ಅಜ್ಜಿಗೆ
ಅವಳದ್ದೇ ಆದ ಕಾಯ್ದೆ-ಕಾನೂನು. ಯಾವತ್ತೂ ಅವಳು ಬೇರೆಯವರ ಬಿಡಿ... ಸ್ವ೦ತ ಗಂಡ ಕಾಯ್ದೆ ಮಾಡುವ ಹಾಗೂ ಇಲ್ಲ ... ಮಾಡಿದರೂ ಅದನ್ನು ಪಾಲಿಸಿದ್ದೂ ಇಲ್ಲ... ಕೇಳೀದ್ದೂ ಇಲ್ಲ. ಅವಳಿಗೆ ಅವಳದ್ದೇ ಆದ ಕಾಯ್ದೆ
ಇದೆ. ಅವಳದ್ದೇ ಆದ ರೀತಿ ನೀತಿಗಳಿವೆ. ಅವಳದ್ದೇ ಆದ ಪ್ರತ್ಯೇಕತೆ ಇದೆ. ಎಲ್ಲದಕ್ಕಿಂತ
ಹೆಚ್ಚಾಗಿ ಅವಳಿಗೆ ಅವಳದ್ದೇ ಆದ ಒಂದು ಭಾಷೆ... ಅವಳದ್ದೇ ಬೇರೆ ಅರ್ಥಕೋಶ.... ಅದೊಂದು
ಶೈಲಿ ಮೊದಲಿನಿಂದಲೂ ಅವಳಿಗೆ ರಕ್ತಗತವಾಗಿ ಬಂದಿತ್ತೇನೋ.
ಆದರೆ ಸಾಮಾನ್ಯರಾದ ನಮಗೆಲ್ಲ ಅದೊಂದು ವಿಚಿತ್ರ ಶೈಲಿ ಎನ್ನಿಸದೇ ಇರದು. ಈ ಮೊದಲೇ ಹೇಳಿದಂತೇ .. ಅಜ್ಜನಿಗೆ ಅವಳು ಯಾವತ್ತೂ ಕೈ ಮುಗಿದಿದ್ದಿಲ್ಲ.
"ನಿಂಗಳ ದೇವ್ರಿಗೆ ಕೈ
ಮುಕ್ಕೊಡ್ತೆ... ಅಂಗಡಿಗೆ ಹೊಗ್ ಬಂದ್ ಕೊಡ್ರೋ ಬಗೆಲಿ"
ಒಂದು ವೇಳೆ ಅಜ್ಜ ಹೋಗಿ ಅಂಗಡಿಯಿ೦ದ ಸಾಮಾನು ತಂದ್ರೆ ಸರಿ. ಇಲ್ಲದಿದ್ರೆ... ಅಜ್ಜಿಯ ವರಾತ ಶುರು. ಅಜ್ಜ ಹೇಳಿದ ಮಾತು ಕೇಳುವುದಿಲ್ಲ ಎಂದು ತಿಳಿದೇ ಮೊಮ್ಮಕ್ಕಳ ಮೊರೆ ಹೋಗುವ ಪರಿ....
"ತಮಾ,
ಗುಬಾ.. ಬಗೇಲಿ ಅಂಗಡಿಗೆ ಹೊಗ್ ಬಂದ್ ಕೊಡು ನೀನಾರುವಾ.... ಈ ಅಜ್ಜಂದಿಕ್ಕಗೆ ಹೇಳ್
ಹೇಳ್ ಸಾಕಾತು"
ಎಂಬಾಗಿನ ಆ "ಅಜ್ಜಂದಿಕ್ಕ" ಎಂಬ ಶಬ್ದದ ಅರ್ಥ ಏನು?? ಇದ್ಯಾವ
ಅರ್ಥಕೋಶದಲ್ಲಿರಬಹುದೆಂದು ನಾನು ಬಹಳ ಸಲ ಯೋಚಿಸಿದ್ದಿದೆ. ಒಂದು ಅಜ್ಜಿಗೆ ಎಷ್ಟು
ಗಂಡಂದಿರಿರಬಹುದು? ಕೊನೆಗೂ ಉತ್ತರ ಹುಡುಕಲಾರದೇ ಅಜ್ಜಿಗೇ ಅವಳದೇ ಧಾಟಿಯಲ್ಲಿ ಮರು
ಪ್ರಶ್ನೆ ಹಾಕಿದ್ದೆ ...
" ಅಜ್ಜೀ, ಅಜ್ಜಂದಿಕ್ಕ ಅಂದ್ರೆ ಎಂತಾ ಅರ್ಥವೇ? ನಿಂಗೆಷ್ಟು
ಜನ ಗಂಡದ್ದಿಕ್ಕೊ ಇದ್ವೇ?" ಹಾಗೆಯೇ ಅಜ್ಜಿಯ ಮುನಿಸಿಗೂ ಕಾರಣವಾಗಿದ್ದೆ.
ಹಾಗೆಯೇ ಕೆಲಸಗಾರರು ಬರದೇ ಇರುವಾಗ ಅಜ್ಜಿಯ ವರಾತ...
"ಮಾಣಿ, ಆ ತಿಪ್ಪಯ್ಯನ ಬಗೆಲಿ ಕರ್ಕಬಂದ್
ಕೊಡು ನಂಗೆ" ಎಂಬ ಮಾತು ಕೇಳಿ ನಾನು ಕೇಳಿದ್ದೆ...
" ಅಜ್ಜೀ ನಿಂಗೆ ತಿಪ್ಪಯ್ಯ
ಎಂತಕ್ಕೆ? ಅವನ್ನ ತಗಂಬಂದು ಕೊಟ್ರೆ ಎಂತಾ ಮಾಡಂವಿದ್ದೆ ಅವನ ಸಂತಿಗೆ?" !!
ಇಂತಹ ಮಾತುಗಳಿಂದಲೇ ಅಜ್ಜಿ ಸಿಟ್ಟಾಗುತ್ತಿದ್ದಳು.
"ಇಂವಾ ದರಿದ್ರ ಮಾಣಿ, ನನ್ ಜೀಂವ
ತೆಗೂಲೇ ಹುಟ್ಟಿದ್ದ, ತಮಾ ಹಿಡ್ಕಳ ಅವನ್ನಾ"
ಎನ್ನುತ್ತ... ಆ ಮಣಭಾರದ ದೇಹ
ಹೊತ್ತುಕೊಂಡು ಓಡಿ ಅಟ್ಟಿಸಿಕೊಂಡು ಬರುವ ಪ್ರಯತ್ನವನ್ನಂತೂ ಮಾಡುತ್ತಿದ್ದಳು. ನಾ
ಓಡುತ್ತಲಿದ್ದೆ.
(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೩೦, ೨೦೦೯)
No comments:
Post a Comment