ಸೂರ್ಯವಂಶಿಯಾದ ನನ್ನ, ಬೆಳ್ಳಿ ಮೂಡುವ ಮೊದಲೇ ಏಳುವಂತೆ ಮಾಡಿದ ಓ ಪ್ರಿಯೇ....
ತೋಟವನ್ನೇ ಕಂಡರಿಯದ ನನ್ನ ಬೆಳ್ಳ ಬೆಳಿಗ್ಗೆ ಎದ್ದು ತೋಟಕ್ಕೆ ಬರುವಂತಹ ಸೆಳೆತವನ್ನಿತ್ತ ಸಖಿಯೇ ....
ಅಲ್ಲಿ ಲಂಗದ ನೆರಿಗೆಯನ್ನೆತ್ತಿ ಓಡೋಡಿ ಬರುತ್ತಿದ್ದ ನಿನ್ನ ಆ ಸುಂದರ ಕಂಗಳಲ್ಲಿ ಸೇರುವ ತವಕವಿತ್ತಲ್ಲ ಈಗಲೂ ಅದನ್ನು ನಾ ಹೇಗೆ ಮರೆಯಲಿ ಚಿನ್ನ? ಅಕ್ಕ ಪಕ್ಕ ಕುಳಿತು ಬೆರೆತ ಆ ಎರಡು ಕಂಗಳ ಮಾತುಕತೆಗೆ ಅದೇ ತೋಟವೇ ತಾನೇ ಸಾಕ್ಷಿ? ಒಂದೊಂದು ದಿನವೂ ಅದೇ ಬಾಳೆ, ತೆಂಗು, ಕಂಗಿನ ಮರಗಳು ತಮ್ಮ ಎಲೆ - ಗರಿಗಳ ಮಧ್ಯೆ ಅಡಗಿಸಿ ರಕ್ಷಿಸಿದುವಲ್ಲ.. ಅವಕ್ಕೆ ಹೇಗೆ ಕೃತಜ್ಞತೆ ಅರ್ಪಿಸಲಿ?
ನಮ್ಮೀರ್ವರ ಚುಂಬನವ ನೋಡಿ ಸಹಿಸಲಾರದೆ ಎರಡು ಯುವ ಅಡಿಕೆ ಸಸಿಗಳು ತಮ್ಮ ಮುಂಡವನ್ನು ಚುಂಬಿಸಿಕೊಳ್ಳುತ್ತಿದ್ದವಲ್ಲ - ನೆನೆಪಿದೆಯ ನಿಂಗೆ? ಹಿರಿಯ ತೆಂಗಿನ ಮರಗಳು ನಮ್ಮಾಲಿಂಘನವ ನೋಡಿಯೂ ನೋಡದಂತೆ ಮೂಕಸಾಕ್ಷಿ ಯಾಗಿಯೇ ಉಳಿದವಲ್ಲ ! ನಮ್ಮ ಗಾಢ ಆಲಿಂಘನವ ಬೇರ್ಪಡಿಸುವ ಅವುಗಳ ಸುಯ್ಯಿ ಸದ್ದು ನಮ್ಮೀರ್ವರ ಎಚ್ಚರಿಕೆಯ ಗಂಟೆಗಳಾಗಿದ್ದವಲ್ಲ ! ನಮ್ಮನ್ನು ಎಲ್ಲೇ ಮೀರದಂತೆ ಕಾಯ್ದವಲ್ಲ ! ಅವಕ್ಕೆ ಹೇಗೆ ಕೃತಜ್ಞತೆ ಅರ್ಪಿಸಲಿ ಮುದ್ದೂ ?
ಈಗ ನಮ್ಮ ಪ್ರೇಮಕ್ಕೆ ಎಷ್ಟು ವರ್ಷವಾಯ್ತೋ ನಾನರಿಯೆ. ಈಗಲೂ ಮಡದಿಯಾಗಿಯೂ ಅದೇ ಪ್ರೇಮದ ಹೊಸತನದ ಸವಿ ನಮ್ಮೀರ್ವರಲ್ಲಿ ಇದೆಯಲ್ಲ.. ಇಂಥಹ ನಿಸ್ವಾರ್ಥ ಪ್ರೇಮ ಕೊಟ್ಟ ನಿನ್ನನ್ನು ಹೇಗೆ ಅಭಿನಂದಿಸಲಿ ಪ್ರಾಣೇಶ್ವರೀ?
ನಿನ್ನವ - ಕೋಟಿಗೊಬ್ಬ
25/2/2009 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು)
No comments:
Post a Comment