Nov 27, 2021

ಡಿಎನ್ಸಿ ಮಾಡ್ಸೂ

ತಲೆಬರಹ:
ಗುನಗನ ಕಷ್ಟ ಗುನಗಂಗೆ  ಎಂಬ ಒಂದು ಕಥೆ ಬರೆದಿದ್ದೆ ಕೆಲ ದಿನಗಳ ಹಿಂದೆ. ಅದನ್ನೋದಿದ ಓದುಗ ನನ್ನಣ್ಣ ಈ ವಿಷಯವ ನೆನಪು ಮಾಡಿದ.

ಹೌದು ನಮ್ಮಲ್ಲಿ ಈ ಕಥೆಯನ್ನೂ ಹಿರಿಯರು ಹೇಳ್ತಾರೆ. ಕೇಳಿ.. ನಡೆದ ಘಟನೆಯಂತೆ ಇದು.  (ನಾ ಕೇಳಿದಂತೇ ಗೀಚಿದ್ದೇನೆ)
-----

     ರೀತಿ ರಿವಾಜುಗಳಿಂದ ಆ ವರ್ಷದ ಹಬ್ಬ ನಡೆಯುತ್ತಿತ್ತು. ಕಲಶ ಹೊರುವ ಗುನಗ ಸಲ್ಪ ಅಕ್ಷರಸ್ತ. ವ್ಯಾವಹಾರಿಕ ಜ್ಞಾನವೂ ಇತ್ತು ಅವನಿಗೆ ಎನ್ನಿ.

   ಕಲಶ ಹೊರುವವನಿಗೆ 'ಭಾರ' ಬರ್ತದೆ. 'ಭಾರ' ಬರುವುದು, ಎಂದರೆ ಮೈಮೇಲೆ ಶ್ರೀ ದೇವರ ಆಹ್ವಾಹನೆಯಾಗುವುದು ಎಂಬ ನಂಬಿಕೆಯಿದೆ.
     ಕಲ್ಲಿನ ವಿಗ್ರಹ ವರ್ಷಪೂರ್ತಿ ಮಾತನಾಡದು. ಆದರೆ ಅದೊಂದು ದಿನ (ಹಬ್ಬದ ದಿನ) ಆ ದೇವರು ಕಲಶ ಹೊತ್ತವನ ಮೇಲೆ ಆಹ್ವಾಹನೆಯಾಗುತ್ತಾನೆ !  ಹಾಗಾಗಿ ತನ್ನ ಸಂಕಷ್ಟ, ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡರೆ ಆ ದೇವ ಪರಿಹರಿಸಬಹುದು... ಎಂಬ ನಂಬಿಕೆ ಹುಲುಮಾನವನಲ್ಲಿ.  ಹಾಗಾಗಿಯೇ 'ಹೇಳಾಣಿಕೆ' ಆಗ್ತದೆ ಆಗ. ಆ ಸಂದರ್ಭದಲ್ಲಿ ದೇವರ ಆಹ್ವಾಹನೆಯಾದ ಗುನಗನ ಬಾಯಿಂದ ಹೊರಟ ಪರಿಹಾರ ಕ್ರಮದಿಂದ ಭಕ್ತರ ಸಮಸ್ಯೆ ಪರಿಹಾರವಾದ ನಿದರ್ಶನಗಳೂ ಇಲ್ಲದಿಲ್ಲ. ಹಾಗಾಗಿ  "ಹೇಳಾಣಿಕೆ"ಯೇ ಭಕ್ತನ ಮನಸ್ಸಿಗೊಂದು ಆಶಾ ಕಿರಣ.

  ಮಕ್ಕಳಾಗದ ಬಡ ಭಕ್ತನೊಬ್ಬ ದೇವರಲ್ಲಿಯೇ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳುವ ಬಯಕೆಯಲ್ಲಿ ಅಂದು ಬಂದಿದ್ದ. 

ಹಾಗೆಯೇ ಈ ಭಕ್ತ ತೋಡಿಕೊಂಡ ತನ್ನ ಅಳಲ - "ದೇವರೇ ನನಗೆ ಮಕ್ಕಳಾಗಲಿಲ್ಲ.. ಮದುವೆಯಾಗಿ ಐದು ವರ್ಷ ಆಯ್ತು .. ಪರಿಹಾರ ಕೊಡಬೇಕು"

ತಕ್ಷಣ ಕಲಶ ಉಲಿಯಿತು.
"ಡಿ ಎನ್ ಸಿ ಮಾಡಸೂ"  !!

ಅಡಿಬರಹ :
D&C ಅಂದ್ರೆ Dilation & Curettage is a procedure to clear uterine lining after miscarriage or abortion

ಸುಮಾರು 70- 80 ರ ದಶಕದಲ್ಲಿ .. ಪದೇ ಪದೇ ಗರ್ಭ ನಿಲ್ಲದ ಸಂದರ್ಭಗಳಲ್ಲಿ ಈ ಚಿಕಿತ್ಸೆ ಚಾಲ್ತಿಗೆ ಬಂತು.

06/09/2021
ದಿಲ್ಲಿ

Oct 13, 2021

ಸುಬ್ರಾಯ ಶೆಟ್ರು


ಬೇರೆವರ ಟೀಕೆ ಟಿಪ್ಪಣಿಗೆ ನಾವು ಎಲ್ಲಾ ಸಲ ತಲೆಬಾಗವು ಅಥವ ತಿದ್ಕಳವು ಹೇಳಿಲ್ಲೆ. ನಮ್ಮ ನಮ್ಮ ಅಭಿಪ್ರಾಯದಂತೇ ಬದುಕವು ನಾವು ಅಲ್ದ?

ವಂದು ನಿಜ ಘಟನೆ ನೆನಪಾತು.. ನಾ ಶಾಲೆಗೆ ಹೋಗಕಾರಿನ ಘಟನೆ ..

ಸುಬ್ರಾಯ ಶೆಟ್ಟಿ ಹೇಳಿ ಆಗಿನ ಕೆಎಸ್ಸಾರ್ಟೀಸಿಯ ವಬ್ಬ ಪ್ರಾಮಾಣಿಕ ಡ್ರೈವರ...  ತನ್ನ ವೃತ್ತಿ ಜೀವನದ ಕೊನೆಯಲ್ಲಿದಿದ್ದ. ಅವನ ಇಡೀ ವೃತ್ತಿ ಜೀವನದಲ್ಲಿ ಯಾವುದೇ ತಪ್ಪು ಮಾಡದ ಸರ್ಕಾರಿ ಸೇವಕ ಅಂವ (ಅವನ್ನ ನೌಕರ ಹೇಳಿರೆ ಅದು ಅವಂಗೆ ಅಗೌರವ ಆಗತು)  ಜೀವಮಾನದಲ್ಲಿ ವಂದೇ ವಂದು ಎಕ್ಸಿಡೆಂಟೂ ಮಾಡದಂವ ಹೇಳ್ವ ಹೆಗ್ಗಳಿಕೆ ಆವರೆಗೂ ಇತ್ತು ಅಂವಂಗೆ

ಕುಮಟಾ ಡಿಪೋ ದಲ್ಲಿ ತನ್ನ ಸೇವೆಯ ಕೊನೆಯ ಕೆಲ ವರ್ಷಗಳನ್ನ/ದಿನಗಳನ್ನ ಕಳೀತೇ ಇದಿದ್ದ.

ಆದರೆ ಡಿಪಾರ್ಟಮೆಂಟಿನಲ್ಲಿ ಪ್ರಾಮಾಣಿಕ ಸೀದಾ ಸರಳ ಸಹಜ ಮನುಷ್ಯನೇ ಆದರೂ  ಯಂಗಳಂಥ  ನವಯುವಕರಿಗೆ ಅಂವ "ಜಬ್ ಡ್ರೈವರ" ... ಅಂವ ಬಸ್ ಹತ್ತದಾ ಅಂದ್ರೆ 'ಇವತ್ ಹೆಬ್ಬಾನಕೆರೆ ಬಸ್ಸು ಲೇಟು' ಹೇಳೇ ಅರ್ಥ.

ಅಸಲಿಗೆ ಬಸ್ ಲೇಟಾಗ್ತಿತ್ತಿಲ್ಲೆ. ಸರಿಯಾದ ಟೈಮಿಗೆ ಹೊರಡ್ತಿತ್ತು ಬಸ್ಸು. ಸರಿಯಾದ ಸಮಯಕ್ಕೇ ಗಂತವ್ಯವ ಮುಟ್ಟಸ್ತಿದ್ದ ಅಂವ‌. ಆದರೆ  ಬೇರೆ ಡ್ರೈವರಂದಿಕ್ಕ ಇದ್ದಾಗ 5 ಗಂಟೆಗೆ ಕೂಪನಂಗಡಿಗೆ ಬಪ್ಪ ಬಸ್ಸು ಆ ದಿನ  ಐದೂಕಾಲಾಗ್ತಿತ್ತು.

ಇಲ್ಲಿ ಕೆ‍ಎಸ್ಸಾರ್ಟೀಸೀ ಬಸ್ಸಿನ ಬಿಡುವ ಸಮಯ ಮತ್ತು ತಲುಪುವ ಸಮಯದ ಬಗ್ಗೆ (ನಿಂಗಕ್ಕೆಲ್ಲ ಅರಿವಿದ್ದು ಆದ್ರೂವ) ಆ ರೂಟ್ ಗೊತ್ತಿಲ್ಲದವರಿಗಾಗಿ ಚುಟುಕಾಗಿ ಹೇಳವು.

ಬಿಡುವ ನಿಲ್ದಾಣದಿಂದ  ತಲುಪುವ ನಿಲ್ದಾಣದವರೆಗಿನ  ದೂರ ಮತ್ತು ನಡುವಣ ರಸ್ತೆಯ ಪರಿಸ್ಥಿತಿ ಮತ್ತು ನಡುವಣ ನಿಲುಗಡೆ ಮತ್ತು ಹೋಗುವ ಬಸ್ಸಿನ ಮಾದರಿಯನ್ನವಲಂಬಿಸಿ ಕಾಲನಿರ್ಣಯ ಮಾಡಿಟ್ಟಿರ್ತ.
ಅಂದ್ರೆ  ಕುಮಟಾದಿಂದ ಹೊರಟ ಬಸ್ಸು ವಾಲಗಳ್ಳಿ, ಕೂಜಳ್ಳಿ,  ಚಂದಾವರ, ಕೆಕ್ಕಾರ, ಕಡತೋಕ, ಹೆಬ್ಬಾನಕೆರೆ, ನೀಲಕೋಡ, ಅರೆಅಂಗಂಡಿ, ಸಂತೆಗುಳಿ, ಚಾಂದ್ರಾಣಿ  ಮಾರ್ಗವಾಗಿ ಹೊನ್ನಾವರ ತಲುಪಲೆ ಎಷ್ಟು ಸಮಯ ಬೇಕೋ ಅಷ್ಟು + ನಿಲುಗಡೆಯ ಸಮಯ + ರಸ್ತೆಯ ಪರಿಸ್ಥಿತಿಯಿಂದಾಗಿ ಅಪ್ಪ  ತಡ ಇದನ್ನೆಲ್ಲ ಸೇರಿಸಿ ಕಾಲನಿರ್ಣಯ ಮಾಡ್ತಿದ್ದ ಆವಾಗೆಲ್ಲವ. ಇದಕೆಲ್ಲ ಭಾರೀ ಟೀಮೇ ಇತ್ತನಪ !

ಹೌದು
ಸುಬ್ರಾಯ ಶೆಟ್ಟಿ ಹಂಗೇ  ಆಗಿದ್ದ

5 ಗಂಟೆಯ ಬಸ್ಸು ಹೇಳಾದ್ರೆ 10 ನಿಮಿಷ ಮೊದಲೇ ಬಂದು ಗಾಡಿ ಸ್ಟಾರ್ಟ್ ಮಾಡಿ... ಡುರ್ಡುರ್ ಗೆಡಸಿ... ಅದರ ಆವಾಜ್ ಮೇಲೇ ಗಾಡಿ ಸರಿ ಇದ್ದ ಇಲ್ಯ ನೋಡಿ ಗೊತ್ತಾಗ್ತಿತ್ತು ಅಂವಂಗೆ. ಸ್ಟಾರ್ಟ್ ಮಾಡಿದ ಮೇಲೆ ಮತ್ತೆ ಕೆಳಗಿಳದು ಹೋಗಿ ಪ್ರತೀ ಸಲ ಆರೂ ಚಕ್ರ ಸಮಾ ಇದ್ದ ಇಲ್ಯ ನೋಡ್ಕಂಡು... ಅದರ ಹವಾ ಚೆಕ್ ಮಾಡ್ಕ ಬಂದು ಮತ್ತೆ ಡ್ರೈವರ ಸೀಟಲ್ಲಿ ಕೂತ್ಗತಿದ್ದ ಪುಣ್ಯಾತ್ಮ ಅದು.

ಇಲ್ಲಿ‌ ಕೆಲವು ಮಾಹಿತಿಗಳು :
ಕುಮಟಾ ಡಿಪೋ
ಕೆ‍ಎಸ್ಸಾರ್ಟೀಸಿಯ ಕುಮಟಾ ಡಿಪೋ ಅಂದ್ರೆ ಕುಮಟಾ ಮತ್ತು ಹೊನ್ನಾವರ ಎರ್ಡೂ ತಾಲೂಕುಗಳೂ ಸೇರಿ ಒಂದು ಡಿಪೋ.

ಹೆಬ್ಬಾರ್ನಕೆರೆ ಬಸ್ಸು ಅಂದ್ರೆ -  ಕುಮಟಾ ಹೆಬ್ಬಾರ್ನಕೆರೆ ಮಾರ್ಗವಾಗಿ  ಹೊನ್ನಾವರ

ಚಿಪ್ಪಿಹಕ್ಕಲ ಬಸ್ಸು ಅಂದ್ರೆ - ಕುಮಟಾ ಚಿಪ್ಫಹಕ್ಕಲ ಹೆಬ್ಬಾರ್ನಕೆರೆ ಮಾರ್ಗವಾಗಿ ಹೊನ್ನಾವರ

ಎರ್ಡೂ ಬಸ್ಸುಗಳು ಈ ದೇವತೆಕೆರೆಯ ನಂತರ ರಾಮತೀರ್ಥದವರೆಗಿನ ಜನಕ್ಕೆ ಅನುಕೂಲವೇಯ.

ಕಥೆ ಅರ್ಥ ಅಪ್ಪಲೆ ಹೆಬ್ಬಾನಕೆರೆ ಯ ಗುರ್ತಿಲ್ದೋದವಕೆ ಈ ವಿವರ ಅಗತ್ಯ ಆದ್ದರಿಂದ ಹೇಳ್ದೆ‍.
ಆಗಲಿ
ಮುಂದೋಪನ ?

ಈ ಸುಬ್ರಾಯಶೆಟ್ಟಿಗೆ ಅದೊಂದು ಕರಾಳ ದಿನ.   ಆ ದಿನ ಯಾವಾಗನಂಗೇಯ ಸಮಯಾನುಸಾರ 5 ಗಂಟೆಯ ಹೆಬ್ಬಾನಕೆರೆ ಬಸ್ಸ್ ಹತ್ತಿ, ಸ್ಟಾರ್ಟ್ ಮಾಡಿ ತನ್ನ ದಿನಚರಿಯ ಕೆಲಸ ಮುಗಸಿ ಹೊರಟ - ಕುಮಟಾ ಬಸ್ ನಿಲ್ದಾಣದಿಂದವ.
ವಿಪರೀತ ಉಹೆಚ್ಚು ಮಳೆ ಆ ದಿನ.‌

ಕಂಡಕಂಡಲ್ಲಿ ರಸ್ತೆಯ ಮೇಲೆ ನೀರು ತುಂಬಿ ಹರೀತಿದ್ದದ್ದು ಚಂದಾವರ ಹೊಳೆಯ ನೆಗಸ ಮುಂದೆ ದೊಡ್ಡ ವಿಷ್ಯವೇ ಅಲ್ಲ.

ಚಂದಾವರ ಹೊಳೆಗೆ ಆಗ ಈಗಿಪ್ಪ ದೊಡ್ಡ ಬ್ರಿಜ್ ಆಗಿತ್ತಿಲ್ಲೆ. ಆಗ್ತಾ ಇದಿತ್ತು. ಕಟ್ಟುವ ಕೆಲಸ ನಡೀತಾ ಇತ್ತು. ಈಗಲೂ ಹೊಸ ಬ್ರಿಜ್‌ನಿಂದ ಕಾಂಬ ಹಳೇ ಸಣ್ಣ ಬ್ರಿಜ್ಜೇ ಆವಾಗಿನ ಸಂಪರ್ಕ ಸಾಧನ.

ತಗ ಸುಬ್ರಾಯ ಶೆಟ್ಟಿ ತನ್ನದೇ ವೇಗದಲ್ಲಿ  ವಾಲಗಳ್ಳಿ, ಕೂಜಳ್ಳಿ, ಮಲ್ಲಾಪುರ, ಚಂದಾವರ ನಾಕಾ ದಾಟಿ  ಹೊಳೆಯ ಹತ್ರ ತಂದ ತನ್ನ ಪ್ರೀತಿಯ ಬಸ್ಸ.‌

ಚಂದಾವರ ಹೊಳೆಯ ಪೂಲ್‌ ಮೇಲೇ  ನೆಗಸಿನ ನೀರು ತುಂಬಿ ಹರೀತಾ ಇದ್ದದ್ದ ಕಂಡ ಸುಬ್ರಾಯ ಶೆಟ್ಟಿ ಕಣ್ಣಳತೆಯಲ್ಲೇ ನೆಗಸ ಅರಿತು ಗಾಡಿ ನಿಲ್ಲಸದ್ದೊಂದೇ ಅಲ್ಲ.  ಸೈಡಿಗೆ ಹಚ್ಚಿ ಬಂದ್ ಮಾಡೇಬುಟ.

ಸಾಮಾನ್ಯವಾಗಿ ಆ ಬಸ್ಸಲ್ಲಿಪ್ಪದು 75% ಕಾಲೇಜ ಹುಡಗ್ರು. ನನ್ನ ಥರದ ಬಿಶಿರಕ್ತ ಮೇಲಿಂದ ಮ್ಯಾಣ.

"ಬಸ್ ದಾಟದೋದಂಥಾ ಮಹಾ ದೊಡ್ ನೆಗಸೆಲ್ಲ ಅಲ್ಲ ..‌ ದಾಟಿ ಹೋಗಲಕ್ಕ" ಅಂದ ವಬ್ಬಂವಾ

"ಬಸ್ಸಿನ ವಜ್ಜೆಗೆಲ್ಲ ನೆಗಸಲ್ವಾ.. ನಮ್ಮ ಗುಡ್ನಕಟ್ ನೆಗಸ ಮುಂದೆ ಇದೆಲ್ಲ ನೆಗಸ?!" ಅಂದ ನಾಯ್ಕರ ಪೋರ

"ತೊಂದ್ರಿಲ್ರಾ ದಾಟೋಗ್ತದೇ ಶೆಟ್ರೇ ..‌ಹೆದರುದ್ ಬೇಡ... ಹೊಡೀರಿ ಗಾಡಿ" ಅಂದ ಗಾಣಗರ ಪೋರ ಶ್ರೀನಾಥ.

" ಮಂಯಾತಾ... ಅಯ್ಯ ಸುಬ್ರಾಯ್ ಶೆಟ್ರು ಈ‌ ನೆಗಸಲ್ಲೆಲ್ಲ ಗಾಡಿ ಹೊಡದ್ರೆ.... ನರಿಯಣ್ಣ ಕಥೆ ಹೇಳ್ತದ್ಯೋ " ಅಂದ ಅಗ್ನೇತ್ರಿ ಮಾಣಿ.

"ಶೆಟ್ರಗೆ ಜೀಂವದ ಹೆದ್ರಕ್ಯ" ಅಂದ ನರಸಪ್ಪನ ಮನೆ ಮಾಣಿ.

"ನಾ 34 ವರ್ಷ ಡ್ರೈವರಕೆ ಮಾಡಿ ಅನುಭವ ಇದಿದ್ರೆ ಬಸ್ ನಿಲ್ಸೂದೇ ಇಲ್ಲಾಗಿತ್ತು" ಅಂದ ಎಲೆ ಸುಬ್ಬಣ್ಣ.

"ಅದಕೆಲ್ಲ ದಮ್ ಬೇಕಾ" ಅಂದ ಕೆಕ್ಕಾರ್ ಗಜು ಅಣ್ಣ.
ತಗ

ಪ್ವಾರಗಳ ಇಂಥ ಹಲವದ್ನೆಂಟು ಮಾತು ಮತ್ತೆ ಮೇಲಿಂದ ಕಂಡಕ್ಟರನೂ ಈ ಹುಡ್ಗಾಟಗತಿ ಹುಡುಗ್ರ ಸಾಥ್ ಕೊಟ್ನ ಇಲ್ಯ....
ಮೇಲಿಂದ ಅಲ್ಲೇ ನೆಗಸಿನ ಮಜ ನೋಡ್ತ ಇದ್ದ ಕೆಲವು ಲೋಕಲ್ ಮುಸಲ್ಮಾನ ಹುಡಗ್ರು "ಈಗ ಮಾತ್ರ ಮೋಹನ್ ಹೆಗಡ್ರ್ ಚಿಪ್ಪಿನ ಲಾರಿ ದಾಟಸ್ಗ ಹೋಗದೆ ಡ್ರೈವರೂ" ಅಂದ್ವ ಇಲ್ಯ...
ಸುಬ್ರಾಯ ಶೆಟ್ರ ಬಿಪಿ ಯೇರೋತು, ಸಹನೆ ಮೀರೋತು.

  ಹತ್ತೇಬುಟ್ರು ಗಾಡಿಯ.
ಸ್ಟಾರ್ಟ್ ಮಾಡಿ ಗುರ್ಗೆಡಸಿ ಫಸ್ಟ್ ಗೇರ್ ಹಾಕೇಬುಟ್ರು.

ಗಾಡಿ ಹೋತು ಮದಲು  ರಸ್ತೆಯ ಮೇಲೆ ....‌ಮತ್ತೆ ಆ ಶಿಥಿಲ ಸಣ್ಣ ಬ್ರಿಜ್ ಮೇಲೆ ..‌ ಸುಮಾರು ಅರ್ಧ ಬ್ರಿಜ್ ದಾಟದ್ದೇ ಆ ನೆಗಸಿನ ರಭಸಕ್ಕೆ ತಡದ್ದಿಲ್ಲೆ ಬಸ್ಸು. ಹೋಗೀ ಹೋಗಿ ತೇಲೋತು.

ಪುಣ್ಯಕ್ಕೆ ಹೊಸಾ ಬ್ರಿಜ್ ನ ಕನಸ್ಟ್ರಕ್ಷನ್ ನಡೀತಾ ಇತ್ತು. ಹೊಸ ಬ್ರಿಜ್ಜಿನ ಕಂಬಗಳು ಗಟ್ ಮುಟ್ಟಾಗಿತ್ತು... ಹೋಗಿ ಹೋಗಿ ಬಸ್ಸು ಆ ಹೊಸಾ ಬ್ರಿಜ್ಜಿನ (ಈಗಿನ ಬ್ರಿಜ್ಜು) ಕಂಬಕ್ಕೆ ತಾಡತು...

ದೇವರ ದಯವೋ,
ಸುಬ್ರಾಯ ಶೆಟ್ಟರ ಇಷ್ಟು ವರ್ಷಗಳ ಪ್ರಾಮಾಣಿಕ‌ ಸೇವೆಯ ಪುಣ್ಯದ ಫಲವೋ ವಂದೂ ಸಾವು ನೋವಾಜಿಲ್ಲೆ

ಅಕ್ಕ ಪಕ್ಕದ ಜನ ಬಂದು ಎಲ್ಲ ಪ್ರಯಾಣಿಕರನ್ನೂ ಬಚಾವ್ ಮಾಡದ.
ಆಗಬಹುದಿದ್ದ ಮಹಾ ದೊಡ್ಡ ದುರಂತವೊಂದು ತಪ್ಪಿತ್ತು.

ಆದರೆ ಈ ಘಟನೆಯಿಂದ ಇಡೀ ಜೀವಮಾನದ ಸೇವೆಯಲ್ಲಿ ವಂದೂ ತಪ್ಪು ಮಾಡದ, ಸೇವಾನಿವ್ರತ್ತಿಗೆ ಐದೋ ಆರೋ ತಿಂಗಳುಗಳು ಮಾತ್ರ ಬಾಕಿ ಇದ್ದ  ಸುಬ್ರಾಯ ಶೆಟ್ಟರ ವೃತ್ತಿ ಜೀವನದಲ್ಲೊಂದು ಕಪ್ಪು ಚುಕ್ಕೆ ಬಿದ್ದಾಗೋಗಿತ್ತು.

ಈ ಕಥೆಯ ನೀತಿ..
ನಮಗೆ ಸರಿಯಾಗಿ ಗೊತ್ತಿರುವ ಕೆಲಸದಲ್ಲಿ ಬೇರೆಯವರ ಸಲಹೆ ಅಥವಾ ಚಿತಾವಣೆಗೆ ಹೆಚ್ಚಿನ ಬೆಲೆ ಕೊಡಬಾರದು

ಅಡಿಬರಹ :
ಇದು ಸತ್ಯ ಘಟನೆ
ದಿನ ದಿನಾಂಕ ವರ್ಷ ಎಲ್ಲ ನೆನಪಿಲ್ಲೆ ಯಂಗೆ
ಹುಂ  ಆದರೆ ಕೆಲವು ಹೆಸರುಗಳು ಕಾಲ್ಪನಿಕ ( ಸೇರ್ಸಿದ್ದಿ)
ಜನ ಹೇಳ್ತ
ಹೇಳೂದೇ ಅವರ ಧರ್ಮ
ಹೇಳ್ಕಳ್ಳಿ ನಮಗೇನಡ !
ಆದರೆ ಕೊನೆಯಲ್ಲಿ ನಮಗೆ ಏನನಿಸ್ತೋ .. ನಮ್ಮ ಆತ್ಮ ಸಾಕ್ಷಿ ಏನು ಹೇಳ್ತೋ ಅದನ್ನೇ ಮಾಡವು ನಾವು

ನಮಸ್ಕಾರ
- ಶ್ಯಾಂ ಭಟ್
13/10/21
ದಿಲ್ಲಿ