ಸರದಾರರ ಮೇಲಿನ ಜೋಕುಗಳು ಚುಟಕುಲೆಗಳು ಮತ್ಯಾವ ಜಾತಿ ಜನಾಂಗದ ಮ್ಯಾಲೂ ಇರದು. ಸಂತಾ ಬಂತಾ ನ ಹಾಸ್ಯ ಚಟಾಕಿಗಳು ಬಹಳ. ಆದರೆ ಅದೇ ಈ ಸರದಾರರ ಬಗ್ಗೆ ನಮಗೆಷ್ಟು ಗೊತ್ತು? ಅವು ಏನು? ಮೊನ್ನೆ ಮೊನ್ನೆ... ಫೇಸ್ ಬುಕ್ ನಲ್ಲಿನ ಸರದಾರನ ಮೇಲಿನ ವಂದು ಹಂಚಿಕೆ (share) ನನ್ನ ಹಳೆಯ ನೆನಪುಗಳ ಮೆಲುಕು ಹಾಕಿಸಿದ್ದಂತೂ ಹೌದು.ಈ ಐದಾರು ವರ್ಷದ ನನ್ನ ಉತ್ತರ ಭಾರತದ ವೃತ್ತಿ ಜೀವನದಲ್ಲಿ ಕಂಡು ಕೇಳಿದ ಸರದಾರರ ಸತ್ಯಗಳಿವು.
ಈ ಸರದಾರರು ಮುಖ್ಯವಾಗಿ ಸಿಖ್ ಸಮೂದಾಯಕ್ಕೆ ಸೇರಿದವರು. ಸಿಖ್ ಎಂಬ ಪಂಥ ಹಿಂದೂ ಮುಸ್ಲಿಂ ಸಮ್ಮಿಳಿತ ಜನಾಂಗ. ಬಹುಶಃ ಗುರು ನಾನಕರ ಉದ್ದೇಶವೇ ಅದಿತ್ತೋ ಏನೋ... ಹಿಂದೂ ಮುಸ್ಲಿಂರನ್ನು ಒಂದೇ ಸೂರಿನಡಿಯಲ್ಲಿ ತರುವ ಪ್ರಯತ್ನದ ಫಲವೇ ಇನ್ನೋಂದು ಸಿಖ್ ಎಂಬ ಜನಾಂಗದ ಉಗಮಕ್ಕೆ ಕಾರಣವಾಯಿತು ಎನ್ನಬಹುದು. ಈ ಸಿಖ್ ಪಂಥಿಗರು ದೇವಸ್ಥಾನಗಳಿಗೂ ಹೋಗುತ್ತಾರೆ... ಹಾಗೆಯೇ ಮಸೀದಿ ದರ್ಗಾಗಳಿಗೂ ಹೋಗುತ್ತಾರೆ. ಗುರುದ್ವಾರಗಳಲ್ಲೂ ಮಾಥಾ ಠೇಕನಾ ಮಾಡುತ್ತಾರೆ ಕೂಡ. ಇವರ ಹಾವ ಭಾವ ಮತ್ತು ಉಡುಪು ಬದುಕಿನ ಪದ್ದತಿ ನೋಡಿ. ಮುಸ್ಲಿಮರ ಮುಲ್ಲಾಗಳ ತರ ಗಡ್ಡ ಬಿಡುತ್ತಾರೆ. ಮುಸ್ಲಿಮರಲ್ಲಿ ಒಂದು ಮುಷ್ಠಿಯಾಗುವಷ್ಟು ಗಡ್ದ ಬಿಡುವುದು ಪದ್ದತಿಯಾದರೆ... ಸಿಖರಲ್ಲಿ ಗಡ್ಡಕ್ಕೆ ಮತ್ತು ತಲೆಯ ಕೂದಲಿಗೆ ಕತ್ತರಿ ಮತ್ತು ಹಣಿಗೆ ತಾಗಿಸದಿರುವುದೇ ಪದ್ದತಿ. ಕಟ್ಟಾ ಸಿಕ್ಕನೊಬ್ಬ ಕತ್ತರಿ ಮತ್ತು ಹಣಿಗೆಯನ್ನು ಕೈಯಿಂದ ಮುಟ್ಟುವುದಿಲ್ಲ*. ಹೀಗೆಯೇ ಹಿಂದೂ ಮುಸ್ಲಿಮರ ಎಷ್ಟೋ ಬಗೆಯ ರೀತಿ ರಿವಾಜುಗಳು ಇವರಲ್ಲಿವೆ. ಇವರು ತಲೆಗೆ ಪೇಟ ಸುತ್ತಿಕೊಳ್ಳುವ ಉದ್ದೇಶ ತಲೆಯ ಮೇಲಿನ ಆ ಕೂದಲಿನ ಮುಡಿಯನ್ನು ಮುಚ್ಚಿಡಲೇ ಆಗಿರಬಹುದು..
ಈ ಸರದಾರರು ತುಂಬ ಕಷ್ಟವಾನಿಗಳು. ವಿವಿಧತೆ ಮತ್ತು ಪರಿವರ್ತನೆಗೆ ಹೊಂದಿಕೊಂಡ ಜನಾಂಗ.ವಿಭಜನೆಯ ಸಂದರ್ಭದಲ್ಲೂ ತಮ್ಮತನವನ್ನು ಕಾಪಾಡಿಕೊಂಡು ಬದುಕುಳಿದ ಕಷ್ಟ ಸಹಿಷ್ಣುಗಳು. ಸಂದರ್ಭ ಬಂದರೆ
ಸರ್ದಾರ್ಜಿಯೊಬ್ಬ ಲಾರಿ ಓಡಿಸುತ್ತಾನೆ ಅಥವ ರಸ್ತೆಯ ಪಕ್ಕದಲ್ಲೇ ವಂದು ಗ್ಯಾರೇಜೋ
ಡಾಭಾನೋ ತೆರೆಯುತ್ತಾನೆ.... ಹಣ್ಣಿನಂಗಡಿ ನಡೆಸುತ್ತಾನೆ.. ಬಡಗಿಯ ಕೆಲಸ ಮಾಡಬಲ್ಲ ..
.ಆದರೆ ಭಿಕ್ಷೆ ಯೆತ್ತಲಾರ.! ವಂದು ಸಮೂದಾಯದ ಸಫಲತೆಯ ಹಿಂದಿರುವ ಗುಟ್ಟೇ ಅದು .. ಅವರಲ್ಲಿರುವ ಯಾವುದೇ ಕೆಲಸವನ್ನು ತನ್ಮಯತೆಯಿಂದ, ಪ್ರೀತಿಯಿಂದ, ಗೌರವದಿಂದ ಮಾಡುವ ಮನೋಭಾವ. ಯಾವ ಕೆಲಸವೂ ಕೀಳಲ್ಲ ಎಂಬ ಮನೋಭಾವ.
ಹುಂ ಮತ್ತೊಂದು ಮಾತು.... ಯಾವಾಗಲಾದರೂ ನೀವು ಸಿಗರೇಟ್ ಸೇದುತ್ತಿರುವ ಅಥವಾ ತಂಬಾಕು ತಿನ್ನುತ್ತಿರುವ ಅಥವಾ ಯಾವುದೇ ಚಟ ಹೊಂದಿರುವ ಸರದಾರನ ಕಂಡಿದ್ದೀರಾ?? ಇವರಿಗಿರುವ ವಂದೇ ವಂದು ಚಟ ಅಂದರೆ ಊಟ. ಸರದಾರನೊಬ್ಬ ಕುಂತ ಬೈಟಕ್ ನಲ್ಲಿ ೧೫ ರಿಂದ ೨೦ ರೊಟ್ಟಿ ಇಳಿಸಬಲ್ಲ. ಇದೇ ಕಾರಣಕ್ಕೆ ಹೇಳುವುದು. ... ಭಾರತದಲ್ಲಿ ಪಂಜಾಬಿನ ಗಂಡು... ಕೇರಳದ ಹೆಣ್ಣು ಗಟ್ಟಿ. ನಿಜವಾಗಲೂ ಸತ್ಯದ ಮಾತು ಅದು. ದೇಹದಾರ್ಢ್ಯತೆಗೆ ಹೆಸರೇ ಸರದಾರ. (ಕೇರಳದ ಹೆಮ್ಮಕ್ಕಳೂ ಕೂಡ ಮೈ ಮಾಟದಲ್ಲಿ ಅವರ ಮೀರಿಸುವರ್ಯಾರು?? ಬಣ್ಣ ಬಿಡಿ)
ಸರದಾರರ ಬಗೆಗಿನ ಬೆಚ್ಚಿಬೀಳಿಸುವ ವಿವರಗಳ ನೋಡಿ: ನಮ್ಮದೇಶಕ್ಕೆ ಸರ್ದಾರ್ಜಿಗಳ ಒಟ್ಟೂ ಕೊಡುಗೆ -
* 33% ಆದಾಯ ಕರ ಕೊಡುವ ಏಕೈಕ ಸಮೂದಾಯ.
* 67% ದಾನ (charity)
* 45% ಭಾರತೀಯ ಸೇನೆಯಲ್ಲಿ ಸರದಾರರು
* 59,000++ ಗುರುದ್ವಾರಗಳು ಪ್ರತಿದಿನ ಒಟ್ಟೂ 5,900,000+ ಜನರಿಗೆ ’ಲಂಗರ್’ **(ಅನ್ನದಾನ) ಎಂಬ ಹೆಸರಿನಲ್ಲಿ ಊಟ ಬಡಿಸುತ್ತದೆ.
ಇವೆಲ್ಲ ವಿಶೇಷತೆಯುಳ್ಳ ವಂದು ಸಮೂದಾಯದ ಒಟ್ಟೂ ಜನಸಂಖ್ಯೆ ಭಾರತದ ಜನಸಂಖ್ಯೆಯ ಕೇವಲ 1.4%
ಆಶ್ಚರ್ಯವಲ್ಲವೇ ??
ಇವೆಲ್ಲ ಸರಿ ಸರದಾರರ ಬಗ್ಗೆ ಇಷ್ಟೊಂದು ಮಾಹಿತಿ ಸಿಕ್ಕಿದ್ದೇನೋ ಸರಿ ಒಂದು ವಿಷಯ ಇನ್ನೂ ನಿಗೂಢವಾಗಿಯೇ ಇದೆ..
"ಸರದಾರಕೋ ಬಾರಾ ಕ್ಯೋಂ ಬಜತಾ ಹೈ?" ***
ಈ ಸಿಖ್ ಸರದಾರರ ವಿಷಯದಲ್ಲಿ ನಾ ಕಂಡು ಅನುಭವಿಸಿದ ಕೆಲ ಅಪರೂಪದ ಕುತೂಹಲಕಾರೀ ಅನುಭವಗಳನ್ನು ಹಂಚಿಕೊಳ್ಳಲೇಬೇಕು.
ಒಮ್ಮೆ ಪಂಜಾಬಿನ ಅಮೃತಸರಕ್ಕೆ (ಸುಂದರ ನಗರವೆನ್ನಲಾಗದಿದ್ದರೂ ಸ್ವರ್ಣ ಮಂದಿರ ಹಾಗೂ ಪಕ್ಕದ ಜಲಿಯನ್ ವಾಲಾ ಬಾಗ್ ನೋಡತಕ್ಕ ಸ್ಥಳಗಳು) ಕಂಪನಿಯ ಕಾರ್ಯ ನಿಮಿತ್ತ ಹೋಗಿದ್ದೆ. ಡಿಸೆಂಬರ್ ತಿಂಗಳ ಒಂದು ಬೆಳ್ಳಂಬೆಳಿಗ್ಗೆ ಸುಮಾರು ೫ ಗಂಟೆಗೆ ರೈಲಿನಿಂದ ಇಳಿದೆ. ಇಳಿಯುವಲ್ಲಿಯವರೆಗೆ ರೈಲಿನ ಎಸಿಯ ಕಾರಣದಿಂದಾಗಿ ಚಳಿಯ ಅನುಭವವಾಗೇ ಇರಲಿಲ್ಲ. ಹೇಳೀ ಕೇಳಿ ಕರಾವಳಿಯಲ್ಲಿ ಹುಟ್ಟಿ ಬೆಳೆದ ನನಗೆ ಚಳಿ ಅಂದರೆ ಬೆಂಗಳೂರಿನ ಚಳಿ ಗೊತ್ತು. ಅದನ್ನು ತಡೆಯಲೋಸುಗ ಒಂದು ಜಾಕೆಟ್ ಅಷ್ಟೇ ನನ್ನಲ್ಲಿರುವುದು....ಸಾಕೆಂದುಕೊಂಡಿದ್ದೆ. ಆದರೆ ಇಳಿದ ತಕ್ಷಣ ಅಲ್ಲಿನ ಚಳಿಗೆ (ಆ ದಿನ ೨ ಡಿಗ್ರಿ ಉಷ್ಣತೆಯಿತ್ತೆಂದು ಆಮೇಲೆ ತಿಳಿದಿದ್ದು) ನಡುಗತೊಡಗಿದೆ. ಜಾಕೆಟ್-ನ ಜಿಪ್ ಅನ್ನು ಹಾಕಿಕೊಂಡರೂ ಚಳಿ ತಡೆಯಲಾಗುತ್ತಿಲ್ಲ. ಚಹಾ ಕುಡಿದರೆ ಸರಿಯಾಗಬಹುದೆಂದುಕೊಂಡು ಅಕ್ಕ ಪಕ್ಕ ಹುಡುಕತೊಡಗಿದಾಗ ತಿಳಿಯಿತು. ಎಲ್ಲರೂ ಬರೇ ಜಾಕೆಟ್ ನಲ್ಲಿರುವ ನನ್ನನ್ನು ವಿಚಿತ್ರವಾಗಿ ನೋಡಹತ್ತಿದ್ದರು. ಚಹಾ ಸಿಗಲಿಲ್ಲ. ರೈಲ್ವೇ ಸ್ಟೇಷನ್ನಿನಿಂದ ಹೊರಗಡೆ ಬಂದೆ... ಅಲ್ಲಿ ಇನ್ನೂ ಚಳಿ ಜಾಸ್ತಿಯಾಯಿತು. ಅಲ್ಲೇ ಪಕ್ಕದಲ್ಲಿ ವಂದು ಟೀ ಅಂಗಡಿ ಜೊತೆಯಲ್ಲೇ ಬೆಂಕಿಯ ಮುಂದೆ ಕುಳಿತು ಚಳಿ ಕಾಸುತ್ತಿದ್ದ ಕೆಲ ಕೂಲಿಯವರೂ ಕಂಡರು. ಖುಷಿಯಾದೆ ...ದಾಪುಗಾಲಿಟ್ಟೆ.... ’ಚಾಯ್ ದೇನಾ’ ಎನ್ನುತ್ತ ಬೆಂಕಿಯ ಮುಂದೆ ನಾನೂ ಕುಕ್ಕರಿಸುತ್ತಿದ್ದಂತೇ ಮುದುಕ ಸರದಾರನೊಬ್ಬ ಪಂಜಾಬಿಯಲ್ಲಿ ಕೇಳಿದ. ’ಆಂ’ ಎಂದೆ ಅರ್ಥವಾಗದೇ.
’ಕಹಾಂ ಸೇ ಆಯೇ ಹೋ?’ ಎಂದ ’ಮುಂಬಯ್ ಸೇ’ ಎಂದೆ ಅರ್ಥವಾದ ಪ್ರಶ್ನೆಗೆ ಉತ್ತರಿಸುತ್ತ.
’ಬೇಟಾ ಯೇ ಬಂಬಯ್ ನಹೀ ಹೈ.... ಪಂಜಾಬ್ ಹೈ ಪಂಜಾಬ್.. ಯಹಾ ಟಂಡ್ ಪಡತಾ ನಹೀ ಲಗತಾ ಭೀ ಹೈ. ನ ಶಾಲ್ ನ ಟೋಪಿ.. ನಂಗಾ ಆಯೇ ಹೋ’ ಎಂದು ಮರ್ಯಾದೆ ತೆಗೆದ ಎಂದುಕೊಂಡೆ. ಹಾಗೆಂದವನೇ ತನ್ನ ಪಕ್ಕದಲ್ಲಿದ್ದ ಹಳೆಯ ಹರುಕು ಚಾದರ ನನ್ನೆಡೆಗೆ ಎಸೆದು ಹೊದ್ದುಕೋ ಎಂದ. ಜಡ್ಡು ತುಪ್ಪದ ವಾಸನೆಯಾದರೂ ಅದನ್ನೇ ಸುತ್ತಿಕೊಂಡೆ ನಾಚುತ್ತ.
ಸರದಾರರ ಬಗೆಗೆ ಗೌರವ ಬಂದಿದ್ದೇ ಆವಾಗ. ಸಾಮಾನ್ಯವಾಗಿ ಸರದಾರರು ಸಹೃದಯರು.... ಪರೋಪಕಾರಿಗಳು. ಅವರೇ ಹೇಳುವಂತೇ ’ಸರ್ದಾರ್ ಹೂಂ ಸರ್ದಾರ್... ಬಡೇ ದಿಲ್-ವಾಲಾ ಹೂಂ’. ಅದು ಸತ್ಯ ಅನ್ನಿಸಿಹೋಗಿತ್ತು ಅಂದು.
* ಕಟ್ಟಾ ಸಿಖನೊಬ್ಬ ಹಣಿಗೆ ಮತ್ತು ಕತ್ತರಿ ಮುಟ್ಟುವುದಿಲ್ಲ.
ಹೌದು ಕಟ್ಟಾ ಸಿಖ್ಖನೊಬ್ಬ ಹಣಿಗೆ ಮತ್ತು ಕತ್ತರಿಯನ್ನು ಜೀವಮಾನದಲ್ಲೇ ತಮ್ಮ ದೇಹದ ಯಾವುದೇ ಭಾಗದ ಕೂದಲಿಗೆ ತಾಕಿಸುವುದಿಲ್ಲ. ತಲೆ ಕೂದಲಂತೂ ಬಿಡಿ ಮುಡಿ ಕಟ್ಟಿ ಮುಂಡಾಸು (ಪಗಡಿ ಅನ್ನುತ್ತಾರೆ ಅವರದನ್ನು) ಸುತ್ತುತ್ತಾರೆ. ಗಡ್ಡವನ್ನೂ ಕೂಡ ಟ್ರಿಮ್ ಮಾಡುವುದಿಲ್ಲ. ಗಡ್ಡಕ್ಕೆ ಸಲ್ಪ ವ್ಯಾಸಲೀನ್ ಹಚ್ಚಿ ಸರಿಯಾಗಿ ಕೂರುವಂತೇ ನೀವುತ್ತಾರದನ್ನು. ಕುತೂಹಲಕಾರಿ ಘಟನೆಯಿದೆ ಇಲ್ಲಿ.
ಅದೇ ದಿನ ಬೆಳಿಗ್ಗೆ ಅಂತೂ ಇಂತೂ ನಡುಗುತ್ತ ಚಳಿಯಲ್ಲಿ ಸೈಕಲ್ ರಿಕ್ಷಾದಲ್ಲಿ ಕೂತುಕೊಂಡು ಮೊದಲೇ ಕಾದಿಟ್ಟಿದ್ದ ಹೊಟೇಲ್ ರೂಂ ತಲುಪಿದೆ. ನಾಲ್ಕಿಂಚು ದಪ್ಪಗಿನ ರಜಾಯಿ ಹೊದ್ದು ಸುಮಾರು ೮ ಗಂಟೆಯವರೆಗೂ ಮಲಗಿದ್ದ ನನಗೆ ಅಲ್ಲಿನ ವಿತರಕ (Distributer) ಫೋನಾಯಿಸಿದಾಗಲೇ ಎಚ್ಚರಾದದ್ದು. ಮೊದಲು ದೂರವಾಣಿಯಲ್ಲಿ ಮಾತಾಡಿ ಪರಿಚಯವಷ್ಟೇ ಬಿಟ್ಟರೆ ಮುಖಪರಿಚಯ ಇರಲಿಲ್ಲ ನನಗೆ. ಸರಿ ರೂಮಿಗೆ ಬಂದು ಕರಕೊಂಡು ಹೋಗುವೆನೆಂದ.... ನಾ ಎದ್ದು ಸ್ನಾನ ಮುಗಿಸಿ ಬಚ್ಚಲಿನಿಂದ ಹೊರಬರುತ್ತಿದ್ದೆ... ಆಗಲೇ ತಲುಪಿಬಿಟ್ಟಿದ್ದ ಸರದಾರ. ನಾನು ಬಟ್ಟೆ ತೊಟ್ಟು ತಯಾರಾದೆ... ಕೂದಲು ಬಾಚಲು ಹಣಿಗೆಗಾಗಿ ತಡಕಾಡಿದೆ... ಇರಲಿಲ್ಲ. ಗೆಳೆಯರೊಟ್ಟಿಗಿನ ಸಲುಗೆಯಿಂದ ಅದೇ ಸರದಾರನಲ್ಲಿ ’ಹಣಿಗೆ ಇದೆಯಾ?’ ಎಂದೆ ಒಮ್ಮೆ. ’ಆಂ?’ ಎಂದ ಮರುಪ್ರಶ್ನೆಯಂತೇ. ಮತ್ತೊಮ್ಮೆ ಕೇಳಿದೆ ’ಕಂಗೀ ಹೈ ತೋ ದೇನಾ ಜರಾ’.
ಅದೇ ನಾ ಮಾಡಿದ ಪ್ರಮಾದ. ’ಭಾಯ್ ಸಾಬ್ ಬಾಡ್ ಮೇ ಜಾವ್... ಕರ್ಪಾನ್ ಹೈ ದೂಂ?’ ಎಂದ ಅಚಾನಕ್ಕಾಗಿ. ನನಗೋ ಆಶ್ಚರ್ಯ. (ಕರ್ಪಾನ್ ಎಂದರೆ ಚಾಕುವಿನ ಹೋಲಿಕೆಯಿರುವ ವಂದು ಚಿಕ್ಕ ಕತ್ತಿ... ಅದನ್ನು ಸಿಖ್ ಪಂಥೀಯರು ವಂದು ದಾರಕ್ಕೆ ಕಟ್ಟಿ ಬ್ರಾಹ್ಮಣರ ಜನಿವಾರ ಧರಿಸುವ ರೀತಿಯ ಉಲ್ಟಾ ನೇತುಕೊಂಡಿರುತ್ತಾರೆ) ಇದೇಕೆ ಇವನು ಹೀಗೆಂದ? ಆದರೂ ಸಮಝಾಯಿಶಿ ಕೊಡುವ ಪ್ರಯತ್ನ ಮಾಡಿದೆ. ’ಸರ್ ಜೀ ಕಂಗೀ ಲಾನಾ ಭೂಲ್ ಗಯಾ.... ಇಸ್ ಲಿಯೇ ಮಾಂಗ್ ರಹಾ ಥಾ ಸಾರಿ’ ಎಂದೆ. ಆಗ ಬಹುಶಃ ಅರ್ಥವಾಗಿರಬೇಕು ಅವನಿಗೆ ಇವನು ಅಮಾಯಕನೆಂದು.
ಹೇಳಿದ... "ನೋಡು ಗೆಳೆಯ ನಾನೊಬ್ಬ ಸರದಾರ.. ಪಕ್ಕಾ ಸರದಾರನೊಬ್ಬ ಹಣಿಗೆ ಮತ್ತು ಕತ್ತರಿ ಉಪಯೋಗಿಸುವುದಿಲ್ಲ... ಮತ್ತು ನಮ್ಮ ಧರ್ಮದ ಪ್ರಕಾರ ಆ ಎರಡೂ ವಸ್ತುಗಳನ್ನು ಇಟ್ಟುಕೊಳ್ಳಲೂಬಾರದು. ಅಷ್ಟೇ ಅಲ್ಲ ... ಯಾರಾದರೂ ನಮ್ಮಲ್ಲಿ ಆ ವಸ್ತುವನ್ನು ಕೇಳಿದರೂ ಊಡ ನಮಗೆ ಸಿಟ್ಟು ಬರುತ್ತದೆ.. ಮತ್ತು ಕರ್ಪಾನ್ ತೆಗೆಯಲೂ ನಾವು ಹಿಂಜರಿಯುವುದಿಲ್ಲ"
ಅಬ್ಬಾ ಬಚಾವಾದೆ ... ಆಗ ನನ್ನ ಬೊಡ್ಡು ತಲೆಗೆ ವಿಷಯ ಹೊಳೆಯಿತು. ಇವನ ಸಿಟ್ಟಿಗೆ ಕಾರಣ ಇದು. ಒಂದೊಮ್ಮೆ ಅವರಲ್ಲಿರದ... ಅವರಿಟ್ಟುಕೊಳ್ಳದ ಆ ಹಣಿಗೆ ಕತ್ತರಿಯನ್ನು ಕೇಳಿದರೆ ಅವರಿಗೆ ತಮ್ಮನ್ನು ಕೀಟಲೆ ಮಾಡುತ್ತಾರೆಂದೇ ಅನ್ನಿಸುತ್ತದೆ... ಅಷ್ಟೊಂದು ಮುಂಗೋಪಿಗಳೂ ಕೂಡ ಆಗಿರುತ್ತಾರೆ
ಕ್ಷಮೆ ಯಾಚಿಸಿದೆ ಅವನಲ್ಲಿ.. ... ’ನನಗೆ ನಿಮ್ಮ ಮತದ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ ಗುರುವೇ... ನೀನೊಬ್ಬನೇ ನನಗೆ ಸರದಾರ ಪರಿಚಯವಿರುವುದು. ಈಗ ತಿಳಿಯಿತು ಕ್ಷಮಿಸು” ಎಂದು ವಿನಂತಿ ಮಾಡಿದೆ. ’ಕೋಯೀ ನಹೀ ಮೆರೇ ಭಾಯಿ’ ಎಂದು ದೊಡ್ಡ ಹೃದಯದವನಾದ .. ಬಂದು ಜಾದೂ ಕೀ ಝಪ್ಪೀ ಕೊಟ್ಟ ಪುಟ್ಟ ನಾಯಿಮರಿಯೊಂದನ್ನು ಅಪ್ಪಿದಂತೇ. !!
(ಮುಂದಿದೆ)
** ಲಂಗರ್
*** ಸರದಾರಕೋ ಬಾರಾ ಕ್ಯೋಂ ಬಜತಾ ಹೈ?
Super shyamanna :) keliddi idra :)
ReplyDeleteಚೆನ್ನಾಗಿ ಬರದ್ದೆ :) ಮುಂದಿನ ಭಾಗ ಎಲ್ಲಿ?
ReplyDeleteಬರಿಯವ ... ಪುರಸೊತ್ತಾಜಿಲ್ಲೆ.
Delete