Apr 18, 2012

ಅಪಶಕುನ

ಪ್ಪನಿಗೆ ಅಷ್ಟೇನೂ ವಯಸ್ಸಾಗಿರಲಿಲ್ಲ, ಆದರೆ 36 ನೇ ವಯಸ್ಸಿನಿಂದ ಕಾಡಿದ ಡಯಾಬಿಟೀಸ್, ಬಿ.ಪಿ. ಅವರನ್ನು ಹಣ್ಣಾಗಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಕಾಲಿನ ಗಾಯದ ಆಪರೆಶನ್ನಿಗಾಗಿ ಮಲಗಿದ್ದರು. ನಾನು ಪಿ.ಯು.ಸಿ. ಓದುವ ಹುಡುಗ ಆಗ. ಮನೆಯಲ್ಲಿ ಇದ್ದೆ.
ಅಮ್ಮ ಹೇಳಿದ್ದಳು "ದಿನಾ ಸಂಜೆ ದೇವರ ದೀಪ ಮಾತ್ರ ತಪ್ಪಿಸಡ ತಮಾ"
ಅದರಂತೆ ಆ ದಿನ ಕೂಡ ದೀಪ ಹಚ್ಚುತ್ತಲಿದ್ದೆ. ಅಪ್ಪ ನೆನಪಾದರು. ಅಪ್ಪ 'ನಮ್ಮ ಬಿಟ್ಟು ಹೋಗಿಬಿಟ್ರೆ' ಎಂಬ ಭಯ ಮೂಡಿ ಕಣ್ಣೀರು ಬಂತು.

"ದೇವರೇ ನನ್ನ ಭವಿಷ್ಯ ಹಾಳಾದರೂ ಚಿಂತಿಲ್ಲ - ಅಪ್ಪನ ಬದುಕಿಸು" ಎಂದೇ ಬೇಡಿದೆ.
ಕಣ್ಣೀರಿನ ಒಂದು ಹನಿ ದೀಪದ ಮೇಲೆ ಬಿದ್ದು ದೀಪ ಇನ್ನೇನು ಆರಿತು ಎಂದು ಕಳವಳಗೊಳ್ಳುವಷ್ಟರಲ್ಲಿ ಮತ್ತೆ ಉರಿಯಿತು. ಸಮಾಧಾನದ ನಿಟ್ಟುಸಿರು ಬಿಟ್ಟೆ. ಅಪ್ಪ ಒಂದೇ ವಾರದಲ್ಲಿ ಮನೆಗೆ ಬಂದರು -
ಆದರೆ ಆ ವರ್ಷದ ಪರೀಕ್ಷೆಯಲ್ಲಿ ನಾ ಫೇಲಾದೆ !!!.

5-6 ವರ್ಷಗಳ ನಂತರ ಮತ್ತೆ ಅಪ್ಪನ ಸ್ಥಿತಿ ಹದಗೆಟ್ಟಿತು, ಈ ಸಲ ಹೃದಯಾಘಾತ. ಹೃದಯ ಚಿಕಿತ್ಸೆಗಾಗಿ (open heart surgery) ಮಂಗಳೂರಿಗೆ ಹೋಗುವ 2 ದಿನ ಮುಂಚೆ ಅ
ಮ್ಮ ಹೇಳಿದಳು
"ತಮಾ ಆ ಕೆಲಶಿಗೆ ಹೇಳಿಕ್ಕಿ ಬಾ, ಅವರ ಕೂದಲು ಕಟ್ ಮಾಡ್ಸವಡ".
ನಾನು ಯಾವ್ದೋ ಕೆಲಸದ ನಿಮಿತ್ತ ಬೆಳಗಿನ ವೇಳೆಯಲ್ಲಿ ಹೋಗಲಾಗಲಿಲ್ಲ, ಸಂಜೆ ಹೊರಟಾಗ ಅಮ್ಮ ಬೇಡ ಅಂದರೂ ಕೇಳದೆ ಹೋಗಿ ಹೇಳಿ ಬಂದೆ. (ಹಳ್ಳಿಗರು ಸಂಜೆಯ ಸಮಯದಲ್ಲಿ ಕೆಲಶಿಯ ಕರೆಯುವುದು ಬಿಡಿ, ಮಾತನ್ನಾಡಿಸುವುದೂ ಇಲ್ಲ, ಅದು ಮೂಢನಂಬಿಕೆ) ಮರುದಿನ ಕೆಲಶಿ ಬಂದು ಮುಂಡನ ಮಾಡಿ ಹೋದ.
ಆಗೇ ಸುಮಾರು ದಿನಗಳಿಂದ ಸುಟ್ಟಗಣ್ಣ ಹಕ್ಕಿ (ಒಂದು ರೀತಿಯ ವಿಚಿತ್ರ - ಭಯಗೊಳಿಸುವ ಧ್ವನಿಯಲ್ಲಿ ಕೂಗುವ ಹಕ್ಕಿ ಎಂದು ಅಮ್ಮ ಹೇಳಿದ್ದು - ನಾ ಕೇಳಿದ್ದು, ನೋಡಿಲ್ಲ) ಪದೇ ಪದೇ ಕೂಗುತ್ತಿತ್ತು. ಅದು ಕೂಗಿದರೆ ಯಾರಿಗೋ ಪ್ರಾಣಭಯವಿದೆ ಎಂಬರ್ಥವಂತೆ.

ಅದೇ ಮರುದಿನ ಮಂಗಳೂರಿನ ಆಸ್ಪತ್ರೆಗೆ ಅಪ್ಪನನ್ನು ಕರೆದುಕೊಂಡು ಹೋಗಿ - ಆಪರೇಶನ್ ಮುಗಿದಿದೆ ಎಂದು ಡಾಕ್ಟರು ಹೇಳಿದಾಗ ನಾವೆಲ್ಲ ಸರಿಯಾಗಿ ಉಸಿರಾಡಿದ್ದೆವು. ಆದರೆ ವಿಧಿ ಲಿಖಿತ ಏನಿತ್ತೋ ಬಲ್ಲವರಾರು?. ಅಪ್ಪ ಚೇತರಿಸಿಕೊಳ್ಳಲಿಲ್ಲ. ಪೂರಾ 18 ಬಾಟಲು ರಕ್ತ ಕೊಟ್ಟರೂ ಅಪ್ಪನ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ದುಗುಡ ನಮ್ಮನ್ನಾವರಿಸಿತ್ತು. ಮರುದಿನ ಬೆಳಿಗ್ಗೆ ಅಲ್ಲೇ ಪಕ್ಕದ ಗಣೇಶನ ಗುಡಿಗೆ ಅರ್ಚನೆ ಮಾಡಿಸಲೆಂದು ಹೋದೆವು ನಾನು - ಅಮ್ಮ ಜೊತೆಯಲ್ಲಿ ಅಣ್ಣ. ಗುಡಿಯಲ್ಲಿ ಪೂಜೆಯ ವೇಳೆ ಭಟ್ಟರು ತೆಂಗಿನ ಕಾಯಿ ಒಡೆಯುವಾಗ ಒಂದು ಕಾಯಿಕಡಿ ಮಗುಚಿ ಬಿತ್ತು. ತಕ್ಷಣ ನಾನು ಅಮ್ಮನ ಮುಖ ನೋಡಿದ್ದೂ - ಅಮ್ಮ ಅಣ್ಣನಮುಖ ನೋಡಿದ್ದೂ -ಅಣ್ಣ ನನ್ನ ಮುಖ ನೋಡಿದ್ದೂ ಆಗಿ ಹೋಯಿತಲ್ಲ. ಇದು ಮನಸ್ಸಿನ ಭ್ರಮೆಯೇ?
ಮರುದಿನ ಅಪ್ಪ ನಮ್ಮನ್ನಗಲಿದರು .ಆಯಿ ಅಳಲಿಲ್ಲ. "ತಮಾ ಬೆಳಗ್ಗೆನೇ ಗೊತ್ತಾಗಿತ್ತು ಬಿಡು" ಅಂದಳಷ್ಟೇ.
ಈಗ ಯೋಚಿಸುತ್ತಿದ್ದೇನೆ....
ಈ ಮೂಢನಂಬಿಕೆಗಳು ನಿಜವಾ? ನಂಬಲಹ್ರವಾ? ಆ ಹಕ್ಕಿ ನಿಜವಾಗಲೂ ಅಪಶಕುನದ ಹಕ್ಕಿಯಾ? ತೆಂಗಿನ ಕಾಯಿ ಮಗುಚಿಬೀಳುವುದೂ ಒಂದು ಪೂರ್ವ ಸೂಚನೆಯಾ?? ಪೂರ್ವಜರು ತಮ್ಮ ಅನುಭವದಿಂದ ಈ ಎಲ್ಲ ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿದ್ದರಾ? ನಾನು ಫೇಲಾಗಲು - ಅಪ್ಪ ನ ಸಾವಿಗೆ ಅವೆಲ್ಲ ಮುನ್ಸೂಚನೆಗಳಾಗಿದ್ದವಾ? ಅಗೋಚರ ಶಕ್ತಿಯೊಂದು ಇಡೀ ಜ
ಗದ ಜೀವಕೋಟಿಯ ನಿಯಂತ್ರಿಸುತ್ತಿದೆಯಾ? ಒಂದೂ ಅರ್ಥವಾಗುತ್ತಿಲ್ಲ.

1 comment:

  1. ಉತ್ತರ ಸಿಗದ ಪ್ರಶ್ನೆಗಳು! ಈ ಥರ ಎಷ್ಟೋ ಅನುಭವಗಳು ಎಲ್ಲರಿಗೂ ಆಗಿರ್ತು :)

    ReplyDelete