ಚಾಯಕ್ಕನ ಚಾ
*************
ಒಂದಾನೊಂದು ಕಾಲ ಅದು.
ಕಾಲೇಜಿನ ಗೋಲ್ಡನ್ ಡೇಸ್ ಮುಗ್ಸಿ ಚುಟ್ಪುಟ್ ನೌಕರಿ ಹುಡ್ಕಿ ಬೆಂಗಳೂರಿಗೆ ಕಾಲಿಟ್ಟ ಹೊಸ ದಿನಗಳು. ಮಹಾನಗರದ ಮಜ ಒಂದು ಬದಿಗಾದ್ರೆ.. ಬಪ್ಪ ಚೂರುಪಾರು ಸಂಬಳದಲ್ಲೇ ಆ ನಗರದಲ್ಲಿ ದಿನದೂಡುವ ಅನಿವಾರ್ಯತೆ. ಹಂಗಾಗಿ ಪ್ರತೀ ಆದಿತ್ವಾರ ಎಲ್ಲಿ ಪರಾನ್ನ ಸಿಕ್ಕಗು ಹೇಳಿ ಕಾಯ್ತಾ ಇರ್ತಿದ್ದ ನನ್ನಂತ ಬ್ರಹ್ಮಚಾರಿ ಹುಡಗ್ರು.
ತಿಂಗಳ ಅಖೈರಿನ ವಂದು ಆದಿತ್ವಾರ... ನಾನೂ, ಜಮದಗ್ನಿ ಮತ್ತೆ ಮಾಣಿ ಮೂರೂ ಜನರ ಕಿಶೆಲಿ ಕವಡೆ ಕಾಸಿಲ್ಲದೇ ಪರಾನ್ನ ಹುಡ್ಕಿ ಹೊಂಟ. ಯಾರ ಮನೆಗೆ ಹೋಗಕಾತು?! 🤔 ಎಲ್ಲೂ ವಿಶೇಷ ಇಲ್ಲೆ.. ಕರೆಯ ಇಲ್ಲೆ. ಮಾಣಿನೇ ಐಡಿಯಾ ಕೊಟ್ಟಂವ. "ಯೇ ಚಾಯಕ್ಕನ ಮನೆಗೆ ಹೋಪನ.. ರಾಶೀ ದಿನಾತು ಹೋಗದೇಯ". ಬೇರೆ ಉಪಾಯ ಹೊಳಿದೇ ನಾನೂ ಜಮದಗ್ನಿ ಇಬ್ರೂ "ಅಕ್ಕು ನಡೆ" ಹೇಳೇ ಹೊಂಟ.
ಚಾಯಕ್ಕನ ಮನೆ ಮುಟ್ಟಿದ್ದು ಅಪರಾಹ್ನ 2 ಗಂಟೆಗೆ. ಪೇಟೇಲಿಪ್ಪ ಜನರದ್ದು ಶಿಸ್ತಿನ ಜೀವನ. ಮೇಲಿಂದ ಚಾಯಕ್ಕನ ಮನೆ ಬಾವ ಲೆಕ್ಚರು. ಅಂವ ಮನಷ್ರು ಉಂಬೊತ್ತಿಗೇ ಉಂಬವನಕು. ಅವ್ರ ಮನೆಲಿ ಊಟ ಮಾಡಿ ಪಾತ್ರೆ ಕೌಂಚಿ ಆಗೋಜು ಹೇಳಿ ನಮಗೆಂತ ಗೊತ್ತಿತ್ತು?! ಹೊಟ್ಟೆಲಿ ಯಲಿ ವೋಡಾಡ್ತು ಯಂಗಕ್ಕೆ.
ಹೋಗಿ ಓರ್ಮನೆ ಸರಕುರ್ಚಿ ಮೇಲೆ ಕುಕ್ರಸಿದ್ದೇಯ 'ಆಸ್ರಿಗೆ' ಕೇಳ ಬದಲಿಗೆ .. "ಏನ್ರೋ ಈ ಬದಿಗೆ ಸವಾರಿ .. ಅದೂ ಮೂರ್ಜನ ಬ್ರಹ್ಮಚಾರಿ ಬಟ್ಟಕ್ಕ ಹೊಂಟಿದ್ರಿ?!" ಅಂದಾ ಬಾವಾ. 'ಮೂರ್ ಜನ ಹೊಂಟ ಕೆಲಸಾಗ್ತಿಲ್ಲೆ ಅಂಬ್ವಪ' ಹೇಳೂ ಸೇರಸ್ತಿದ್ನನ ಅಂವಾ... ಅಷ್ಟರಲ್ಲಿ ಒಳಗಿದ್ದ ಚಾಯಕ್ಕ ಹೆರ್ಗೆ ಬಂದು ಪುಣ್ಯ ಕಟ್ಕಂಡತು.
"ಅತ.. ಈ ಬದಿಗೆಲ್ಲಿ ಬೆಳಗಾತ್ರೋ? ಬನ್ನಿ ಬನ್ನಿ ಆಸ್ರಿಗೆ? ಊಟಾಜ?" ಅಂತೂ.
'ಎ ಹೆ ಎ ಬೇಡ' ಹೇಳಂವಾಗಿತ್ತು ನಾನು .. ಅಷ್ಟರಲ್ಲಿ ಈ ಜಮದಗ್ನಿ ಬೆನ್ನಿಗೆ ಚೂಂಟದ... 'ಸುಮ್ಮಂಗಿರಾ' ಹೇಳಿ ಅವನ ಸಂಜ್ಞೆ ಅದು.
ಈ ಸುಟ್ ಮಾಣಿ ಸುಮ್ಮಂಗಿರವ ಬ್ಯಾಡದ
"ಇಲ್ಲೆ ಎಂತದೂ ಬ್ಯಾಡಾ... ಉಂಡ್ಕಂಡೇ ಬಂಜ ನಂಗ" ಹೇಳವ.... ಚಾರ್ವಾಕ ಮಾಣಿ. 😳. ಇವತ್ ಮಾಣಿಯ ಬೊಜ್ಜ ಗ್ಯಾರಂಟೀ ಹೇಳಿ ಅಂದಾಜಾಗೋತು ಯಂಗೆ. ಇವ್ರಮನಿಂದ ಹೆರಬಿದ್ದ ಮೇಲೆ ಈ ಜಮದಗ್ನಿ ಆ ಮಾಣಿಯ ಬಿಟ್ರಲ್ದ! ಹೇಳಿ ಕಲ್ಪನೆ ಮಾಡ್ಕಂಡು ಮನಸಲ್ಲೇ ಬಂದ ನಗೆಯ ತಡ್ಕಂಡು ಜಮದಗ್ನಿ ಬದಿಗೆ ನೋಡಿರೆ ಅವ ನಗ್ಯಾಡ್ತ್ನೋ, ಶಿಟ್ಟಲ್ಲಿದ್ನೋ, ತೀಡತ್ನೋ ವಂದೂ ಅಂದಾಜಾಗದ ಮಕಾ. ಚಾಕೂಗೀಕೂ ಇದಿದ್ರೆ ಮಾಣಿಗೆ ಹಾಕೇಬಿಡ್ತಿದ್ದ ಅಂವಾ.
ಒಬ್ರ ಮುಖ ಒಬ್ರು ನೋಡಿ ಬಪ್ಪ ನಗೆಯ ಅಬಗತ್ಗಂಡ... ನಂಗಳ ಈ ಸಂಜ್ಞಾ ಭಾಷೆಯ ಅಕ್ಕ ಬಾವ ಗ್ರೆಂಸಿದ್ವಿಲ್ಲೆ ಹೇಳೂಲೆ ಬತ್ತಿಲ್ಲೆ.
ಚಾಯಕ್ಕ "ಚಾ ಮಾಡ್ತೆ ಹಂಗರೆ" ಅಂತು. ಆಗಲಪ ಅದಾರದು.
ಚಾ ಬಂತು. ಸಂತಿಗೆ ಕರೆ, ಬಿಸ್ಕೀಟು. ಆ ಪ್ಲೇಟನ್ನ ಗಬಕ್ಕನೆ ತಗಂಡು ಅಷ್ಟೂ ತಿಂದಬುಡನ ಹೇಳಷ್ಟು ಹಶಿವು ನಂಗಾದ್ರೆ ... 'ಇದು ನಂಗೊಬ್ಬಂಗೇ ಸಾಕಾಗ' ಹೇಳೂನಮ್ನಿ ಮುಖಚರ್ಯೆ ಜಮದಗ್ನಿದು. ಮಾಣಿಯ ಬದಿಗೆ ಇಬ್ರೂ ಕಣ್ಣಾಯ್ಸಿರೆ ಪ್ಲೇಟ್ ಬದೀಗೇ ದುರುಗುಟ್ಕ ಗುರಾಯಿಸ್ತಿದ್ದ ಮಾಣಿ. ಕಿಸಕ್ಕನೆ ನಗೆ ಬಂದ್ರೂ ಮತ್ತೆ ಅಬಗತ್ಗಂಡ ನಂಗವಿಬ್ರೂವ.
ಊಟಂತೂ ಸಿಕ್ಕಿದ್ದಿಲ್ಲೆ... ಗನಾ ನೀರ ಕುಡದು.. ಆ ಚಾಯಕ್ಕನ ಚಾ ನಳಗಿ, ನಾಕ್ ಕಾಳ ಕರೆ ತಿಂದರೆ... "ಪ್ಲೇಟ್ ಖಾಲಿ ಮಾಡ್ರ ತಮಾ.. ನಿಂಗಕ್ಕೇ ಇಟ್ಟದ್ದು" ಹೇಳಿ ಸತ್ಕಾರ ಬೇರೆ ಮಾಡ್ತು ಚಾಯಕ್ಕ.
"ಅಕ್ಕು ... ಇಲ್ಲೆ... ಬೇಡ ಬೇಡ ... ಸಾಕು.. ತಗಂಡೆ" ಹೇಳಿ ಬಿಡ್ಯ ಮಾಡ್ಕಳಕಾತಲೀ.... ಪ್ಲೇಟಲ್ಲಿಟ್ಟದ್ದಷ್ಟೂ ಬರಗಿ ತಿಂದ್ರೆ ನಂಗ ಹೋದ ಮೇಲೆ "ಹಪ್ ಚಪ್ಪರ್ಕ ಪೋರಗ" ಅಂದ್ರೆ ಚಾಯಕ್ಕ?! 😬
ಅಂತೂ ಬಂದ ಕೆಲಸ ಆಜಿಲ್ಲೆ ಹೇಳಿ ಹಶಿದ ಹೊಟ್ಟೆಲೇ ಸವಾರಿ ಎಬ್ಬಸ್ಗ ಬಂದಾತು....
ಬರಕಾರೆ ಮಾಣಿ ಬುರ್ಡೆಗೆ ಸಮಾಧಾನ ಅಪ್ಪಷ್ಟು ಗನ್ನಾ ನಾಕ್ ತಟ್ಟಾತು.... ಅಬಗತ್ಗಂಡಿದ್ದ ನಗೆಯನ್ನೆಲ್ಲ ಖುಲ್ಲಂ ಖುಲ್ಲಾ ಬಿಟ್ಟಾತು.
ಜಮದಗ್ನಿ ಕೈ ತಿರ್ಪಿದ ಹೊಡ್ತಕ್ಕೆ ನಾಕ್ ದಿನ ಮಲಗಿದ್ದ ಮಾಣಿ. ವರ್ಷಗಟ್ಲೆ ಕೈ ನೋವು ಹೇಳ್ತಿದ್ದ ಅಟ್ರಕಾಣಿ. 😝😬😂
🙏
- ಶ್ಯಾಂ ಭಟ್, ಭಡ್ತಿ
22/04/2022, ಹವಿಹಾಸ್ಯ - ಲಘುನಗು
No comments:
Post a Comment