Jan 30, 2012

ತುಪ್ಪ - ಬೆಲ್ಲ


ತುಪ್ಪ ಬೆಲ್ಲದ ನಂಟು ಹಾಗೂ ರುಚಿ ಗೊತ್ತಿಲ್ಲದ ಹೈಕಳಿಲ್ಲ. ದಿನ ಬೆಳಗಾದರೆ ದೋಸೆ ಜೊತೆಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿ. ಬೆಳಗ್ಗಿನ ತಿಂಡಿಗೆ 'ಆಸರಿ' ಎನ್ನುವುದೇ ಸರಿಯಾದ ಹವ್ಯಕ ಶಬ್ದ. ಆ ನಂತರ ಮಾಡುವ ಉಪಾಹಾರಗಳು ಆಯಾ ಸಮಯವನ್ನು ಸೇರಿಸಿಕೊಂಡ ಆಸರಿಗಳಾಗುತ್ತವೆ. ಉದಾ - ೧೦ ಗಂಟೆಯ ಆಸರಿ, ಸಂಜೆಯ ಆಸರಿ ಮುಂ..

ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ಊಟ ಅಂದರೆ ಅಲರ್ಜಿ.. ಆಸರಿಯೇ ಇಷ್ಟ.. ನಮಗೂ ಹಾಗೇನೇ ...ಬೆಳಿಗ್ಗೆ - ಮಧ್ಯಾಹ್ನ- ಸಂಜೆಗಳೆಂಬ ಬೇಧವಿರಲಿಲ್ಲ ಈ ಆಸರಿಗೆ. ಶಾಲೆಗೆ ಹೋಗುವ ಮಕ್ಕಳು ನಾವಾಗ.
ನನಗಿಂತ 5 ವರ್ಷ ದೊಡ್ಡವ ನನ್ನಣ್ಣ. ಸಂಜೆ ಸರಿ ಸುಮಾರು 5 ಗಂಟೆಗೆ ಮನೆ ಸೇರುತ್ತಿದ್ದೆವು.  ಶಾಲೆಯಿಂದ ಬಂದ ತಕ್ಷಣ ಆಸರಿ - ಬೆಳಿಗ್ಗೆ ಎರೆದಿಟ್ಟು ... ಉಳಿದ ಗಟ್ಟಿಯಾದ ವಣಾ ದೋಸೆ ಅಥವಾ ವಣಾ ತೆಳ್ಳೇವು ಜೊತೆಗೆ ತುಪ್ಪ-ಬೆಲ್ಲ... ಕೊಡುವವಳು - ಅಜ್ಜಿ ! ಅದೇ ಕಾರಣಕ್ಕೆ ಈ ಅಜ್ಜಿಯೆಂದರೆ ನನಗೆ ತುಂಬ ಇಷ್ಟ ಮತ್ತು ಕಷ್ಟವೂ ಕೂಡ.

ಅಜ್ಜಿ ತುಪ್ಪ ಇಡುವ ಜಾಗ ಮಾತ್ರ ಮನೆಯ ಅತೀ ರಹಸ್ಯದ ಕೋಣೆಯಾದ ದೊಡ್ಡವಳಗೆ ಕೂಜಳ್ಳಿ ಮಾಣಿ ಪೆಟ್ಟಿಗೆಯಲ್ಲಿ ಎಂಬುದಷ್ಟೇ ಗೊತ್ತಿತ್ತು!! ಇತ್ತೀಚೆಗಷ್ಟೇ ಗೊತ್ತಾಗಿತ್ತು. ಆದರೂ ಆ ಪೆಟ್ಟಿಗೆಯ ಚಾವಿ ಅಜ್ಜಿಯ ಹತ್ತಿರ ಇರುವ ಕಾರಣ ಅದರಲ್ಲಿರುವ ತುಪ್ಪ ನಮ್ಮ ಕೈ-ಬಾಯಿಗೆ ಎಟುಕದಂತಿತ್ತು.

ಅದು ಬೇಸಿಗೆಯ ಕಾಲ. ರಜಾ ದಿನಗಳು. ಸ೦ಜೆ 4 ಘಂಟೆಗೆ ಮೊದಲೇ ನಮಗೆಲ್ಲ ಅರಕಲು ಗದ್ದೆ ಬೈಲಲ್ಲಿ ಆಟ ಆಡಲು ಹೋಗುವ ಕಾತುರ. ಆದರೆ ಶಾಲೆಯ ಸಮಯದ ಪ್ರಕಾರ ಹಾಗೂ ಅಜ್ಜಿಯ ಶಿಸ್ತಿನ ಪ್ರಕಾರ 5 ಹೊಡೆಯುವ ಮುನ್ನ ನಮಗೆ ಆಸರಿ ಸಿಗುವುದು ಅಸಾಧ್ಯ. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಸಿವಾಗೊಗ್ತು" ಎನ್ನುತ್ತಿದ್ದಳು. ಒಂದು ವೇಳೆ ಆಸರಿ ಕುಡಿಯದೇ ಆಟ ಆಡಲು ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಎಂದು ಬಯ್ಯುತ್ತಿದ್ದಳು. ಈ ಅಜ್ಜಿ.. ಹಾಗೂ ಅವಳ ಆ 'ಘಂಟೆ'ಯ ಪರಿಧಿ-ಪರಿಮಿತಿ ಮುಖ್ಯವಾಗಿ ನನ್ನ ಆಟಕ್ಕೆ ಅಡ್ಡಿಯಾಗಿದ್ದವು.

ವಂದಿನ ಇವೆಲ್ಲ ಕಷ್ಟಗಳಿಗೆ ನಾನೊಂದು ಉಪಾಯ ಕಂಡುಕೊಂಡೆ. ಸುಮಾರು 4 ಘಂಟೆಯಾಗುವ ಹೊತ್ತಿಗೇ ಗಡಿಯಾರದ ಮುಳ್ಳನ್ನು 5 ಘಂಟೆಯಾಗುವ ಹಾಗೆ ತಿರುಗಿಸುವುದು. ಆಗ ಅಜ್ಜಿ ಆಸರಿಗೆ ಕೊಡುವಳಲ್ಲ!  ಹಾಗೆ ಗಡಿಯಾರದ ಮುಳ್ಳನ್ನು ತಿರುಗಿಸಲು ಗೋಡೆಗೆ ಎತ್ತರದಲ್ಲಿ ತೂಗುಹಾಕಿದ್ದ ಗೋಡೆ ಗಡಿಯಾರ ಸುಲಭದಲ್ಲಿ ಎಟಕುತ್ತಿರಲಿಲ್ಲ. ಅದಕ್ಕೋಸ್ಕರ ಸರ್ಕಸ್ ಮಾಡಬೇಕಿತ್ತು ನನಗೆ. ಮನೆಯಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲ್  - ಅತೀ ಭಾರವಾಗಿತ್ತು. ಅದನ್ನು ಹೇಗೆ ಎಳೆದು ತಂದೆನೋ ಆ ಕಷ್ಟ ನನಗೇ ಗೊತ್ತು. ಹಸಿವು ಮನುಷ್ಯನಿಂದ ಏನೇನು ಮಾಡಿಸುತ್ತದೋ !

ಆ ದಿನ ಹೀಗೆ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಜ್ಜೀ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?" ಎಂಬ ಭಾವನಾತ್ಮಕವಾಗಿ ಪ್ರಶ್ನೆ ಹಾಕಿ ತುಪ್ಪ-ಬೆಲ್ಲ ದೋಸೆ ಗಿಟ್ಟಿಸಿಕೊಂಡು ಆಟವಾಡಲು ಹಾರಿದೆ. 


 ಆಟ ಮುಗಿಸಿ ವಾಪಸ್ ಬರುವಾಗ ಮನೆಯ ಮೇಲಿನ ರಸ್ತೆಯ ಮೇಲೆ ಡಾಕ್ಟರ್ ಮಾವನ ಬೈಕ್ ನಿಂತಿತ್ತು. ಮನೆಗೆ ಹೋಗಿ ನೋಡಿದರೆ, ಅಜ್ಜಿ ಹಾಸಿಗೆಯಲ್ಲಿ ಮಲಗಿದ್ದಳು. ಅಮ್ಮನ ಕೇಳಿದೆ "ಅಜ್ಜಿಗೆ ಎಂತಾ ಆತೇ ಆಯಿ?"
ಆಯಿ ಹೇಳಿದ್ದು.... ನಾನು ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲು ಹೋಗಿದ್ದಾಳೆ, ಎಂದಿನಂತೇ (ಗಡಿಯಾರದ) 6 ಘಂಟೆಗೆ. !! ಆದರೆ ನನ್ನ ದೆಸೆಯಿಂದ ಗಡಿಯಾರ ಮುಂದಿದ್ದುದರಿಂದ.. ಸಮಯವಲ್ಲವಾದ್ದರಿಂದ ಎಮ್ಮೆ ಹಾಲು ಕೊಟ್ಟಿಲ್ಲ. ಆದರೂ ಅಜ್ಜಿ ಬಿಡದೇ ಒತ್ತಾಯಪೂರ್ವಕ ಹಾಲು ಕರೆಯಲು ಮುಂದಾದಾಗ ಎಮ್ಮೆ ಒದ್ದಿದೆ, ಅಜ್ಜಿ ಬಿದ್ದಿದ್ದಾಳೆ. ಇದು ಆಗಿದ್ದು.


ಅಂತೂ ಅಜ್ಜಿ ಒಂದು ವಾರ ಹಾಸಿಗೆ ಸೇರಿದಳು. ನನಗೋ ಖುಷಿಯೋ ಖುಷಿ. ಕನಿಷ್ಟ ಪಕ್ಷ ಆ ವಾರ ಗಡಿಯಾರ ಮುಂದಿಡುವ ಕಷ್ಟ ಇಲ್ಲವಲ್ಲ !! ಒಂದೇ ವಾರದಲ್ಲಿ ಅಜ್ಜಿ ಯಥಾಪ್ರಕಾರ ಸುಧಾರಿಸಿಕೊಂಡಳು. ಆದರೆ ಈ ಘಟನೆಯ ನಂತರ ಯಾಕೋ ಏನೋ.... ನನಗೆ ಗಡಿಯಾರ ಮುಂದಿಡುವ ಮನಸ್ಸಾಗಲಿಲ್ಲ. ಹಾಗೆಯೇ ಅಜ್ಜಿಯೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತೋ ಎಂಬಂತೇ... ನಾ ಕೇಳಿದಾಗಲೆಲ್ಲ ಆಸರಿ ಕೊಡತೊಡಗಿದ್ದಳು.   



(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೨೩, ೨೦೦೯)

2 comments: