Feb 8, 2019

ಮೂಷಕ ರಾಜ (ಲಲಿತ ಪ್ರಬಂಧ)

ಮೂಷಕರಾಜ (ಇಲಿ ಬುಡ್ಕ )

      ಕಳೆದ ಕೆಲ ದಿನಗಳಿಂದ ನಮ್ಮ ಮನೆಯಲ್ಲಿ ವಂದು (ವಂದೇ ವಂದು) ಇಲಿ ರಾಯನ ಕಾರುಬಾರು ನಡೀತಿತ್ತು. ಕಂಡಕಂಡಲ್ಲಿ ಯಾವುದೇ ಭಯ ಇಲ್ಲದೇ ಅದು ಓಡಾಡ್ತದೆ. ನಮ್ಮ ಮನೆಯ ಎಲ್ಲಾ ವಸ್ತುಗಳೂ ಅದಕ್ಕೆ ಪ್ರಿಯವಲ್ಲವಾದರೂ ನಮ್ಮ ಊಟ ತಿಂಡಿಯಲ್ಲೇ ಆತನದ್ದೂ ವಂದು ಪಾಲು ಅಂದುಕೊಂಡಿದ್ದಾನೆ ಆತ. (ಇಲ್ಲಿಂದ ಶುರುವಾಯ್ತು ನೋಡಿ 'ಅದ'ನ್ನು 'ಅವ'ನೆಂದು ಕರೆಯುವ ರೂಢಿ!) 

ಆತನ ಪ್ರವೇಶ ಹೇಗಾಯ್ತು? 
     ವಂದು ಸಂಜೆ ನಾನು ಸುಮ್ಮನೇ ಮೊಬೈಲ್ ವತ್ತುತ್ತ ಕುಂತಿದ್ದೆ. ನನ್ನ ಅರ್ಧಾಂಗಿ 'ಅಗ್ನಿಸಾಕ್ಷಿ'ಯಾಗಲೂ ಠೀವಿಯಿಂದ ಟಿವಿ ನೋಡುತ್ತಿದ್ದಳು. ನನ್ನ 9 ವರ್ಷದ ಮಗಳಿಗೆ ದಿನಾಲೂ ಆಟದ ಸಮಯವದು... ಆಟ ಮುಗಿಸಿ ಬರುವಾಗ ಮನೆಯ ಹೆಬ್ಬಾಗಿಲನ್ನು ತೆರೆದಿಟ್ಟೇ ಬಂದಳು. ಅವಳ ಹಿಂದೇ ಹಿಂದೇ ಏನೋ ಸರಿದು ಬಂದಂತಾಯ್ತೆಂದು ನನ್ನ ಕಣ್ಣುಗಳಿಗರಿವಾದಂತಾಯ್ತು. ಏನೆಂದು ಸರಿಯಾಗಿ ನೋಡುವಷ್ಟರಲ್ಲಿ ಪುಟ್ಟ ಇಲಿಯೆಂದು ತಿಳಿಯಲು ತುಂಬ ಸಮಯ ಬೇಕಾಗಲಿಲ್ಲ. ಅಷ್ಟರಲ್ಲಿ ಇಲಿಯರಾಯನಿಗೆ ಅಡುಗೆಮನೆ ಸೇರಿಯಾಗಿತ್ತು.

      ಮುಂದೆ ಇದ್ದಿದ್ದೇ.. ಇಡಿ ದಿನ ಯಾರಿರಲೀ ಇಲ್ಲದಿರಲೀ ಆತನ ಆಟಾಟೋಪ ಹೇಳತೀರದು. ನೆನೆಸಿಟ್ಟ ಬಾದಾಮಿ ತಿಂಬ....  ತಂದಿಟ್ಟ ತರಕಾರಿ ಹೆರೆವ... ಅಡುಗೆ ಮಾಡಿಟ್ಟ ಪಾತ್ರೆಯ ಮಗುಚುವ ಭೂಪ.

    ಒಂದು ದಿನ ಹೋಗೀ ಹೋಗೀ ನಮ್ಮ ಮನೆಯ ದೇವರ ಕೋಣೆ ಸೇರಿಕೊಂಡ. ಪ್ರತಿದಿನ ಬೆಳಿಗ್ಗೆ ದೇವರ ಪೂಜೆ ಮಾಡುವಾಗ ದೇವರ ಪೀಠದಲ್ಲಿದ್ದ ಗಣೇಶನ ವಿಗ್ರಹ ಅಡ್ಡ ಬಿದ್ದಿರುತ್ತಿತ್ತು. ತಲೆಯ ಮೇಲಿದ್ದ ದೂರ್ಬೆಯ ಕಡ್ಡಿಗಳು ನಾಪತ್ತೆಯಾಗಿರ್ತಿದ್ದವು. ಇದನ್ನರಿತ ನನ್ನ ಮಗಳಿಗೆ ಈತ ಮೂಷಕರಾಜನಾಗಿ ಕಾಣತೊಡಗಿದ!.

     ಹೇಗಾದರೂ ಮಾಡಿ ಈ ಇಲಿಬುಡ್ಕಕನ ಹೊರಹಾಕುವ ನನ್ನ ಉಪಾಯಕ್ಕೆ ತಡೆಯೊಡ್ಡಿದಳು ಮಗಳು. ನನಗೇ ಸಮಝಾಯಿಶಿ ಕೊಟ್ಟಳು ... 'ಪಪ್ಪಾ, ಅದು ಸಚ್ ಮೇ ಮೂಷಕರಾಜನೇಯ, ನಹಿ ತೋ ಅಂವ ಗಣಪತಿ ಮೂರ್ತಿ ಕಾ ದೂರ್ಬೆ ತಿಂದಿಕ್ಕಿ ಹೋಗತಿದ್ನಿಲ್ಲೆ'
(ಅವಳ ಕನ್ನಡ ಭಾಷೆಯ ಮೇಲಿನ ಹಿಡಿತವೇ ಹಾಗೆ. ಅದೂ ಜಗಳವಂತೂ ಪಕ್ಕಾ ಕಂದಿಯಲ್ಲಿಯೇ, ಕನ್ನಡ ಮತ್ತು ಹಿಂದಿಗಳ ಮಿಶ್ರಣ. ದಿಲ್ಲಿಯಲ್ಲಿಯೇ ಹುಟ್ಟಿ ಬೆಳೆದಿದ್ದು ಅವಳು)
    'ಹೋಗೇ ಕೂಸೇ, ಮೂಷಕರಾಜನಡ. ಖರೇ ಮೂಷಕರಾಜನೇ ಆಗಿದ್ರೆ ಅದೆಂತಕೆ ಗಣಪತಿ ಯ ದೂಡಾಕಿಕ್ಕೇ ಹೋಗತು ?' ನನ್ನ ಅನುಮಾನ.
    'ಅಲ್ದಾ ಪಪ್ಪಾ, ಗಣಪತಿ ದೂಡಾಕಿದ್ನಿಲ್ಲೆ ಅಂವ, ದೂರ್ಬೆ ತಿನ್ನಕಾರೆ ಬಿದ್ದೋಗ್ತು ಮೂರ್ತಿ' ಮಗಳ ಬುದ್ವಂತಿಕೆ !
     ಒಟ್ಟೂ ವಂದು ಸಣ್ಣ ಯುದ್ಧವೇ ನಡೆದು ಹೋಯ್ತು ಮನೆಯಲ್ಲಿ. ಆ ಇಲಿಯ ಹೊಡೆದಟ್ಟಬೇಕು ಎಂಬ ತೀರ್ಮಾನವ ಕೈ ಬಿಟ್ಟೆ. 

     ಅಷ್ಟರಲ್ಲಿ ದೀಪಾವಳಿ ಬಂತು ನೋಡಿ. ಉತ್ತರ ಭಾರತದಲ್ಲಿ ದಿನಾ ಮನೆಯನ್ನು ಸಾರಿಸಿ ಬಳಿದು ರಂಗೋಲಿ ಹಾಕುವ ಜಾಯಮಾನವಿಲ್ಲ. ವರ್ಷಕ್ಕೊಂದು ಸಲಿ ದೀಪಾವಳಿಗೂ ಮೊದಲು ಮನೆಯನ್ನೊಮ್ಮೆ ಸ್ವಚ್ಛ ಮಾಡಿಬಿಡ್ತಾರೆ. ಹುಟ್ಟಾ ಆಲಸಿಯಾದ ನಮಗೂ ಅದೇ ಸರಿ ಅನಿಸಿದ್ದೂೂ ಅದೇ ಚಟ ಹತ್ತಿದ್ದೂ ಆಶ್ಚರ್ಯವೇನಲ್ಲ.

      ಮನೆ ಬಳಗುವ ಕಾರ್ಯಕ್ರಮದಲ್ಲಿ ದೇವರ ಕೋಣೆಯೂ ಸ್ವಚ್ಛವಾಯ್ತು.... ಮೂಷಕನ ಠಿಕಾಣಿಯೂ ಪತ್ತೆಯಾಯ್ತುು. ಮೂಷಕರಾಜ ಹೆದರಿ ಓಡಿದ. ಆತನ ಠಿಕಾಣಿಯಲ್ಲಿ ಕೇಜಿಗಟ್ಟಲೆ ದೂರ್ಬೆಯ ಜೊತೆ ಗಜ್ಜರಿ, ಬಾದಾಮಿ, ಗೋಡಂಬಿಗಳೂ ಬರಾಮತ್ತಾದವು. ಮೂಷಕ ಓಡಿದ ಎಂದು ನಾನು ಖುಷಿಪಟ್ಟರೆ ಮಗಳು ಬೇಸರಗೊಂಡಳು. 'ಪಾಪಾ ಇನ್ನೆಲ್ಲಿ ಹೋಗ್ತನನ ಅಂವ...'  ಎಂದು ಲೊಚಗುಟ್ಟಳು. ಜೊತೆಯಲ್ಲೇ ನನ್ನನ್ನೂ ತರಾಟೆಗೆ ತಗೊಂಡಳು 'ಪಪ್ಪಾ ಎಂತಕೆ  ಭಗಾಯಾ ಉಸ್ ಕೋ ನೀನು ?!'
      'ಎಲಾ ಇಸ್ಕಾ ?! ನಾ ಯಂತ ಮಾಡವೇ? ಮನೆ ಚೊಕ್ಕ ಮಾಡುದು ಬೇಡದನೇ? ಹೋಗ್ಲಿ ಬಿಡು ಹೋಳಿ ಮಾಡ್ತಿದ್ದ... ನಂಗಳ ಬಾದಾಮಿ ಗೋಡಂಬಿ ಎಲ್ಲ ಹೊತ್ಕ ಹೋಜ ನೋಡು ನಿನ್ನ ಮೂಷಕರಾಜ'  ಸಂಕಷ್ಟ ತೊಲಗಿದ ದನಿಯಿತ್ತು.
      'ನಂದಲ್ಲ, ಗಣೇಶ್ ಜೀ ಯ ಮೂಷಕರಾಜ ಅಂವಾ, ಅಂವನ ಭಗಾಯಸಿದ್ದೆ ನೀನು ಪಾಪ' ಅಂದ ಕೂಸಿನ ಕಣ್ಣಲ್ಲಿ ನೀರಿತ್ತು... ನಮ್ಮವರನ್ನು ಕಳಕೊಂಡ ದುಃಖವಿತ್ತು.  
       ಮಕ್ಕಳ ಮುಗ್ದ ಮನಸ್ಸೇ ಹಾಗೆ, ಎರಡು ದಿನಗಳಲ್ಲಿ ವಿಷಯ ಮರೀತಾಳೆ ಅಂದುಕೊಂಡು ಸುಮ್ಮನಾದೆ. 

      ಆ ದಿನ ಹಾಗೇ ಕಳೆಯಿತು. ಆದರೆ ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಎಂಬಂತೇ ಮರುದಿನವೇ ಹಾಜರಾಗಿಬಿಟ್ಟಿದ್ದ ಆಸಾಮಿ!! 

      ಅಂದು ಬೆಳ ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಳು ಮಗಳು. ಬಚ್ಚಲಮನೆಯಿಂದ ಕಿರುಚಿದ್ದು ಕೇಳಿಸಿತು. 'ಅಮ್ಮಾ... ಪಪ್ಪಾ... ಮೂಷಕರಾಜ್ ವಾಪಿಸ್ ಆಯಾ....' ಎನ್ನುತ್ತಲೇ ಹುಟ್ಟುಡುಗೆಯಲ್ಲೇ ಬಚ್ಚಲಿನಿಂದ ಓಡಿ ಬಂದಿದ್ದಳು. ಬಚ್ಚಲಿನಲ್ಲಿ ಅಚಾನಕ್ಕಾಗಿ ಕಂಡ ಮೂಷಕನಿಂದ ಆದ ಭಯ ವಂದೆಡೆಯಾದರೆ... ಆತ ಮರಳಿ ಬಂದ ಖುಷಿ ಇನ್ನೊಂದೆಡೆ. ನಾನೂ ನನ್ನ ಪ್ರಾಣಿ ಇಬ್ಬರೂ ಹೋಗಿ ನೋಡಿ ಇಲಿಯೇ ಹೌದೆಂದು ದೃಡೀಕರಿಸಿಕೊಂಡೆವು. ಜೊತೆಯಲ್ಲೇ ನಾನು ಅದನ್ನು ಓಡಿಸಲು ಕೇಜ್ರೀವಾಲನ ಹಿಡಿದು ಮುಂದಾಗಿ.... ಮತ್ತೆ ಮಗಳ ವಿರೋಧಕ್ಕೆ ತಲೆಬಾಗಿ ಆಸೆ ಬಿಟ್ಟೆ. 

      ಯಾಕೋ ಏನೋ ಗೊತ್ತಿಲ್ಲ... ಮತ್ತೆರಡು ದಿನ ಆ ಮೂಷಕರಾಜ ಬಚ್ಚಲಿನಿಂದ ಹೊರಬರಲೇ ಇಲ್ಲ. ಕೂಸು ಆತನನ್ನು ಪುನಃ ದೇವರ ಕೋಣೆ ಸೇರಿಸುವ ಹರಸಾಹಸ ಮಾಡಿ ಸುಸ್ತಾಯ್ತು. ಬಚ್ಚಲಿನಲ್ಲಿಯೇ ಆತನಿಗೆ ರೊಟ್ಟಿ, ಬಾದಾಮಿ, ಗಜ್ಜರಿಗಳನ್ನು ಸಪ್ಲಾಯ್ ಮಾಡಿದಳು. ಆದರೆ ಬಹುಶಃ ನಾನು ಹೊರಗಟ್ಟಿದ್ದೇನೆಂಬ ಬೇಸರವೋ ಏನೋ ಆಸಾಮಿ ಅಗುಳನ್ನೂ ಮುಟ್ಟಲಿಲ್ಲ. ಎರಡು ದಿನ ಅಲ್ಲೇ ಉಪವಾಸ ಸತ್ಯಾಗ್ರಹ ಹೂಡಿದ್ದೇನೆ ಎಂಬಂತೇ ಇದ್ದ. 

      ಎರಡ್ನೇ ದಿನ ರಾತ್ರಿ ನಾನು ಬಚ್ಚಲಿಗೆ ಹೋದಾಗ ಕಾಣಿಸಿಕೊಂಡ. ಯಾಕೋ ಆತನ ಹೊಟ್ಟೆ ಉಬ್ಬಿರುವಂತೇ ಭಾಸವಾಯ್ತು ನನಗೆ. ಓಹೋ ಹಸಿವಾಗಿ ಎಲ್ಲವನ್ನೂ ತಿಂದಿರಬೇಕೆಂದುಕೊಂಡೆ. ಆದರೆ ಪ್ಲೇಟಿನಲ್ಲಿ ಸಕಲ ಮೃಷ್ಟಾನ್ನಗಳೂ ಹಳಸುತ್ತಲೇ ಇದ್ದವು. 

     ಮೂರನೇ ದಿನ ಬೆಳಿಗ್ಗೆ ಮೂತ್ರಕ್ಕೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮೂಷಕರಾಜ ದೊಡ್ಡ ಹೊಟ್ಟೆ ಮೇಲೆ ಮಾಡಿ ಕಾಲು ಮೇಲಾಗಿ ಬಿದ್ದಿದ್ದ. ಉಸಿರಾಡುತ್ತಿರುವ ತರ ಕಾಣಲಿಲ್ಲ. ಏನೋ ವಂತರ ಸಮಾಧಾನವಾದಂತೆನಿಸಿ ಸುಮ್ಮನೆ ಹೋಗಿ ಮಲಗಿದೆ. 

      "ಪಪ್ಪಾ.. ಉಠೋ, ಮೂಷಕರಾಜ ಸತ್ತೋದ, ನೋಡು ಬಾರಾ ಜಲ್ದೀ..." ಎಂಬ ಮಗಳ ಚೀರಾಟಕ್ಕೆ ಎಚ್ಚರಾಗಿ ಎದ್ದು ಹೋಗಿ ನೋಡಿದೆ. ಬೆಳಿಗ್ಗಿನ ಆಸನದಲ್ಲೇ ಇದ್ದ. 
      'ಪಾಪ ಊಟನೂ ಮಾಡಿದ್ನಿಲ್ಲೆ, ನಮ್ಮನಿಂದ ಎಲ್ಲೋ ಹೊರಗೆ ಹೋಗಿ ಕುಛ್ ತೋ ತಿಂದಿಕ್ಕಿ ಬಂಜ ಶಾಯದ್. ಎಂತಕೆ ಹೋಗಕಾಗಿತ್ತು ಅಂವಂಗೆ?! '  ಆಗಲೇ ಸಾವಿನ ತನಿಖೆ ಮಾಡಿ ಮುಗಿಸಿಬಿಟ್ಟಿದ್ದಳೋ ಎಂಬಂತೇ ರಿಪೋರ್ಟ್ ಕೊಟ್ಟಳು ಮಗಳು.

        'ಮಗಳೂ, ಬೇಜಾರು ಮಾಡಕಳಡ.. ಪಾಪ ಅವನ ಆಯುಷ್ಯ ಅಷ್ಟೇ ಆಗಿತ್ತಕು .. ಎಂತ ಮಾಡೂಲ್ ಬತ್ತು... ನಮ್ಮನೇಲೆ ಬಂದು ಸಾಯ ಹೇಳಿ ಅವನ ಹಣೇಬರದಲ್ಲಿ ಬರ್ಕಂಡಿತ್ತಕು..  ಇನ್ನು ಮುಂದಿಂದು ಯೋಚನೆ ಮಾಡ್ವ.. ಬಾ ಅದಕೊಂದು ಅಂತ್ಯಸಂಸ್ಕಾರ ಮಾಡ್ವ' ಎಂದೇ ಸಮಾಧಾನಪಡಿಸಿದೆ. 

      ಕೂಸಿನ ಮುಖ ನೋಡಿ ಒಮ್ಮೆ"ಪಾಪ ಮೂಷಕರಾಜ ಸಾಯಬಾರದಿತ್ತು" ಅನಿಸಿದ್ದು ಸುಳ್ಳಲ್ಲ. 



08-02-2019 @ Delhi