Jan 19, 2020

ಹನುಮನ ಶನಿ

ಇಂದು ಬೆಳಿಗ್ಗೆ ನನ್ನ ಬೆಂಗಳೂರಿನ ಹೆಡ್ಡಾಪೀಸಿನ ಕೆಲಸ ಮುಗಿಸಿ ಹೈದರಾಬಾದಿನ ಅಣ್ಣನ ಮನೆಯಲ್ಲಿರುವ ಅಮ್ಮನ ಕಾಲನ್ನು ಮುಟ್ಟಿದ ಕೈಯ ಕಿವಿಗೆ ತಾಗಿಸಿಕೊಂಡು ಬರೋಣವೆಂದು ಹೋದೆ.

ಬಹುದಿನಗಳ ನಂತರ ಸೇರಿದ್ದೆವು. ಮಾತಿನ ಮಧ್ಯ ತಮಾಷೆಯಾಗಿ ಅಣ್ಣ ಹೇಳಿದ ... ಶನಿಯ ಇನ್ನೊಂದು ಸಣ್ಣ ಕಥೆಯ.

ಒಮ್ಮೆ ಶನಿ ಹನುಮನಿಗೆ ಕಾಡಲು ಹೊರಟ. ಜೀವಮಾನದಲ್ಲೊಮ್ಮೆ ಯಾದರೂ ಕಾಡಲೇಬೇಕಲ್ಲ ಶನಿ! ....ಹಾಗಾಗಿ. 

ಹನುಮ ಬೀಜಿ ಇದ್ದ. ಲಂಕೆಗೆ ಸೇತುವೆ ಕಟ್ಟುವ ಸಮಯವದು. ಕೆಲಸ ಭರದಿಂದ ಸಾಗಿತ್ತು. ಅಷ್ಟರಲ್ಲಿ ಶನಿ ಹನುಮನ ಎದುರು ಪ್ರತ್ಯಕ್ಷನಾದ. ಕೇಳಿದ.
'ಹನುಮಾ... ಜೀವಮಾನದಲ್ಲೊಮ್ಮೆಯಾದರೂ ಪ್ರತೀ ವ್ಯಕ್ತಿಯನ್ನು ಕಾಡುವುದು ನನ್ನ ಧರ್ಮ ಮತ್ತು ನಿಮ್ಮ ಖರ್ಮ. ಹಾಗಾಗಿ ನಿನ್ನನ್ನು ಈಗ ಕಾಡಲು ಬಂದಿದ್ದೇನೆ. ಹಾಗಾಗಿ ಹೇಳು ಎಲ್ಲಿಂದ ಪ್ರಾರ0ಭಿಸಲಿ?'

ಮೊದಲೇ ಹನುಮ ಕೆಲಸದ ತಲೆಬಿಸಿಯಲ್ಲಿದ್ದ... ಹಾಗಾಗಿ ಹೇಳಿದ.... 'ಥೋ ಮಾರಾಯಾ ... ನಿನಗೂ ಹೊತ್ತೂ ಗೊತ್ತೂ ವಂದೂ ಇಲ್ಲ... ಬಾ ನೀನೂ ನನ್ನ ತಲೆ ಮೇಲೆಯೇ ಕೂತಗೋ.'

ತಗಳಿ... ಶನಿಗೆ ಅಷ್ಟೇ ಸಾಕಿತ್ತು ಹನುಮನ ತಲೆಯೇರಿಯೇಬಿಟ್ಟ. ಹನುಮನಾದರೋ... ರಾಮ ಭಕ್ತ... ಒಡೆಯ ಹೇಳಿದ ಕೆಲಸ ಪೂರೈಸದೇ ಇನ್ಯಾವ ಕಡೆಯೂ ಗಮನವಿಲ್ಲ ಆತನಿಗೆ. ಸೇತುವೆಗಾಗಿ ಸಮುದ್ರ ದಡದಿಂದ ದೊಡ್ಡ ದೊಡ್ಡ ಕಲ್ಲನ್ನು ಹೊತ್ತು ತಂದು ಸೇತುವೆಗೆ ಹಾಕುವ ಕೆಲಸ... ಅವನಷ್ಟಕ್ಕೆ ಅವ ಮಾಡುತ್ತಿದ್ದ.
ದೊಡ್ಡ ಕಲ್ಲೊಂದನ್ನು ತಲೆಯ ಮೇಲಿಟ್ಟು ಹಾರಿ ಬರುವುದು ... ಸೇತುವೆಗೆ ಹಾಕುವುದು..ಮತ್ತೆ ಇನ್ನೊಂದು.. ಮತ್ತೊಂದು ಮಗದೊಂದು... ಹೀಗೆ... ನಡೆಯುತ್ತ ಇತ್ತು...

10-15 ಕಲ್ಲುಗಳಾಗುವಷ್ಟರಲ್ಲಿ ಅದೇ ಕುಂತಿದ್ದನಲ್ಲ, ತಲೆಯ ಮೇಲೆ ಶನಿ... ಕಲ್ಲಿನ ಭಾರ ಮತ್ತು ಪೆಟ್ಟಿನ ನೋವನ್ನು ತಾಳಲಾರದಾದ... ಇನ್ನೂ ಕಪ್ಪಗಾದ... 'ಯೇ ಮಾರಾಯಾ ಸಾಕೋ ನಿನ್ ಸಾವಾಸ... ನಿನ್ನ ಕಾಡಲು ಬಂದರೆ ನನ್ನನ್ನೇ ಕಾಡಿಬಿಟ್ಟೆ ಮಾರಾಯಾ... ಸಾಕು ಸಾಕು' ಎನ್ನುತ್ತ ತಡ ಮಾಡದೇ ಕೂಡಲೇ ಇಳಿದು ಹೊರಟುಹೋದ.

ಹೀಗೇ ಶನಿ ಬಹು ಬಾರಿ ಹನುಮಂತನನ್ನು ಕಾಡಲು ಪ್ರಯತ್ನ ಪಟ್ಟು, ವಿಫಲನಾಗಿ ಮರಳಿದ ಕಾರಣದಿಂದಾಗಿ ಇಂದು ಶನಿವಾರದಂದು ... ನಾವು (ಹುಲು ಮಾನವರು) ಪೂಜಿಸುತ್ತೇವೆ.

ಇದೊಂದು ಕಾಲ್ಪನಿಕ ಕಥೆಯಾಗಿರಲೂ ಬಹುದು. ಕಥೆಗೆ ಪ್ರೇರಣೆ ಅಣ್ಣ. ಆದರೆ ವಿವೇಚಿಸಿದರೆ ಕಥೆಗೊಂದು ನ್ಯಾಯಯುತ ನೀತಿ ಒದಗಿಸಬಹುದು ನಾವು. ನೋಡಿ... ನಮ್ಮ ಜೀವನದಲ್ಲಿ ಶನಿ ಯಾವಾಗಲೆಲ್ಲ ಕಾಡಿದ್ದಾನೆ? ನಮ್ಮ ಕಷ್ಟ ಕಾಲದಲ್ಲೆಲ್ಲ ಶನಿ ಯ ನೆನೆಸಿಕೊಂಡಿದ್ದೇವೆ ನಾವು ಅಲ್ಲವಾ?! ಅಂದರೆ ನಾವು ಬೀಜಿಯಾಗಿರುವಾಗ... ನಾವು ನಮ್ಮ ಕೆಲಸಗಳಲ್ಲಿ ನಿರತರಾಗಿರುವಾಗ... ಆ ಕೆಲಸದಲ್ಲಿ ತೃಪ್ತಿ ಕಂಡಿರುವಾಗ... ಆ ಕೆಲಸದಲ್ಲಿ ಮಗ್ನರಾಗಿ ಸಫಲರಾದಾಗ ಇದೇ ಶನಿ ನಮ್ಮನ್ನ 'ಕಾಡಿಲ್ಲ'. ಆವಾಗ ನಾವು 'ಓ ಶನಿ ಮಹಾರಾಜಾ... ನನ್ನ ಸಫಲ ಕಾರ್ಯಗಳಲ್ಲಿ ನೀನು ಹಸ್ತಕ್ಷೇಪ ಮಾಡದೇ ಇರುವುದರಿಂದ ನನ್ನ ಕಾರ್ಯ ಸಫಲವಾಗಿದೆ... ಇದೋ ನಿನ್ನ ಚರಣಗಳಿಗೆ ವಂದಿಸಿರುವೆ' ಎಂದು ನಾವು ಎಂದಾದರೂ ನೆನೆಗುಣದಲ್ಲಿ ಕಾಣಿಕೆ ಹಾಕಿ ಬಂದಿದ್ದೇವಾ?! ಇಲ್ಲ ಅಲ್ಲವಾ?!

ಬಹುಶಃ ನಮ್ಮ ಅಸಫಲ ಕಾರ್ಯಗಳಲ್ಲಿ... ನಮಗೆ ಕೆಲಸ ಇಲ್ಲದಿರುವಾಗ... ಮಾತ್ರ ನಮಗೆ ಶನಿ 'ಕಾಡಿದ್ದಾನೆ'. ಆಗ ನಾವು ಶನಿ ಮಂದಿರಕ್ಕೋ, ಹನುಮನ ಗುಡಿಗೋ ಹೋಗಿದ್ದೇವೆ... ಕಾಣಿಕೆ ಹಾಕಿದ್ದೇವೆ.. ಶನಿ ಜಪವೋ... ಹೋಮ ಹವನವೋ... ಶಾಂತಿಯನ್ನೋ ಮಾಡಿದ್ದೇವೆ...

ಯೋಚಿಸಿ.........

ಅಂದರೆ, ಅಣ್ಣ ಹೇಳಿದ ಈ ಮೇಲಿನ ಕಥೆಯ ಮೂಲ ಉದ್ದೇಶ ವ ಸಂದರ್ಭ ಏನೇ ಇರಲಿ ... ಕಥೆಯ ಹುರುಳು ಅದೇ...
ನಾವು ಯಾವತ್ತೂ ಕಾರ್ಯ ತತ್ಪರರಾಗಿರಬೇಕು... ಕಾಯಕವೇ ಕೈಲಾಸ ... ಕರ್ಮವ ಮಾಡು ಫಲ ತನ್ನಿಂತಾನೇ ಸಿಗುತ್ತದೆ. ಮಾಡುವ ಕಾರ್ಯದಲ್ಲಿ ಗಮನವಿದ್ದರೆ ಮತ್ತೆಲ್ಲೂ ಗಮನ ಹೋಗದು.

ಯೋಚಿಸಿ

ನಮಸ್ಕಾರ
19/01/2020, 8:47 PM (ವಿಮಾನದಲ್ಲಿ ಹಾರುತ್ತ)

Jan 2, 2020

ಹುಲಿ ನುಂಗಿತು

ನಮಗೆ ಈ ತರದ ಕನಸುಗಳೇಕೆ ಬೀಳುತ್ತವೆ? ಕೆಲವೊಮ್ಮೆ ನಾವು ಯೋಚಿಸಿಯೂ ಇರದ, ನಮ್ಮ ಕಲ್ಪನೆಗೂ ನಿಲುಕದ ಕೆಲವು ಕನಸುಗಳು ಧೃತಿಗೆಡಿಸುತ್ತವೆ ಯಾಕೆ?!

ಕನಸುಗಳು ನಮ್ಮ ಮನದ ವಿಕಾರಗಳಾ?! ಅಲ್ಲ. 
ನಿನ್ನೆ ರಾತ್ರಿ ಪ್ರವೀಣಣ್ಣ ಬರುವ ಮೇ ನಲ್ಲಿ ಸಂಸಾರದೊಟ್ಟಿಗೆ ಲೇಹ್ ಲದ್ದಾಕ್ ಗೆ ಹೋಗೋಣವೆಂದು ಪ್ರಸ್ತಾಪ ಮಾಡಿದ್ದ. ಅಷ್ಟೇ ನಾನು ಈ ಕನಸಿಗೆ ಕನೆಕ್ಟ್ ಮಾಡಬಹುದಾದ ಬಿಂದು ಎಂದರೆ.

ಬೆಳಿಗ್ಗೆ 6:30 ರ ಸಮಯ. ಯಾಕೋ ಎಚ್ಚರವಾಯ್ತು.ಚಳಿಗಾಲವಾದ್ದರಿಂದ ಬೆಳಕು ಹರಿದಿರಲಿಲ್ಲ. ನೀರು ಕುಡಿದು ಮಲಗಿದೆ. ಸಲ್ಪ ಹೊತ್ತು ಮನದ ರಾಜಕುಮಾರಿಯ ನೆನೆಯುತ್ತ. ಆಮೇಲೆ ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ.

ನಾವು ಮೂವರು ಅಂದರೆ ನಾನು ನನ್ನ ಮನದನ್ನೇ ವಿದ್ಯಾ ಮತ್ತು ನಾನು ಇಲ್ಲೇ ಹತ್ತಿರದ ಯಾವುದೋ ಅಡವೆಂಚರ್ ಲ್ಯಾ0ಡಿಗೆ ವಾರಾಂತ್ಯಕ್ಕೆ ಮನೋರಂಜನೆಗೋಸ್ಕರ ಹೋಗ್ತೀವಿ. ಅಲ್ಲಿ ನಮ್ಮನ್ನು ಹುಲಿಗಳು ಸಿಂಹಗಳಿರುವ ಕಾಡೊಂದರಲ್ಲಿ ಬಿಡುತ್ತಾರೆ. ಈ ವಿದ್ಯಾ ಮತ್ತೆ ನಿಮಿಷರಿಗೆ ಆ ಹುಲಿ ಸಿಂಹಗಳ ನಡುವೆ ಹೋಗುವಾಸೆ. ಕಾಡಿನ ನಡುವೆ ರಸ್ತೆಯಲ್ಲಿ ನಡಕೊಂಡು ಹೋಗುತ್ತಾ ಇರುವಾಗ ಮುಂದಿನಿಂದ ಬಂದ ಸಿಂಹವೊಂದು ನಮಗಿಂತಲೂ ಮುಂದೆ ಹೋಗುತ್ತಿರುವ ಮಗುವೊಂದನ್ನು ನಾವು ನೋಡುತ್ತಿದ್ದಂತೆ ತಿಂದು ಬಿಡುತ್ತದೆ. ಸಿನೆಮಾ ನೋಡಿದ ತರಹದ ರೋಮಾಂಚನ ನಮಗೆಲ್ಲ. ಆದರೂ ಭಯ ಲವಲೇಶವಿಲ್ಲ. ಅದನ್ನು ನೋಡಿದ ನಾನು ಎಚ್ಚರಿಕೆ ಹೇಳುತ್ತೇನೆ ಇಬ್ಬರಿಗೂ... ಆದರೂ ಇಬ್ಬರೂ ಕಿವಿಗೆ ಹಾಕಿಕೊಂಡಂತಿಲ್ಲ. ಮುಂದೆ ಕೆಲವೇ ಕ್ಷಣಗಳಲ್ಲಿ ವಿದ್ಯಾ "ನಾನೂ ಹೋಗ್ತೇ" ಎನ್ನುತ್ತಾ ಮೇಲೆ ಬೆಟ್ಟ ಏರಿ ಹೋದಳು. ಅದನ್ನು ನೋಡಿದ ನಿಮಿಷಾ  ಕೂಡ "ನಾನೂ ಹೋಗವು" ಎನ್ನುತ್ತಾಳೆ. ನಾನು ಬೇಡ ಎನ್ನುತ್ತೇನೆ. "ಅಮ್ಮ ಬರಲಿ ತಡೆ" ಎನ್ನುತ್ತಾ "ಇದನ್ನೂ ಕರ್ಕಂಡ್ ಹೋಗೆ"  ಎಂದೂ ಸೇರಿಸುತ್ತೇನೆ. ಅಷ್ಟರಲ್ಲೇ ಹಿಡಿದ ಕೈ ತಪ್ಪಿಸಿಕೊಂಡ ಕೂಸು ಕೂಡ ಬೆಟ್ಟ ಹತ್ತಿ ಹೋಗಿದ್ದಷ್ಟೇ ಕಾಣುತ್ತದೆ ನನಗೆ. ಆಮೇಲೆ ಇಬ್ಬರೂ ಎಲ್ಲಿ ಮಾಯವಾದರೊ ಕಾಣಲಿಲ್ಲ. ಹೋಗಲಿ ಅಪ್ಪನಾದ ನಾನು ಆ ಚಿಕ್ಕ ಮಗುವಿನ ಸಹಾಯವಾಗಿ ಅವಳ  ಹಿಂದೆ ಹೋಗಬೇಕಿತ್ತು ... ಯಾಕೋ ಗೊತ್ತಿಲ್ಲ. ಹೋಗಲಿಲ್ಲ... 'ಬರ್ತಾರೆ ಬಿಡು ಎಂಬ ಭಾವ, ಆ ವಿಶ್ವಾಸ ಅವರ ಮೇಲೆ. 

ನಂತರ ನಾನು ಅದೇ ಏರು ರಸ್ತೆಯ ಸಾಗಿ ಮುಂದೆ ಮೇಲಿನ ಮೈದಾನ ಪ್ರದೇಶ ಸೇರಿದರೆ ನೂರಾರು ಸಿಂಹಗಳು. 'ಅಯ್ಯೋ ಈ ಹುಡುಗಿಯರು ಇಲ್ಲಿ ಇಷ್ಟೊಂದು ಹುಲಿ ಸಿಂಹಗಳಿರುವಾಗ ಅಲ್ಲಿರುವ ಒಂದೇ ಒಂದು ಸಿಂಹಕ್ಕೋಸ್ಕರ ಬೆಟ್ಟ ಹತ್ತಿದರಲ್ಲ... ಇಲ್ಲಿ ನೋಡು ಎಷ್ಟೊಂದು ಒಂದೇ ಕಡೆ ಇದೆ' ಎಂದುಕೊಳ್ಳುತ್ತೇನೆ. ಸಲ್ಪ ಹೊತ್ತು ಅಲ್ಲಿ ಸಮಯ ಕಳೆದ ನಂತರ ಅಲ್ಲಿ ಕಳವಳದ ವಾತಾವರಣ ಶುರು ಆಗುತ್ತದೆ... ಎಲ್ಲ ನನ್ನಂತೆ ತಮ್ಮ ತಮ್ಮ ಪರಿವಾರ ಹುಡುಕುತ್ತಿದ್ದಾರೆ. ಅಲ್ಲಿನ ಜನರನ್ನು ಕೇಳಿದಾಗ "ನಡೆಯಿರಿ ಕೆಳಗಡೆ ಠಿಕಾಣಿಗೆ.. ಅಲ್ಲಿ ನೋಡೋಣ" ಎಂಬ ಉತ್ತರ ಬರುತ್ತದೆ

ಸರಿ ನಾನು ಎಲ್ಲರೊಡನೆ ನಮ್ಮೆಲ್ಲರ ಠಿಕಾಣಿ ಸೇರುತ್ತೇನೆ. ಅಲ್ಲಿ ಹುಡುಕಾಟ ಪ್ರಾರಂಭವಾಗಿದೆ. ಯಾರ್ಯಾರ ಪರಿವಾರದ ಜನ ಬಂದಿಲ್ಲ... ಯಾರು ಕಾಣೆಯಾಗಿದ್ದಾರೆ ಎಂಬೆಲ್ಲ ವಿವರ ಸಂಗ್ರಹಿಸುತ್ತಿದ್ದಾರೆ.. ನಾನಂದುಕೊಂಡೆ ಅವರು ಹುಡುಕುತ್ತಾರೆ ಎಂದು. ಆದರೆ ವಿಷಯ ಹಾಗಿಲ್ಲ.. ಅವರು ಕೇವಲ ಕಾಣೆಯಾದವರು ಇನ್ನು ನಿಮಗೆ ವಾಪಸ್ಸು ಸಿಗುವುದಿಲ್ಲ... ಅರಣ್ಯದಲ್ಲಿ ಹೋದವರು ವಾಪಸ್ ಬರುವುದಿಲ್ಲ ಎಂಬ ಸಹಜ ಪ್ರತಿಕ್ರಿಯೆ ಅವರದ್ದು. ಅಲ್ಲಿ ಸೇರಿದ ಜನ ಕೂಡ ಅದು ಸಹಜವೇ ಎಂಬಂತೆ ತಲೆದೂಗುತ್ತಿದ್ದಾರೆ. 
ಯಾರೊಡನೆ ಹೊಡೆದಾಡಲಿ ಬಡಿದಾಡಲಿ? ಯಾರೂ ಕೇಳುವವರಿಲ್ಲ. ಅಲ್ಲಿ ಹೋಗುವ ಮುನ್ನವೇ ಇದೆಲ್ಲ ನಮಗೆ ತಿಳಿದಿರಬೇಕಂತೆ. ನನಗೇ ಗೊತ್ತಿರಲಿಲ್ಲ. 

ಅಳುತ್ತಾ ಹೊರಬಂದೆ. ಅಯ್ಯೋ ಮಗುವೇ.. ಅಯ್ಯೋ ನನ್ನ ಮಡದಿಯೇ.. ಮುಗ್ಧರು ನೀವು. ಪಾಪಿ ನಾನು ಎನ್ನುತ್ತಾ ಅಲ್ಲಿಂದ ಹೊರಬರಬೇಕಾಯ್ತು. ನನ್ನೊಡನೆ ನನ್ನ ಪರಿಚಯದ ಕೆಲವರೂ ನನ್ನಂತ ನತದೃಷ್ಟರಿದ್ದರು. ಅವರೂ ಕೂಡ ಈ ಬಗ್ಗೆ ಆ ಸಂಸ್ಥೆಯ ವಿರೋಧದ ಬಗ್ಗೆ ಮಾತಾಡಲೇ ಇಲ್ಲ. ನಾನು ಅಂದುಕೊಂಡೆ ಹೋರಾಡೋಣ.. ಅದು ಹೇಗೆ ಮುಗ್ಧ ಜನರ ಮುಗ್ಧತೆಯೊಂದಿಗೆ ಆಟ ಆಡುತ್ತಾರಿವರು?! ಎಂದು ರೋಷಗೊಂಡರೆ... ಇನ್ನೊಂದು ಕಡೆ ದುಃಖ 'ಕಳಕೊಂಡವರು ವಾಪಸ್ ಬಂದಾರೆಯೇ' ಎನ್ನುತ್ತಾ ಗೋಳಿಡುತ್ತಿತ್ತು.

ಅಳುತ್ತಾ ಮನೆಗೆ ಬಂದೆ. ಯಾರಿಗೋಸ್ಕರ ಈ ಬದುಕು?!

ಇದೆಂತಾ ಕನಸು. ಬೆಳಿಗ್ಗಿನ ಕನಸು. ಯಾಕೆ ಬಿತ್ತು?! ಮನಸು ಭಾರವಾಗಿದೆ ಯಾಕೋ. ವಿದ್ಯಾ ನಿಮಿಷಾ ಇಬ್ಬರೂ ರಜಾಯಿಯ ಒಳಗೆ ಹಾಯಾಗಿ ನಿದ್ರಿಸುತ್ತಿದ್ದಾರೆ. ನಾನು ಬರೆಯುತ್ತಿದ್ದೇನೆ. 

ಯಾಕೆ ಹೀಗೆ?! ಕನಸು ಯಾಕೆ ಬಿದ್ದಿರಬಹುದು?! ತಳಮಳವಿದೆ ಮನದಲ್ಲಿ. ಏನು ಮಾಡಲೂ ಮನ ಬಾರದು. ಆಪೀಸಿಗೆ ಹೋಗಿಲ್ಲ ಇನ್ನೂ. ಸ್ನಾನ ಮಾಡಿಲ್ಲ. ನನ್ನ ಜೀವನದಲ್ಲಿ ಕನಸಿನ ಮಹತ್ವ ಏನಾದರೂ ಇರಬಹುದಾ?! ಇದಕ್ಕೆ ಪರಿಹಾರ ಏನು?!

ಬಗೆಹರಿಯದ ಯೋಚನೆಗಳು. 
ಮಹಾ ಮೃತ್ಯುಂಜಯ.. ನೆನಪಾಗುತ್ತಾನೆ. 

ಓಂ ತೃಯಂಬಕಂ ಯಜಾಮಹೇ
ಸುಗಂಧಿಮ್ ಪುಷ್ಟಿವರ್ಧನಂ
ಊರ್ವಾ ಋಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್. 


3/1/20 9:55 AM

Dec 13, 2019

ನಲವತ್ತರ ನಲಿವು

ಮಾನವನ ಆಯುಮಾನದಲ್ಲಿ ವಯಸ್ಸಿಗೂ ಆರೋಗ್ಯಕ್ಕೂ ಒಂದು ನಂಟಿದೆ.  ಎಷ್ಟೇ ಆರೋಗ್ಯವ ಕಾಪಾಡಿಕೊಂಡು ಬಂದ ಮನುಷ್ಯರಲ್ಲೂ ವಯೋಸಹಜವಾದ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉದಾ: 'ಚಾಲೀಸು' ಹೆಸರೇ ಸೂಚಿಸುವಂತೇ ನಲವತ್ತು ಆಗುತ್ತಿದ್ದಂತೆ ನಮಗೆ ಓದಲು ಚಸ್ಮಾ ಬೇಕು.

ದಿಲ್ಲಿಯಲ್ಲಿ ಒಬ್ಬರು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು.  ಕನ್ನಡಿಗರು... ನಮ್ಮ ಕಡೆಯವರು. ಹೆಸರು ರಮೇಶ ವರ್ಧನ್. 

ಮಾತಿನಲ್ಲಿ ಚತುರ... ಅವರ ಮಾತನ್ನು ಕೇಳುವ ಸುಸಂದರ್ಭವೊಂದು ಒದಗಿ ಬಂದಿತ್ತು ನನಗೆ. 
ಅವರು ಹೇಳ್ತಾರೆ...
ಪಂಚೇಂದ್ರಿಯಗಳಲ್ಲಿ ಕಣ್ಣು ವಿಶೇಷವಾದುದು. ಎಲ್ಲಾ ಪಂಚೇಂದ್ರಿಯಗಳ ಕಾರ್ಯಗಳ ಒಟ್ಟಿಗೇ ನಾವು ಕಣ್ಣಿನ ಕಾರ್ಯವನ್ನೂ ಜೋಡಿಸುತ್ತೇವೆ. ಉಳಿದ ಪಂಚೇಂದ್ರಿಯಗಳಾದ ಮೂಗು, ಕಿವಿ, ನಾಲಿಗೆ ಮತ್ತು ಚರ್ಮ ಗಳ ಎಲ್ಲ ವಿಷಯಗಳಲ್ಲೂ ನಾವು ನೋಡುತ್ತೇವೆ ಅಥವಾ 'ನೋಡು' ಎಂಬ ಪದಬಳಕೆ ಮಾಡುತ್ತೇವೆ.
ಉದಾ: 
1. ಊಟ ಚೆನ್ನಾಗಿದೆ.. ಉಂಡು ನೋಡು. (ನಾಲಿಗೆ)
2. ಹಾಡನ್ನು ಕೇಳಿ ನೋಡು (ಕಿವಿ)
3. ಈ ಪರಿಮಳ ಚೆನ್ನಾಗಿದೆ.. ಮೂಸಿ ನೋಡು (ಮೂಗು)
4. ಬಟ್ಟೆ ಚೆನ್ನಾಗಿದೆ ಮುಟ್ಟಿ ನೋಡು (ಸ್ಪರ್ಶ)
ಹಾಗಾಗಿ ಕಣ್ಣು  ದೇವರು ನಮಗೆ ಕೊಟ್ಟ ವರ. ಅದರಿಂದಾಗಿಯೇ ಈ ಜಗ ಸುಂದರ.
ಈಗ ಯೋಚಿಸಿ ನೋಡಿ. (ಮಿದುಳು)  ಕಣ್ಣಿನ ಕಾರ್ಯದ ಒಟ್ಟಿಗೆ ಇತರ ಇಂದ್ರಿಯಗಳ ಕಾರ್ಯವ ಸೇರಿಸಬಹುದೇ?! (ನಮ್ಮ ವಿವೇಚನಾ ಶಕ್ತಿಗೆ ಅದನ್ನು ಬಿಡುತ್ತಾರವರು)

ಇನ್ನೂ ಮುಂದರಿದು ಅವರು ಹೇಳ್ತಾರೆ...
ಎಲ್ಲ ಮಶೀನುಗಳಿಗೂ ಎಲ್ಲ ಸಾಧನಗಳಿಗೂ ಒಂದು ವಾರಂಟಿ ಪೀರಿಯಡ್ ಇರ್ತದೆ. ಟಿವಿ, ವಾಷಿಂಗ್ ಮಷೀನ್, ಕಾರು, ಬೈಕು ಇತ್ಯಾದಿಗಳು. ಅವೆಲ್ಲವಕ್ಕೂ ವಾರಂಟಿ ಪೀರಿಯಡ್ ನಂತರ ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೇ ಅಲ್ಲ ಸರ್ವೀಸ್ ಚಾರ್ಜ್ ಅನ್ನೂ ತೆರಲೇಬೇಕು. ಅಲ್ಲವೇ? 
ಹಾಗೇನೇ ನಮ್ಮ ದೇಹ. ಆ ದೇವರೆಂಬ ಮ್ಯಾನುಫ್ಯಾಕ್ಚರರ್ ನಮ್ಮನ್ನೆಲ್ಲ ತಯಾರಿಸಿ ಬಿಟ್ಟಿದ್ದಾನೆ. ವಂದು ವಾರಂಟಿ ಅಂತ ಕೊಟ್ಟಿದ್ದಾನೆ. ಆ ವಾರಂಟಿ ಪೀರಿಯಡ್ಡೇ 40 ವರ್ಷಗಳು. ಅದಕ್ಕೂ ನಂತರ ಈ ದೇಹವೆಂಬ ಗಾಡಿ.. ಆಸ್ಪತ್ರೆ ಎಂಬ ಸರ್ವಿಸ್ ಸೆಂಟರಿಗೆ ..  ಡಾಕ್ಟರೆಂಬ ಮೆಕ್ಯಾನಿಕ್ ಹತ್ತಿರ ಹೋಗಲೇಬೇಕು. ಚಾರ್ಜ್ ತೆರಲೇಬೇಕು. ಹಾಗಾದಾಗ ಮಾತ್ರ ದೇಹವೆಂಬ ಗಾಡಿ ಮುನ್ನಡೆಯುತ್ತದೆ. ಓಡದಿದ್ದರೂ ನಡೆಯಬಹುದು !!

ಹಾಗೇನೇ ಚಶ್ಮಾ, ನಲವತ್ತರ ನಂತರ ಬರುವ ಕನ್ನಡಕ ದಿಂದ ಬೇಸರಿಸದಿರಿ. 40 ವರ್ಷ ನಡೆಯಿತಲ್ಲ ಎಂದು ಹೆಮ್ಮೆಪಡಿ. ಬಿಪಿ ದಯಾಬಿಟೀಸು ಬಂತಲ್ಲಾ ಎಂದು ಬೇಸರ ಬೇಡ... 40 ರ ವರೆಗೆ ಇದೇನೂ ಇರಲಿಲ್ಲವಲ್ಲ ಎಂದು ಖುಷಿಪಡಿ. 40 ವರ್ಷದವರೆಗೆ ಖರ್ಚಿಲ್ಲದೆ ಬದುಕಿದೆವಲ್ಲ ಎಂದು ಸಂತೋಷವಿರಲಿ. ಇನ್ನು ಮುಂದೆ ಕೊಡಲ್ಪಡುವ ಚಾರ್ಜುಗಳ ಬಗ್ಗೆ ಗಮನವಿರಲಿ ಆದರೆ ಖೇದ ಪಡಬೇಡಿ. ಜೀವನವ ಆನಂದಿಸುವುದ ಕಲಿಯೋಣ. ಗ್ಲಾಸೊಂದರಲ್ಲಿ ಅರ್ಧ ಖಾಲಿ ಎನ್ನುವ ಬದಲಿಗೆ ಅರ್ಧ ನೀರು ತುಂಬಿದೆ ಎನ್ನುವ ಮನಸ್ಥಿತಿ ನಮ್ಮದಾಗಲಿ. 

"ನಲವತ್ತರ ನರಳು" "ಅರವತ್ತರ ಮರುಳು" ಎಂಬ ಗಾದೆಗಳ ಸುಳ್ಳಾಗಿಸಿ  "ನಲವತ್ತರ ನಲಿವು", "ಅರವತ್ತರ ಅರಳು" ವ "ಅರವತ್ತರ ಅರಿವು" ನಮ್ಮದಾಗಲಿ.

ನನ್ನಂತಹ ಕಿಡಿಗೇಡಿ ಬುದ್ಧಿಯವರಿಗೆಲ್ಲ ತಲೆಯಲ್ಲೊಂದು ಹುಳ ಬಿಟ್ಟು ನಡೆದರು ವರ್ಧನರು. 40 ರ ಮೊದಲೇ ಅನಾರೋಗ್ಯ ಪೀಡಿತರಾದವರು, ತಲೆಯ ಕೂದಲು ಉದುರಿ ಬೊಕ್ಕಲಾದವರೆಲ್ಲ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟುಗಳೇ?!  

ನಮಸ್ಕಾರ
ಶ್ಯಾಮ್ ಭಡ್ತಿ
-13/12/2019 ಶುಕ್ರವಾರ ರಾತ್ರಿ 10 ಗಂಟೆ. 



Dec 1, 2019

ಸುಟ್ ಅರಿಸುಟ್ಟು

ನಾ 2ನೇತ್ತಿ ಲಿ ಇರಕಾರೇ 

ಒಂದಿನ... ಬೆಳಬೆಳಗ್ಗೆ...
ಛಳಿ ಎಂದು ವಲೆಯ ಮೇಲೆ ದೋಸೆ ಎರೆತಾ ಕುಂತ ಅಮಮ್ಮನ(ಅಜ್ಜಿ) ಹತ್ರ ಹೋಗಿ ವಲೇ ಮೂಲೆಲಿ ನಾನೂ ಕುಂತೆ. ನನ್ನ ದಿನದ ದಿನಚರಿ ಅದು. 

'ತಮಾ ಬಂದ್ಯಾ? ಇಕ' ಹೇಳಿ ಅಜ್ಜಿ ಅಲ್ಲೇ ಒಂದು ಸಣ್ಣ ಬಾಳೆ ಕೀಳೆ ಹರ್ದು ನನ್ನ ಮುಂದೆ ಇಟ್ತು. "ನಿಂಗೆ ಕಣ್ ಕಣ್ ದ್ವಾಸ್ಯ... ಬಟನ್ ದ್ವಾಸ್ಯ.. ಕಕ್ಕೋಡ್ ದ್ವಾಸ್ಯ ?" ಅಂತು. 

ಕಣ್ ಕಣ್ ದ್ವಾಸೆ ಅಂದ್ರೆ ದಪ್ಪ ದೋಸೆ ವ ಸೆಟ್ ದೋಸೆ.
ಬಟನ್ ದ್ವಾಸೆ ವಂದು ಹುಟ್ಟು ಹಿಟ್ಟಿನಲ್ಲಿ 10 ದ್ವಾಸೆ .. ಸಣ್ಣ ಮಕ್ಕಳಿಗೆಂದೇ ಮಾಡುವ ಪುಟ್ಟ ಪುಟ್ಟ ದೋಸೆಗಳು.
ಕಕ್ಕೋಡ್ ದ್ವಾಸೆ ಅಂದ್ರೆ ಘಟ್ಟದ ಮೇಲಿನ ತೆಳ್ಳೇವು..

ಘಟ್ಟವನ್ನೆಂದೂ ನೋಡದ, ಹೋಗದ, ಕೇವಲ ಘಟ್ಟದ ಹೆಸರ ಕೇಳಿದ ನನ್ನ ಅಜ್ಜಿಗೆ ಈ 'ತೇಳ್ಳೇವು' ಎಂಬುದರ ಕಲ್ಪನೆ ಯ ಕೊಟ್ಟಿದ್ದೇ ನಾನು. 
 ಹುಟ್ಟಿ ಬೆಳೆದ ಕಕ್ಕೋಡು  ಮತ್ತಲ್ಲಿನ ದೋಸೆ ನಾನ್ಯಾವಾಗಲೂ ಬಯಸಿದ್ದೆ. ಎಂದೂ ಆ ಅಜ್ಜಿ ಕಕ್ಕೋಡ್ ದ್ವಾಸೆ ಮಾಡಲೇ ಇಲ್ಲ. ಮಾಡಲೂ ಬರ್ತಿರಲಿಲ್ಲ ಎಂಬುದು ವಾಸ್ತವ.
ಇರಲಿ....

"ಬಟನ್ ದ್ವಾಸೆ" ಎಂದೆ. ಇಷ್ಟವಾದುದು ತೆಳ್ಳೇವೇ ಆದರೂ ಮಾಡಲು ಬರದ ಅಜ್ಜಿಯ ಹರುಕು ದೋಸೆ ತಿನ್ನುವ ಇಷ್ಟ ನನಗಿರಲಿಲ್ಲ. ಹಾಗಾಗಿ "ಬೆಲ್ಲ ತುಪ್ಪ" ಎಂದೆ. 
ಸರಿ ... ಪಕ್ಕದಲ್ಲೇ ಇದ್ದ ಡಬ್ಬಗಳಿಂದ ಅವೂ ಬಾಳೆ ಕೀಳೆಗೆ ಅಜ್ಜಿಯಿಂದ ಬಡಿಸಲ್ಪಟ್ಟವು. ದೋಸೆ ಇನ್ನೂ ಬೆಂದಿರಲಿಲ್ಲ. ಅದರಲ್ಲಿ ಬೀಳುತ್ತಿದ್ದ ಕನ್ನು ಗಳು ಕಣ್ಣು ಬಿಡುತ್ತಿದ್ದವು 😳 ಅಷ್ಟೇ. 
ಒಂದು ಒಲೆಯ ದೋಸೆ ಬಂಡಿಯ ಮೇಲೆ ನನ್ನ ಬಟನ್ ದೋಸೆ ಕಣ್ಣು ಬಿಡುತ್ತಿದ್ದರೆ, ಇನ್ನೊಂದು ಒಲೆಯ ಮೇಲೆ ಚಾ ಪಾತ್ರೆ ಯಲ್ಲಿ ತನಗೆ ಸೇರಿಸುವ ಹಾಲನ್ನು ಕಾಯುತ್ತ ಚಾ 'ಕಣ್ಣು' ಬಿಡುತ್ತಿತ್ತು.... ಹಾಲು ಇನ್ನೂ ಬರಲಿಲ್ಲವೆಂದು  ಕೆಂಪಾಗುತ್ತಲಿತ್ತು. 
ನಾ ಇವೆರಡರ ಜೊತೆ.. ಎಲ್ಲ ಕೆಲಸ ಒಟ್ಟಿಗೇ ಮಾಡುವ multitasking ಅಜ್ಜಿಯ ಕೈ ಚಳಕವನ್ನೂ ಈಕ್ಷಿಸುತಲಿದ್ದೆ. 
ಅಷ್ಟರಲ್ಲಿ.....

ದೋಸೆ ಬೆಂದಿತು.. ಅಜ್ಜಿಯ ಕಾವಲಿ ಸೊಟಗ ದಿಂದ ಕಮುಚಿ ಅಡಿಯಾಗಿ ಬಿತ್ತು. ಮತ್ತೆ  ಅರೆಬರೆ ಕಂದು ಬಣ್ಣಕ್ಕೆ ತಿರುಗಿ ನನ್ನ ಬಾಳೆ ಕೀಳೆಗೆ ನೇರವಾಗಿ ಕಾಲಿಸೊಟ್ಗ ದಿಂದ ಬಿತ್ತು. 


ಬಿಸಿಯಾದ ಬಟನ್ ದೋಸೆಗೆ ಬೆಲ್ಲ ತುಪ್ಪ ಮೆತ್ತಲು ಕೈ ಹಿಂಜರಿದರೂ ನೀರ್ ಸುರಿಸುವ ನಾಲಿಗೆ ಕೈಗೆ ಒತ್ತಾಯ ಮಾಡುತ್ತಿತ್ತು.. ಇನ್ನು ಅದು ಬೆಲ್ಲ ತುಪ್ಪ ಮೆತ್ತಿಕೊಂಡು ಇನ್ನೇನು ನನ್ನ ಬಾಯಿಗೆ  ಬೀಳಬೇಕು. 
ಇಂಥ ಉದ್ವೇಗದಲ್ಲಿ ನಾನಿರುವಾಗ.....
 ಅಚಾನಕ್ಕಾಗಿ ಅಜ್ಜಿಯ ಕೈಯಿಂದ ಚಾ ಸೋಸುವ "ಅರಿಸುಟ್ಟು" ಜಾರಿ ನೇರವಾಗಿ ಒಲೆಗೆ ಬಿತ್ತು. ಹಾಗೆ ನಾನಂದುಕೊಂಡೆ. ಆದರೆ ನಿಜಾಂಶ ಹಾಗಿರಲಿಲ್ಲ. 

"ಅಮಮ್ಮಾ..... ಎಂತಾ ಆತೂ.....?!" ಎಂದೆ... ಹೆದರಿ ವಂದಡಿ ಹಿಂದೆ ಸರಿದಿದ್ದೆ. 

ಅಜ್ಜಿ ಬೊಚ್ಚು ಬಾಯಲ್ಲಿ ನಕ್ಕಳು.. ಅವಳ ಆ ನಗೆ ಅರ್ಥವಾಗಲಿಲ್ಲ ನನಗೆ.
'ಅರಿಸುಟ್ಟು' ಬುರಬುರನೆ ಗರಟೆಯ ತರ ಉರಿಯತೊಡಗಿತ್ತು. ನಾನಂದೆ 'ಅರಿಸುಟ್ ಹೋತು ಅಮಮ್ಮಾ'

"ಯೇ ಇಲ್ಯ, ಹೆದರಡಾ ಮಗಾ... ಅರಿಸುಟ್ಟು ಕಟ್ಟೋಗಿತ್ತು .. ವಂದ್ ಗಳಗೆ (ಘಳಿಗೆ) ಸುಟ್ರೆ ಸಮಾ ಆಗ್ತು ... ಅದ್ಕೇ ಬೆಂಕಿಲ್ ಹೊತಾಕಿದ್ದೆ" ಅಂತು ಅಜ್ಜಿ.

ವಂದರೆಕ್ಷಣ ನನಗೇನೂ ಹೊಳೆಯಲೇ ಇಲ್ಲ... ಕೀಳೆಯಲ್ಲಿದ್ದ ಬಟನ್ ದ್ವಾಸೆ ತಣ್ಣಗಾಗಿತ್ತು... ಹಾಕಿದ್ದ ದಪ್ಪನೆಯ ತುಪ್ಪ ಬೆಂಕಿಯ ಶಾಖಕ್ಕೆ ಕರಗಿ, ನನ್ನ ತೋರುಬೆರಳಿನಿಂದ ತಿರುಗಿ ಬೆಲ್ಲದ ಜೊತೆ ಸೇರಿ ಹೋಗಿತ್ತು.

ಅಜ್ಜಿ ಅರಿಸುಟ್ಟು ತೆಗೆದು ಟಪಟಪನೆ ನೆಲಕ್ಕೆ ಬಡಿದಳು.. ಕರಿ ಕರಿ ಬೂದಿ ಕರಿನೆಲದಲ್ಲೂ ಕರಿದಾಗಿ ಕಂಡವು. ಬಳಿಕ ಅದೇ ಒಲೆಯ ಬೆಳಕಿನಲ್ಲಿ ಅರಿಸುಟ್ಟ ತೋರಿಸಿದಳು "ನೋಡು ಎಷ್ಟ್ ಮಡೀದಾತು ಹೌದಾ?!"

ನಿಜವಾಗಲೂ ಅಜ್ಜಿ ಜಾದೂ ಮಾಡಿದ್ದಳು. 

ಅದೇ ಅರಿಸುಟ್ಟಿನಲ್ಲಿ ಚಾ  ಸೋಸುತ್ತ ಕೇಳಿದಳು "ನೀಚಾ ಕುಡಿತ್ಯಾ?"

ನನ್ನ ಬಾಯಿ ತೆರೆದೇ ಇತ್ತು. 

🙏🏻
(ವಂದನಾರ್ಹರು ಮತ್ತು ಕಾರಣೀಭೂತರು ಮತ್ತು ಪ್ರಚೋದನೆ:
ಕಥೆಗೆ ವಿಷಯ ಒದಗಿಸಿದ ಮತ್ತು ಬರಹದ ಮಧ್ಯೆ ಲೇಖನಿಯೆಳೆದು ತಿದ್ದಿದ ಹಲ್ಬಣದ ರವ್ಯಣ್ಣ, ಅನ್ಸತಗೆ, ಡಾಪೂ,
ಜವಿಕದ ಅರ್ಚಕ್ಕ, ಸುಭಾಸಣ್ಣ, ಸುಶ್, ಮತ್ತು ಇತರರು
ಎಲ್ಲರಿಗೂ ಧವಾ)

01/12/2019