Jul 8, 2022

ಬ್ರಹ್ಮ (ಅಕ್ಷರನಮನ)

#ಬ್ರಹ್ಮೂರು 
#ಅಕ್ಷರನಮನ 
     'ಬರೆಯ ಕೂತರೆ ಹುಚ್ಚ ... ಪ್ರೀತಿಯಲ್ಲಿ ಬಾಡದ ಹೂ ನಾನು' ಎನ್ನುತ್ತಿದ್ದ.
ನಿಂತಲ್ಲಿ ನಿಲ್ಲದ..‌ ಕುಂತಲ್ಲಿ ಕೂರದ ವಾಮನ ಮೂರ್ತಿ. ಚುರುಕಿಗೇ ಇನ್ನೊಂದು ಹೆಸರು ಬ್ರಹ್ಮ ಇನ್ನು‌ ನೆನಪು ಮಾತ್ರ. ಹೂಗಳು ಬಾಡಿದ ಆ ಹೊಂಗೆಮರದ ಶೃಂಗಾರ ಇನ್ನಿಲ್ಲ ಎಂಬುದ ನಂಬಲು ಎರಡು ದಿನ ಬೇಕಾಯ್ತು ನನಗೆ 😓

      ಕೆಲ ವರ್ಷಗಳ ಪರಿಚಯ... ಒಂದು ವರ್ಷದ ಹಿಂದೆ ಯಾವುದೋ ಒಂದು ಅಂಕಣದ ಸಾಥಿಯಾಗಿ ಆದ ಆತ್ಮೀಯನಿಗೆ ಆತನ ಸಾವಿನಲ್ಲಿ ಅಶ್ರುತರ್ಪಣವೀಯುವ ಪ್ರಸಂಗ ಬರಬಹುದೆಂದುಕೊಂಡಿರಲಿಲ್ಲ.
      
      ಮೊನ್ನೆಯಿಂದ ಸಂತಾಪಗಳ ಮಹಾಪೂರ ನೋಡಿದೆ.. ಆತನ ಪುಟ್ಟ ಜೀವನದ ಮಹಾನ್ ಸಾಧನೆಗಳ ಕಂಡು ಬೆರಗಾಗಿದ್ದೇನೆ. ಕೇವಲ ಒಂದು ದಶಕದಲ್ಲೇ ಬೃಹದಾಕಾರವಾಗಿ ಬೆಳೆದ ಬ್ರಹ್ಮನ ಸಾಧನೆ ಸಾಮಾನ್ಯರಿಗೆ ಸುಲಭ ಸಾಧ್ಯವಾದುದಲ್ಲ. . ಬಹುಮುಖ ಪ್ರತಿಭೆಯಾದರೂ ಏನಿರಲಿಲ್ಲ ಈತನಲ್ಲಿ?! 
     ಅಕ್ಷರ ರಾಕ್ಷಸನೇ ಆದರೂ ರವಿಬೆಳಗೆರೆಯ ನಸೀಬ ಈತನಿಗಿರಲಿಲ್ಲ... 
     ಕಥೆಗಾರನಾದರೂ ಯೋಗರಾಜ ಭಟ್ಟರ ಯೋಗ ಈತನಿಗೆ ಎಟುಕಲಿಲ್ಲ...
     ಉಪೇಂದ್ರನಂತೇ ಹುಚ್ಚಿದ್ದರೂ ಲಕ್ಷ್ಮೀ ಒಲಿಯಲಿಲ್ಲ... 
     ಪ್ರತಿಭೆಗಳ ಆಗರವಾಗಿದ್ದರೂ ಮುಖ್ಯವಾಗಿ ಆಯುಸ್ಸೇ ಇರಲಿಲ್ಲ. 

      ಮತ್ತೆ ಹುಟ್ಟಿ ಬಾ ಎನ್ನಲಾರೆ. ಮತ್ತೊಬ್ಬ  ವಿನಾಯಕ ಬ್ರಹ್ಮೂರು ಬೇಕಿಲ್ಲ ನನಗೆ.  ಬೇರೊಂದು ಜನ್ಮದಲ್ಲಿ ಜೊತೆಯಾಗುವ ಹೆಬ್ಬಯಕೆಯೂ ಇಲ್ಲ. ಆತನ ಕೆಲವು  ಅನುಸರಿಸಬಹುದಾದ ಹೆಗ್ಗುಣಗಳಿವೆ.. ಅವು ನನ್ನ ಜೀವನದಲ್ಲಿ ಸದಾ ಜೊತೆಯಾಗಿದ್ದುಬಿಡಲಿ.  ಆತನ ಚಂದದ ಬರಹಗಳಿವೆ.. ಆ ಶೈಲಿಯ ಬರಹದ ಹುಚ್ಚು ನನಗೊಲಿಯಲಿ. ಅದನ್ನನುಸರಿಸುವ ಶಕ್ತಿ ನನ್ನದಾಗಲೀ. ಆತನ ಕಿರುಚಿತ್ರಗಳೆಂಬ ಮುತ್ತುಗಳು ನೆನಪಿನ ಹಾರವಾಗಿರಲಿ. 

    ಬ್ರಹ್ಮ ನಿನ್ನ ಗುರಿಯ ನೀ ತಲುಪಿದೆಯೆಂಬ ಸಮಾಧಾನ ನನಗಿರಲಿ 
🙏🙏🙏

(ಆತನ ಬ್ಲಾಗ್ ಲಿಂಕ್ ಇಲ್ಲಿದೆ) 
https://brahmur.blogspot.com/?m=1

No comments:

Post a Comment