"ಜೀವನ- (ವಿ)ಚಿತ್ರಗಳು" - ಹುಟ್ಟಿ ಬೆಳೆದ ಪರಿಸರ ಮತ್ತು ಸಂಸ್ಕೃತಿಯ ಪ್ರಭಾವದಿಂದಾಗಿಯೇ ಆದ ಜೀವನಾನುಭವಗಳ ನೆನಪಿನ ಕೆಲ ಮೆಲುಕುಗಳು... ಆ ದೇವನ ಸ್ಮರಿಸುತ್ತ...
ಕೂಜಳ್ಳಿ ಮಾಣಿ ಪೆಟಗೆ
ಜೀವನ (ವಿ)ಚಿತ್ರಗಳು
(14)
ಹವಿಹಾಸ್ಯ
(10)
ಹಿಂದೊಮ್ಮೆ ಗೀಚಿದ್ದು
(9)
ಕೂಸಿನ ಕಥೆಗಳು
(8)
ಕರ್ತವ್ಯ
(3)
ವಿಜಿ ಭಟ್ಟರ ನೆನಪು
(3)
Oct 13, 2021
ಸುಬ್ರಾಯ ಶೆಟ್ರು
ಬೇರೆವರ ಟೀಕೆ ಟಿಪ್ಪಣಿಗೆ ನಾವು ಎಲ್ಲಾ ಸಲ ತಲೆಬಾಗವು ಅಥವ ತಿದ್ಕಳವು ಹೇಳಿಲ್ಲೆ. ನಮ್ಮ ನಮ್ಮ ಅಭಿಪ್ರಾಯದಂತೇ ಬದುಕವು ನಾವು ಅಲ್ದ?
ವಂದು ನಿಜ ಘಟನೆ ನೆನಪಾತು.. ನಾ ಶಾಲೆಗೆ ಹೋಗಕಾರಿನ ಘಟನೆ ..
ಸುಬ್ರಾಯ ಶೆಟ್ಟಿ ಹೇಳಿ ಆಗಿನ ಕೆಎಸ್ಸಾರ್ಟೀಸಿಯ ವಬ್ಬ ಪ್ರಾಮಾಣಿಕ ಡ್ರೈವರ... ತನ್ನ ವೃತ್ತಿ ಜೀವನದ ಕೊನೆಯಲ್ಲಿದಿದ್ದ. ಅವನ ಇಡೀ ವೃತ್ತಿ ಜೀವನದಲ್ಲಿ ಯಾವುದೇ ತಪ್ಪು ಮಾಡದ ಸರ್ಕಾರಿ ಸೇವಕ ಅಂವ (ಅವನ್ನ ನೌಕರ ಹೇಳಿರೆ ಅದು ಅವಂಗೆ ಅಗೌರವ ಆಗತು) ಜೀವಮಾನದಲ್ಲಿ ವಂದೇ ವಂದು ಎಕ್ಸಿಡೆಂಟೂ ಮಾಡದಂವ ಹೇಳ್ವ ಹೆಗ್ಗಳಿಕೆ ಆವರೆಗೂ ಇತ್ತು ಅಂವಂಗೆ
ಕುಮಟಾ ಡಿಪೋ ದಲ್ಲಿ ತನ್ನ ಸೇವೆಯ ಕೊನೆಯ ಕೆಲ ವರ್ಷಗಳನ್ನ/ದಿನಗಳನ್ನ ಕಳೀತೇ ಇದಿದ್ದ.
ಆದರೆ ಡಿಪಾರ್ಟಮೆಂಟಿನಲ್ಲಿ ಪ್ರಾಮಾಣಿಕ ಸೀದಾ ಸರಳ ಸಹಜ ಮನುಷ್ಯನೇ ಆದರೂ ಯಂಗಳಂಥ ನವಯುವಕರಿಗೆ ಅಂವ "ಜಬ್ ಡ್ರೈವರ" ... ಅಂವ ಬಸ್ ಹತ್ತದಾ ಅಂದ್ರೆ 'ಇವತ್ ಹೆಬ್ಬಾನಕೆರೆ ಬಸ್ಸು ಲೇಟು' ಹೇಳೇ ಅರ್ಥ.
ಅಸಲಿಗೆ ಬಸ್ ಲೇಟಾಗ್ತಿತ್ತಿಲ್ಲೆ. ಸರಿಯಾದ ಟೈಮಿಗೆ ಹೊರಡ್ತಿತ್ತು ಬಸ್ಸು. ಸರಿಯಾದ ಸಮಯಕ್ಕೇ ಗಂತವ್ಯವ ಮುಟ್ಟಸ್ತಿದ್ದ ಅಂವ. ಆದರೆ ಬೇರೆ ಡ್ರೈವರಂದಿಕ್ಕ ಇದ್ದಾಗ 5 ಗಂಟೆಗೆ ಕೂಪನಂಗಡಿಗೆ ಬಪ್ಪ ಬಸ್ಸು ಆ ದಿನ ಐದೂಕಾಲಾಗ್ತಿತ್ತು.
ಇಲ್ಲಿ ಕೆಎಸ್ಸಾರ್ಟೀಸೀ ಬಸ್ಸಿನ ಬಿಡುವ ಸಮಯ ಮತ್ತು ತಲುಪುವ ಸಮಯದ ಬಗ್ಗೆ (ನಿಂಗಕ್ಕೆಲ್ಲ ಅರಿವಿದ್ದು ಆದ್ರೂವ) ಆ ರೂಟ್ ಗೊತ್ತಿಲ್ಲದವರಿಗಾಗಿ ಚುಟುಕಾಗಿ ಹೇಳವು.
ಬಿಡುವ ನಿಲ್ದಾಣದಿಂದ ತಲುಪುವ ನಿಲ್ದಾಣದವರೆಗಿನ ದೂರ ಮತ್ತು ನಡುವಣ ರಸ್ತೆಯ ಪರಿಸ್ಥಿತಿ ಮತ್ತು ನಡುವಣ ನಿಲುಗಡೆ ಮತ್ತು ಹೋಗುವ ಬಸ್ಸಿನ ಮಾದರಿಯನ್ನವಲಂಬಿಸಿ ಕಾಲನಿರ್ಣಯ ಮಾಡಿಟ್ಟಿರ್ತ.
ಅಂದ್ರೆ ಕುಮಟಾದಿಂದ ಹೊರಟ ಬಸ್ಸು ವಾಲಗಳ್ಳಿ, ಕೂಜಳ್ಳಿ, ಚಂದಾವರ, ಕೆಕ್ಕಾರ, ಕಡತೋಕ, ಹೆಬ್ಬಾನಕೆರೆ, ನೀಲಕೋಡ, ಅರೆಅಂಗಂಡಿ, ಸಂತೆಗುಳಿ, ಚಾಂದ್ರಾಣಿ ಮಾರ್ಗವಾಗಿ ಹೊನ್ನಾವರ ತಲುಪಲೆ ಎಷ್ಟು ಸಮಯ ಬೇಕೋ ಅಷ್ಟು + ನಿಲುಗಡೆಯ ಸಮಯ + ರಸ್ತೆಯ ಪರಿಸ್ಥಿತಿಯಿಂದಾಗಿ ಅಪ್ಪ ತಡ ಇದನ್ನೆಲ್ಲ ಸೇರಿಸಿ ಕಾಲನಿರ್ಣಯ ಮಾಡ್ತಿದ್ದ ಆವಾಗೆಲ್ಲವ. ಇದಕೆಲ್ಲ ಭಾರೀ ಟೀಮೇ ಇತ್ತನಪ !
ಹೌದು
ಸುಬ್ರಾಯ ಶೆಟ್ಟಿ ಹಂಗೇ ಆಗಿದ್ದ
5 ಗಂಟೆಯ ಬಸ್ಸು ಹೇಳಾದ್ರೆ 10 ನಿಮಿಷ ಮೊದಲೇ ಬಂದು ಗಾಡಿ ಸ್ಟಾರ್ಟ್ ಮಾಡಿ... ಡುರ್ಡುರ್ ಗೆಡಸಿ... ಅದರ ಆವಾಜ್ ಮೇಲೇ ಗಾಡಿ ಸರಿ ಇದ್ದ ಇಲ್ಯ ನೋಡಿ ಗೊತ್ತಾಗ್ತಿತ್ತು ಅಂವಂಗೆ. ಸ್ಟಾರ್ಟ್ ಮಾಡಿದ ಮೇಲೆ ಮತ್ತೆ ಕೆಳಗಿಳದು ಹೋಗಿ ಪ್ರತೀ ಸಲ ಆರೂ ಚಕ್ರ ಸಮಾ ಇದ್ದ ಇಲ್ಯ ನೋಡ್ಕಂಡು... ಅದರ ಹವಾ ಚೆಕ್ ಮಾಡ್ಕ ಬಂದು ಮತ್ತೆ ಡ್ರೈವರ ಸೀಟಲ್ಲಿ ಕೂತ್ಗತಿದ್ದ ಪುಣ್ಯಾತ್ಮ ಅದು.
ಇಲ್ಲಿ ಕೆಲವು ಮಾಹಿತಿಗಳು :
ಕುಮಟಾ ಡಿಪೋ
ಕೆಎಸ್ಸಾರ್ಟೀಸಿಯ ಕುಮಟಾ ಡಿಪೋ ಅಂದ್ರೆ ಕುಮಟಾ ಮತ್ತು ಹೊನ್ನಾವರ ಎರ್ಡೂ ತಾಲೂಕುಗಳೂ ಸೇರಿ ಒಂದು ಡಿಪೋ.
ಹೆಬ್ಬಾರ್ನಕೆರೆ ಬಸ್ಸು ಅಂದ್ರೆ - ಕುಮಟಾ ಹೆಬ್ಬಾರ್ನಕೆರೆ ಮಾರ್ಗವಾಗಿ ಹೊನ್ನಾವರ
ಚಿಪ್ಪಿಹಕ್ಕಲ ಬಸ್ಸು ಅಂದ್ರೆ - ಕುಮಟಾ ಚಿಪ್ಫಹಕ್ಕಲ ಹೆಬ್ಬಾರ್ನಕೆರೆ ಮಾರ್ಗವಾಗಿ ಹೊನ್ನಾವರ
ಎರ್ಡೂ ಬಸ್ಸುಗಳು ಈ ದೇವತೆಕೆರೆಯ ನಂತರ ರಾಮತೀರ್ಥದವರೆಗಿನ ಜನಕ್ಕೆ ಅನುಕೂಲವೇಯ.
ಕಥೆ ಅರ್ಥ ಅಪ್ಪಲೆ ಹೆಬ್ಬಾನಕೆರೆ ಯ ಗುರ್ತಿಲ್ದೋದವಕೆ ಈ ವಿವರ ಅಗತ್ಯ ಆದ್ದರಿಂದ ಹೇಳ್ದೆ.
ಆಗಲಿ
ಮುಂದೋಪನ ?
ಈ ಸುಬ್ರಾಯಶೆಟ್ಟಿಗೆ ಅದೊಂದು ಕರಾಳ ದಿನ. ಆ ದಿನ ಯಾವಾಗನಂಗೇಯ ಸಮಯಾನುಸಾರ 5 ಗಂಟೆಯ ಹೆಬ್ಬಾನಕೆರೆ ಬಸ್ಸ್ ಹತ್ತಿ, ಸ್ಟಾರ್ಟ್ ಮಾಡಿ ತನ್ನ ದಿನಚರಿಯ ಕೆಲಸ ಮುಗಸಿ ಹೊರಟ - ಕುಮಟಾ ಬಸ್ ನಿಲ್ದಾಣದಿಂದವ.
ವಿಪರೀತ ಉಹೆಚ್ಚು ಮಳೆ ಆ ದಿನ.
ಕಂಡಕಂಡಲ್ಲಿ ರಸ್ತೆಯ ಮೇಲೆ ನೀರು ತುಂಬಿ ಹರೀತಿದ್ದದ್ದು ಚಂದಾವರ ಹೊಳೆಯ ನೆಗಸ ಮುಂದೆ ದೊಡ್ಡ ವಿಷ್ಯವೇ ಅಲ್ಲ.
ಚಂದಾವರ ಹೊಳೆಗೆ ಆಗ ಈಗಿಪ್ಪ ದೊಡ್ಡ ಬ್ರಿಜ್ ಆಗಿತ್ತಿಲ್ಲೆ. ಆಗ್ತಾ ಇದಿತ್ತು. ಕಟ್ಟುವ ಕೆಲಸ ನಡೀತಾ ಇತ್ತು. ಈಗಲೂ ಹೊಸ ಬ್ರಿಜ್‌ನಿಂದ ಕಾಂಬ ಹಳೇ ಸಣ್ಣ ಬ್ರಿಜ್ಜೇ ಆವಾಗಿನ ಸಂಪರ್ಕ ಸಾಧನ.
ತಗ ಸುಬ್ರಾಯ ಶೆಟ್ಟಿ ತನ್ನದೇ ವೇಗದಲ್ಲಿ ವಾಲಗಳ್ಳಿ, ಕೂಜಳ್ಳಿ, ಮಲ್ಲಾಪುರ, ಚಂದಾವರ ನಾಕಾ ದಾಟಿ ಹೊಳೆಯ ಹತ್ರ ತಂದ ತನ್ನ ಪ್ರೀತಿಯ ಬಸ್ಸ.
ಚಂದಾವರ ಹೊಳೆಯ ಪೂಲ್ ಮೇಲೇ ನೆಗಸಿನ ನೀರು ತುಂಬಿ ಹರೀತಾ ಇದ್ದದ್ದ ಕಂಡ ಸುಬ್ರಾಯ ಶೆಟ್ಟಿ ಕಣ್ಣಳತೆಯಲ್ಲೇ ನೆಗಸ ಅರಿತು ಗಾಡಿ ನಿಲ್ಲಸದ್ದೊಂದೇ ಅಲ್ಲ. ಸೈಡಿಗೆ ಹಚ್ಚಿ ಬಂದ್ ಮಾಡೇಬುಟ.
ಸಾಮಾನ್ಯವಾಗಿ ಆ ಬಸ್ಸಲ್ಲಿಪ್ಪದು 75% ಕಾಲೇಜ ಹುಡಗ್ರು. ನನ್ನ ಥರದ ಬಿಶಿರಕ್ತ ಮೇಲಿಂದ ಮ್ಯಾಣ.
"ಬಸ್ ದಾಟದೋದಂಥಾ ಮಹಾ ದೊಡ್ ನೆಗಸೆಲ್ಲ ಅಲ್ಲ .. ದಾಟಿ ಹೋಗಲಕ್ಕ" ಅಂದ ವಬ್ಬಂವಾ
"ಬಸ್ಸಿನ ವಜ್ಜೆಗೆಲ್ಲ ನೆಗಸಲ್ವಾ.. ನಮ್ಮ ಗುಡ್ನಕಟ್ ನೆಗಸ ಮುಂದೆ ಇದೆಲ್ಲ ನೆಗಸ?!" ಅಂದ ನಾಯ್ಕರ ಪೋರ
"ತೊಂದ್ರಿಲ್ರಾ ದಾಟೋಗ್ತದೇ ಶೆಟ್ರೇ ..ಹೆದರುದ್ ಬೇಡ... ಹೊಡೀರಿ ಗಾಡಿ" ಅಂದ ಗಾಣಗರ ಪೋರ ಶ್ರೀನಾಥ.
" ಮಂಯಾತಾ... ಅಯ್ಯ ಸುಬ್ರಾಯ್ ಶೆಟ್ರು ಈ ನೆಗಸಲ್ಲೆಲ್ಲ ಗಾಡಿ ಹೊಡದ್ರೆ.... ನರಿಯಣ್ಣ ಕಥೆ ಹೇಳ್ತದ್ಯೋ " ಅಂದ ಅಗ್ನೇತ್ರಿ ಮಾಣಿ.
"ಶೆಟ್ರಗೆ ಜೀಂವದ ಹೆದ್ರಕ್ಯ" ಅಂದ ನರಸಪ್ಪನ ಮನೆ ಮಾಣಿ.
"ನಾ 34 ವರ್ಷ ಡ್ರೈವರಕೆ ಮಾಡಿ ಅನುಭವ ಇದಿದ್ರೆ ಬಸ್ ನಿಲ್ಸೂದೇ ಇಲ್ಲಾಗಿತ್ತು" ಅಂದ ಎಲೆ ಸುಬ್ಬಣ್ಣ.
"ಅದಕೆಲ್ಲ ದಮ್ ಬೇಕಾ" ಅಂದ ಕೆಕ್ಕಾರ್ ಗಜು ಅಣ್ಣ.
ತಗ
ಪ್ವಾರಗಳ ಇಂಥ ಹಲವದ್ನೆಂಟು ಮಾತು ಮತ್ತೆ ಮೇಲಿಂದ ಕಂಡಕ್ಟರನೂ ಈ ಹುಡ್ಗಾಟಗತಿ ಹುಡುಗ್ರ ಸಾಥ್ ಕೊಟ್ನ ಇಲ್ಯ....
ಮೇಲಿಂದ ಅಲ್ಲೇ ನೆಗಸಿನ ಮಜ ನೋಡ್ತ ಇದ್ದ ಕೆಲವು ಲೋಕಲ್ ಮುಸಲ್ಮಾನ ಹುಡಗ್ರು "ಈಗ ಮಾತ್ರ ಮೋಹನ್ ಹೆಗಡ್ರ್ ಚಿಪ್ಪಿನ ಲಾರಿ ದಾಟಸ್ಗ ಹೋಗದೆ ಡ್ರೈವರೂ" ಅಂದ್ವ ಇಲ್ಯ...
ಸುಬ್ರಾಯ ಶೆಟ್ರ ಬಿಪಿ ಯೇರೋತು, ಸಹನೆ ಮೀರೋತು.
ಹತ್ತೇಬುಟ್ರು ಗಾಡಿಯ.
ಸ್ಟಾರ್ಟ್ ಮಾಡಿ ಗುರ್ಗೆಡಸಿ ಫಸ್ಟ್ ಗೇರ್ ಹಾಕೇಬುಟ್ರು.
ಗಾಡಿ ಹೋತು ಮದಲು ರಸ್ತೆಯ ಮೇಲೆ ....ಮತ್ತೆ ಆ ಶಿಥಿಲ ಸಣ್ಣ ಬ್ರಿಜ್ ಮೇಲೆ .. ಸುಮಾರು ಅರ್ಧ ಬ್ರಿಜ್ ದಾಟದ್ದೇ ಆ ನೆಗಸಿನ ರಭಸಕ್ಕೆ ತಡದ್ದಿಲ್ಲೆ ಬಸ್ಸು. ಹೋಗೀ ಹೋಗಿ ತೇಲೋತು.
ಪುಣ್ಯಕ್ಕೆ ಹೊಸಾ ಬ್ರಿಜ್ ನ ಕನಸ್ಟ್ರಕ್ಷನ್ ನಡೀತಾ ಇತ್ತು. ಹೊಸ ಬ್ರಿಜ್ಜಿನ ಕಂಬಗಳು ಗಟ್ ಮುಟ್ಟಾಗಿತ್ತು... ಹೋಗಿ ಹೋಗಿ ಬಸ್ಸು ಆ ಹೊಸಾ ಬ್ರಿಜ್ಜಿನ (ಈಗಿನ ಬ್ರಿಜ್ಜು) ಕಂಬಕ್ಕೆ ತಾಡತು...
ದೇವರ ದಯವೋ,
ಸುಬ್ರಾಯ ಶೆಟ್ಟರ ಇಷ್ಟು ವರ್ಷಗಳ ಪ್ರಾಮಾಣಿಕ ಸೇವೆಯ ಪುಣ್ಯದ ಫಲವೋ ವಂದೂ ಸಾವು ನೋವಾಜಿಲ್ಲೆ
ಅಕ್ಕ ಪಕ್ಕದ ಜನ ಬಂದು ಎಲ್ಲ ಪ್ರಯಾಣಿಕರನ್ನೂ ಬಚಾವ್ ಮಾಡದ.
ಆಗಬಹುದಿದ್ದ ಮಹಾ ದೊಡ್ಡ ದುರಂತವೊಂದು ತಪ್ಪಿತ್ತು.
ಆದರೆ ಈ ಘಟನೆಯಿಂದ ಇಡೀ ಜೀವಮಾನದ ಸೇವೆಯಲ್ಲಿ ವಂದೂ ತಪ್ಪು ಮಾಡದ, ಸೇವಾನಿವ್ರತ್ತಿಗೆ ಐದೋ ಆರೋ ತಿಂಗಳುಗಳು ಮಾತ್ರ ಬಾಕಿ ಇದ್ದ ಸುಬ್ರಾಯ ಶೆಟ್ಟರ ವೃತ್ತಿ ಜೀವನದಲ್ಲೊಂದು ಕಪ್ಪು ಚುಕ್ಕೆ ಬಿದ್ದಾಗೋಗಿತ್ತು.
ಈ ಕಥೆಯ ನೀತಿ..
ನಮಗೆ ಸರಿಯಾಗಿ ಗೊತ್ತಿರುವ ಕೆಲಸದಲ್ಲಿ ಬೇರೆಯವರ ಸಲಹೆ ಅಥವಾ ಚಿತಾವಣೆಗೆ ಹೆಚ್ಚಿನ ಬೆಲೆ ಕೊಡಬಾರದು
ಅಡಿಬರಹ :
ಇದು ಸತ್ಯ ಘಟನೆ
ದಿನ ದಿನಾಂಕ ವರ್ಷ ಎಲ್ಲ ನೆನಪಿಲ್ಲೆ ಯಂಗೆ
ಹುಂ ಆದರೆ ಕೆಲವು ಹೆಸರುಗಳು ಕಾಲ್ಪನಿಕ ( ಸೇರ್ಸಿದ್ದಿ)
ಜನ ಹೇಳ್ತ
ಹೇಳೂದೇ ಅವರ ಧರ್ಮ
ಹೇಳ್ಕಳ್ಳಿ ನಮಗೇನಡ !
ಆದರೆ ಕೊನೆಯಲ್ಲಿ ನಮಗೆ ಏನನಿಸ್ತೋ .. ನಮ್ಮ ಆತ್ಮ ಸಾಕ್ಷಿ ಏನು ಹೇಳ್ತೋ ಅದನ್ನೇ ಮಾಡವು ನಾವು
ನಮಸ್ಕಾರ
- ಶ್ಯಾಂ ಭಟ್
13/10/21
ದಿಲ್ಲಿ
Labels:
ಜೀವನ (ವಿ)ಚಿತ್ರಗಳು
An Attractive and passionate - Knows how to have fun - Is really good at almost anything - Unpredictable - Outgoing - Down to earth - Addictive - Attractive -Loud - Loves being in long relationships - Talkative - Rare to find - Good when found - A strange person who believes no one.
Subscribe to:
Post Comments (Atom)
ರಾಶೀ ಚೊಲೊ ಬರದ್ಯೊ! ಜೊತೆಗೆ ಸೇರ್ಸಿದ ನೀತಿ ಸೂಪರ್. ಸುಮಾರಿಷ್ಟ ಸೇರ್ಸಿದ್ದೆ ಹೇಳೀ ಗುತ್ತಾತು ಯೆಂತಕ್ಕಂದ್ರೆ, ನೀ ಸಣ್ಣೋವ್ನಲ! ಆವಾಗ!! 😊 ಆದರೆ ಬರೆಯೂ ಶೈಲಿಗೆ 👏👏👏
ReplyDeleteಆವಾಗ ಆ ಬಸ್ಸಲ್ಲಿ, ಮಂಗಲಕ್ಕ (ನರಸಪ್ನ ಮನೆ ಮೊಮ್ಮಗಳು(ಹಕ್ಕಿಮನೆಯ ಸೊಸೆ) ಇದ್ದಿತ್ತು ಹೇಳಿ ಬೆನಪಿದ್ದು ನೋಡು.
*ನೆನಪಿದ್ದು
ReplyDeleteಕಡೆಗೆ ಬಸ್ ಹೆಂಗೆ ತೆಗದ್ದ
ReplyDeleteಮರ್ದಿನ ಕೆಎಸ್ಸಾರ್ಟೀಸಿ ಕ್ರೇನ್ ತಂದು ಎಳ್ದು ಮೇಲೆ ತೆಗದ್ದೋ.
Deleteಬಹಳ ದಿನಗಳ ನಂತರ ಬಂದ ಬ್ಲಾಗ್ ಚೆಂದ ಬರದ್ದೆ! ಬರತಾ ಇರಲಿ, ಇನ್ನಷ್ಟು.
ReplyDeleteನಿಜವಾದ ಘಟನೆನೇ ಹೌದನ....?? ಅಷ್ಟ್ ಜೋರ್ ನೆಗ್ಸು ಬಂದಾಗ ನಿಂಗವೆಲ್ಲ ಬಸ್ ಲ್ಲಿ ಹೆಂಗೆ ಇದ್ದಿದ್ರ ಮಾರಾಯ 🤦♂️.
ReplyDeleteಏನೇ ಆಗ್ಲಿ ಬರವಣಿಗೆ 👌👌 👏👏 ಸ್ವಲ್ಪ ವೋದದವಂಗೆ ಪೂರಾ ವೋದ ಹೇಳಿ ಅನ್ಸ್ತು 😂
ನಾ ಇದ್ದಿದ್ನಿಲ್ಯ
Deleteಆ ಘಟನೆ ಕಣ್ಣೆದುರು ಬಂತು. ಅದರ ನಂತ್ರ ಆಚೆ ಬದಿ ಬಸ್ ಇಳ್ದು, ಸೇತುವೇಲಿ ಹಾದ್ಕಂಡು ಈಚೆ ಬದೀಗ್ ನಿಲ್ಸಿದ್ ಬಸ್ ಹತ್ತಿ ಬತ್ತಿದ್ದದ್ದೂ ನೆನ್ಪಾತು. ಚೆಂದಕ್ ಬರದ್ದೆ��
ReplyDeleteವೋಹೋ ನೀನೂ ಇದಿದ್ಯ?
DeleteVery nicely narrated. When I was at kekkar (1978 _1983 )he used to do atleast one trip per day at hebbarnkeri route . I still remember his face and very slow driving style.
ReplyDelete.
ಸುಪರ್. ಪೂರ್ತಿ ಓದಸ್ತು. ಹಳೆ ಬ್ರಿಜ್ ಕತೆ ಹೇಳದ್ದು ಕೇಳದ್ದೆ ಆಗಿತ್ತು. ಇದೂ ಒಂದು ಸೇರಕಂಡ್ತು.
ReplyDeleteಸೂಪರ್
ಚೆಂದಕೆ ಬರೆದ್ಯೋ👌👌
ReplyDeleteಕಥೆಲಿ ಘಟನೆಗಿಂತ ಅಡಾಪಡಾ ಸುದ್ದಿ ಜಾಸ್ತಿ ಇದ್ದಂಗೆ ಕಾಣ್ತಪ. ನಾನೂ ಆ ಗಾಡಿಲಿ ಇದ್ದಿದ್ದೆ. ಅದು ನಡ್ದದ್ದು ಜುಲೈ 18, 1987 ರ ದಿನ ಸಂಜೆ ಸುಮಾರು 6 ಘಂಟೆಗೆ. ಬಸ್ಸಲ್ಲಿ ಒಟ್ಟೂ 25-30 ಜನ ಇದ್ದಿದ್ದೊ.
ReplyDeleteಯಾರೂ ಸುಬ್ರಾಯ ಶೆಟ್ರಿಗೆ ಒತ್ತಾಯ ಮಾಡಿದ್ವಿಲ್ಲೆ. ಉಪ್ಲೆ, ಹೆಬ್ಬಾರ್ನಕೆರೆ, ನೀಲ್ಕೋಡು, ಅರೆಅಂಗಡಿ, ಸಂತೆಗುಳಿ ಬದಿಂದ ಸಂಜೆ ಅದೇ ಗಾಡಿಗೆ ಎಲೆಪೊಟ್ಳೆ ಕಳಸ್ತಿದ್ದೋ ಜನ ಆ ಕಾಲದಲ್ಲಿ. ಆ ಬಸ್ಸು ಹೊನ್ನಾವರಕ್ಕೋಗಿ ಅಲ್ಲಿಂದ ಹಳದಿಪುರದ ಮೇಲೆ ಕುಮಟೆಗೆ ಹೋಗ್ತಿತ್ತು. ಚಂದಾವರದಲ್ಲಿ ಗಾಡಿ ದಾಟ್ಸಿದ್ರೆ ಸುಬ್ರಾಯ ಶೆಟ್ರಿಗೆ ಒಂದೊಂದು ಎಲೆಪೊಟ್ಳೆಗೆ 5-10 ರೂಪಾಯಿ ಸಿಕ್ತಿತ್ತು. 25 ಎಲೆ ಪೊಟ್ಳೆ ಅಂದ್ರೆ 150 ರೂಪಾಯಿ, ಆ ಕಾಲದಲ್ಲಿ ಅವರ ದಿನದ ಪಗಾರಿಗಿಂತ ಹೆಚ್ಚಿನ ದುಡ್ಡು.
ಹೊಸ ಬ್ರಿಜ್ ಕಟ್ಟುಲೆ ಕಂಬದ ಫೌಂಡೇಶನ್‌ಗೆ ಮರಳು ಮಣ್ಣು ಸೇರ್ಕಳಲಾಗ ಹೇಳಿ ಸುತ್ತಲೂ ಸಿಮೆಂಟ್ ಚೀಲದಲ್ಲಿ ಮರಳು ತುಂಬಿ ಎತ್ತರಕ್ಕೆ ದಿಣ್ಣೆ ಕಟ್ಟಿಟ್ಟಿದ್ದೋ, ಆದರ ಮೇಲೆ ಬಸ್ ಹೋಗಿ ಕುಳ್ತಿತ್ತು. ಕಂಬ ರೆಡಿ ಆಗಿತ್ತಿಲ್ಲೆ ಆಗ. ಹೊಳೆ ಬಾಗ್ಲಲ್ಲಿ ಅರ್ದ ನಿಮಿಷ ಗಾಡಿ ನಿಲ್ಸಿ ಅಂದಾಜ್ ಹಾಕ್ಕಂಡು ಹೂಂ ಹೇಳಿ ಗಾಡಿ ಹೊರಡ್ಸೇಬಿಟ್ರು, ಶೆಟ್ರು.
ಗಾಡಿ 25 ಅಡಿ ಹೋಗೋದ್ರೊಳಗೇ ಜನ ಕಂಗಾಲ್ ಬೀಳ್ವಷ್ಟು ಅಲ್ಲಾಡ್ತು. ಇನ್ನೊಂದು 10-20 ಅಡಿ ಹೋಗೋದ್ರೊಳಗೆ ನಿಧಾನಕ್ಕೆ ಮುಂದಿನ ಚಕ್ರ ನೆಲ ಬಿಟ್ಟಿತ್ತು. ಗಾಡಿ ಪಲ್ಟಿ ಆದ್ಮೇಲೆ ಒಂದು 20-30 ಅಡಿ ನೀರಿನ ರಭಸಕ್ಕೆ ಬಳ್ದೋಗಿ ನೆಲಕ್ಕಿಂತ ಎತ್ತರಕ್ಕಿದ್ದ ಮರಳು ಮೂಟೆ ಮೇಲೆ ನಿಂತ್ಕಂಡಿತ್ತು. ಮುಖ ಕಿಟಕಿಗೆ ಒತ್ಕಂಡ್ರೆ ಬಸ್ ನಲ್ಲಿ 7-8 ಇಂಚು ಜಾಗ ಇತ್ತು ಉಸಿರಾಡುಲೆ. ನೆಲ್ಲೇಕೇರಿಲೇ ಗಾಡಿ ಹತ್ತಿ ಎಡಗಡೆ ಕಿಟಕಿ ಸೀಟ್ ಹಿಡ್ಕಂಡ್ ಕೂತವರೆಲ್ಲ ಮೊದ್ಲು ಹೊರಕ್ಕೆ ನುಸುಳ್ದೋ, ಒಬ್ಬೊಬ್ಬರಾಗಿ ಜಗ್ಗಿ ಹೊರಗೆ ತೆಗುಲೆ ಹೆಲ್ಪ ಮಾಡ್ದೋ. ಬಲಬದಿಗೆ ಕುಳ್ತ ಕೆಲವರು ಮೂರ್ನಾಲ್ಕು ಗುಟುಕು ನೀರ ಕುಡ್ದಿದ್ದೋ.
ಗಾಳಿಮನೆ ಅಶೋಕ್ ಹೆಗ್ಡೆ ಬಸ್ನಿಂದ ಹೊಳೆ ಹಾರಿ ಒಂದೂವರೆ ಫರ್ಲಾಂಗ್ ಮೀಸ್ಕಂಡು ಹೋಗಿ ಅಲ್ಲೆಲ್ಲೋ ಮುಂಡ್ಗೆ ಚಿಪ್ಪಿನ ಸಂದಿಲಿ ಹೊಳೆ ದಂಡೆ ಸೇರಿ ಗೆದ್ದೆ ಮದ್ಯದಲ್ಲಿ ಬಿದ್ಕತ್ನೇ ರಸ್ತೆಗೆ ಬಂದು ಸೇರ್ಕಂಡಿದ್ದ
ಕ್ಷಮಿಸಿ, ಅದು ೧೯೮೭ ಅಲ್ಲ ೧೯೮೮
Deleteಒಹೋ ಇದ ವಿಷ್ಯ?!
Deleteಆಗಲಿ ನಾವು ಕೇಳದ್ದಕ್ಕಿಂತ ಭಿನ್ನವಾಗಿ ಇತ್ತು ವಾಸ್ತವ ಹೇಳಾತು
ತಮ್ಮ ಗುರ್ತಾಯ್ದಿಲ್ಲೆ.