Apr 18, 2012

ಅಜ್ಜನ ಪೆನ್ನು

ಅಜ್ಜನ ಮೇಲೆ ಅಷ್ಟೇನೂ ಪ್ರೀತಿಯಿರಲಿಲ್ಲ ನನಗೆ. ಬಹುಷಃ ಅವನ ಹತ್ತಿರ ಇರುವ ಒಂದೇ ಒಂದು ಹೀರೋ ಇಂಕ್ ಪೆನ್ನು ನನ್ನ ಆಕರ್ಷಣೆಗೆ ಕಾರಣವಾಗಿತ್ತೇನೋ ..!! ದಿನಕ್ಕೆ ಒಮ್ಮೆಯೂ ಬರೆಯುವ ಮಹಾ ಬರಗಾಲ ಅವನಿಗೇನೂ ಇರಲಿಲ್ಲ...... ಆದರೂ ಆ ಪೆನ್ನನ್ನು ಆತ ಮಕ್ಕಳಾರಿಗೂ ಸಿಗದ ಗೋದ್ರೆಜ್ ಕಪಾಟಿನ ಮೇಲಿದ್ದ ಕೂಜಳ್ಳಿ ಮಾಣಿ ಪೆಟ್ಟಿಗೆಯಲ್ಲಿಡುತ್ತಿದ್ದ.

ಒಮ್ಮೆ ಅಣ್ಣ ಆ ಪೆನ್ನನ್ನು ಕದ್ದು ತಂದು ಏನೋ ಬರೆಯುತ್ತಿದ್ದ. ನನಗೋ ಖುಷಿಯೋ ಖುಷಿ. ರಂಪ ಮಾಡಿ ಅವನಿಂದ ಇಸಗೊಂಡೆ. ನನ್ನ ದುರ್ದೈವವೋ ಎಂಬಂತೆ ನನ್ನ ಕೈಲ್ಲಿರುವುದನ್ನು
ಅಜ್ಜ ಕಂಡುಬಿಟ್ಟ.
ತಗಳಿ, ರಂಪಾಟ ಶುರುವಾಗಿದ್ದೇ ಅಲ್ಲಿಂದ.

ಸೀದಾ ಆಯಿಯಲ್ಲಿ ದೂರು. ಅಜ್ಜನಿಗೆ ನನ್ನ ಬಯ್ಯುವ ಅಥವಾ ಶಿಕ್ಷಿಸುವ ಧೈರ್ಯವಿರಲಿಲ್ಲವೋ - ನೈತಿಕತೆಯಿರಲಿಲ್ಲವೋ ಗೊತ್ತಿಲ್ಲ.... ಪ್ರತೀ ವಿಷಯಗಳಲ್ಲೂ ನನ್ನ ಮತ್ತು ಅಜ್ಜನಿಗೆ ವರಟಾಗುತ್ತಿತ್ತು.... ಆಯಿ ಚಂಡೀ ಚಾಮುಂಡಿಯಾಗಿ ಬಂದಳು.
" ಹೇಳು ಎಂತಕೆ ತೆಗ್ದೆ?" ಧುಧುಂ ... ಬಿತ್ತು ಬೆನ್ನ ಮೇಲೆ ಎರಡು. ಅದು ಹಾಗೇ  ಅಜ್ಜನ ಮೇಲಿನ ಸಿಟ್ಟಿನಿಂದ ಬಿದ್ದ ಪೆಟ್ಟುಗಳು. ಇಂದಿಗೂ ಅಂದುಕೊಳ್ಳುತ್ತೇನೆ.
ಆ ಪೆಟ್ಟು ನನಗಲ್ಲ ಅಜ್ಜನಿಗೆ.... ಮಾವನೊಬ್ಬನಿಗೆ ಸೊಸೆಯಿಂದ ಬಿದ್ದ ಪೆಟ್ಟುಗಳವು!!
ನೋವು ತಡೆಯಲಾಗಲಿಲ್ಲ. ಅಜ್ಜನ ಎದುರು ಅಳಲೂ ಒಂಥರಾ "ಮರ್ಯಾದೆ ಪ್ರಶ್ನೆ" ಎಷ್ಟೇ ತಡಕೊಂಡರೂ ಕಣ್ಣಲ್ಲಿನ ನೀರು ಉಕ್ಕಿ ಹರಿಯುವುದನ್ನು ತಡೆಯಲಾಗಲಿಲ್ಲ.
ಮೊದಲು ಸತ್ಯವೇ ಹೊರಬಿತ್ತು ನನ್ನ ಬಾಯಿಂದ. "ಅಣ್ಣ ತಂದು ಕೊಟ್ಟ. ನಾ ತೆಗದಿದ್ದಲ್ಲ , ಅಣ್ಣ".
ಆಯಿಯ ಕೈ ಅಣ್ಣನ ಮೇಲೆ ಹರಿ ಹಾಯತೊಡಗಿತ್ತು. "ಅಜ್ಜನ ಪೆ
ನ್ನು ನಿಂಗಕ್ಕೆ ಎಂತಕ್ರ, ನಿಂಗಕ್ಕೆ ಎಂತ ಪೆನ್ನಿಗೆ ಗತಿ ಇಲ್ಯ? ಆ ಪೆನ್ನ್ ಎಂತಕೆ ತೆಗ್ದೆ ಹೇಳು" ನನ್ನ ಡಬಲ್ ಪೆಟ್ಟು ಅವಂಗೆ ಬಿತ್ತು. ಬೀಳ್ತಾನೆ ಇತ್ತು.
ಆ ಸಣ್ಣ 9 ನೇ ವಯಸ್ಸಿನ ನನ್ನ ಮನಸ್ಸಲ್ಲಿ ಆಗ ಏನು ನಡೆಯಿತೆಂಬುದನ್ನು ನಾನೀಗ ವರ್ಣಿಸಲಾರೆ. ಅಣ್ಣನಿಗೆ ಬೀಳುತ್ತಿದ್ದ ಪೆಟ್ಟಿನ ನೋವಿನಿಂದ ಆದ ಅವನ ಮುಖ ನೋಡಿ ಅಯ್ಯೋ ಅನಿಸಿಹೋಗಿತ್ತು. ಪಾಪ ಅನಿಸಿತ್ತು.... ನಂಗೆ ಪೆಟ್ಟು ಬಿದ್ದರೆ ಸಹಿಸಬಲ್ಲೆ ಅಣ್ಣ ಸಹಿಸಲಾರ ಪಾಪ ಅನಿಸಿಹೋಯಿತು.....ಒಂದೇ ಸಮ ಅಳುತ್ತಲೇ ಕೂಗಿದೆ -
" ಅವಂಗೆ ಹೊಡ್ಯಡದೇ, ತೆಗ್ದದ್ದು ನಾನೇಯಾ"
ಮತ್ತೆ ಆಯಿ ನನ್ನ ಮೇಲೆ ವಕ್ಕರಿಸಿ ಮತ್ತೆರಡು ಬಾರಿಸಿ ಪೆನ್ನು ಕಿತ್ತುಕೊಂಡಳು.
ಆ ಅಳು ಸೇರಿದ ಕೂಗಿನಲ್ಲಿ ಅಣ್ಣನ ಮೇಲಿನ ವಾತ್ಸಲ್ಯವಿತ್ತಾ? ಅಥವಾ ನನ್ನ ಮನಸ್ಸು ಅಷ್ಟೊಂದು ಮುಗ್ಧವಾಗಿತ್ತಾ ? ಅಣ್ಣನ ನೋವನ್ನು ನನ್ನ ಮನಸ್ಸು ಅನುಭವಿಸುತ್ತಿತ್ತಾ ?
ಇಷ್ಟೆಲ್ಲಾ ಆದರೂ ನನಗಿಂತ 5 ವರ್ಷ ದೊಡ್ಡವನಾದ ಅಣ್ಣ ಒಂದೂ ಮಾತಾಡದಿರುವುದು ಆಗ ಆಶ್ಚರ್ಯವಾಗಿರಲಿಲ್ಲ.!! ಅವನ ಮನಸ್ಸು ಅಷ್ಟೊಂದು ಮಾಗಿತ್ತಾ? ಅಥವಾ ಆಗಲೇ ಅವನು ಬದುಕಲು ಕಲಿತಿದ್ದನಾ? ಈಗಲೂ ಉತ್ತರ ಸಿಗದ ಪ್ರಶ್ನೆಗಳು

ಚಿಕ್ಕ ಮನಸ್ಸು ಎಷ್ಟೊಂದು ಮುಗ್ಧವಾಗಿರುತ್ತದೆ, ಎಲ್ಲರ ಮೇಲೆ ಅಕ್ಕರೆ ವಾತ್ಸಲ್ಯ ಇರುತ್ತಲ್ಲ ...ಆ ಪುಟ್ಟ ಹೃದಯ ಎಲ್ಲರನ್ನೂ ವಂದೇ ತರ ನೋಡುತ್ತಲ್ಲ..... ಮಕ್ಕಳಿದ್ದಾಗ ನಮಗೆ ಹಿರಿಯರು ಬಯ್ದಿದ್ದಕ್ಕೆ ನಾವು ಬೇಸರಪಟ್ಟುಕೊಂಡಿದ್ದಿಲ್ಲವಲ್ಲ !! ಈಗ ಯಾಕೆ ಬೇಜಾರಾಗುತ್ತದೆ?? !!


ಜೊತೆಗೇ ವಂದೇ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮದೇ ಕರುಳಿನ ಕುಡಿ... ಮೊಮ್ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಇರಬಹುದಾ ಎಂಬ ಸಂಶಯವೂ ಇದೆ. ಕೇಳುವುದ್ಯಾರಲ್ಲಿ ??!!

6 comments:

  1. ಹರೀಶಣ್ಣ ಅಂದಂಗೇ ನಂದೂ no comments :-)

    ReplyDelete
  2. ಯಂದು ಕಮೆಂಟ್ ಇದ್ದು ಮಾರಾಯಾ.

    ಓದಿದ ದಿನಾನೇ ಬರ್ಯಕಾಗಿತ್ತು. ಟೈಮೇ ಆಜಿಲ್ಲೆ..(ಯೆಲ್ಲರಿಗೂ ದಿನಕ್ಕೆ 24 ಘಂಟೆ ಟೈಮೇಯ ಅಲ್ದ).

    ಕೆಲವು ಪ್ರಶ್ನೆಗೆ ಉತ್ತರ ಇರ್ತಿಲ್ಲೆ.

    .. ಮಕ್ಕಳಿದ್ದಾಗ ನಮಗೆ ಹಿರಿಯರು ಬಯ್ದಿದ್ದಕ್ಕೆ ನಾವು ಬೇಸರಪಟ್ಟುಕೊಂಡಿದ್ದಿಲ್ಲವಲ್ಲ !!
    - ಹೌದು.. ನಮಗೆ ಬೈದಾಗ ಅಗೋ ಬೇಜಾರಕ್ಕಿಂತ ನಮ್ಮ ಪ್ರೀತಿ ಪಾತ್ರರಿಗೆ ಬೈದಾಗ ಅಗೋ ಬೇಜಾರೇ ಜಾಸ್ತಿ.. ಎಂತಕ್ಕೋ ಗೊತ್ತಿಲ್ಲೆ.

    ಜೊತೆಗೇ ವಂದೇ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮದೇ ಕರುಳಿನ ಕುಡಿ... ಮೊಮ್ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಇರಬಹುದಾ ಎಂಬ ಸಂಶಯವೂ ಇದೆ. ಕೇಳುವುದ್ಯಾರಲ್ಲಿ ??!! --- ಈ ಅನುಭವ ಯನಗೂ ಆಜು. ಆದ್ರೆ ನಿನ್ನ ಉಲ್ಟಾ.. ಯನ್ ಕಂಡ್ರೆ ಅಜ್ಜಂಗೆ ಯನಗೆ ಭಾಳ ಪ್ರೀತಿ. ಯನ್ ಚಿಕ್ಕಪ್ಪಂದಿರು ಬೈದ್ರೆ ಎಮ್ಮೆಗ್ ಹೊಡ್ಯ ಬಾರ್ ಕೋಲ್ ತಗಂಡ್ ಚಚ್ಛ್ ತಿದ್ದ ಅವಕ್ಕೆಲ್ಲ..ಆದ್ರೆ ಬೇರೆ ಮೊಮ್ಮಕ್ಕಳನ್ ಕಂಡ್ರೆ ಅಷ್ಟಕ್ಕಷ್ಟೆ ಅವಂಗೆ .

    ಎಂತಕ್ಕೆ ಹೇಳ ಪ್ರಶ್ನೆ ಯನ್ ಕಾಡದ್ರೊಳಗೆ ಅಜ್ಜ ಹೋಗೋದ. ಅವಾಗಿನ್ನೂ ಐದನೇತ್ತೆ ಯಾನು.

    ವರ್ಷಕ್ಕೊಂದ್ ಸಾರಿ ಅಪ್ಪಯ್ಯನ ಶ್ರಾದ್ಧದಲ್ಲಿ ಅಪ್ಪಯ್ಯನ ಹೆಸರಲ್ಲಿ ಪಿಂಡಕ್ಕೆ ನೀರ್ ಬಿಡಕಾದ್ರೆ ಕಣ್ಣಲ್ಲಿ ನೀರ್ ತುಂಬ್ಕತ್ತು.
    ಆದ್ರೆ ಅಜ್ಜನ ಹೆಸರಲ್ಲಿ ಪಿಂಡಕ್ಕೆ ನೀರ್ ಬಿಡಕಾದ್ರೆ ಎಂತದೋ ಅಮೂರ್ತ ಅನುಭವ, ಸ್ವತಃ ಅಜ್ಜಂಗೇ ಊಟ ಕೊಡ್ತಾ ಇದ್ದಿ ಅನಿಸ್ತು.

    ಹೀಂಗೆಂತಕ್ಕಾಗಿಕ್ಕು?

    ReplyDelete
  3. ಅಜ್ಜ ನನ್ಗು ಎರಡ ಮೂರ ಸಲ ಕಡಬ ಹಾಕಿದಿದಾ .ಬಹುಶಃ ಅದೆ ಕಡ್ಬು ಇವತ್ತು ಎಶ್ಟೋ ಸಮಸ್ಯಯ ಬಗೆಹರ್ಸಿದ್ದನ

    ReplyDelete
  4. ಚೆಂದಕ್ಕೆ ಬರಜ್ಜೆ. "ಅವನ ಮನಸ್ಸು ಅಷ್ಟೊಂದು ಮಾಗಿತ್ತಾ? ಅಥವಾ ಆಗಲೇ ಅವನು ಬದುಕಲು ಕಲಿತಿದ್ದನಾ?" -- ಇದರ ಬಗ್ಗೆ ಹೇಳುವುದಾದರೇ, ನಿನ್ನ ಅಣ್ಣ, ಅಂದ್ರೆ, ನನ್ನ ಹೈಸ್ಕೂಲ್ ಕ್ಲಾಸ್ಸ್ಮೆಟ್ ಒಬ್ಬ ಶಾಂತಜೀವಿ! ಮೂರು ವರ್ಷ ಅವನ ಜೊತೆ ಹೈಸ್ಕೂಲಿನಲ್ಲಿ ಇರುವಾಗ, ಅವನಿಗೆ ಸಿಟ್ಟು ಬಂದಿದ್ದು, ಅಥವಾ ಯಾವುದಕ್ಕೋ ಕೋಪ ಮಾಡಿದ್ದನ್ನು ನೋಡಿಲ್ಲ. "ಸರಳ್ ಮನ್ ಕೆ ಇನ್ಸಾನ್" ಹೇಳಿ ರಫಿ ಬಗ್ಗೆ ಲತಾಜಿ ಹೇಳಿದ ಹಾಗೆ, ಶ್ರೀನಾಥನ ಬಗ್ಗೆ ಅವನ ಕ್ಲಾಸ್ಸ್ಮೆಟ್ಸ್ ಹಾಗೆ ಹೇಳ್ತ!

    ReplyDelete
  5. ವಿವೇಕಣ್ಣ ...ಮೊದಲಿಗೆ ಇಷ್ಟೆಲ್ಲ ಹಿಂದೆ ಹೋಗಿ ಓದಿದ್ದಕ್ಕೆ ಧವಾ.

    "ಸರಳ್ ಮನ್ ಕೆ ಇನ್ಸಾನ್" ಅದು ಅವನ ಹುಟ್ಟುಗುಣ. ಈಗಲೂ ಆತ ಮನದ ಆಗುಹೋಗುಗಳ ಯಾರಲ್ಲೂ ಹಂಚಿಕೊಳ್ಳಲಾರ. ಭಾವನೆಗಳ ಹೊರ ಹಾಕುವ ಯಾವುದೇ ಜಾಯಮಾನ ಇಲ್ಲ.
    ಮನಶಾ ಅಡ್ಡಿಲ್ಲೇ.. ಶಾಂತ ಜೀವಿ ನಿಜ ,,,��

    ReplyDelete