Feb 11, 2018

ಕಳ್ಳ ಕೃಷ್ಣ ಮತ್ತು ಗಂಟೆ

ಒಂದು ಸಲವ ವಂದು ಗೋಪಿಕಾ ಸ್ತ್ರೀಗೆ ಈ ಬೆಣ್ಣೆ ಕಳ್ಳ ಕೃಷ್ಣನ ಹಾವಳಿ ಜಾಸ್ತಿ ಆಗಿ ತಡಕಂಬಲಾಗದೇ, ಕಳ್ಳ ಕೃಷ್ಣನ ರೆಡ್ ಹ್ಯಾಂಡಾಗಿ ಹಿಡಿಯವು ಹೇಳಿ ಯೋಚನೆ ಮಾಡೀ ಮಾಡಿ ವಂದು ಉಪಾಯ ಹೊಳತ್ತು.
(ಪ್ರಶ್ನೆ ಎದ್ದೋತು - ಗೋಪಿಕಾ ಸ್ತ್ರೀ ಅಂದರೆ? ಉತ್ರ- ಸ್ತ್ರೀ ಅಂದರೆ ಲೇಡೀ, ಗೋಪಿಕಾ ಅಂದರೆ ದನ ಕಾಯವನ ಹೆಂಡತಿ)
ದಿನಾಗೂವ ಈ ಕೃಷ್ಣ ಯಾರಿಗೂ ಗೊತ್ತಾಗದೋದಾಂಗೆ ಬೆಣ್ಣೆ ಕದ್ಕ ಹೋಗತ. ಹೆಜ್ಜೆ ಮೇಲೆ ಹೆಜ್ಜೆ ಇಟ್ಗ ಬತ್ತ. ಅಂವ ಬಪ್ಪದೂ ಹೋಪದೂ ಎರಡೂ ಗೊತ್ತಾಗತಿಲ್ಲೆ. ಬೆಕ್ಕಿನ ಜಾತ್ಯಂವ. ಮನೆಲಿ ನೆಂಟರು ಬಂದರೂ ವಂಚೂರೂ ಬೆಣ್ಣೆ ಇಲದೋದಾಂಗೆ ಮಾಡಾಕ್ತ ಕಳ್ ಮಾಣಿ. ಹಂಗಾಗಿ ಯಂತ ಮಾಡವಪ? ಅದಕಾಗೇ ಯೋಚನೆ ಮಾಡೀ ಗೋಪಿ ಬೆಣ್ಣೆ ಗಡಗೆಗೆ ಗಂಟೆ ಕಟ್ಟಿಡತು. 'ಕಳ್ಳ ಕೃಷ್ಣ ಬೆಣ್ಣೆ ಕದಿಯಕಾರೆ ಶಬ್ದ ಆಗ್ತಿಲ್ಯ? ರೆಡ್ ಹ್ಯಾಂಡಾಗಿ ಹಿಡಿತಿ ಇವತ್ತು' ಹೇಳಿ ಮನಸಲ್ಲೇ ಖುಷಿಪಟಗಂಡ್ತು.

   ಯಥಾಪ್ರಕಾರ ಕೃಷ್ಣ ಅಂವನ ಠೋಳಿ ಸಂತಿಗೆ ಬಂದ. ಅಂವನ ಠೋಳಿಲಿ ಈಗಿಚಲಾಗಿ ವಂದ್ ಐದಾರು ಮಂಗನೂ ಸೇರ್ಕಂಡಿದ್ದ.....ಬೆಣ್ಣೆ ರುಚಿಗೆ, ಆಸೆಗೆ. ಹಂಗೇ ಬಂದವನೇ ವಂದ್ ಸಲ ಬೆಣ್ಣೆ ಗಡಗೆಯ ಪೂರಾ ಸರ್ವೇ ಮಾಡದ. ಇವತ್ತೇನೂ.... ಬೆಣ್ಣೆ ಗಡಗೆಗೆ ಗಂಟೆ ಕಟಗಂಡಿದ್ದು! ಓಹೋ... ನನ್ನ ಹಿಡಿದಾಕೂವ ಪ್ಲಾನು ಹೇಳಿ ಗೊತ್ತಾಗೋತು ಅಂವಂಗೆ. ಎಷ್ಟಂದ್ರೂ ಚಾಲೂ ಅಲ್ದ ಕೃಷ್ಣ... ಹುಶಾರಿ.
( ಕೂಸು ಮಧ್ಯ ಬಾಯಿ ಹಾಕ್ತು - 'ಕೃಷ್ಣ ದೇವರು... ಹುಶಾರಿನೇ ಇರ್ತ' ಅಂತು. 'ಹೂಂ ಹೌದೇ ಮಾರಾಯ್ತಿ, ನೀ ಕಣ್ ಮುಚ್ಚೂ' ಅಂದೆ. 'ಹುಂ ಮುಂದೇ' ಅಂತು

      ಕಡೆಗೆ ಕೃಷ್ಣ ಉಪಾಯ ಮಾಡ್ದ. ಗಂಟೆ ಹತ್ರ ಹೋಗಿ ಹೇಳದ. 'ಇವತ್ತು ನೀನು, ನಾನು ಬೆಣ್ಣೆ ಕದ್ಯಲ್ಲಿವರೆಗೂ ಬಾರಸಲಾಗ, ಶಬ್ಧ ಮಾಡಲಾಗ.... ಶಬ್ಧ ಮಾಡ್ದೆ ಹೇಳಾದರೆ ನನ್ ಮೇಲಾಣೆ, ನಿನ್ನ ಗಂಟೆ ಕೋಲಿನ ಮೇಲಾಣೆ' ಅಂದ. ಗಂಟೆ ಕೃಷ್ಣಂಗೆ ಕೈ ಮುಗದು ಒಪ್ಗಂಡತು.
    ಹಂಗೇ ಕೃಷ್ಣ ಗಡಿಗೆಲಿದ್ದ ಎಲ್ಲ ಬೆಣ್ಣೆ ಕದ್ದೂ ಕದ್ದೂ ಠೋಳಿಯ ಅಂವನ ದೋಸ್ತರಿಗೆಲ್ಲ ತಿನ್ನಿಸ್ದ. ಮಂಗಂಗೂ ಕೊಟ್ಟ. ಎಲ್ಲ ಮನಸ್ ಪೂರ್ತಿ ತಿಂದ. ಗಂಟೆ ತಾನು ಕೊಟ್ಟ ಮಾತಿನಂತೇಯ ಬಡದ್ದಿಲ್ಲೆ.... ಶಬ್ಧ ಮಾಡಿದ್ದಿಲ್ಲೆ.
   
     ಕಡೀಗೆ ಲಾಸ್ಟಿಗೆ ಕೃಷ್ಣ ತಾನೂ ತಿನ್ನವು ಹೇಳಿ ಯಾವಾಗ ತನ್ನ ಬಾಯಿಗೆ ಬೆಣ್ಣೆ ಹಾಕ್ಯಂಡ್ನ ಆವಾಗ ಗಂಟೆ....
     ಢಣ್ ... ಢಣ್... ಡಣ್... ಡಣ್
ಹೇಳಿ ಬಡಾಬಡಾ ಬಡಕಂಡತು...
      ತಗ... ಶಬ್ಧ ಕೇಳದ್ದೇಯಾ ಗೋಪಿ ಬಡಾಬಡಾ ಓಡಿ ಬಂದ್ಲು. ಹೆದರಿದ ಠೋಳಿ ದಿಕ್ಕಾಪಾಲಾಗಿ ಓಡ್ಯೋದ. ಲಾಸ್ಟಿಗೆ ವಳದಂವಾ ಕೈ ಬಾಯೆಲ್ಲ ಬೆಣ್ಣೆ ಬಡಕಂಡ ಕೃಷ್ಣ ... ಸಿಕ್ ಬಿದ್ದ.
   ('ಪಾಪಾ ಕೃಷ್ಣ ...ಅಯ್ಯೋ ರಾಮಾ' ಕೂಸು ಅಲವತಗಂಡ್ತು. 'ರಾಮ ಅಲ್ಲ, ಕೃಷ್ಣ.... ಮನ್ಕ್ಯಳೇ' ಅಂದೆ)

    ಗೋಪಿ ಕೃಷ್ಣನ ರಟ್ಟೆ ಹಿಡಕ್ಯಂಡು... 'ಹದಾ ಕಳ್ಳಾ, ಇವತ್ ಸಿಕ್ ಬಿದ್ಯ?.. ಮಾಡಸ್ತಿ ನಿಂಗೆ ಶಾಸ್ತಿಯಾ... ಬಾ' ಹೇಳಿ ದರದರಾ ಎಳಕ್ಯಂಡ್ ಹೋಪಲೆ ಶುರುಮಾಡತು.
    ಕೃಷ್ಣ ಹೇಳ್ದ.... 'ವಂಚೂರ್ ತಡ್ಯೇ ಅತ್ತೇ... ವಂದ್ ಸಲಿ... ವಂದೇ ವಂದು ಸಲಿ ಈ ಗಂಟೆದೆಂತ ಸೊಕ್ಕು ನೋಡಕ್ಯ ಬತ್ತಿ ತಡಿ. ಇವತ್ ವಂದ್ ತೀರ್ಮಾನಾಗವು'.
     ಹಂಗೇ ಗಂಟೆ ಹತ್ರ ಕೇಳ್ದ - 'ಏನೇ ಗಂಟ್ಯಮ್ಮಾ... ಸುಮ್ಮಂಗಿರು ಹೇಳಿದಿದ್ದಿ ಹದಾ? ಯಂತಕೆ ಬಡಕ್ಯಂಡೆ? ಹೇಳು' ಅಂದ.
      ಗಂಟೆ ಕೈ ಮುಗಿತವ ಹೇಳ್ತು .. ' ಓ ಮುದ್ದು ಕೃಷ್ಣಾ ಪುಟ್ಟಾ.. ತಪ್ಪಾತು... ಯಾವಾಗಲೂ ದೇವರಿಗೆ ನೈವೇದ್ಯ ಆದಕೂಡಲೇ ಪೂಜೆ ಮಾಡತ...ಆವಾಗ ಬಡಿಯದು ಯನ್ನ ಗುಣ, ರೂಢಿ.... ಅದೇ ರೂಢಿ ಪ್ರಕಾರ ಬಡಕ್ಯಂಡಿ. ಯನ್ನ ಕ್ಷಮಿಸಿಬುಡೋ ಪುಟ್ಟ ದೇವರೇ'.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ  ಹರೇ ಹರೇ.

11/02/2018 1:30 AM, India