ಕನಸುಗಳು ನಮ್ಮ ಮನದ ವಿಕಾರಗಳಾ?! ಅಲ್ಲ.
ನಿನ್ನೆ ರಾತ್ರಿ ಪ್ರವೀಣಣ್ಣ ಬರುವ ಮೇ ನಲ್ಲಿ ಸಂಸಾರದೊಟ್ಟಿಗೆ ಲೇಹ್ ಲದ್ದಾಕ್ ಗೆ ಹೋಗೋಣವೆಂದು ಪ್ರಸ್ತಾಪ ಮಾಡಿದ್ದ. ಅಷ್ಟೇ ನಾನು ಈ ಕನಸಿಗೆ ಕನೆಕ್ಟ್ ಮಾಡಬಹುದಾದ ಬಿಂದು ಎಂದರೆ.
ಬೆಳಿಗ್ಗೆ 6:30 ರ ಸಮಯ. ಯಾಕೋ ಎಚ್ಚರವಾಯ್ತು.ಚಳಿಗಾಲವಾದ್ದರಿಂದ ಬೆಳಕು ಹರಿದಿರಲಿಲ್ಲ. ನೀರು ಕುಡಿದು ಮಲಗಿದೆ. ಸಲ್ಪ ಹೊತ್ತು ಮನದ ರಾಜಕುಮಾರಿಯ ನೆನೆಯುತ್ತ. ಆಮೇಲೆ ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ.
ನಾವು ಮೂವರು ಅಂದರೆ ನಾನು ನನ್ನ ಮನದನ್ನೇ ವಿದ್ಯಾ ಮತ್ತು ನಾನು ಇಲ್ಲೇ ಹತ್ತಿರದ ಯಾವುದೋ ಅಡವೆಂಚರ್ ಲ್ಯಾ0ಡಿಗೆ ವಾರಾಂತ್ಯಕ್ಕೆ ಮನೋರಂಜನೆಗೋಸ್ಕರ ಹೋಗ್ತೀವಿ. ಅಲ್ಲಿ ನಮ್ಮನ್ನು ಹುಲಿಗಳು ಸಿಂಹಗಳಿರುವ ಕಾಡೊಂದರಲ್ಲಿ ಬಿಡುತ್ತಾರೆ. ಈ ವಿದ್ಯಾ ಮತ್ತೆ ನಿಮಿಷರಿಗೆ ಆ ಹುಲಿ ಸಿಂಹಗಳ ನಡುವೆ ಹೋಗುವಾಸೆ. ಕಾಡಿನ ನಡುವೆ ರಸ್ತೆಯಲ್ಲಿ ನಡಕೊಂಡು ಹೋಗುತ್ತಾ ಇರುವಾಗ ಮುಂದಿನಿಂದ ಬಂದ ಸಿಂಹವೊಂದು ನಮಗಿಂತಲೂ ಮುಂದೆ ಹೋಗುತ್ತಿರುವ ಮಗುವೊಂದನ್ನು ನಾವು ನೋಡುತ್ತಿದ್ದಂತೆ ತಿಂದು ಬಿಡುತ್ತದೆ. ಸಿನೆಮಾ ನೋಡಿದ ತರಹದ ರೋಮಾಂಚನ ನಮಗೆಲ್ಲ. ಆದರೂ ಭಯ ಲವಲೇಶವಿಲ್ಲ. ಅದನ್ನು ನೋಡಿದ ನಾನು ಎಚ್ಚರಿಕೆ ಹೇಳುತ್ತೇನೆ ಇಬ್ಬರಿಗೂ... ಆದರೂ ಇಬ್ಬರೂ ಕಿವಿಗೆ ಹಾಕಿಕೊಂಡಂತಿಲ್ಲ. ಮುಂದೆ ಕೆಲವೇ ಕ್ಷಣಗಳಲ್ಲಿ ವಿದ್ಯಾ "ನಾನೂ ಹೋಗ್ತೇ" ಎನ್ನುತ್ತಾ ಮೇಲೆ ಬೆಟ್ಟ ಏರಿ ಹೋದಳು. ಅದನ್ನು ನೋಡಿದ ನಿಮಿಷಾ ಕೂಡ "ನಾನೂ ಹೋಗವು" ಎನ್ನುತ್ತಾಳೆ. ನಾನು ಬೇಡ ಎನ್ನುತ್ತೇನೆ. "ಅಮ್ಮ ಬರಲಿ ತಡೆ" ಎನ್ನುತ್ತಾ "ಇದನ್ನೂ ಕರ್ಕಂಡ್ ಹೋಗೆ" ಎಂದೂ ಸೇರಿಸುತ್ತೇನೆ. ಅಷ್ಟರಲ್ಲೇ ಹಿಡಿದ ಕೈ ತಪ್ಪಿಸಿಕೊಂಡ ಕೂಸು ಕೂಡ ಬೆಟ್ಟ ಹತ್ತಿ ಹೋಗಿದ್ದಷ್ಟೇ ಕಾಣುತ್ತದೆ ನನಗೆ. ಆಮೇಲೆ ಇಬ್ಬರೂ ಎಲ್ಲಿ ಮಾಯವಾದರೊ ಕಾಣಲಿಲ್ಲ. ಹೋಗಲಿ ಅಪ್ಪನಾದ ನಾನು ಆ ಚಿಕ್ಕ ಮಗುವಿನ ಸಹಾಯವಾಗಿ ಅವಳ ಹಿಂದೆ ಹೋಗಬೇಕಿತ್ತು ... ಯಾಕೋ ಗೊತ್ತಿಲ್ಲ. ಹೋಗಲಿಲ್ಲ... 'ಬರ್ತಾರೆ ಬಿಡು ಎಂಬ ಭಾವ, ಆ ವಿಶ್ವಾಸ ಅವರ ಮೇಲೆ.
ನಂತರ ನಾನು ಅದೇ ಏರು ರಸ್ತೆಯ ಸಾಗಿ ಮುಂದೆ ಮೇಲಿನ ಮೈದಾನ ಪ್ರದೇಶ ಸೇರಿದರೆ ನೂರಾರು ಸಿಂಹಗಳು. 'ಅಯ್ಯೋ ಈ ಹುಡುಗಿಯರು ಇಲ್ಲಿ ಇಷ್ಟೊಂದು ಹುಲಿ ಸಿಂಹಗಳಿರುವಾಗ ಅಲ್ಲಿರುವ ಒಂದೇ ಒಂದು ಸಿಂಹಕ್ಕೋಸ್ಕರ ಬೆಟ್ಟ ಹತ್ತಿದರಲ್ಲ... ಇಲ್ಲಿ ನೋಡು ಎಷ್ಟೊಂದು ಒಂದೇ ಕಡೆ ಇದೆ' ಎಂದುಕೊಳ್ಳುತ್ತೇನೆ. ಸಲ್ಪ ಹೊತ್ತು ಅಲ್ಲಿ ಸಮಯ ಕಳೆದ ನಂತರ ಅಲ್ಲಿ ಕಳವಳದ ವಾತಾವರಣ ಶುರು ಆಗುತ್ತದೆ... ಎಲ್ಲ ನನ್ನಂತೆ ತಮ್ಮ ತಮ್ಮ ಪರಿವಾರ ಹುಡುಕುತ್ತಿದ್ದಾರೆ. ಅಲ್ಲಿನ ಜನರನ್ನು ಕೇಳಿದಾಗ "ನಡೆಯಿರಿ ಕೆಳಗಡೆ ಠಿಕಾಣಿಗೆ.. ಅಲ್ಲಿ ನೋಡೋಣ" ಎಂಬ ಉತ್ತರ ಬರುತ್ತದೆ
ಸರಿ ನಾನು ಎಲ್ಲರೊಡನೆ ನಮ್ಮೆಲ್ಲರ ಠಿಕಾಣಿ ಸೇರುತ್ತೇನೆ. ಅಲ್ಲಿ ಹುಡುಕಾಟ ಪ್ರಾರಂಭವಾಗಿದೆ. ಯಾರ್ಯಾರ ಪರಿವಾರದ ಜನ ಬಂದಿಲ್ಲ... ಯಾರು ಕಾಣೆಯಾಗಿದ್ದಾರೆ ಎಂಬೆಲ್ಲ ವಿವರ ಸಂಗ್ರಹಿಸುತ್ತಿದ್ದಾರೆ.. ನಾನಂದುಕೊಂಡೆ ಅವರು ಹುಡುಕುತ್ತಾರೆ ಎಂದು. ಆದರೆ ವಿಷಯ ಹಾಗಿಲ್ಲ.. ಅವರು ಕೇವಲ ಕಾಣೆಯಾದವರು ಇನ್ನು ನಿಮಗೆ ವಾಪಸ್ಸು ಸಿಗುವುದಿಲ್ಲ... ಅರಣ್ಯದಲ್ಲಿ ಹೋದವರು ವಾಪಸ್ ಬರುವುದಿಲ್ಲ ಎಂಬ ಸಹಜ ಪ್ರತಿಕ್ರಿಯೆ ಅವರದ್ದು. ಅಲ್ಲಿ ಸೇರಿದ ಜನ ಕೂಡ ಅದು ಸಹಜವೇ ಎಂಬಂತೆ ತಲೆದೂಗುತ್ತಿದ್ದಾರೆ.
ಯಾರೊಡನೆ ಹೊಡೆದಾಡಲಿ ಬಡಿದಾಡಲಿ? ಯಾರೂ ಕೇಳುವವರಿಲ್ಲ. ಅಲ್ಲಿ ಹೋಗುವ ಮುನ್ನವೇ ಇದೆಲ್ಲ ನಮಗೆ ತಿಳಿದಿರಬೇಕಂತೆ. ನನಗೇ ಗೊತ್ತಿರಲಿಲ್ಲ.
ಅಳುತ್ತಾ ಹೊರಬಂದೆ. ಅಯ್ಯೋ ಮಗುವೇ.. ಅಯ್ಯೋ ನನ್ನ ಮಡದಿಯೇ.. ಮುಗ್ಧರು ನೀವು. ಪಾಪಿ ನಾನು ಎನ್ನುತ್ತಾ ಅಲ್ಲಿಂದ ಹೊರಬರಬೇಕಾಯ್ತು. ನನ್ನೊಡನೆ ನನ್ನ ಪರಿಚಯದ ಕೆಲವರೂ ನನ್ನಂತ ನತದೃಷ್ಟರಿದ್ದರು. ಅವರೂ ಕೂಡ ಈ ಬಗ್ಗೆ ಆ ಸಂಸ್ಥೆಯ ವಿರೋಧದ ಬಗ್ಗೆ ಮಾತಾಡಲೇ ಇಲ್ಲ. ನಾನು ಅಂದುಕೊಂಡೆ ಹೋರಾಡೋಣ.. ಅದು ಹೇಗೆ ಮುಗ್ಧ ಜನರ ಮುಗ್ಧತೆಯೊಂದಿಗೆ ಆಟ ಆಡುತ್ತಾರಿವರು?! ಎಂದು ರೋಷಗೊಂಡರೆ... ಇನ್ನೊಂದು ಕಡೆ ದುಃಖ 'ಕಳಕೊಂಡವರು ವಾಪಸ್ ಬಂದಾರೆಯೇ' ಎನ್ನುತ್ತಾ ಗೋಳಿಡುತ್ತಿತ್ತು.
ಅಳುತ್ತಾ ಮನೆಗೆ ಬಂದೆ. ಯಾರಿಗೋಸ್ಕರ ಈ ಬದುಕು?!
ಇದೆಂತಾ ಕನಸು. ಬೆಳಿಗ್ಗಿನ ಕನಸು. ಯಾಕೆ ಬಿತ್ತು?! ಮನಸು ಭಾರವಾಗಿದೆ ಯಾಕೋ. ವಿದ್ಯಾ ನಿಮಿಷಾ ಇಬ್ಬರೂ ರಜಾಯಿಯ ಒಳಗೆ ಹಾಯಾಗಿ ನಿದ್ರಿಸುತ್ತಿದ್ದಾರೆ. ನಾನು ಬರೆಯುತ್ತಿದ್ದೇನೆ.
ಯಾಕೆ ಹೀಗೆ?! ಕನಸು ಯಾಕೆ ಬಿದ್ದಿರಬಹುದು?! ತಳಮಳವಿದೆ ಮನದಲ್ಲಿ. ಏನು ಮಾಡಲೂ ಮನ ಬಾರದು. ಆಪೀಸಿಗೆ ಹೋಗಿಲ್ಲ ಇನ್ನೂ. ಸ್ನಾನ ಮಾಡಿಲ್ಲ. ನನ್ನ ಜೀವನದಲ್ಲಿ ಕನಸಿನ ಮಹತ್ವ ಏನಾದರೂ ಇರಬಹುದಾ?! ಇದಕ್ಕೆ ಪರಿಹಾರ ಏನು?!
ಬಗೆಹರಿಯದ ಯೋಚನೆಗಳು.
ಮಹಾ ಮೃತ್ಯುಂಜಯ.. ನೆನಪಾಗುತ್ತಾನೆ.
ಓಂ ತೃಯಂಬಕಂ ಯಜಾಮಹೇ
ಸುಗಂಧಿಮ್ ಪುಷ್ಟಿವರ್ಧನಂ
ಊರ್ವಾ ಋಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್.
3/1/20 9:55 AM
No comments:
Post a Comment