Aug 19, 2023

ಹುಚ್ಚು ಮನಸಿನ ಹತ್ತು ಮುಖಗಳು


ಒಮ್ಮೆ ಮಗಳ ಶಾಲೆಯ ಎಡ್ಮಿಶನ್ ಸಲುವಾಗಿ ವಂದು ತಿಂಗಳ ವದ್ದಾಟದಲ್ಲಿದಿದ್ದಿ. ಕರ್ಮ - ಧರ್ಮ ಸಂಯೋಗ ಹೇಳತ್ವಲೀ... ಸಾಮಾನ್ಯವಾಗಿ ನಾವು ಯಾವುದೇ ವಂದು ವಿಷಯದಲ್ಲಿ ಮುಳುಗಿ ಹೋಗಿರತ್ವ ಆ ವಿಷಯನೇ ಪದೇ ಪದೇ ಎದುರಿಗೆ ಬಂದು ನಿಲ್ಲತು... ಅಥವ ಯಾರದ್ದೋ ಮಾತು, ಕಥೆ... ಆ ದಿನದ ಪೇಪರ್ರು... ಬಪ್ಪ ಪೋನು ಎಲ್ಲದೂ ಈ ವಿಷಯಕ್ಕೆ ಸಂಬಂಧಪಟ್ಟಿದ್ದೇಯನ ಅನಿಸಿಹೋಗತು.
   ಗಾಯ ಆದಾಗೂ ಹಾಂಗೇಯಲಿ... ಆದ ಗಾಯದ ಮ್ಯಾಲೇ ಪದೇ ಪದೇ ಮತ್ತೆ ಮತ್ತೆ ಜಪ್ಪತು... ಮತ್ತೆ ತೆರೀತು.... ಹದಾ!

     ಅದೇ ಸಮಯದಲ್ಲಿ ವಂದಿನದ ಪೇಪರಲ್ಲಿ ’ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ನಮ್ಮ ಭವಿಷ್ಯವನ್ನು ಪಣಕ್ಕಿಡುವುದು ಎಷ್ಟು ಸರಿ?’ ಹೇಳ ಯೆಂತೋವ ವಂದು ಲೇಖನ ಬಂತು. ಹೌದು ಅದು ಸಕಾಲಿಕವೇಯ ಯಂಗೆ. ಇಷ್ಟೆಲ್ಲ ಮಾಡಿ ವದ್ದಾಡಿ ಈ ಮಕ್ಕಳ ದೊಡ್ದ ಮಾಡಿಯಾದ ಮ್ಯಾಲೆ ಕಡೆಗೆ ಸರ್ವೇಸಾಮಾನ್ಯವಾಗಿ ಅಪ್ಪದೆಂತಪಾ ಕೇಳಿರೆ ದೊಡ್ಡಾದ ಹುಡ್ರು ಹೇಳತ - "ಅಪ್ಪ ಅಮ್ಮ ಯಂಗೆ ಯೆಂತೂ ಮಾಡಿದ್ವಿಲ್ಲೆ... ಹೋಗ್ಲಿ ಯಾಂ ಮಾಡದಕ್ಕೂ ಸಪೋರ್ಟ್ ಮಾಡಿದ್ವಿಲ್ಲೆ. ಯೆಂತ ಮಾಡಿಡದು ಬ್ಯಾಡದಪ...  ನಾ ಮಾಡದಕ್ಕೆ ಅಡ್ದ ಬರದ್ದೇ ಇದ್ರೆ ಸಾಕಾಗಿತ್ತು." ಹೀಂಗೆ ಸಾಗತು ಅವರ ಮಾತಿನ ಧಾಟಿ. ಅಲ್ಲ ಇಂವ ಎಂತಾ ಮಾಡ್ತ ಹೇಳಿ ಅಪ್ಪಂಗೆ ಗೊತ್ತಿಲ್ಲೆ... ಅಪ್ಪ ಯೆಂತಕೆ ಸಪೋರ್ಟ್ ಮಾಡಿದ್ನಿಲ್ಲೆ ಹೇಳಿ ಮಗಂಗೆ ಗೊತ್ತಿಲ್ಲೆ. ವಟ್ಟೂ ಇದೊನ್ನಮನಿ ಕಮ್ಯೂನಿಕೇಶನ್ ಗ್ಯಾಪ?? ಅಥವ ಜನರೇಷನ್ ಗ್ಯಾಪ?? ಹೇಳೆಲ್ಲ ಯೋಚನೆ ಯನ್ನ ತಲೆಲಿ ವಂದೇಸಲ ಬಂದು ಹೋತು.

   ಹೌದು  ’ಮಕ್ಕಳಿಗಾಗಿ... ಅವರ ಭವಿಷ್ಯಕ್ಕಾಗಿ... ನಮ್ಮ ಭವಿಷ್ಯವನ್ನು ಪಣಕ್ಕಿಡುವುದು ಎಷ್ಟು ಸರಿ?’
   ಈಗ ಮಕ್ಕಳ ಮ್ಯಾಲೆ ಹಾಕಿದ ಖರ್ಚು ವೆಚ್ಚ ಯೆಲ್ಲ ಲೆಕ್ಕ ಇಡಲೆ ಬತ್ತ?? ಅಥವ ಅದನ್ನ ’ಮುಂದೆ ವಂದಿನ ಯನ್ನ ಮಗ/ಮಗಳು ನಂಗಳಿಬ್ಬರನ್ನ ಸಾಕತ’ ಹೇಳಿ ನಂಬಕ್ಯಂಡು ಅದೊನ್ನಮನಿ ಹೂಡಿಕೆ ಹೇಳಿ ಸುರಿಯದ? ಅಲಾ... ಪೋಸ್ಟಾಪೀಸಿನ ಠೇವಣಿ ಆರೂ ಹನಿ ವಂಚೂರು ಬಡ್ಡಿ ಸಮೇತ ಕೊಡತು. ಈ ಮಕ್ಕ ಹಾಂಗ? ಹುಂ ಸಾಕತ್ವ ಬಿಡತ್ವ ಗ್ಯಾರಂಟಿ ಅಂತೂ ಗೊತ್ತಿಲ್ಲೆ. ಆದರೆ ಯಂಗಳ ಕರ್ತವ್ಯ ಹೇಳಿ ಅವರನ ಸಾಕದೇ ಆತಲಿ ... ಮಕ್ಕಳ ಸಾಕಲಾಗದ್ದೇ ಇದ್ದವು ಮಕ್ಳ ಹೆತ್ತಿದ್ದೆಂತಕೆ ಕೇಳ್ತು ಸಮಾಜ ಹೇಳಿ ಕಣ್ ಮುಚ್ಗ್ಯಂಡು ಕಲೀಸದೇಯಾ.
    ಸರಿ ಕಲಿಸದಾದರೂ ಹ್ಯಾಂಗೆ?? ಸೊಕಾಸುಮ್ಮನೇ ಚೊಲೋ ಶಾಲೆ ಕಾನವೆಂಟು ಹೇಳಿ ದುಡ್ಡು ಸುರಿಯದೆಷ್ಟು ಸರಿ?? ನಮ್ಮ ಹೊಟ್ಟೆ ಕಟ್ಟಾದ್ರೂ ಸರಿ ಮಕ್ಕಗೆ ಕಮ್ಮಿ ಮಾಡಲಾಗ ಹೇಳಿ ಖರ್ಚು ಮಾಡದೆಂತಕ್ಕೆ ಹೇಳೆಲ್ಲ ಯೆಂತೆಂತೋವ ತಲೆಲಿ ಹುಳ.

    ಭಾವನೆಗೆ ಬಲಿ ಬಿದ್ದು ವಾಸ್ತವವಂತೂ ಮರೆಯಲಾಗ. ಶಿಕ್ಷಣ, ಸಂಸ್ಕಾರ ಕೊಡದು ನಮ್ಮ ಕರ್ತವ್ಯ. ಇಲ್ಲೆ, ಮಕ್ಕ ಅಡ್ಡದಾರಿ ಹಿಡಿತಾ ಇದ್ದ ಅಂದಾಗ ತಿದ್ದುವ ಪ್ರಯತ್ನ ಮಾಡಿ, ಉದ್ಧಾರಪ್ಪವಲ್ಲಾ ಹೇಳಿ ಗೊತ್ತಾದಮೇಲೆ ನಮ್ಮ‌ಭವಿಷ್ಯವ, ನಮ್ಮ ಸಮಯವ ಹಾಳು ಮಾಡ್ಕಂಬದರಲ್ಲಿ ಅರ್ಥ ಇಲ್ಲೆ.
ಒಟ್ನ ತಲೆಮೇಲೆ ಮಕ್ಕಳ ಮೇಲ್ನ ಪಾಶವ ಸ್ವಲ್ಪ ಹದಕ್ಕಿಡದೇ ನಮ್ಮ ಸ್ವಾಸ್ಥ್ಯಕ್ಕೆ ಒಳ್ಳೇದು. 

-ಶ್ಯಾಂ ಭಡ್ತಿ
(ಹಿಂದೊಮ್ಮೆ ಗೀಚಿದ್ದು)
19 -08 - 2023

Aug 6, 2022

ಹೆಡ್ ಮಾಸ್ತರರ ಕುರ್ಚಿ

     ಸಣ್ಣ ಹುಡ್ರಿಗೆ ಅಪ್ಪನ ಆಪೀಸಿಗೋಪದು ಅಂದ್ರೆ ಮಜಾ. 
     ನಾ ಕಂಡ ಮೊದಲ ಆಪೀಸು ನನ್ನಪ್ಪನ ಶಾಲೆಯ ಸ್ಟಾಪ್ ರೂಮೇಯ. ಅಲ್ಲಿ ಯಾವಾಗಲೂ 5-6 ಜನ ಮಾಸ್ತರು ಅಕ್ಕೋರು ಇರ್ತ ಯಾವಾಗೂವ. ನಾ ಸಣ್ಣಿದ್ದಾಗಿಂದ ಹೋಪಲೆ ಇಷ್ಟಪಟ್ಟ ಆಪೀಸು ಅದು. ಅಪ್ಪನಂತ ಆಪೀಸ್ ಇರವು ಯಂಗೆ.. ಒಂದು ಕುರ್ಚಿ ಟೇಬಲ್ಲು. ಅಲ್ಲಿ ಬರೆಯಲೆ ರಾಶೀ ನಮನಿ ಪೆನ್ನು. ಆ ಪೆನ್ನಿಡಲೆ ಸ್ಟಾಂಡು. ಗೀಚಲೆ ರಾಶೀ ರಾಶೀ ಪಟ್ಟಿ. ಹೀಂಗೇ ಕನಸು ಆವಾಗ. 
    ಅಪ್ಪನ ಆಪೀಸಿಗೋದ್ರೆ ಅದೆಂತದೋ ವನ್ನಮ್ನಿ ಖುಷಿ. ಕಾರಣ ಅಲ್ಲಿ ನಮಗೆ ಸಿಕ್ಕುವ ರಾಜಮರ್ಯಾದೆ. ಎಲ್ಲಾ ಮಾತಾಡಸ್ತ. ಅಪ್ಪ ಜೀವಮಾನದಲ್ಲಿ ಕೊಡಿಸಿರದ ಚಾಕಲೇಟ್ ಕೊಡತ್ರು ಜಾನಕಕ್ಕೋರು. ಹೊಸ ಪೆನ್ನು ಕೊಡತ್ರು ಕಾಳೆ ಮಾಸ್ತರು. ಅವಧಾನಿ ಮಾಸ್ತರರ ಕಥೆ ಪುಸ್ತಕ. 
      ಹೀಂಗೇ ಒಂದಿನ ಅಪ್ಪ ಕೂತ್ಗಂಬ ಆ ಕುರ್ಚಿ ಮೇಲೊಂದ್ಸಲ ಕೂತ್ಗಳವು ಹೇಳಾಗೋಗಿತ್ತು ಯಂಗೆ. ಆ ದಿನ ಬರದ್ದೇ ಹೋಗ್ತ! ನಾನೂ, ನನ್ನ ಕನಸು, ನನ್ನ ಹಠ, ನನ್ನ ತೀರ್ಮಾನ ಸಾಕಾರ ಅಪ್ಪ ದಿನ ಬರಲೇಬೇಕಲಿ.  ಹಗಲಗನಸೊಂದ ಪದೇ ಪದೇ ಕಂಡರೆ ಸಾಮಾನ್ಯವಾಗಿ ಅದು ನನಸಾಗ್ತು ಹೇಳ್ತ ಹದಾ ?! 

       ಆ ದಿನ ಆದಿತ್ವಾರ. ಅಪ್ಪಂಗೆ ಶಾಲೆಲಿ ಎಂತೋ ಕೆಲಸಿತ್ತು. "ನಾನೂ ಬತ್ತೆ" ಹೇಳದ್ದಕ್ಕೆ ಅಪ್ಪ ಬೇಡ ಹೇಳಿದ್ನಿಲ್ಲೆ.... ಬದಲಿಗೆ "ಬಂದ್ಕಂಡು ಎಂತಾ ಮಾಡ್ತೆ ಹುಡಗ್ರು ಯಾರೂ ಬತ್ವಿಲ್ಲೆ ಅಲ್ಲಿ ಆಡುಲೆ" ಅಂದ. 
"ಇಲ್ಲೆ ನಾನೂ ಬತ್ತೆ ಆದ್ರೂವ" ಅಂದೆ, ಮತ್ತೆ  ಬೆನ್ನ ಬಿಟಿದ್ನಿಲ್ಲೆ. ಸರಿಯಪಾ ಅಂದ ಕರ್ಕ ಹೋದ ಅಪ್ಪ. ಶಾಲೆಗೋಗಿ ಎಂತದೋ ಫೈಲ್ ಎಲ್ಲಾ ತೆಗದು ಎಂತದೋ ಬರೀತಾ ಕೂತಿದಿದ್ದ. 

       ಆಗ ಯಂಗೆ ಯನ್ನ ಕನಸು ನೆನಪಾತು.. ಅಪ್ಪನ ಕುರ್ಚಿಲಿ ಅಪ್ಪ ಕೂತಿದ್ದ.. ಹಂಗಾಗಿ  ಅಲ್ಲಿ ಕೂತ್ಗಂಬಲಾಗ್ತಿಲ್ಲೆ.. ಹೆಡ್ ಮಾಸ್ತರ್ರ ಕುರ್ಚಿ ಖಾಲಿ ಇದ್ದು.. ಅಲ್ಲೇ ಕೂತ್ಗಂಬನ ಕಂಡ್ತು. ಕನಸು ಕಂಡದ್ದಕ್ಕೂ ಜಾಸ್ತಿ ದಕ್ಕುವ ನಮನಿ ಇದ್ದಕು ಹೇಳಿ ಖುಷಿನೇ ಆತು. ಹೆಡ್ ಮಾಸ್ತರ ಕುರ್ಚಿ ಹತ್ರ ಹೋಗಿ ನಿಂತಿ. ಆ ಕುರ್ಚಿ ಮುಟ್ಟಿ ನೋಡದಿ.. ಮೆತ್ತಗಿನ ದಿಂಬ ಹಾಕಿಟ್ಟಿದ್ರು ಹೆಡ್ ಮಾಸ್ತರು.. ಆದರೂ ಸೀದಾ ಹೋಗಿ ಕೂತ್ಗಂಬಲೆ ಹೆದ್ರಕೆ. ಅಪ್ಪ ಬೈದ್ರೆ?! 
"ದಾದಾ" ರಾಗ ಎಳದಿ. 
ಮಕ ಎತ್ತಿ ಕೆಳಗಿಳಿಸಿದ ಕನ್ನಡಕದ ಮೇಲಿಂದ ನೋಡ್ದ ಅಪ್ಪ. 
"ಹೀ ಹೀ" ಮಾಡ್ದಿ. 
"ಎಂತದಾ?" ಕೇಳ್ದ ಅಪ್ಪ
"ಕೂತ್ಗಳ್ಳ?" ಕೇಳ್ದಿ ಧೈರ್ಯ ಮಾಡಿ ಹೆಮಾ ರ ಕುರ್ಚಿ ಬದಿಗೆ ಬೆಳ್ಳು ತೋರಸಗ್ಯಂಡು. 
"ಪಳದಿ, ಇಚ್ಚಿಗೆ ಬಾ ಹೆಡ್ ಮಾಸ್ತರು ಕಂಡ್ರೆ ರಣಿ ಹೊಡೆತ್ರು" ಅಂದಾ
ಅಂವ ಹೆದ್ರಸಿದ್ನ .. ಕುಶಾಲ್ ಮಾಡದ್ನ  ಅಂದಾಜಾಜಿಲ್ಲೆ.. ಹೆಡ್ ಮಾಸ್ತರರಿಗೆ ಹೆಂಗೆ ಗೊತಾಗ್ತು?  ಅವರಿಲ್ಲೆ ಇಲ್ಲಿ ಇವತ್ತು ಬತ್ರಿಲ್ಲೆ ಆದಿತ್ವಾರ... ಈ ದಾದ ಕುಶಾಲ್ ಮಾಡ್ತ ಬಿಡು ಹೇಳಿ ತಡ ಮಾಡದೇ ಹೋಗಿ ಕುತ್ಬುಟಿ. ಅಪ್ಪ ಬೈದ್ರೆ ಇಳದ್ರಾತು ಮತ್ತೆಂತ ! ಹೇಳಿ ಐಡಿಯಾ. 

ದಣಿ ಕೂತಿದ್ನನ. ಅಪ್ಪ ತಲೆ ಬಗ್ಗಿಸಿ ಅವನ ಕೆಲಸ ಮಾಡ್ಕತಿದ್ದ.‌ ನಾ ಕೂತದ್ದ ಗ್ರೆಂಸಿದ್ನಿಲ್ಲೆ... ಹೇಳೇ ಖುಷಿಲಿ ಇದಿದ್ದಿ.. ಅಷ್ಟತ್ತಿಗೆ ಯಾರೋ ಬಾಗಲ ಹತ್ರ ಬಂದಂಗಾತು.. ಒಳಗೇ ಬಂದ ... ಯಾರು ನೋಡಿರೆ ಹೆಡ್ ಮಾಸ್ತರು!! ಯಂಗೆ ಒಂದೇ ಸಲ ಒಂದು ಎರಡು ಎಲ್ಲಾ ಬಂದಂಗಾಗೋತು.  ಎಂತಾ ಮಾಡವು ತಿಳಯದ್ದೇ ಬಡಬಡಾ ಕುರ್ಚಿಂದ ಹಾರಿ ಅಪ್ಪನತ್ರ ಬಂದು ನಿಂತಿ.. ಬಾಯಲ್ಲಿ "ಸ್ಸಾರಿ ಸ್ಸಾರಿ" ಹೇಳ್ತಿದ್ದಿ... ಧ್ವನಿ ಹೆರಗೇ ಬೀಳ್ತಿಲ್ಲೆ. 

ಅಷ್ಟತ್ತಿಗೆ ಹೆಡ್ ಮಾಸ್ತರು
"ಭಟ್ರೆ, ನಮ್ಮ ಶಾಲೆಗೆ ಹೊಸ ಹೆಡ್ ಮಾಸ್ಟರ್ ಬಂದಾರೆ ?" ಅಂದ್ರು. ಆವಾಗ ಅಪ್ಪ ನನ್ನ ಬದಿಗೆ ಮತ್ತೆ ಕುರ್ಚಿ ಬದಿಗೆ ನೋಡದ ನೋಡು.. ಅವನ ಕಣ್ ಕೆಂಪಾಗಿದ್ದ ನೋಡಿ ಯಂಗೆ ಎಲ್ಲೆಲ್ಲೋ ಕೆಂಪಾಗೋಗಿತ್ತು ಆ ಕ್ಷಣಕ್ಕೆ. ಆದ್ರೆ ಪಾಪ ಹೆಡ್ ಮಾಸ್ತರಿಗೆ ನನ್ನ ಮೇಲೆ ಪ್ರೀತಿ.  ಅವರೇ ಸಂಭಾಳ್ಸಿದ್ರು ಆವಾಗ. ನನ್ನತ್ರ ಬಂದು ತಲೆ ಮೇಲೆ ಕೈಯಿಟ್ಟು "ಅಡ್ಡಿಲ್ಲ ಶಾಮ.. ನೀನೂ ಒಂದಿನ ಆ ಕುರ್ಚಿ‌ ಮೇಲೆ ಕೂತ್ಗೊಳ್ಳುವೆ" ಅಂದ್ರು. 
ಆಗ ನನ್ನ ಬಾಯಿಂದ ಹೊರ ಬಂತು ಸಮಾವ "ಸ್ಸಾರೀ ಸರ್. ತಪ್ಪಾಯ್ತು" 😳
ಇವತ್ತಿಗೂ ನೆನಪಾದ್ರೆ ಹೆದ್ರಕತ್ತು.. ನಗೆನೂ ಬತ್ತು. 

ಶಿಕ್ಷಕ ಸಮೂದಾಯ ಯಾವತ್ತೂ ಸುಖವಾಗಿರಲಿ 🙏🙏🙏🙏
**************************

(FB ಹವಿಹಾಸ್ಯ ಬಳಗದಲ್ಲಿ ಬರೆದ ಲಘುನಗು. 
05/08/2022 )

Jul 8, 2022

ಬ್ರಹ್ಮ (ಅಕ್ಷರನಮನ)

#ಬ್ರಹ್ಮೂರು 
#ಅಕ್ಷರನಮನ 
     'ಬರೆಯ ಕೂತರೆ ಹುಚ್ಚ ... ಪ್ರೀತಿಯಲ್ಲಿ ಬಾಡದ ಹೂ ನಾನು' ಎನ್ನುತ್ತಿದ್ದ.
ನಿಂತಲ್ಲಿ ನಿಲ್ಲದ..‌ ಕುಂತಲ್ಲಿ ಕೂರದ ವಾಮನ ಮೂರ್ತಿ. ಚುರುಕಿಗೇ ಇನ್ನೊಂದು ಹೆಸರು ಬ್ರಹ್ಮ ಇನ್ನು‌ ನೆನಪು ಮಾತ್ರ. ಹೂಗಳು ಬಾಡಿದ ಆ ಹೊಂಗೆಮರದ ಶೃಂಗಾರ ಇನ್ನಿಲ್ಲ ಎಂಬುದ ನಂಬಲು ಎರಡು ದಿನ ಬೇಕಾಯ್ತು ನನಗೆ 😓

      ಕೆಲ ವರ್ಷಗಳ ಪರಿಚಯ... ಒಂದು ವರ್ಷದ ಹಿಂದೆ ಯಾವುದೋ ಒಂದು ಅಂಕಣದ ಸಾಥಿಯಾಗಿ ಆದ ಆತ್ಮೀಯನಿಗೆ ಆತನ ಸಾವಿನಲ್ಲಿ ಅಶ್ರುತರ್ಪಣವೀಯುವ ಪ್ರಸಂಗ ಬರಬಹುದೆಂದುಕೊಂಡಿರಲಿಲ್ಲ.
      
      ಮೊನ್ನೆಯಿಂದ ಸಂತಾಪಗಳ ಮಹಾಪೂರ ನೋಡಿದೆ.. ಆತನ ಪುಟ್ಟ ಜೀವನದ ಮಹಾನ್ ಸಾಧನೆಗಳ ಕಂಡು ಬೆರಗಾಗಿದ್ದೇನೆ. ಕೇವಲ ಒಂದು ದಶಕದಲ್ಲೇ ಬೃಹದಾಕಾರವಾಗಿ ಬೆಳೆದ ಬ್ರಹ್ಮನ ಸಾಧನೆ ಸಾಮಾನ್ಯರಿಗೆ ಸುಲಭ ಸಾಧ್ಯವಾದುದಲ್ಲ. . ಬಹುಮುಖ ಪ್ರತಿಭೆಯಾದರೂ ಏನಿರಲಿಲ್ಲ ಈತನಲ್ಲಿ?! 
     ಅಕ್ಷರ ರಾಕ್ಷಸನೇ ಆದರೂ ರವಿಬೆಳಗೆರೆಯ ನಸೀಬ ಈತನಿಗಿರಲಿಲ್ಲ... 
     ಕಥೆಗಾರನಾದರೂ ಯೋಗರಾಜ ಭಟ್ಟರ ಯೋಗ ಈತನಿಗೆ ಎಟುಕಲಿಲ್ಲ...
     ಉಪೇಂದ್ರನಂತೇ ಹುಚ್ಚಿದ್ದರೂ ಲಕ್ಷ್ಮೀ ಒಲಿಯಲಿಲ್ಲ... 
     ಪ್ರತಿಭೆಗಳ ಆಗರವಾಗಿದ್ದರೂ ಮುಖ್ಯವಾಗಿ ಆಯುಸ್ಸೇ ಇರಲಿಲ್ಲ. 

      ಮತ್ತೆ ಹುಟ್ಟಿ ಬಾ ಎನ್ನಲಾರೆ. ಮತ್ತೊಬ್ಬ  ವಿನಾಯಕ ಬ್ರಹ್ಮೂರು ಬೇಕಿಲ್ಲ ನನಗೆ.  ಬೇರೊಂದು ಜನ್ಮದಲ್ಲಿ ಜೊತೆಯಾಗುವ ಹೆಬ್ಬಯಕೆಯೂ ಇಲ್ಲ. ಆತನ ಕೆಲವು  ಅನುಸರಿಸಬಹುದಾದ ಹೆಗ್ಗುಣಗಳಿವೆ.. ಅವು ನನ್ನ ಜೀವನದಲ್ಲಿ ಸದಾ ಜೊತೆಯಾಗಿದ್ದುಬಿಡಲಿ.  ಆತನ ಚಂದದ ಬರಹಗಳಿವೆ.. ಆ ಶೈಲಿಯ ಬರಹದ ಹುಚ್ಚು ನನಗೊಲಿಯಲಿ. ಅದನ್ನನುಸರಿಸುವ ಶಕ್ತಿ ನನ್ನದಾಗಲೀ. ಆತನ ಕಿರುಚಿತ್ರಗಳೆಂಬ ಮುತ್ತುಗಳು ನೆನಪಿನ ಹಾರವಾಗಿರಲಿ. 

    ಬ್ರಹ್ಮ ನಿನ್ನ ಗುರಿಯ ನೀ ತಲುಪಿದೆಯೆಂಬ ಸಮಾಧಾನ ನನಗಿರಲಿ 
🙏🙏🙏

(ಆತನ ಬ್ಲಾಗ್ ಲಿಂಕ್ ಇಲ್ಲಿದೆ) 
https://brahmur.blogspot.com/?m=1

Jul 2, 2022

ವರ


**ನಿದ್ರೆ ಒಂದು ವರ ಯಂಗೆ**
 ಹೀಂಗೇಳಿ ನನ್ನ ಹೃದಯದ ಒಡತಿಯೂ ಹೇಳ್ತು... ನನ್ನ ಆಸ್ತಿಯ ಒಡತಿಯೂ ಹೇಳ್ತು. 😍 ಎಂತಕೆ ಅಂದ್ರೆ ಎಷ್ಟೊತ್ತಿಗೆ ಬೇಕಾರೂ ಬಿದ್ಕೂಳೆ ವರಕ ಯಂಗೆ. ಅವ್ಕೆ ಹೊಟ್ಟೆಕಿಚ್ಚು 😌

      ನನ್ನ ಜೀವನದ ಹೆಚ್ಚೂ ಕಮ್ಮಿ 20 ವರ್ಷ ಪ್ರಯಾಣದಲ್ಲಿ ಕಳದೋಜನ. ಸಿಕ್ಕ ನೌಕರಿಯೂ ಅಂತದ್ದೇಯ. ಬಸ್ಸಲ್ಲಿ ಕುಂತು ಡ್ರೈವರ ಬಸ್ ಡುರ್ ಗೆಡಸಿ 3 ನೇ ಗೇರಿಗೆ ಹಾಕ್ದ ಅಂದ್ರೆ ಯಂಗೆ ವರಕ.  ಟ್ರೇನಲ್ಲಿ ನಿಯಮಿತವಾಗಿ ಡಗ್ ಡಗ್ ಶುರು ಆತು ಅಂದ್ರೆ ನಾ ವರಗ್ದೆ ಹೇಳೇ ಲೆಕ್ಕ..‌ ವಿಮಾನ ಟೇಕ್ ಆಫ್ ಅಪ್ಪಲಿವರಿಗಷ್ಟೇ ಎಚ್ರ ಇರ್ತು😍😂😜
 ಮೊದಲಿಂದ ಹಂಗೇಯ

**ಕಾಲೇಜು ಜೀವನ 1998:
ಆವತ್ತೊಂದಿನ ಕುಮಟಾದಿಂದ 3 ಗಂಟೆಯ ಚಿಪ್ಪಿಹಕ್ಕಲ ಬಸ್ಸಿಗೆ ಹತ್ತಿ ಕುಂತಿದ್ದೆ.‌ ಮಾಡಗೇರಿ ಹತ್ರ ಎಚ್ಚರಾಗಿತ್ತು..‌ ಅಂ ಮನೆಗಿನ್ನೂ ಸುಮಾರು ದೂರಿದ್ದಲೀ ಹೇಳಿ ಮತ್ತೆ ಕಿಡಕಿಗೆ ವರಗಿದ್ದೆ. ಕಡೆಗೆ ಕೊಳಪೆಹೊಂಡ ದಾಟದ ಮೇಲೆ ಕಂಡಕ್ಟರ ಬಂದು 'ಹಾ ಎಲ್ಲಿ ಇಳೂದು ತಮಾ?' ಅಂದಮೇಲೆ ಎಚ್ರಾಗಿ ಕಿಡಕಿಲಿ ನೋಡಿರೆ ಅವಧಾನಿ ಶಾನಭೋಗರ ಮನೆ ಬ್ಯಾಣ ! ಎಚ್ರ ಮಾಡ್ದ ಕಂಡಕ್ಟರಂಗೆ ಧವಾ ಹೇಳದ ಬಿಟ್ಟಿಕ್ಕೇ ಹುಳಚಪ್ಪೆ ಮಕಾ ಮಾಡ್ಕಂಡು 'ಹಿಹಿ' ಹೇಳಿ ಕಿಸದು, ಮನಸಲ್ಲೇ ನಗೆ ಬಂದರೂ... ತಡಬಡಸಿ  ಎದ್ದು ಇಳದು‌ ವಾಪಸ್ 1 ಕಿಮೀ‌ ಮನೆಗೆ ನಡ್ಕ ಬಂದದ್ದಿದ್ದು. ಇಡೀ ಬಸ್ಸನವೆಲ್ಲ ನಗ್ಯಾಡಿದ್ದ ಹೇಳದು ಯಂಗೆ ಗೊತ್ತಾಗ್ದೇ ಹೋಜಿಲ್ಲೆ ಮತೇ😀

    **ಹೊನ್ನಾವರ 2000: 
ಎನೋ ಕೆಲಸದ ನಿಮಿತ್ತ ಎಲ್ಲಿಗೊ ಹೋಗಿ ಬಂದಿಳಿದಿದ್ದ ರಾತ್ರಿ ನಾನೂ ನನ್ನಣ್ಣ..  ಬೆಳಿಗ್ಗೆ 5 ಗಂಟೆಗೆ ಅವಂಗೆ ವಾಸ್ಕೋ ಹೋಪ ಬಸ್ಸು. ಹಂಗಾಗಿ ಮನೆಗೆ ಹೋಗದೇ ಕಾಮತ್ ಹೊಟೆಲಲ್ಲೇ ರೂಂ‌ ಮಾಡಿ ವಳ್ದ.  ನನ್ನ ವಾಚಲ್ಲಿ ಅಲಾರ್ಮ್ ಇಟ್ಟು‌ ಮಲಗಿದ್ದೊಂದು ಗೊತ್ತು... ಬೆಳಗ್ಗೆ ಎಚ್ರಾದಾಗ ಎಂಟೂಕಾಲು. ಅಲಾರ್ಮ್‌ ನೋಡಿರೆ ಬಂದ್ ಮಾಡಿದ್ದ ಯಾರೋವ... ವರ್ಕಣಾಶಿಲಿ ನಾನೇ ಬಂದ್ ಮಾಡಿರವು.. ನನ್ನ ಬುರ್ಡೆಗೆ ವಂದ್ ತಟ್ಟಿಕ್ಕೇ ಶಿಟ್ ಶಿಟ್ ಮಾಡ್ಕಂಡು ಹೋದ ಅಣ್ಣ..‌ ಬುರ್ಡೆಗೆ ತಿಂದೂ ನಗ್ಯಾಡಿದ್ದು ಅಂದ್ರೆ ಅದೇ ಮದ್ಲಾಗಿಕ್ಕು ಯಾನು 😂😜

   **ಮುಂಬೈ 2002: 
ಮುಂಬೈಲಿದಿದ್ದೆ ಕೆಲ ವರ್ಷ. ಊರಿಗೆ ಬಪ್ಪ ಮತ್ಸ್ಯಗಂಧಾ ರೈಲ ಹಿಡದು ಶೆಡ್ಯೂಲ್ ಪ್ರಕಾರ ಹೊನ್ನಾವರ ಸ್ಟೇಶನ್ನಲ್ಲಿ ಇಳಿಯವು ನಾನು. ಅಂಕೋಲಾದಲ್ಲಿ ಎಚ್ರಾಗಿತ್ತು. ಯನ್ನ ವರ್ಕ ಗೊತ್ತಿದದ್ದರಿಂದ ಅಲಾರಾಂ ಇಟ್ಟಿದಿದ್ದೆ.  ಅದು ಬಡ್ಕಂಡ್ರೂ ಅದನ್ನ ಸ್ನೂಜ್ ಮಾಡಿ ಮತ್ತೆ ಮಲ್ಗಿದಿದ್ದೆ... ಎರ್ಡ್ ನಿಮಿಷನೂ ಆಜಿಲ್ಯನ ಅಚಾನಕ್ಕಾಗಿ ರೈಲಿನ ಶಬ್ದ ಬದಲಾಗಿ ದಡಾಬಡಾ ಅಗಿದ್ದರಿಂದ ಎಚ್ರಾತು.. ರೈಲು ಬ್ರಿಜ್‌ ಮೇಲೆ ಜಾಸ್ತಿನೇ ಶಬ್ದ ಮಾಡ್ತು. ಒಹೋ ಅಘನಾಶಿನಿ ಬಂತು ಹೇಳಿ ಎದ್ದು ಕುಂತೆ. ನಿಮಿಷದೊಳಗೇ ಗೊತ್ತಾತು..‌ ಶರಾವತಿ ಇದು ಹೇಳಿ.. ಕೈ‌ ಮುಗದೆ.... ಮನಸಲ್ಲೇ ನಗೆ ಬಂತು.. ಮುರ್ಡೇಶ್ವರಕ್ಕೆ ಹೋಗಿ ಇಳದು, ಬಸ್ ಹಿಡದು ಮನೆಗೆ ಬಂದ್ರೆ ಆಯಿ ಕೇಳ್ತು -
"ಟ್ರೇನ್ ಲೇಟನ ತಮಾ!?" 
"ಹೌದೇ... ಇಲ್ಯೇ ಸಾಯ್ಲಿ" ಅಂದೆ ಒಳಗೊಳಗೇ ನಗ್ಯಾಡ್ತವ 😜

   ದಿಲ್ಲಿ 2007:
ಕಾರ್ಯ ನಿಮಿತ್ತ ಎಲ್ಲೋ ಹೋಗಿದ್ದೆ.  ವಾಪಸ್ ದಿಲ್ಲಿಗೆ ರೈಲ ಪ್ರಯಾಣ.. ಅಪ್ಪರ್ ಬರ್ಥ್...  ಯಥಾಪ್ರಕಾರ ನಿದ್ದೆ .. ಅಲಾರಮ್ಮು ಬೇಡ ಈ ಸಲ ಹೇಂಗದ್ರೂ ನಯಿದಿಲ್ಲಿ ಲಾಸ್ಟ್ ಸ್ಟೇಷನ್ನು ಹೇಳಿ ಧೈರ್ಯ. ಅಚಾನಕ್ಕಾಗಿ ಸುಖನಿದ್ದೆಯ ಮಧ್ಯ ಒಬ್ಬ ಎಬ್ಸದ ಸತ್ತಂವಾ..‌ "ಓಯೇ ಪೆಹಲವಾನ್ .. ಜಾಗೋ..  ದಿಲ್ಲಿ ಚಲಾ ಗಯಾ .. ವಾಶೀಂಗ್ ಮೇ ಗಾಡೀ ಖಡೀ ಹೇ" ಅಂದ. ಕೊನೆಯ ಸ್ಟೇಷನ್ನಲ್ಲಿ ರೈಲು ನಿಂತು ಎಲ್ಲಾ ಇಳಿದ ಮೇಲೆ ಟ್ರೇನು ವಾಶಿಂಗ್ ಲೇನಿಗೆ ಹೋಗಿ ನಿಲ್ತು.. ಅಲ್ಲಿಂದ ನಡ್ಕಂಡು ಹತ್ರದ ಮುಖ್ಯರಸ್ತೆಗೆ ಬಂದು ಅಟೋ ಹಿಡ್ಕಂಡು ಮನೆಗೆ ಬಂದೆ.. ಯಮ್ಮನೆದ್ರದ್ದು ಅದೇ ಪ್ರಶ್ನೆ 
" ಟ್ರೇನ್ ಲೇಟ?" 
ಯಂದೂ ಅದೇ ಉತ್ರ "ಹೌದೇ... ಇಲ್ಯೇ ಸಾಯ್ಲಿ"...  ಒಳಗೊಳಗೇ ನಗೆ 😂😜

ನಿದ್ರೆ ವಂದು ವರ ಯಂಗೆ 😂😂
-ಶ್ಯಾಂ ಭಟ್, ಭಡ್ತಿ
2 ಜೂನ್ 2022, ಹವಿಹಾಸ್ಯ - ಲಘುನಗು