ನಾನಾಗ ಚಿಕ್ಕವ. ಆ ಅಜ್ಜಿ ನನ್ನಪ್ಪನ ಅಮ್ಮ. ವಯಸ್ಸು 60 ಆಗಿತ್ತೇನೋ.. ಸಲ್ಪ ಧಡೂತಿ ದೇಹ. ಆಗ ನನಗೆ ಆ ದೇಹದ ಭಾರ ಲೆಕ್ಕ ಹಾಕುವಷ್ಟು ಪರಿಜ್ಞಾನ ಇರಲಿಲ್ಲ ... ಆಗಿನ ನೆನಪಿನೊ೦ದಿಗೆ ತಾಳೆ ಹಾಕಿ ಈಗ ಅಂದಾಜಿಸಬಲ್ಲೆ.... ಹತ್ತಿರ ಹತ್ತಿರ 100 ಕೆಜಿ. ಅಂದರೆ ಒಂದು ಕ್ವಿಂಟಾಲ್ !! ಅವಳೇನು ತಿನ್ನುತ್ತಿದ್ದಳೆಂಬುದು ಗೊತ್ತಿದ್ದರೂ ... ಅದು ಹೇಗೆ ದಪ್ಪವಾಗಿದ್ದಳೋ ಗೊತ್ತಿಲ್ಲ.
ಹಾಗೆಯೇ ಅವಳ ಗುಣಾವಗುಣಗಳನ್ನೆಲ್ಲ ಸರಿಯಾಗಿ ಹೇಳಬಲ್ಲೆ. ಮುದ್ದು ಮೊದ್ದಾಗಿದ್ದಳು ಅಜ್ಜಿ.... ಮನಸ್ಸು ಮುಗ್ಧವಾಗಿತ್ತಾದರೂ ಇಡೀ ಮನೆಗೆ ಯಜಮಾಂತಿಯಾಗಿ ತನ್ನ 18 ನೇ ವಯಸ್ಸಿನಿಂದ ಇಡೀ ಜೀವನ ಸಾಗಿಸಿದ್ದರಿಂದಲೋ... ಅಥವ ಯಜಮಾನ ಅಂದರೆ ಅಜ್ಜ ರಾಜಕಾರಣಿಯಾಗಿದ್ದ ಕಾರಣದಿಂದಲೂ ಇರಬಹುದೇನೋ, ವಂದು ತರಹದ ಗಾಂಭೀರ್ಯತೆ ಬಂದಿತ್ತೋ .. ಬರಿಸಿಕೊಂಡಿದ್ದಳೋ ಹೇಳಲಾರೆ. ಪೂರಾ 12 ಮಕ್ಕಳನ್ನು ಹೆತ್ತ ಆ ಅಜ್ಜಿಗೆ ಹಾಗೂ ರಾಜಕೀಯದ ಬಿಡುವಿನಲ್ಲೂ ಅಷ್ಟೊಂದು ಮಕ್ಕಳಿಗಾಗಿ ಸಮಯವನ್ನು ಮುಡಿಪಾಗಿಟ್ಟ ಆ ಅಜ್ಜನಿಗೂ ಒಂದೊಂದು ಬಿಸಿ ಬಿಸಿ ಸಲಾಮ್.
ಒಂದು ದಿನ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದೆ... ಮನೆಯ ಮೇಲಿನ ರಸ್ತೆಗೂ ಕೇಳುವಷ್ಟು ದೊಡ್ಡದಾಗಿ ಅಜ್ಜಿಯ ವದರಾಟ ಕೇಳುತ್ತಿತ್ತು. "ಮಾಣಿ ಇವ್ರತ್ರ ಗುಡ್ಡೆ ಹತ್ತುಲಾಗ್ತಿಲ್ಲೆ.. ಒ೦ದು ಪಾಯಖಾನೆ ಕಟ್ಟಿಸಿಕೊಡಿ ಅಂದ್ರೆ ಒಬ್ರೂ ಕೇಳ್ತ್ವಿಲ್ಲೆ... ನಿಂಗಳ ದೇವರಿಗೆ ಕೈ ಮುಕ್ಕೊಡ್ತೆ...". ಇಲ್ಲಿ 'ಮಾಣಿ' ಎಂಬ ಸಂಭೋದನೆ ಮನೆಯ ಹಿರಿಯ ಮಗನಾದ ನನ್ನಪ್ಪನಿಗೆ... 'ನಿಂಗಳ' ಎಂಬುದು ಗಂಡನಿಗೆ ಎಂದು ಬೇರೆ ಹೇಳಬೇಕಾಗಿಲ್ಲ. ನಾನು ನೋಡಿದಾಗಿನಿಂದ.. ನನ್ನ ಬುದ್ಧಿ ಬೆಳೆದಾಗಿಂದ ಅಜ್ಜಿ, ಅಜ್ಜನಿಗೆ ಯಾವತ್ತು ಕೈ ಮುಗಿದಿದ್ದನ್ನು ಕಂಡಿಲ್ಲ.. ಎಲ್ಲಾ ಕೈಮುಗಿತ ಅಜ್ಜನ ದೇವರಿಗೇ... ಆ ಅಜ್ಜನ ದೇವರು ಯಾವುದೋ ನನಗ್ಗೊತ್ತಿಲ್ಲ. ಇವತ್ತಿಗೂ ಅದೊಂದು ಒಗಟೇ.!!
ಸರಿ ನನ್ನಜ್ಜ ಮನೆಗೆ ಮಾರಿ, ಊರಿಗೆ ಉಪಕಾರಿ. 9 ಮೊಳದ ಪಂಜಿ ಉಟ್ಟು ಜುಬ್ಬಾ ಹಾಕಿ 3 ಮೊಳದ ಕಾಲಲ್ಲಿ 6 ಮೊಳದ ಹೆಜ್ಜೆ ಹಾಕಿ ಎಲ್ಲೋ ಸಮಾಜೋಪಕಾರಕ್ಕೆ ಪರಾರಿ. ಪಾಪ ಅಪ್ಪ ಕೂಡಲೇ ಗ್ವಾಕರ್ಣ ಮಜ್ಜಿಗೆ* ಕುಡಿದು (ನೀರಿಗೆ ಮಜ್ಜಿಗೆ ಸೇರಿಸುವುದನ್ನು ನಮ್ಮಲ್ಲಿ ಆ ಹೆಸರಿನಿಂದ ಕರೆಯುವುದು ವಾಡಿಕೆ) ಸೈಕಲ್ ಹತ್ತಿ ಎಲ್ಲಿಗೋ ಹೋದವರು ಬರುವಾಗ ಸಾವೇರನನ್ನೇ ಕರೆತಂದಿದ್ದರು. ಸಾವೇರ ನಮ್ಮನೆಯ ಖಾಯಂ ಗಾರೆ ಗಿಲಾಯದವ.
ಮರುದಿನವೇ ನಮ್ಮನೆಯ ಹತ್ತಿರ 2 ಲೋಡ್ ಕಡಿಗಲ್ಲು... 1 ಲಾರಿ ಮರಳು... 10 ಮೂಟೆ ಸಿಮೆಂಟ್ ಬಂದು ಬಿದ್ದಿತ್ತು. ಅದಕ್ಕೂ ಮಾರನೆಯ ದಿನ ಅದ್ಯಾರೋ ೪-೫ ಜನ ಆಳುಗಳು ಬಾವಿ ತೆಗೆಯಲು ಬಂದರು. ಸರಿ ವಾರವೊಂದರಲ್ಲೇ ಪಾಯಖಾನೆಯ ಹೊಂಡ ತಯಾರು. ಮರುದಿನ ಸಾವೇರ ಬಂದ.. ಹೊಂಡ ಪರಿಕಿಸಿದ. "ವಡ್ಯಾ, ಈ ಅಮಟೆ ಗಿಡ ಮತ್ತೆ ಹಲಸಿನ ಮರ ಕಡಿಸುದೇಯಾ ಇಲ್ದಿದ್ರೆ ಪಾಯಖಾನೆ ಹೊಂಡದ ಕಾಂಕ್ರೀಟ್ ಕಿತ್ಗ ಬತ್ತದೆ"....
ಆ ಮಾತು ಅಜ್ಜಿಗೆ ಅದು ಹೆಂಗೆ ಕೇಳೀಸ್ತೋ... ಅಶರೀರ ವಾಣಿ ಬಂತು ಅವತಾರವಾಗುತ್ತ. "ಮಾಣಿ, ಅದು ಗನಾ ಹಲ್ಸಿನ ಮರ.. ಚೆಕ್ಕೆ ಹಣ್ಣು... ಮೇಲಿಂದ ಕರುಲೆ ಚೋಲೋ ಬತ್ತು.... ಅಮಟೆ ಗಿಡ ಈಗ್ ಮಾತ್ರ ಕಾಯ್ ಬಿಡುಲೆ ಹಣಕಿದ್ದು... ಅದೆಲ್ಲ ಎಂತಕೆ ತೆಗೀಬೇಕ ಸಾವೇರ?ನಿಂಗೆ ತಲೆ ಸಮಾ ಅದ್ಯಾ?"
"ಹಾಂಗಲ್ರಾ ದೊಡ್ ವಡ್ತಿ, ಆ ಮರ ಕಡಿಗೆ ಟ್ಯಾಂಕ್ ಒಳ್ಗೇ ಬೇರು ಬಿಡ್ತದೆ, ಕಡಿಗೆ ಇಡೀ ಊರ್ ತುಂಬಾ ವಾಸ್ನೆ ಆಗ್ತದೆ.. ಅಡ್ಡಿಲ್ರಾ? ಅಷ್ಟಕ್ಕೂ ನಿಮ್ಮನೇಲಿ ಬರೀ ಇದೊಂದೇ ಹಲ್ಸಿನ ಮರನೇನ್ರಾ? ಆ ಅಮಟೆ ಗಿಡ ಬೇಕಾರೆ ಕಿತ್ತಿ ಬೇರೆ ಬದಿಗೆ ನೆಡ್ವಾ.. ಒಂದ್ ನಾಲ್ಕ್ ಜನ ಕೈ ಹಾಕಿರೆ ಹೊತ್ಗಂಡು ಹೋಗಿ ಆ ಗೊಬ್ಬರಗುಂಡಿ ಕೆಳಗೆ ನೆಡ್ಲಕ್ಕು ಅದನ್ನಾ" ಎಂದ ಸಾವೇರ.
"ಏನೂ ಬೇಡ, ಅಲ್ಲಿ ಬೇಡ ಬೇರೆ ಬದಿಗೆ ಪಾಯಖಾನೆ ಮಾಡ್ಸ ಮಾಣಿ" ಅಜ್ಜಿಯ ತಾಕೀತು.
"ಅಲ್ದೇ ಆಯಿ, ಅಲ್ಲಲ್ಲದೇ ಇನ್ನೆಲ್ಲಿ ಮಾಡುಲೇ ಜಾಗ ಇದ್ದು? ಗುಡ್ಡೆ ಮೇಲೆ ಪಾಯಖಾನೆ ಕಟ್ಟಿಸ್ಲನೇ? ಅಷ್ಟಕ್ಕೂ ಆ ಹಲಸಿನ ಮರ ಹೋಗ್ತು ಹೇಳೀ ನಿನ್ನ ಬೇಜಾರು ಅಲ್ದಾ? ಮತ್ತೆ ಒಂದಲ್ಲ ಎರಡು ಹಲಸಿನ ಗಿಡ ತಯಾರು ಮಾಡ್ವ ಬಿಡು" ನನ್ನಪ್ಪನ ಮಾರುತ್ತರ.
"ಬೇಕಾಯ್ದಿಲ್ಯೋ.... ಆ ನಿನ್ನ ಪಾಯಖಾನೆ ಬೇಡಾ ಯಂಗೆ.... ಸಾವೇರ ನೀ ನಡೆ ಮನೆಗೆ" ಅಜ್ಜಿಯ ಮಾತೆಂದರೆ ಕಪ್ಪೊಂದು ತುಂಡೆರಡು.
"ಥೋ ವಡ್ತಿ ಹೀಂಗಂದ್ರೆ ಹೇಂಗ್ರಾ? ಈಗ ಆ ತೋಡಿದ ಹೊಂಡದಲ್ಲಿ ಯಾರ್ನ ಹುಗೂದು ಹಾಂಗರೆ? ಅದನ್ನಾರೂ ಹೇಳೀ" ಸಾವೇರನ ಕುಹಕ.
"ನಾ ಮೊದ್ಲೇ ಬಡ್ಕಂಡೆ, ಆ ಸುಟ್ ಪಾಯಖಾನೆ ಎಲ್ಲಾ ಬೇಡಾ ಹೇಳೀ... ನನ್ ಮಾತು ಯಾರ್ ಕೇಳ್ತೋ ಇಲ್ಲಿ" !!!!
"ಅಜ್ಜೀ, ಇವತ್ತು ಗುಳಿಗೆ ತಗಂಜ್ಯನೇ ಬೆಳಿಗ್ಗೆಯಾ?!!" ಎಂದೆ ಇಷ್ಟೊತ್ತೂ ಮೂಕ ಪ್ರೇಕ್ಷಕನಾಗಿದ್ದ ನಾನು. ಗೊಳ್ಳೆಂದರು ಅಪ್ಪ ಮತ್ತು ಸಾವೇರ. ಒಳಗಿದ್ದ ಅಮ್ಮ ನಗು ತಡೆಯಲಾರದೇ ಕಿಸ್ಸೆಂದಿದ್ದು ಜಗಲಿಯವರೆಗೂ ಕೇಳಿತ್ತು.
ಬಯ್ಗುಳದೊಂದಿಗೆ ಅಜ್ಜಿಯ ದೈತ್ಯ ದೇಹ ನನ್ನನ್ನು ಅಟ್ಟಿಸಿಕೊಂಡು ಬರುತ್ತಿತ್ತು.. ನಾ ಪಾಯಖಾನೆಯ ಹೊಂಡದ ಕಡೆಗೆ ಓಡುತ್ತಲಿದ್ದೆ....
ಅಜ್ಜಿ ಹೊಂಡದ ವರೆಗೂ ಬಂದವಳು ಏನನ್ನಿಸಿತೋ.. ಸುಸ್ತಾಯಿತೋ... ಗೊತ್ತಿಲ್ಲ ವಾಪಸ್ಸು ಹೋದಳು. ಒಂದು ವೇಳೆ ಬಿದ್ದಿದ್ದರೆ ಸಾವೇರ ಮಣ್ಣು ಮುಚ್ಚುತ್ತಿದ್ದ... !!??
(ಈ ಗ್ವಾಕರ್ಣ ಮಜ್ಜಿಗೆಯ ಬಗ್ಗೆ ಇನ್ನೊಮ್ಮೆ ಹೇಳುವೆ. ಶ್ರೀ ಕ್ಷೇತ್ರ ಗೋಕರ್ಣಕ್ಕೂ ಈ ಮಜ್ಜಿಗೆಗೂ ಸಂಬಂಧ ಅಸ್ಪಷ್ಟ.)
(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೨೧, ೨೦೦೯)
ಶ್ರೀ ಕ್ಷೇತ್ರ ಗೋಕರ್ಣಕ್ಕೆ ಹೋಗಿ "ನಮ್ಮ ನೆಂಟರ ಮನೇಲಿ" ಮಜ್ಗೆ ಕುಡಿ., ಗುತ್ತಾಗ್ತು ನಿಂಗೆ ಅರ್ಥ!!!
ReplyDeleteನಾ ಹೇಳಿದ್ದೆ ಹೇಳ್ ಹೇಳಡದೋ ಮತ್ತೆ.....!!