ಮಾನವನ ಆಯುಮಾನದಲ್ಲಿ ವಯಸ್ಸಿಗೂ ಆರೋಗ್ಯಕ್ಕೂ ಒಂದು ನಂಟಿದೆ. ಎಷ್ಟೇ ಆರೋಗ್ಯವ ಕಾಪಾಡಿಕೊಂಡು ಬಂದ ಮನುಷ್ಯರಲ್ಲೂ ವಯೋಸಹಜವಾದ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉದಾ: 'ಚಾಲೀಸು' ಹೆಸರೇ ಸೂಚಿಸುವಂತೇ ನಲವತ್ತು ಆಗುತ್ತಿದ್ದಂತೆ ನಮಗೆ ಓದಲು ಚಸ್ಮಾ ಬೇಕು.
ದಿಲ್ಲಿಯಲ್ಲಿ ಒಬ್ಬರು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು. ಕನ್ನಡಿಗರು... ನಮ್ಮ ಕಡೆಯವರು. ಹೆಸರು ರಮೇಶ ವರ್ಧನ್.
ಮಾತಿನಲ್ಲಿ ಚತುರ... ಅವರ ಮಾತನ್ನು ಕೇಳುವ ಸುಸಂದರ್ಭವೊಂದು ಒದಗಿ ಬಂದಿತ್ತು ನನಗೆ.
ಅವರು ಹೇಳ್ತಾರೆ...
ಪಂಚೇಂದ್ರಿಯಗಳಲ್ಲಿ ಕಣ್ಣು ವಿಶೇಷವಾದುದು. ಎಲ್ಲಾ ಪಂಚೇಂದ್ರಿಯಗಳ ಕಾರ್ಯಗಳ ಒಟ್ಟಿಗೇ ನಾವು ಕಣ್ಣಿನ ಕಾರ್ಯವನ್ನೂ ಜೋಡಿಸುತ್ತೇವೆ. ಉಳಿದ ಪಂಚೇಂದ್ರಿಯಗಳಾದ ಮೂಗು, ಕಿವಿ, ನಾಲಿಗೆ ಮತ್ತು ಚರ್ಮ ಗಳ ಎಲ್ಲ ವಿಷಯಗಳಲ್ಲೂ ನಾವು ನೋಡುತ್ತೇವೆ ಅಥವಾ 'ನೋಡು' ಎಂಬ ಪದಬಳಕೆ ಮಾಡುತ್ತೇವೆ.
ಉದಾ:
1. ಊಟ ಚೆನ್ನಾಗಿದೆ.. ಉಂಡು ನೋಡು. (ನಾಲಿಗೆ)
2. ಹಾಡನ್ನು ಕೇಳಿ ನೋಡು (ಕಿವಿ)
3. ಈ ಪರಿಮಳ ಚೆನ್ನಾಗಿದೆ.. ಮೂಸಿ ನೋಡು (ಮೂಗು)
4. ಬಟ್ಟೆ ಚೆನ್ನಾಗಿದೆ ಮುಟ್ಟಿ ನೋಡು (ಸ್ಪರ್ಶ)
ಹಾಗಾಗಿ ಕಣ್ಣು ದೇವರು ನಮಗೆ ಕೊಟ್ಟ ವರ. ಅದರಿಂದಾಗಿಯೇ ಈ ಜಗ ಸುಂದರ.
ಈಗ ಯೋಚಿಸಿ ನೋಡಿ. (ಮಿದುಳು) ಕಣ್ಣಿನ ಕಾರ್ಯದ ಒಟ್ಟಿಗೆ ಇತರ ಇಂದ್ರಿಯಗಳ ಕಾರ್ಯವ ಸೇರಿಸಬಹುದೇ?! (ನಮ್ಮ ವಿವೇಚನಾ ಶಕ್ತಿಗೆ ಅದನ್ನು ಬಿಡುತ್ತಾರವರು)
ಇನ್ನೂ ಮುಂದರಿದು ಅವರು ಹೇಳ್ತಾರೆ...
ಎಲ್ಲ ಮಶೀನುಗಳಿಗೂ ಎಲ್ಲ ಸಾಧನಗಳಿಗೂ ಒಂದು ವಾರಂಟಿ ಪೀರಿಯಡ್ ಇರ್ತದೆ. ಟಿವಿ, ವಾಷಿಂಗ್ ಮಷೀನ್, ಕಾರು, ಬೈಕು ಇತ್ಯಾದಿಗಳು. ಅವೆಲ್ಲವಕ್ಕೂ ವಾರಂಟಿ ಪೀರಿಯಡ್ ನಂತರ ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೇ ಅಲ್ಲ ಸರ್ವೀಸ್ ಚಾರ್ಜ್ ಅನ್ನೂ ತೆರಲೇಬೇಕು. ಅಲ್ಲವೇ?
ಹಾಗೇನೇ ನಮ್ಮ ದೇಹ. ಆ ದೇವರೆಂಬ ಮ್ಯಾನುಫ್ಯಾಕ್ಚರರ್ ನಮ್ಮನ್ನೆಲ್ಲ ತಯಾರಿಸಿ ಬಿಟ್ಟಿದ್ದಾನೆ. ವಂದು ವಾರಂಟಿ ಅಂತ ಕೊಟ್ಟಿದ್ದಾನೆ. ಆ ವಾರಂಟಿ ಪೀರಿಯಡ್ಡೇ 40 ವರ್ಷಗಳು. ಅದಕ್ಕೂ ನಂತರ ಈ ದೇಹವೆಂಬ ಗಾಡಿ.. ಆಸ್ಪತ್ರೆ ಎಂಬ ಸರ್ವಿಸ್ ಸೆಂಟರಿಗೆ .. ಡಾಕ್ಟರೆಂಬ ಮೆಕ್ಯಾನಿಕ್ ಹತ್ತಿರ ಹೋಗಲೇಬೇಕು. ಚಾರ್ಜ್ ತೆರಲೇಬೇಕು. ಹಾಗಾದಾಗ ಮಾತ್ರ ದೇಹವೆಂಬ ಗಾಡಿ ಮುನ್ನಡೆಯುತ್ತದೆ. ಓಡದಿದ್ದರೂ ನಡೆಯಬಹುದು !!
ಹಾಗೇನೇ ಚಶ್ಮಾ, ನಲವತ್ತರ ನಂತರ ಬರುವ ಕನ್ನಡಕ ದಿಂದ ಬೇಸರಿಸದಿರಿ. 40 ವರ್ಷ ನಡೆಯಿತಲ್ಲ ಎಂದು ಹೆಮ್ಮೆಪಡಿ. ಬಿಪಿ ದಯಾಬಿಟೀಸು ಬಂತಲ್ಲಾ ಎಂದು ಬೇಸರ ಬೇಡ... 40 ರ ವರೆಗೆ ಇದೇನೂ ಇರಲಿಲ್ಲವಲ್ಲ ಎಂದು ಖುಷಿಪಡಿ. 40 ವರ್ಷದವರೆಗೆ ಖರ್ಚಿಲ್ಲದೆ ಬದುಕಿದೆವಲ್ಲ ಎಂದು ಸಂತೋಷವಿರಲಿ. ಇನ್ನು ಮುಂದೆ ಕೊಡಲ್ಪಡುವ ಚಾರ್ಜುಗಳ ಬಗ್ಗೆ ಗಮನವಿರಲಿ ಆದರೆ ಖೇದ ಪಡಬೇಡಿ. ಜೀವನವ ಆನಂದಿಸುವುದ ಕಲಿಯೋಣ. ಗ್ಲಾಸೊಂದರಲ್ಲಿ ಅರ್ಧ ಖಾಲಿ ಎನ್ನುವ ಬದಲಿಗೆ ಅರ್ಧ ನೀರು ತುಂಬಿದೆ ಎನ್ನುವ ಮನಸ್ಥಿತಿ ನಮ್ಮದಾಗಲಿ.
"ನಲವತ್ತರ ನರಳು" "ಅರವತ್ತರ ಮರುಳು" ಎಂಬ ಗಾದೆಗಳ ಸುಳ್ಳಾಗಿಸಿ "ನಲವತ್ತರ ನಲಿವು", "ಅರವತ್ತರ ಅರಳು" ವ "ಅರವತ್ತರ ಅರಿವು" ನಮ್ಮದಾಗಲಿ.
ನನ್ನಂತಹ ಕಿಡಿಗೇಡಿ ಬುದ್ಧಿಯವರಿಗೆಲ್ಲ ತಲೆಯಲ್ಲೊಂದು ಹುಳ ಬಿಟ್ಟು ನಡೆದರು ವರ್ಧನರು. 40 ರ ಮೊದಲೇ ಅನಾರೋಗ್ಯ ಪೀಡಿತರಾದವರು, ತಲೆಯ ಕೂದಲು ಉದುರಿ ಬೊಕ್ಕಲಾದವರೆಲ್ಲ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟುಗಳೇ?!
ನಮಸ್ಕಾರ
ಶ್ಯಾಮ್ ಭಡ್ತಿ
-13/12/2019 ಶುಕ್ರವಾರ ರಾತ್ರಿ 10 ಗಂಟೆ.
No comments:
Post a Comment