Jul 2, 2022

ಛಾಯಕ್ಕನ ಛಾ



ಚಾಯಕ್ಕನ ಚಾ
*************
ಒಂದಾನೊಂದು ಕಾಲ ಅದು.
ಕಾಲೇಜಿನ ಗೋಲ್ಡನ್ ಡೇಸ್ ಮುಗ್ಸಿ ಚುಟ್ಪುಟ್ ನೌಕರಿ ಹುಡ್ಕಿ ಬೆಂಗಳೂರಿಗೆ ಕಾಲಿಟ್ಟ ಹೊಸ ದಿನಗಳು. ಮಹಾನಗರದ ಮಜ ಒಂದು ಬದಿಗಾದ್ರೆ..  ಬಪ್ಪ ಚೂರುಪಾರು ಸಂಬಳದಲ್ಲೇ  ಆ ನಗರದಲ್ಲಿ ದಿನದೂಡುವ ಅನಿವಾರ್ಯತೆ. ಹಂಗಾಗಿ ಪ್ರತೀ ಆದಿತ್ವಾರ ಎಲ್ಲಿ ಪರಾನ್ನ ಸಿಕ್ಕಗು ಹೇಳಿ ಕಾಯ್ತಾ ಇರ್ತಿದ್ದ ನನ್ನಂತ ಬ್ರಹ್ಮಚಾರಿ ಹುಡಗ್ರು. 

ತಿಂಗಳ ಅಖೈರಿನ  ವಂದು ಆದಿತ್ವಾರ...  ನಾನೂ, ಜಮದಗ್ನಿ ಮತ್ತೆ ಮಾಣಿ ಮೂರೂ ಜನರ ಕಿಶೆಲಿ ಕವಡೆ ಕಾಸಿಲ್ಲದೇ ಪರಾನ್ನ ಹುಡ್ಕಿ ಹೊಂಟ. ಯಾರ ಮನೆಗೆ ಹೋಗಕಾತು?! 🤔 ಎಲ್ಲೂ ವಿಶೇಷ ಇಲ್ಲೆ.. ಕರೆಯ ಇಲ್ಲೆ. ಮಾಣಿನೇ ಐಡಿಯಾ ಕೊಟ್ಟಂವ.  "ಯೇ ಚಾಯಕ್ಕನ ಮನೆಗೆ ಹೋಪನ.. ರಾಶೀ ದಿನಾತು ಹೋಗದೇಯ". ಬೇರೆ ಉಪಾಯ ಹೊಳಿದೇ ನಾನೂ ಜಮದಗ್ನಿ ಇಬ್ರೂ "ಅಕ್ಕು ನಡೆ" ಹೇಳೇ ಹೊಂಟ. 

ಚಾಯಕ್ಕನ ಮನೆ ಮುಟ್ಟಿದ್ದು ಅಪರಾಹ್ನ 2 ಗಂಟೆಗೆ. ಪೇಟೇಲಿಪ್ಪ ಜನರದ್ದು ಶಿಸ್ತಿನ ಜೀವನ. ಮೇಲಿಂದ ಚಾಯಕ್ಕನ ಮನೆ ಬಾವ ಲೆಕ್ಚರು. ಅಂವ ಮನಷ್ರು ಉಂಬೊತ್ತಿಗೇ ಉಂಬವನಕು. ಅವ್ರ ಮನೆಲಿ ಊಟ ಮಾಡಿ ಪಾತ್ರೆ ಕೌಂಚಿ ಆಗೋಜು ಹೇಳಿ ನಮಗೆಂತ ಗೊತ್ತಿತ್ತು?! ಹೊಟ್ಟೆಲಿ ಯಲಿ ವೋಡಾಡ್ತು ಯಂಗಕ್ಕೆ. 

ಹೋಗಿ ಓರ್ಮನೆ ಸರಕುರ್ಚಿ ಮೇಲೆ ಕುಕ್ರಸಿದ್ದೇಯ  'ಆಸ್ರಿಗೆ' ಕೇಳ ಬದಲಿಗೆ .. "ಏನ್ರೋ ಈ ಬದಿಗೆ ಸವಾರಿ ..‌ ಅದೂ ಮೂರ್ಜನ ಬ್ರಹ್ಮಚಾರಿ ಬಟ್ಟಕ್ಕ ಹೊಂಟಿದ್ರಿ?!" ಅಂದಾ ಬಾವಾ.  'ಮೂರ್ ಜನ ಹೊಂಟ ಕೆಲಸಾಗ್ತಿಲ್ಲೆ ಅಂಬ್ವಪ' ಹೇಳೂ ಸೇರಸ್ತಿದ್ನನ ಅಂವಾ... ಅಷ್ಟರಲ್ಲಿ ಒಳಗಿದ್ದ ಚಾಯಕ್ಕ ಹೆರ್ಗೆ ಬಂದು ಪುಣ್ಯ ಕಟ್ಕಂಡತು. 
"ಅತ.. ಈ ಬದಿಗೆಲ್ಲಿ ಬೆಳಗಾತ್ರೋ? ಬನ್ನಿ ಬನ್ನಿ ಆಸ್ರಿಗೆ? ಊಟಾಜ?" ಅಂತೂ. 
'ಎ ಹೆ ಎ ಬೇಡ' ಹೇಳಂವಾಗಿತ್ತು ನಾನು .. ಅಷ್ಟರಲ್ಲಿ ಈ ಜಮದಗ್ನಿ ಬೆನ್ನಿಗೆ ಚೂಂಟದ... 'ಸುಮ್ಮಂಗಿರಾ' ಹೇಳಿ ಅವನ ಸಂಜ್ಞೆ ಅದು. 
ಈ‌ ಸುಟ್ ಮಾಣಿ ಸುಮ್ಮಂಗಿರವ ಬ್ಯಾಡದ
"ಇಲ್ಲೆ ಎಂತದೂ ಬ್ಯಾಡಾ... ಉಂಡ್ಕಂಡೇ ಬಂಜ ನಂಗ" ಹೇಳವ.... ಚಾರ್ವಾಕ ಮಾಣಿ. 😳. ಇವತ್ ಮಾಣಿಯ ಬೊಜ್ಜ ಗ್ಯಾರಂಟೀ ಹೇಳಿ ಅಂದಾಜಾಗೋತು ಯಂಗೆ. ಇವ್ರಮನಿಂದ ಹೆರಬಿದ್ದ ಮೇಲೆ ಈ ಜಮದಗ್ನಿ ಆ ಮಾಣಿಯ ಬಿಟ್ರಲ್ದ! ಹೇಳಿ ಕಲ್ಪನೆ ಮಾಡ್ಕಂಡು ಮನಸಲ್ಲೇ ಬಂದ ನಗೆಯ ತಡ್ಕಂಡು ಜಮದಗ್ನಿ ಬದಿಗೆ ನೋಡಿರೆ ಅವ ನಗ್ಯಾಡ್ತ್ನೋ, ಶಿಟ್ಟಲ್ಲಿದ್ನೋ, ತೀಡತ್ನೋ ವಂದೂ ಅಂದಾಜಾಗದ ಮಕಾ. ಚಾಕೂಗೀಕೂ ಇದಿದ್ರೆ ಮಾಣಿಗೆ ಹಾಕೇಬಿಡ್ತಿದ್ದ ಅಂವಾ.
   ಒಬ್ರ ಮುಖ ಒಬ್ರು ನೋಡಿ ಬಪ್ಪ ನಗೆಯ ಅಬಗತ್ಗಂಡ... ನಂಗಳ ಈ ಸಂಜ್ಞಾ ಭಾಷೆಯ ಅಕ್ಕ ಬಾವ ಗ್ರೆಂಸಿದ್ವಿಲ್ಲೆ ಹೇಳೂಲೆ ಬತ್ತಿಲ್ಲೆ. 

ಚಾಯಕ್ಕ "ಚಾ ಮಾಡ್ತೆ ಹಂಗರೆ" ಅಂತು. ಆಗಲಪ ಅದಾರದು.
ಚಾ ಬಂತು. ಸಂತಿಗೆ ಕರೆ, ಬಿಸ್ಕೀಟು. ಆ ಪ್ಲೇಟನ್ನ ಗಬಕ್ಕನೆ ತಗಂಡು ಅಷ್ಟೂ ತಿಂದಬುಡನ ಹೇಳಷ್ಟು ಹಶಿವು ನಂಗಾದ್ರೆ ... 'ಇದು ನಂಗೊಬ್ಬಂಗೇ ಸಾಕಾಗ' ಹೇಳೂನಮ್ನಿ ಮುಖಚರ್ಯೆ ಜಮದಗ್ನಿದು. ಮಾಣಿಯ ಬದಿಗೆ ಇಬ್ರೂ ಕಣ್ಣಾಯ್ಸಿರೆ ಪ್ಲೇಟ್ ಬದೀಗೇ ದುರುಗುಟ್ಕ ಗುರಾಯಿಸ್ತಿದ್ದ ಮಾಣಿ. ಕಿಸಕ್ಕನೆ ನಗೆ ಬಂದ್ರೂ ಮತ್ತೆ ಅಬಗತ್ಗಂಡ ನಂಗವಿಬ್ರೂವ. 

ಊಟಂತೂ ಸಿಕ್ಕಿದ್ದಿಲ್ಲೆ... ಗನಾ ನೀರ ಕುಡದು.. ಆ ಚಾಯಕ್ಕನ ಚಾ ನಳಗಿ, ನಾಕ್ ಕಾಳ ಕರೆ ತಿಂದರೆ... "ಪ್ಲೇಟ್ ಖಾಲಿ ಮಾಡ್ರ ತಮಾ.. ನಿಂಗಕ್ಕೇ ಇಟ್ಟದ್ದು" ಹೇಳಿ ಸತ್ಕಾರ ಬೇರೆ ಮಾಡ್ತು ಚಾಯಕ್ಕ. 
"ಅಕ್ಕು ... ಇಲ್ಲೆ... ಬೇಡ ಬೇಡ ... ಸಾಕು.. ತಗಂಡೆ" ಹೇಳಿ ಬಿಡ್ಯ ಮಾಡ್ಕಳಕಾತಲೀ.... ಪ್ಲೇಟಲ್ಲಿಟ್ಟದ್ದಷ್ಟೂ ಬರಗಿ ತಿಂದ್ರೆ ನಂಗ ಹೋದ ಮೇಲೆ "ಹಪ್ ಚಪ್ಪರ್ಕ ಪೋರಗ" ಅಂದ್ರೆ ಚಾಯಕ್ಕ?! 😬 

ಅಂತೂ ಬಂದ ಕೆಲಸ ಆಜಿಲ್ಲೆ ಹೇಳಿ ಹಶಿದ ಹೊಟ್ಟೆಲೇ ಸವಾರಿ ಎಬ್ಬಸ್ಗ ಬಂದಾತು....
ಬರಕಾರೆ ಮಾಣಿ ಬುರ್ಡೆಗೆ  ಸಮಾಧಾನ ಅಪ್ಪಷ್ಟು ಗನ್ನಾ ನಾಕ್ ತಟ್ಟಾತು.... ಅಬಗತ್ಗಂಡಿದ್ದ ನಗೆಯನ್ನೆಲ್ಲ ಖುಲ್ಲಂ‌ ಖುಲ್ಲಾ ಬಿಟ್ಟಾತು. 

ಜಮದಗ್ನಿ ಕೈ ತಿರ್ಪಿದ ಹೊಡ್ತಕ್ಕೆ ನಾಕ್ ದಿನ ಮಲಗಿದ್ದ ಮಾಣಿ. ವರ್ಷಗಟ್ಲೆ ಕೈ‌ ನೋವು ಹೇಳ್ತಿದ್ದ ಅಟ್ರಕಾಣಿ. 😝😬😂 

🙏
- ಶ್ಯಾಂ ಭಟ್, ಭಡ್ತಿ
22/04/2022, ಹವಿಹಾಸ್ಯ - ಲಘುನಗು

ಅಜ್ಜಿ


       ತುಪ್ಪ ಬೆಲ್ಲದ ರುಚಿ ಗೊತ್ತಿಲ್ದೋದ ಹೈಗರಿಲ್ಲೆ.  ದಿನ ಬೆಳಗಾದರೆ ದೋಸೆ ಸಂತಿಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿಗೆ. ಬೆಳಗಿನ ತಿಂಡಿಗೆ  'ಆಸರಿಗೆ' ಹೇಳದೇ ಸರಿಯಾದ ಹವ್ಯಕ ಶಬ್ದ. 

       ಶಣ್ಣುಡ್ರಿಗೆ ಸಾಮಾನ್ಯವಾಗಿ ಊಟ ಅಂದರೆ ವಾಯಾರ.. ಆಸರಿಗೇನೇ ಪ್ರೀತಿ. ಯಂಗೂ ಹಂಗೇಯ. ಬೆಳಿಗ್ಗೆ - ಮಧ್ಯಾಹ್ನ- ಸಂಜೆ ಹೇಳೆಲ್ಲ ಸಂಬಂಧಿಲ್ಲೆ..‌ ಇಡೀ ದಿನ ಊಟದ ಬದಲಿಗೆ ಆಸರಿಗೇ ಕೊಡ್ಲಾಗಿತ್ತು.. ಈ ದೊಡ್ಡವಕೆಲ್ಲ ತಲೆ ಇಲ್ಲೆ ಅನಸ್ತಿತ್ತು 😳
     ಸಂಜೆ ಶಾಲೆಮನೆ‌ ಬಿಟ್ಟು  ಮನೆಗೆ ಬಂದಕೂಡ್ಲೇಯ ಆ ಕ್ಷಣದ ದಿಡೀರ್ ಆಸರಿ - ಬೆಳಿಗ್ಗೆ ಎರೆದಿಟ್ಟು ಉಳಿದ ವಣಾ ದೋಸೆ ಅಥವಾ ವಣಾ ತೆಳ್ಳೇವು... ಜತಿಗೆ ತುಪ್ಪ-ಬೆಲ್ಲ.  ಬಡಸದು ಯಾರು? - ಅಜ್ಜಿ ! ಅಮ್ಮ ಹೇಳಿ ಕರೆಯದು ರೂಢಿ.  ಅದೇ ಕಾರಣಕ್ಕೆ ಈ ಅಜ್ಜಿ ಅಂದ್ರೆ ಯಂಗೆ ರಾಶೀ ಇಷ್ಟನೂವ... ಕಷ್ಟನೂವ !😀 

  ಮೇ ರಜೆಲೆಲ್ಲವ ಯಂಗಕ್ಕೆ ಸಂಜೆ 4 ಘಂಟೆಗಿಂತ ಮೊದಲೇ ಅರಕಲು ಗದ್ದೆ ಬೈಲಲ್ಲಿ ಆಟ ಆಡಲೆ ಹೋಪ ಗಡಬಡೆ.‌ ಆದರೆ ಅಜ್ಜಿಯ ಕಾನೂನಿನ ಪ್ರಕಾರ ಆಸ್ರಿಗೆ ಕೊಡಲೆ  5 ಗಂಟೆ ಆಗವು. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಶ್ವಾಗೋಗ್ತು" ಹೇಳ್ತಿತ್ತು. ಒಂದು ವೇಳೆ ಆಸರಿ ಕುಡಿದೇ ಆಡಲೆ ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಹೇಳೂ ಕಾಳಜಿ ಮಾಡ್ತಿತ್ತು. ಅಜ್ಜಿಯ ಈ 'ಘಂಟೆ'ಯ ಮಿತಿ ಯಂಗೆ ಮುಖ್ಯವಾಗಿ ಆಟ ಆಡಲೋಪಲೆ ಅಲವರಕೆಯಾಗಿತ್ತು. 

    ಆ ದಿನ ಈ ಸಂಕಟಕ್ಕೆ ವಂದು ಉಪಾಯ ಹುಡಕ್ದೆ. ಸುಮಾರು 4 ಘಂಟೆಯಪ್ಪ ಹೊತ್ತಿಗೇ ಗಡಿಯಾರದ ಮುಳ್ಳ 5 ಘಂಟೆಯಪ್ಪ ಹಂಗೇ  ತಿರುಗ್ಸದು. ಆಗ ಅಜ್ಜಿ ಆಸರಿಗೆ ಕೊಡ್ತಲೀ!.. ಹೇಳಿ ಲೆಕ್ಕ ಹಾಕ್ದಿ.  ಗೋಡೆ ಗಡಿಯಾರ ಸಸಾರಕ್ಕೆ ಕೈಮುಟ್ಟತಿತ್ತಿಲ್ಲೆ.‌. ಸರ್ಕಸ್ಸೇ ಮಾಡಕಾತು.‌  ಮನೆಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲು - ಮಣಭಾರ.... ಅದನ ಹೇಂಗೆ ವಕ್ಕ ಬಂಜ್ನ ಈಗಲೂ ನೆನೆಸ್ಕಂಡ್ರೆ ಆಶ್ಚರ್ಯ ಆಗ್ತು. ಆ ಕಷ್ಟ ಯಂಗೇ ಗೊತ್ತು.‌ ಇದೆಲ್ಲ ಯಾರಿಗೂ ಕಾಣದೋದಂಗೆ ಮಾಡವು ಮತೇ. ಹಶವು ಮನಷ್ಯನತ್ರ ಎಂತೆಂತ ಮಾಡಸ್ತು ಹದಾ! 😝 

        ಅಂತೂ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಮಾ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?"  ಹೇಳಿ ಭಾವನಾತ್ಮಕ ಪ್ರಶ್ನೆ ಹಾಕಿ... ಪಾಪ ಭಾವಾರ್ಥಿ ಅಜ್ಜಿ ಹತ್ರ ಆಸರಿ ಗಿಟ್ಟಸಗಂಡು  ಆಟ ಆಡಲೆ ಪಾರ್ಗೆಲೆ. 

     ಆಟ ಮುಗಿಸಿ ವಾಪಸ್ ಬರಕಾರೆ ರಸ್ತೆಯ ಮೇಲೆ ಡಾಕ್ಟರ್ ಮಾವನ ರಾಜದೂತ ನಿಂತಿದ್ದು.‌ ಮನೆಗೆ ಹೋಗಿ ನೋಡಿರೆ, ಅಜ್ಜಿ ಹಾಸಿಗೆಲಿ ಮಲಗಿದ್ದು. ಡಾಕ್ಟರ್ ಮಾವನೂ ಇದ್ದ‌. ಆಯಿಯ ಕೇಳ್ದಿ "ಅಮ್ಮಂಗೆಂತಾ ಆತೇ ಆಯಿ?" 😳

ಆಯಿ ಹೇಳಿದ್ದು.... 
     ನಾನು ಆಡಲೆ ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲೆ ಹೋಜಡ ಪಾಪ ಪ್ರತೀದಿನ ಹೋಪಂಗೇ (ಗಡಿಯಾರದ) 6 ಘಂಟೆಗೆ !! ಆದರೆ ಯನ್ನ ಯಾಪಾರ  ಗಡಿಯಾರ ಮುಂದಿತ್ತ ಇಲ್ಯ... ಹಾಲು ಕರೆಯ ಟೈಮಲ್ಲ. ಒಂತಾಸು ಮದ್ಲೇ ಹೋಜು ಅಜ್ಜಿ.  ಎಮ್ಮೆ ಚಾಳಿ ಮಾಡಿದ್ದು.... ಎಮ್ಮೆ‌ ಸೊರದ್ದಿಲ್ಲೆ - ಅಜ್ಜಿ‌ ಬಿಟ್ಟಿದ್ದಿಲ್ಲೆ.... ಮತ್ತೂ ಜಗ್ಗಿಕ್ಕು. ತಗ ಎಮ್ಮೆ ಒದ್ದಿಗಿದು - ಅಜ್ಜಿ ಬಿದ್ದಿಗಿದು.‌ 😳😀

ಅಂತೂ ಅಜ್ಜಿ ಒಂದು ವಾರ ಹಾಸಿಗೆ ಹಿಡತ್ತು.‌ ದಿನಾ ಅದ್ರ ಸೊಂಟ ತಿಕ್ಕಿದ್ದಿ... ಪಾಪ ಪರಿಹಾರ ಆಗವಲೀ‌ ಯಂಗೂವ. 
   ಯಂಗೋ ವಳಗೊಳಗೇ  ಖುಷಿಯೋ ಖುಷಿ‌ ಒಂದಬದಿಗೆ. ಆಯಿ ಆದ್ರೆ ತುಪ್ಪಕ್ಕೆ ಕಂಜೂಸಿ ಮಾಡ್ತಿಲ್ಲೆ.  ಅಜ್ಜಿ ಬಿದ್ಕಂಡಿದ್ದಷ್ಟೂ ಚೊಲೋ. 😝
ಒಂದೇ ವಾರದಲ್ಲಿ ಅಜ್ಜಿ ಚುಪರಾಗೋತು. ಗಟ್ಟಿ ಜೀಂವ ಮತೇ. 

ಆದರೆ ಈ ಘಟನೆಯ ನಂತರ ಎಂತಕ ಏನೇನ.... ಯಂಗೆ ಗಡಿಯಾರ ಮುಂದಿಡ ಮನಸ್ಸಾಜಿಲ್ಲೆ. ಹಾಂಗೇಯ ಅಜ್ಜಿಗೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತ ಏನೇನ... ನಾ ಕೇಳಿದಾಗೆಲ್ಲ ಆಸ್ರಿಗೆ ಕೊಡತಿತ್ತು.. ತುಪ್ಪನೂ ಕಂಜೂಸಿ ಮಾಡದ್ದೇ ಬಡಸತಿತ್ತು ! 

- ಶಾಂ‌ ಭಟ್, ಭಡ್ತಿ 
21/04/2022, #ಹವಿಹಾಸ್ಯ - ಲಘುನಗು

ಸಸಾರವ ಸಂಸಾರ!

#ಪಟ್ಟಂಗ 
#ಸಸಾರವ_ಸಂಸಾರ !? 
~~~~~~~~~~~~
    ವಂದ್ ಚೀಟಿ ಮಾಡ್ ಕೊಟ್ಟೆ ನಾನು ಅಡಿಗೆ ಮನೆಲೆಯ.. ಸಾಮಾನು ಖಾಲಿಯಾದಂಗೆ ಹಂಬಲಾದಗಲೆಲ್ಲ ಬರೆದಿಡು ಹೇಳಿ. 
     ಅಯ್ಯ ಅವು ಬರೆದ್ರೆ ಹೆಂಗಸರೇ ಅಲ್ಲ 
😜
     ಮದುವೆಯಾಗಿ 2 ವರ್ಷ ಈ ಐಡಿಯಾ ನಡದ್ದಿಲ್ಲೆ.  ದಿನಾ ಯುದ್ಧ ಮನೇಲಿ.
     ಅದಕ್ಕೂ ನಂತರ "ನಾ ತಪ್ಪಂವ ಅಲ್ಲ... ನೀನೇ ಎಲ್ಲ ತಂದ್ಕಳವು" ತಿಂಗಳಿಗೆ ರೇಷನ್ನಿಗೆ, ಹಾಲಿಗೆ ಇಷ್ಟು ಹೇಳಿ ಕೊಡಲು ಶುರು ಮಾಡ್ದೆ. 
    ಆದರೂ ತಿಂಗಳ ಅಖೈರಿಗೆ 'ರೇಷನ್ ಬಜೆಟ್ ಖಾಲಿ' ಹೇಳಲ್ ಹಣಕ್ತು ಹೆಂಡ್ತಿಕೂಸು. ಬಜೆಟ್ ಏರ್ಸಕಾತು. ಸರಿ ಏರಸ್ದೆ.. ಎಲ್ಲ ಸಮಾ ಆತು ಅಂದ್ಕಂಡಿದ್ದೆ. 

     ಆಶ್ಚರ್ಯ ಆಗದ್ದು ನೋಟ್ ಬಂದಾದಾಗ! 😳😳 ನನ್ನ ಬ್ಯಾಂಕ್ ಬ್ಯಾಲೆನ್ಸ್ ಗಿಂತ ಸಾಸಿವೆ ಡಬ್ಬಿ ಬ್ಯಾಲೆನ್ಸೇ ಜಾಸ್ತಿ ಇತ್ತು😳😳

   ಅಪ್ನ ಮನೆಗೋಗ್ತ ಇವು. ಹೋಪ ಬಪ್ಪ ಏರ್ - ಬಸ್ - ಟ್ರೇನ್  ಟಿಕೆಟ್ಟೂ .. ತಿಂಬುಂಬ್ಲೆ ಕೊಟ್ಟೂ...  ಮೇಲಿಂದ ಸಲ್ಪ ಕ್ಯಾಶೂ ಕೈಯಲ್ಲಿ ಹಿಡಿಸಾಗ್ತು ನಾವು.

    ವಾಪಸ್ ಬಂದ ಮೇಲೆ ಲೆಕ್ಕ ಕೇಳಲೇ ಆಗ... ಕೇಳಿರೆ ಕೆಟ್ಟ. ನಮ್ ಕೈಯಿಂದನೇ ಹೋಗ್ತು. ನಾವು ಕೊಟ್ಟದ್ದಕ್ಕಿಂತ ಜಾಸ್ತಿ ಖರ್ಚು ಹೇಳೇ ತೋರಿಸ್ತು ಯಮ್ಮನೆದು. 
ಗಣಿತ ಅಷ್ಟ್ ಗಟ್ಟಿ ಅದರದ್ದು 😳
    ಆದರೆ ತನ್ನಿಂತಾನೇ ಆ ಸಾ.ಡ. ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗಿರ್ತು. 🙄🙄

ಕೇಳಿರೆ... ಅಣ್ಣ, ಅಕ್ಕ, ಅಪ್ಪನ ಮನೇಲಿ ಕೊಟ್ಟಿದ್ದು. ಅದು ಗಂಡನ ಮನೆ ಖರ್ಚಿಗೆ ಸಂಬಂಧಿಲ್ಲೇ. 😳😳
   ಯಂಗೆ ಜೀ0ವ ಹೋತೂ ಅಂದ್ರೂ ಆ ಸಾ.ಡ. ಬ್ಯಾಲೆನ್ಸ್ ಸಿಗತಿಲ್ಲೆ. 

    ಹಂಗರೆ ಅದರ ಉಪಯೋಗ ಯಾವಾಗ?
ಅಪ್ನ ಮನೇಲಿ ಯಾರಿಗಾರೂ ಭತ್ತದ ಸುಂಗು ಹೆಟ್ಟಿದಾಗ. 
😳😳😝😅

(ಯಮ್ಮನೆದು ಮಾತ್ರ ಹಂಗೆ ಹಂ... ನಿಂಗವೆಲ್ಲ ಗನಾವು... ಎದಿಗೆ ತಗಳಡಿ 😀)

06/04/2022, #ಹವಿಹಾಸ್ಯ 

ಕುನ್ನಿದು ಕುನ್ನಿದು ಬಾರೇ


#ಕೂಸಿನ‌_ಯಾಪಾರಲ್ಲ

ನಮ್ಮನೆ ಕೂಸು ಹುಟ್ಟಿ ಬೆಳೆದಿದ್ದು ದಿಲ್ಲಿಲಿ. ಹೈಗ ಕನ್ನಡ ಬಂದ್ರೂವಾ ಹಿಂದಿ ಇಂಗ್ಲೀಷಲ್ಲಿ ಹಿಡಿತ ಜಾಸ್ತಿ ಅದ್ಕೆ. ಹವ್ಯಕದಲ್ಲಿ ಜಗಳ ಮಾಡೂಲಂತೂ ಬತ್ತೇ ಇಲ್ಲೇ ಪಾಪ. 

ಈಗ 2-3 ವರ್ಷದ ಹಿಂದೆ ಯುಗಾದಿ ಹಬ್ಬದ ದಿನ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಹಾಡು ಹಂಬಲಾತು ... ಗುನಗುನಸ್ತ ಇದಿದ್ದನ್ನ ಈ ಕೂಸು ಕೇಳ್ಬುಡ್ತು.
"ಇದ್ಯಾವ ಗಾನನಾ ಪಪ್ಪಾ?" ಪ್ರಶ್ನೆ .
"ಅದು ಕನ್ನಡ ಹಾಡೇ ಕೂಸೇ" ಹೇಳ್ವಲ್ಲಿವರೆಗೆ ಕೈಲಿದ್ದ ಮೊಬೈಲ್ ಒತ್ತಿ ಯೂ ಟೂಬ್ ಲ್ಲಿ ಆ ಹಾಡ ಹುಡುಕಿ ಕೇಳುಲೆ ಶುರು ಮಾಡ್ತು. 
ಯುಗಾದಿ ಹಾಡು ಮುಗತ್ತು. ಯೂ ಟೂಬ್ ಹಾಂಗೆಯ... ಹುಷಾರಿ. ನಂಗ ಎಂತಾ ನೋಡತ್ವ ಅದಕೆ ಸಂಬಂಧ ಪಟ್ಟ ಉಳಿದ ಹಾಡನ್ನೂ 'ನೋಡಿ' ಹೇಳಿ ಶಿಫಾರಸು ಮಾಡ್ತು. 

ಅಲ್ಲೇ ಮುಂದೆ 'ರವಿವರ್ಮನ ಕುಂಚ' ಕಂಡತು. ಅದನ್ನೂ ನೋಡ್ತು, ಕೇಳ್ತು ಕೂಸು.
ಅದಕ್ಕೂ ಮುಂದೆ ಮತ್ತೂ ಕೆಲವು ಹಾಡಿನ ಶಿಫಾರಸು ಬತ್ತಾ ಇದ್ದಿತ್ತು.‌ ಇದು ವಿಡಿಯೋದ ಕೆಳಗೆ ಇಂಗ್ಲಿಷ್ ನಲ್ಲಿ ಬರೆದ ಅಡಿಬರಹ ಎಲ್ಲ ದೊಡ್ಡಕೆ ಓದ್ತಾ ಓದ್ತಾ ಹೋತು.
'ಆಕಾಶದಿಂದಾ ಧರೆಗಿಳಿದ ಗೊಂಬೆ'
'ಎಂದೆಂದೂ ನಿನ್ನನು ಮರೆತು'
'ನೀರ ಬಿತ್ತು ನೆಲದ ಮೇಲೆ' ಇತ್ಯಾದಿ‌. 

ಕಡೇಗೆ 
'ಕುನ್ನಿದು ಕುನ್ನಿದು ಬಾರೆ' ಅಂತು. 🙄😳
ನಂಗೆ ಇದ್ಯಾವ ಹಾಡಪಾ ಹೇಳೇ ಅಂತ್ ಪಾರ್ ಹತ್ತಿದ್ದಿಲ್ಲೆ. ಕೆಮಿ ಚುರ್ಕಾದ್ರೂ
ಬೊಡ್ ತಲೆ ಯಂದು. 

ಅಲ್ಲೇ ಇದ್ದ ಯಮ್ಮನೆ ಪ್ರಾಣಿ ನಗ್ಯಾಡ್ತವ
"ಯೇ ಅದು 'ಕುನ್ನಿದು ಕುನ್ನಿದು' ಅಲ್ದೇ.... "ಕುಣಿದು ಕುಣಿದು ಬಾರೇ" 

ಎಚ್ಚರ ತಪ್ಪದೊಂದು ಬಾಕಿ ನಾನು. 🤩🤩😂😂 

🙏🙏
- ಶ್ಯಾಂ‌ ಭಟ್
22/03/2022, #ಹವಿಹಾಸ್ಯ ಲಘುನಗು