ಪ್ರೀತಿಯ ಪುಟಾಣಿ ...
ನನ್ನ ಪ್ರೀತಿಯ ಹೇಗೆ ವರ್ಣಿಸಲಿ? ವರ್ಣನೆ ಬಿಡು - ಹೇಗೆ ತಿಳಿಸಿ ಹೇಳಲಿ ? ನಾನೆಷ್ಟು ನಿನ್ನ ಪ್ರೀತಿಸುವೆನೆಂದು ನಿನಗೆ ಅರ್ಥ ಮಾಡಿ ಹೇಳುವಷ್ಟು ಬುದ್ಧಿಯೂ ನನಗಿಲ್ಲ ಎನ್ನಲೇ? ಅಥವಾ ನನ್ನ ಭಾಷೆ ನಿನಗೆ ಅರ್ಥವಾಗದಷ್ಟು ಕೆಟ್ಟದಾಗಿದೆ ಎನ್ನಲೇ? ನಿನ್ನನ್ನೆಷ್ಟು ಪ್ರೀತಿಸುತ್ತೇನೆಂದು ಹೇಗೆ ಹೇಳಲಿ ಚಿನ್ನಾ?
ಹಾಗಂತ ನಿನ್ನ ನನ್ನ ಪ್ರೇಮ ಎಷ್ಟು ಗಾಢವಾದದ್ದೆಂದು ನಾವಿಬ್ಬರೇ ಅಲ್ಲ ನಿನ್ನಮ್ಮನೂ ಬಲ್ಲಳು. ನಿನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖ ನಾನಲ್ಲ. ನಿನ್ನೆ ನನ್ನೆದೆಯ ಮೇಲೆ ಮಲಗಿ ನಿದ್ದೆ ಹೋದೆಯಲ್ಲ ಆಗಲೇ ಗೊತ್ತಾಯ್ತ ನಿನ್ನ ಪ್ರೀತಿಯ ಆಳ. ಇಂದು ನಿನ್ನ ಆ ಪುಟ್ಟ ಕೈಗಳ ಮೇಲೆ ನ ತಲೆಯಿಟ್ಟು ಮಲಗಿ ನಿನ್ನ ಭವಿಷ್ಯದ ಕನಸು ಕನಸಿದೆನಲ್ಲ - ನಿನ್ನ ಅದ್ಯಾವುದೋ ಭಾಷೆಯಿಂದ ನೀ ಏನೇನೋ ಗೊಣಗಿದೆಯಲ್ಲ... ಆ ಭಾಷೆ ನನಗರ್ಥವಾಗದಿದ್ದರೂ ನಿನ್ನ ಪ್ರೀತಿಯ ಅರಿತೆ ಮುದ್ದೂ . ಆ ನಿನ್ನ ಮೂಕ ಭಾಷೆಯಲ್ಲಿ ಎಷ್ಟೊಂದು ಒಲವಿತ್ತು !! ಆ ನಿನ್ನ ಒಂದೇ ಒಂದು ನಗು ನನ್ನ ಎಲ್ಲ ಚಿಂತೆಗಳನ್ನ ದೂರ ಮಾಡುತ್ತಲ್ಲ !! ಆಶ್ಚರ್ಯವಾಗ್ತಿದೆ ನನಗೆ.
ನಿನ್ನ ಮೇಲಿನ ನನ್ನ ಪ್ರೀತಿ.. ಅದು ಪ್ರೀತಿಯಾ?? ಪ್ರೇಮವಾ? ವಾತ್ಸಲ್ಯವಾ? ಅರಿಯಲಾರದಷ್ಟು ಅಜ್ಞಾನಿ ನಾನು. ನಿನಗೇನಾದರೂ ಅರ್ಥವಾದರೆ ದಯವಿಟ್ಟು ನನ್ನ ಭಾಷೆಯಲ್ಲಿ ... ನಂಗೆ ಅರ್ಥವಾಗುವ ತರಾ ಹೇಳ್ತೀಯ? ನಿನ್ನ ಭಾಷೆಯನ್ನು ಅರ್ಥೈಸಿಕೊಳ್ಳುವಷ್ಟು ಜ್ಞಾನ ನನಗಿಲ್ಲ ಪುಟ್ಟೀ.
I Love u .
27/3/2009 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು)
ಆಹಾ! ಎಷ್ಟು ಸುಂದರ ಪ್ರೀತಿಯ ಅನುಭವ ಬರ್ದೆ 🥰👌👌🙏
ReplyDelete