ. ಸನ್ ೧೯೭೦ರ ದಶಕದಲ್ಲಿ ಡಿಗ್ರಿ ತಗಂಡು ಬಂದ ಡಾಕ್ಟರೊಬ್ಬ ಅಲ್ಲಿಗೇ ಸೀಮಿತವಾಗಿ ಹೋಗಿರುತ್ತಾನೆ.... ಮುಂದೆ ಅಂವ ಹೊಸ ಹೊಸ ಸಂಶೋಧನೆಗಳಿಗೆ ಅಪ್ ಡೇಟ್ ಆಗಿರುವುದಿಲ್ಲ. ಯಾಕೆ ಅಂದರೆ ಅವನ ಹೊಟ್ಟೆ ತುಂಬತ ಇರುತ್ತದೆ.... ಜೀವನಕ್ಕೆ ಯಾವುದೇ ತೊಂದರೆ ಇಲ್ಲದ ಕಾರಣ ಆತ ಮುಂದೆ ಕಲಿಯುವ ಪ್ರಯತ್ನವನ್ನೇ ಮಾಡಿರಲಾರ. ಇದಕ್ಕೆ ಸರಿಯಾಗಿ ನಮ್ಮ ದೇಶದ ಡಾಕ್ಟರುಗಳಿಗೆ ಅನುಮತಿ ಕೊಡುವ ಸಂಸ್ಥೆ (MCI - Medical Council of India) ಕೂಡ ಯಾವುದೇ ಡಾಕ್ಟರನ Up-date ಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾನೂನಿನ ಪ್ರಕಾರ ಪ್ರತೀ ೫ ವರ್ಷಕ್ಕೆ ಪ್ರತೀ ಡಾಕ್ಟರನ ಪರವಾನಗಿ ನವೀಕರಿಸಬೇಕು... ಈ ನವೀಕರಣಕ್ಕೆ ಆಯಾ ಡಾಕ್ಟರ ಆಧುನಿಕತೆಗೆ ಆಧುನಿಕ ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವುದು - ಹೊಂದಿಸಿಕೊಳ್ಳುವುದು (Up-date) ಅತ್ಯವಶ್ಯ ಎಂಬ ಕಾನೂನಿದ್ದರೂ  ಭ್ರಷ್ಟಾಚಾರ ತಾಂಡವವಾಡುತ್ತಿರುವ ನಮ್ಮ ದೇಶ ಮತ್ತು ಡಾಕ್ಟರನ್ನೇ ನಂಬಿದ ಮುಗ್ಧ ರೋಗಿಯ ಕಾರಣದಿಂದ ಡಾಕ್ಟರು ಸಾಯುವಲ್ಲಿಯವರೆಗೆ ಕೋಟ್ಯಾಧಿಪತಿ ಆಗಿ ಹೋಗಿರುತ್ತಾನೆಯೇ ಹೊರತೂ ಆಧುನಿಕತೆಗೆ ತೆರೆದುಕೊಂಡಿರಲಾರ.  ಇದೊಂದು ದುರಂತ.
ಆಶ್ಚರ್ಯದ ಸಂಗತಿ ಅಂದರೆ... ನಾ ಭೇಟಿ ಮಾಡಿದ ಯಾವ ಡಾಕ್ಟರಿಗೂ ಇದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲ. ಬಹುಶಃ ವಿವರವೇ ಇನ್ನೂ ಅಸ್ಪಷ್ಟವಾಗಿರಬಹುದು.

ಖುದ್ದು ಈ  ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ  ...ಈ ವಿಷಯ ಎಲ್ಲ ತಿಳಿದೂ - ಗೊತ್ತಿದ್ದೂ ಮುಗ್ಧ ಜನಕ್ಕೆ ಹೇಳದೇ ಇರುವುದು ನನ್ನ ಬಹು ದೊಡ್ಡ ತಪ್ಪಾಗಬಹುದು. ಅದಕ್ಕೇ ಹೇಳುವ ಪ್ರಯತ್ನ ಮಾಡಿದ್ದೇನೆ. ಉತ್ತಮ ವೈದ್ಯರುಗಳ ಕ್ಷಮೆ ಇರಲಿ.)

 ಕೆಲವು  ಉಪಯೋಗೀ ಲಿಂಕುಗಳು -
http://en.wikipedia.org/wiki/Umbilical_cord
 http://www.umbilicalcords.org/
 http://www.epigee.org/pregnancy/donate.html

ಬಿನ್ನಹ: ಈ ವಿಷಯದ ಬಗ್ಗಿನ ಇನ್ನೂ ಹೆಚ್ಚಿನ ಮಾಹಿತಿಯಿದ್ದಲ್ಲಿ ದಯವಿಟ್ಟು ತಿಳಿಸಿ. 





Feb 7, 2012

ರಾಮಭಕ್ತ ಹನುಮಂತ

"ಕೂಸಿನ ಕಥೆ" ಅಂದಮಾತ್ರಕ್ಕೆ ಅದು ಕೂಸಿನ ಮಲಗಿಸವು ಹೇಳಿ ಹೇಳಿದ ಬಂಡು ಕಥೆ ಅಥವ ಮಕ್ಕಳ ಕಥೆ ಹೇಳಿ ತಿಳಕಳವು ಹೇಳಿಲ್ಲೆ... ಏನೋ  ಮನಸ್ಸಲ್ಲಿ ಹೊಳೆದ ಕಥೆ ಕೆಲವಾದರೆ.. ಇನ್ನು ಕೆಲವು ಕರ್ಮ ಧರ್ಮ ಸಂಯೋಗದಿಂದ "ಕವಿ ಸಮ್ಮೇಳನ"ದಲ್ಲಿ ಕಿಮಿಗೆ ತಾಗಿ  ಹೋದ (ನಾಟಿದ) ಕಥೆಗಳು ಕೆಲವು. ಆ ಕಥೆಗೇ ಸಲ್ಪ ಬೆಣ್ಣೆ, ಉಪ್ಪು, ಖಾರ (ಮಸಾಲೆ) ಹಚ್ಚಿ ಶಣ್ಣದೊಂದು ಕಥೆಯ ರಾತ್ರಿ ಹಲವು ’ನಿಮಿಷ’ಗಳ ಕಥೆಯಾಗಿ ಹೇಳಕಾಗತು. ಅದು ನಂದೊಂದೇ ಅಲ್ಲ ...ಎಲ್ಲ ಅಪ್ಪ ಅಮ್ಮಂದಿರ ಖರ್ಮ. !!
ಇನ್ನು ಇವತ್ತು... ಈ ’ನಿಮಿಷ’ಕ್ಕೆ ಪುರಾಣ ಪುರುಷರ ಬಗ್ಗೆ ಒಲವು - ಆಸಕ್ತಿ ಬಂಜು ... ಟಿವಿಯಲ್ಲಿ ಬಪ್ಪ ರಾಮಾಯಣ ಮಹಾಭಾರತ, ಕೃಷ್ಣ - ಹನಮಂತರ ನೋಡುಲೆ ಹಾತವರಿತು ಹೇಳಾದರೆ ಅದಕ್ಕೆ ಮೂಲ ಕಾರಣನೇ ಪ್ರತೀ ರಾತ್ರಿ ಆಕಳಿಸ್ತವ ಯಾ ಹೇಳ್ವ ಈ ಕೂಸಿನ ಕಥೆಗಳು.


ವಂದ್ ಸಲ ಸೀತಾಮಾತೆಗೆ ಹನುಮಂತನ ಸೇವೆ ನೋಡಿ ಖುಷಿಯಾತಡ. ’ನನ್ನ ಹುಡುಕುಲೆ ರಾಮಂಗೆ ಸಹಾಯ ಮಾಡಿದ್ದ... ಚೂಡಾಮಣಿ ತಗಂಬಂದು ರಾಮಂಗೆ ಕೊಟ್ಟಿದ್ದ.... ರಾವಣನ ಸೋಲಿಸುಲೆ ಸಹಾಯ ಮಾಡಿದ್ದ... ವಟನಲ್ಲಿ ರಾಮನ ಬಂಟ ಇಂವಾ... ಇವನ ರಾಮಭಕ್ತಿ ಮತ್ತೆ ಅವನ ಸೇವೆ ಅದ್ಭುತ' ಹೇಳಿ ಖುಷಿಯಾಗಿ .... ಹನಮಂತನ ಕರದು ಅವಂಗೆ ತನ್ನ ಕೊರಳಲ್ಲಿದ್ದ ಭಯಂಕರ ಚೆಂದದ ಮುತ್ತಿನ ಸರನೇ ತೆಗೆದು ಬಹುಮಾನ ಹೇಳಿ ಕೊಟ್ಟತಡಾ... 
 (ಈ ಮಧ್ಯ ’ಚೂಡಾಮಣಿ ಅಂದರೆಂತು’ ಹೇಳುವ ಪ್ರಶ್ನೆ ಬಂತು... ಚೂಡಾಮಣಿಯ ಬಗ್ಗೆ ಸಣ್ಣದೊಂದು ಪೀಠಿಕೆ ಕೊಟ್ಟು ’ಆ ಕಥೆ ನಾಳೆ ಹೇಳತೆ’ ಹೇಳಿ ಸಮಾಧಾನ ಮಾಡಿದ ಮೇಲೆಯ ಕಥಾಭಾಗದ ಮುಂದುವರಿಕೆಗೆ ಅನುಮತಿ ಸಿಕ್ಕಿದ್ದು ಮತ್ತೆ ಇನ್ನುಮುಂದೆ ಯಾವ ಕಥೆಯಲ್ಲೂ ಹೊಸ ಪದಗಳ ಪ್ರಯೋಗ ಮಾಡೂಲಾಗ ಹೇಳಿ ತೀರ್ಮಾನ ಅಲ್ಲ ಯೋಚನೆ ಮಾಡಿದ್ದು. ಅಲ್ಲ ತೀರ್ಮಾನನೇ ಮಾಡಿರೂವ ಅಪ್ಪ ಹೋಪ ಕೆಲಸಲ್ಲ ಅದು !!) 


 ಹನಮಂತ ಆ ಮುತ್ತಿನ ಸರ ಹರದು ಆ ಮುತ್ತನೆಲ್ಲಾವ ವಂದೊಂದೇ ಹೀಂಗೆ ಹಿಂದೆ ಮುಂದೆ ಮಾಡಿ ನೋಡಿ.... ಮುತ್ತಿನ ಮಧ್ಯದ ತೂತಿನ ವಳಗೂ ಯೆರಡೂ ಬದಿಂದ ನೋಡಿ ವಗದುಬುಟನಡ.....ಮದಲೇ ಹನಮ... ಮಂಗನ ಬುದ್ದಿ.... ಮುತ್ತು ಅಂದ್ರೆಂತು .. ಅದರ ಬೆಲೆ ಯೆಂತು ಗೊತ್ತಿಲ್ಲೆ. ಇದನ್ನ ನೋಡಿ ಸೀತೆಗೆ ಆಶ್ಚರ್ಯನೂ ಆತಡ ಶಿಟ್ಟೂ ಬಂತಡ... ಕೇಳೇಬುಡತಡ.. 
(ಇಲ್ಲೂ ಹಾಂಗೇಯ.. ’ಯೆಂತಕೆ ವಗದಾ?’ ಹೇಳುವ ಪ್ರಶ್ನಾರ್ಥಕ ಬಂತು... ’ತಡೆ ಮಲಯಾಳಕ್ಕೆ ಹೋಪಕಿಂತ ಮೊದಲೇ ಕಿಮಿ ಹರ್ಕಳಡಾ, ಹೇಳತೆ’ ಹೇಳಿ ಹೇಳಿದ್ದು ಅರ್ಥ ಆಗದೇ ’ಅಪ್ಪ ಯೆಂತೋ ಅರ್ಥವಾಗದ್ದ ಹೇಳದ’ ಹೇಳಿ ತಿಳಕಂಡಿರವು ...ವನ್ನಮನಿ ಮಾಡಿ ನಗ್ಯಾಡಿ ಕಥಾಭಾಗ ಮುಂದರಿಕೆಗೆ ’ಹುಂ’ಗುಟ್ಟಿತ್ತು ಕೂಸು)


ಸೀತೆ ಹೇಳತಡ
"ಹನಮಾ... ಯೆಂತ ಮಂಗನೋ ನೀನು...ಅಷ್ಟು ಚೊಲೋ ಮುತ್ತಿನ ಸರ ತೆಗೆದು ಕೊಟ್ಟಿದಿದ್ದೆ.... ಅದರ ಬೆಲೆಯೇ ಗೊತ್ತಿಲ್ಲೆ ನಿಂಗೆ... ಇಡೀ ಸರ ಹರದದ್ದಲ್ಲದ್ದೇ ಆ ಮುತ್ತನೂ ಯೆಲ್ಲ ವಗೀತ ಇದ್ಯಲಾ... ಯೆಂತ ಮಳ್ಳನಾ? ನೀ ವಗೇತೆ ಹೇಳಾದರೆ ಕೊಡತಿದ್ನೇ ಇಲ್ಲೆ... ಯಂಗೇ ಮಳ್ಳು" ಹೇಳಿ


ಹನಮ ಹೇಳಿದ್ನಡ... "ಅಮ್ಮಾ... ತಾಯಿ... ತಪ್ಪಾತು...
. ನೀ ಯಂಗೆ ಅಮ್ಮ ಇದ್ದಾಂಗೇಯ. ನಿಂಗೆ ಬೇಜಾರಾಗತು ಹೇಳಾದರೆ ಯಂಗೆ ಉಪಯೋಗಕ್ಕೆ ಬರದೇ ಇದ್ರೂ ಇಟಗತ್ತೆ. ಆದರೆ ವಂದು ವಿಷಯ ಹೇಳಲ? ನೀನು ರಾಮನ ಹೆಂಡತಿ... ನಿನ್ನತ್ರ ಇಪ್ಪ ಯೆಲ್ಲ ವಸ್ತುನಲ್ಲೂ ರಾಮ ಇರತ ಹೇಳಿ ಮಾಡಕಂಡಿದ್ದೆ....ನಂಬಿಕೆ ಯಂಗೆ. ಅದಕೇ ಯೆಲ್ಲ ಮಣಿನೂ ತಿರಗಿಸಿ ತಿರಗ್ಸಿ ನೋಡದೆ... ಯೆಲ್ಲೂ ರಾಮ ಕಂಡಿದ್ನಿಲ್ಲೆ.... ರಾಮ ಇಲ್ಲದ ವಸ್ತು ಯಂಗೆಂತಕೆ ಹೇಳಿ ವಗದದ್ದೇ ಬಿಟ್ರೆ ನಿಂಗೆ ಬೇಜಾರಾಗಲಿ ಹೇಳಲ್ಲ... ಬೇಜಾರಾಗಡ "

ಸೀತಾಮಾತೆ ತೆಗದ್ ಬಾಯ ತೆಕ್ಕಂಡೇ ಇದ್ದುಬುಡತಡ ವ೦ದು ಕ್ಷಣವಾ. ಅಬಾ .. ಇಂವೆಂತಾ ಭಕ್ತ... ಇವನಂತ ರಾಮ ಭಕ್ತ ಜಗತ್ತಲ್ಲೇ ಇಲ್ಲೆ.... ಮುಂದೆ ಹುಟ್ಟುದೂ ಸುಳ್ಳು ಹೇಳಿ ಅನಿಸಿಹೋತಡ. 


ಹೌದಾ...ಅದಕೇ ಹೇಳತ... ರಾಮನ ಭಕ್ತ ಹನುಮಂತ... ಅಂವ ಅವನ ಜೀವನನೇ ರಾಮಂಗೆ ಮೀಸಲಾಗಿಟ್ಟಿದ್ದ ... ಎಲ್ಲೆಲ್ಲೂ ರಾಮ ಇದ್ದ ಹೇಳಿ ಎದೆ ಬಗದು ತೋರಸಿದ್ದ ಹನಮಂತ ಹದಾ...  


(ಓಕೆ ಗೂಡ್ ನೈಟ್, ಓಯೀ ಓಯೀ...)