Jul 2, 2022

ನಂಬಿಕೆ


**ಅದೊಂದು ಯುಗಾದಿ **
"ತಮಾ..... 9 ಗಂಟ್ಯಾತು...‌ ಕಾಲಾವಧಿ ಹಬ್ಬಾಗಿ ಈ‌ ಮಾಣಿ ಇನ್ನೂ ಬಿದ್ವರಗ್ತೆ ಇದ್ದಾ ನೋಡಿ..‌..." ಹೇಳ ಅಶರೀರವಾಣಿಗೆ ಕಣ್ಬಿಟ್ಟಿ. ಯಂಗೊತಿದ್ದು ಯನ್ನ ಆಯಿ ಯೋಳೂಕಾಲಕ್ಕೇ ಒಂಬತ್ ಗಂಟ್ಯಾತು ಹೇಳ್ತೂ ಹೇಳಿ.. ಇವತ್ತೆಂತಕೆ ಕೂಗ್ತಿದ್ದಪಾ.. ಯುಗಾದಿ ರಜೆ ಮೇಲಿಂದವಾ ಹೇಳಿ ಯೋಳ‌ ಮನಸಿಲ್ದೋರೂ ಮೈ‌ಮುರ್ದು ಎದ್ದಿ... ಏಳಕಾತಲೀ. ಇಲ್ದೋರೆ ಯನ್ನಬ್ಬೆ ಅಬ್ಬೆಯಾಗಿರ್ತಿಲ್ಲೆ. 'ನವದುರ್ಗೆಯರೂ ಆಹ್ವಾಹನೆ ಅಪ್ಪ ಮುಂಚೇನೇ ಎದ್ಬುಡು ತಮಾ' ಹೇಳಿ ಯಂದೇ ಅಂತರಾಳ ಕೂಗ್ತು. 😀

ಎದ್ದು ಮಿಂದು ದೇವ್ರ ಪೂಜೆ ಮಾಡ್ತಿರಕಾರೇ "ತಮಾ  ಚೌಡಿ ಪೂಜೆ ಮಾಡ್ಕ ಬಾ" ಅಶರೀರವಾಣಿ ಮತ್ತೆ. ಅದ್ರ ಶರೀರ ಬತ್ತಿತ್ತಿಲ್ಲೆ ಯನ್ನತ್ರ... ಬರೀ ಆವಾಜ್‌ ಮಾತ್ರ ಬತ್ತಿತ್ತು ಅದ್ಕಾಗೇ ಅಶರೀರವಾಣಿ ಹೇಳ್ತಿ.

 ತ್ವಾಟದ ತುದಿಗೆ ಚೌಡಿಮನೆ.. ನಾನು ಚೌಡಿ ಮನೆಗೆ ಹೋದಷ್ಟೊತ್ತಿಗೇ ಸುಬ್ರಾಯ ಭಟ್ರ ಮನೆ ತಿಮ್ಮಣ್ಣ ಪೂಜೆಗೆ ಬಂದಿದ್ದ ಪೂಜೆ ಮಾಡ್ತಿದಿದ್ದ. 
"ಹಾ.. ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಅಂದಿ. ಅಂವ ಪೂಜೆ ಮಾಡ್ತಿರಕಾರೇ ಕೇಳ್ದಿ... "ಭಟ್ರು ಹೆಂಗಿದ್ರಡೋ?"
ಸುಬ್ರಾಯ ಭಟ್ರನ್ನ ವಾರದ ಹಿಂದೆ ಮಣಿಪಾಲಕ್ಕೆ ಕರ್ಕ ಹೋಗಿದಿದ್ದ.. ಸಿರಿಯಸ್ಸು.. 

"ನಿನ್ನೆ ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಅಂದ ತಿಮ್ಮಣ್ಣ ಕಾಯಿ ವಡೆತವ... ಒಂದು ಕಡಿ ಕಮಚಡಿಗಾಗಿ ಬೀಳಸ್ಬುಟಾ ಮಾಣಿ. 
 "ಒಹ.. ನಾ ಒಡೆಲನಾ?" ಅಂದೆ.  ಕಡಿ ಕಮಚಿ ಬಿದ್ದ ಮೇಲೆ ಕೇಳ ಪ್ರಶ್ನೆ ಅಲ್ಲ ಅದೂ.. ಆದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಯನ್ ಬಾಯಿಂದ ಬಂತಕು. 🙆

ಅಷ್ಟಾದ ಮೇಲೆ ಊಟ ಮಾಡಿ ಕವಳ ಹಾಕ್ತೇ ಇದಿದ್ದಿ... ಎಂಬುಲೆನ್ಸ್ ಶಬ್ದ ಕೇಳ್ತು... ನಂಗ ಎಲ್ಲಾ ಮಕಮಕ‌ ನೋಡ್ಕಂಡ್ಯ... ಸೀದಾ ಮನಸಲ್ಲಿ ಬಂದದ್ದೇ  "ಸುಬ್ರಾಯ ಭಟ್ರು?!" 

ಬಡಬಡ ಎದ್ದು ರಸ್ತೆಗೆ ಹೋದ್ರೆ ಹೌದು.. ಸುಬ್ರಾಯ ಭಟ್ರೇಯ..  !! ಓಂ ಶಾಂತಿ 🙏

ನಾ ಮದಲೆಲ್ಲ ನಂಬತಿದ್ನಿಲ್ಲೆ... ಅಜ್ಜಿಯ, ಆಯಿಯ ಈ ನಮ್ನಿ ನಂಬ್ಕೆ ಎಲ್ಲವಾ. ಇದೆಲ್ಲ  ಮೂಢನಂಬಿಕೆಗಳೇ ಹೌದ? ಅಥವ ಈ  ನಮ್ಮ ಹೆರಿತಲೆಗಳು ಅವರ ಅನುಭವದಿಂದ ಇದನ್ನೆಲ್ಲಾ ಹೇಳ್ತಿದ್ವ?  ಒಂದೂ ಅರ್ಥಾಗ್ತಿಲ್ಯಪ !!

🙏🙏
- ಶ್ಯಾಂ ಭಟ್, ಭಡ್ತಿ
21-03-2022
 #ಹವಿಹಾಸ್ಯ - 
ಲಘುನಗು

Nov 27, 2021

ಡಿಎನ್ಸಿ ಮಾಡ್ಸೂ

ತಲೆಬರಹ:
ಗುನಗನ ಕಷ್ಟ ಗುನಗಂಗೆ  ಎಂಬ ಒಂದು ಕಥೆ ಬರೆದಿದ್ದೆ ಕೆಲ ದಿನಗಳ ಹಿಂದೆ. ಅದನ್ನೋದಿದ ಓದುಗ ನನ್ನಣ್ಣ ಈ ವಿಷಯವ ನೆನಪು ಮಾಡಿದ.

ಹೌದು ನಮ್ಮಲ್ಲಿ ಈ ಕಥೆಯನ್ನೂ ಹಿರಿಯರು ಹೇಳ್ತಾರೆ. ಕೇಳಿ.. ನಡೆದ ಘಟನೆಯಂತೆ ಇದು.  (ನಾ ಕೇಳಿದಂತೇ ಗೀಚಿದ್ದೇನೆ)
-----

     ರೀತಿ ರಿವಾಜುಗಳಿಂದ ಆ ವರ್ಷದ ಹಬ್ಬ ನಡೆಯುತ್ತಿತ್ತು. ಕಲಶ ಹೊರುವ ಗುನಗ ಸಲ್ಪ ಅಕ್ಷರಸ್ತ. ವ್ಯಾವಹಾರಿಕ ಜ್ಞಾನವೂ ಇತ್ತು ಅವನಿಗೆ ಎನ್ನಿ.

   ಕಲಶ ಹೊರುವವನಿಗೆ 'ಭಾರ' ಬರ್ತದೆ. 'ಭಾರ' ಬರುವುದು, ಎಂದರೆ ಮೈಮೇಲೆ ಶ್ರೀ ದೇವರ ಆಹ್ವಾಹನೆಯಾಗುವುದು ಎಂಬ ನಂಬಿಕೆಯಿದೆ.
     ಕಲ್ಲಿನ ವಿಗ್ರಹ ವರ್ಷಪೂರ್ತಿ ಮಾತನಾಡದು. ಆದರೆ ಅದೊಂದು ದಿನ (ಹಬ್ಬದ ದಿನ) ಆ ದೇವರು ಕಲಶ ಹೊತ್ತವನ ಮೇಲೆ ಆಹ್ವಾಹನೆಯಾಗುತ್ತಾನೆ !  ಹಾಗಾಗಿ ತನ್ನ ಸಂಕಷ್ಟ, ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡರೆ ಆ ದೇವ ಪರಿಹರಿಸಬಹುದು... ಎಂಬ ನಂಬಿಕೆ ಹುಲುಮಾನವನಲ್ಲಿ.  ಹಾಗಾಗಿಯೇ 'ಹೇಳಾಣಿಕೆ' ಆಗ್ತದೆ ಆಗ. ಆ ಸಂದರ್ಭದಲ್ಲಿ ದೇವರ ಆಹ್ವಾಹನೆಯಾದ ಗುನಗನ ಬಾಯಿಂದ ಹೊರಟ ಪರಿಹಾರ ಕ್ರಮದಿಂದ ಭಕ್ತರ ಸಮಸ್ಯೆ ಪರಿಹಾರವಾದ ನಿದರ್ಶನಗಳೂ ಇಲ್ಲದಿಲ್ಲ. ಹಾಗಾಗಿ  "ಹೇಳಾಣಿಕೆ"ಯೇ ಭಕ್ತನ ಮನಸ್ಸಿಗೊಂದು ಆಶಾ ಕಿರಣ.

  ಮಕ್ಕಳಾಗದ ಬಡ ಭಕ್ತನೊಬ್ಬ ದೇವರಲ್ಲಿಯೇ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳುವ ಬಯಕೆಯಲ್ಲಿ ಅಂದು ಬಂದಿದ್ದ. 

ಹಾಗೆಯೇ ಈ ಭಕ್ತ ತೋಡಿಕೊಂಡ ತನ್ನ ಅಳಲ - "ದೇವರೇ ನನಗೆ ಮಕ್ಕಳಾಗಲಿಲ್ಲ.. ಮದುವೆಯಾಗಿ ಐದು ವರ್ಷ ಆಯ್ತು .. ಪರಿಹಾರ ಕೊಡಬೇಕು"

ತಕ್ಷಣ ಕಲಶ ಉಲಿಯಿತು.
"ಡಿ ಎನ್ ಸಿ ಮಾಡಸೂ"  !!

ಅಡಿಬರಹ :
D&C ಅಂದ್ರೆ Dilation & Curettage is a procedure to clear uterine lining after miscarriage or abortion

ಸುಮಾರು 70- 80 ರ ದಶಕದಲ್ಲಿ .. ಪದೇ ಪದೇ ಗರ್ಭ ನಿಲ್ಲದ ಸಂದರ್ಭಗಳಲ್ಲಿ ಈ ಚಿಕಿತ್ಸೆ ಚಾಲ್ತಿಗೆ ಬಂತು.

06/09/2021
ದಿಲ್ಲಿ

Oct 13, 2021

ಸುಬ್ರಾಯ ಶೆಟ್ರು


ಬೇರೆವರ ಟೀಕೆ ಟಿಪ್ಪಣಿಗೆ ನಾವು ಎಲ್ಲಾ ಸಲ ತಲೆಬಾಗವು ಅಥವ ತಿದ್ಕಳವು ಹೇಳಿಲ್ಲೆ. ನಮ್ಮ ನಮ್ಮ ಅಭಿಪ್ರಾಯದಂತೇ ಬದುಕವು ನಾವು ಅಲ್ದ?

ವಂದು ನಿಜ ಘಟನೆ ನೆನಪಾತು.. ನಾ ಶಾಲೆಗೆ ಹೋಗಕಾರಿನ ಘಟನೆ ..

ಸುಬ್ರಾಯ ಶೆಟ್ಟಿ ಹೇಳಿ ಆಗಿನ ಕೆಎಸ್ಸಾರ್ಟೀಸಿಯ ವಬ್ಬ ಪ್ರಾಮಾಣಿಕ ಡ್ರೈವರ...  ತನ್ನ ವೃತ್ತಿ ಜೀವನದ ಕೊನೆಯಲ್ಲಿದಿದ್ದ. ಅವನ ಇಡೀ ವೃತ್ತಿ ಜೀವನದಲ್ಲಿ ಯಾವುದೇ ತಪ್ಪು ಮಾಡದ ಸರ್ಕಾರಿ ಸೇವಕ ಅಂವ (ಅವನ್ನ ನೌಕರ ಹೇಳಿರೆ ಅದು ಅವಂಗೆ ಅಗೌರವ ಆಗತು)  ಜೀವಮಾನದಲ್ಲಿ ವಂದೇ ವಂದು ಎಕ್ಸಿಡೆಂಟೂ ಮಾಡದಂವ ಹೇಳ್ವ ಹೆಗ್ಗಳಿಕೆ ಆವರೆಗೂ ಇತ್ತು ಅಂವಂಗೆ

ಕುಮಟಾ ಡಿಪೋ ದಲ್ಲಿ ತನ್ನ ಸೇವೆಯ ಕೊನೆಯ ಕೆಲ ವರ್ಷಗಳನ್ನ/ದಿನಗಳನ್ನ ಕಳೀತೇ ಇದಿದ್ದ.

ಆದರೆ ಡಿಪಾರ್ಟಮೆಂಟಿನಲ್ಲಿ ಪ್ರಾಮಾಣಿಕ ಸೀದಾ ಸರಳ ಸಹಜ ಮನುಷ್ಯನೇ ಆದರೂ  ಯಂಗಳಂಥ  ನವಯುವಕರಿಗೆ ಅಂವ "ಜಬ್ ಡ್ರೈವರ" ... ಅಂವ ಬಸ್ ಹತ್ತದಾ ಅಂದ್ರೆ 'ಇವತ್ ಹೆಬ್ಬಾನಕೆರೆ ಬಸ್ಸು ಲೇಟು' ಹೇಳೇ ಅರ್ಥ.

ಅಸಲಿಗೆ ಬಸ್ ಲೇಟಾಗ್ತಿತ್ತಿಲ್ಲೆ. ಸರಿಯಾದ ಟೈಮಿಗೆ ಹೊರಡ್ತಿತ್ತು ಬಸ್ಸು. ಸರಿಯಾದ ಸಮಯಕ್ಕೇ ಗಂತವ್ಯವ ಮುಟ್ಟಸ್ತಿದ್ದ ಅಂವ‌. ಆದರೆ  ಬೇರೆ ಡ್ರೈವರಂದಿಕ್ಕ ಇದ್ದಾಗ 5 ಗಂಟೆಗೆ ಕೂಪನಂಗಡಿಗೆ ಬಪ್ಪ ಬಸ್ಸು ಆ ದಿನ  ಐದೂಕಾಲಾಗ್ತಿತ್ತು.

ಇಲ್ಲಿ ಕೆ‍ಎಸ್ಸಾರ್ಟೀಸೀ ಬಸ್ಸಿನ ಬಿಡುವ ಸಮಯ ಮತ್ತು ತಲುಪುವ ಸಮಯದ ಬಗ್ಗೆ (ನಿಂಗಕ್ಕೆಲ್ಲ ಅರಿವಿದ್ದು ಆದ್ರೂವ) ಆ ರೂಟ್ ಗೊತ್ತಿಲ್ಲದವರಿಗಾಗಿ ಚುಟುಕಾಗಿ ಹೇಳವು.

ಬಿಡುವ ನಿಲ್ದಾಣದಿಂದ  ತಲುಪುವ ನಿಲ್ದಾಣದವರೆಗಿನ  ದೂರ ಮತ್ತು ನಡುವಣ ರಸ್ತೆಯ ಪರಿಸ್ಥಿತಿ ಮತ್ತು ನಡುವಣ ನಿಲುಗಡೆ ಮತ್ತು ಹೋಗುವ ಬಸ್ಸಿನ ಮಾದರಿಯನ್ನವಲಂಬಿಸಿ ಕಾಲನಿರ್ಣಯ ಮಾಡಿಟ್ಟಿರ್ತ.
ಅಂದ್ರೆ  ಕುಮಟಾದಿಂದ ಹೊರಟ ಬಸ್ಸು ವಾಲಗಳ್ಳಿ, ಕೂಜಳ್ಳಿ,  ಚಂದಾವರ, ಕೆಕ್ಕಾರ, ಕಡತೋಕ, ಹೆಬ್ಬಾನಕೆರೆ, ನೀಲಕೋಡ, ಅರೆಅಂಗಂಡಿ, ಸಂತೆಗುಳಿ, ಚಾಂದ್ರಾಣಿ  ಮಾರ್ಗವಾಗಿ ಹೊನ್ನಾವರ ತಲುಪಲೆ ಎಷ್ಟು ಸಮಯ ಬೇಕೋ ಅಷ್ಟು + ನಿಲುಗಡೆಯ ಸಮಯ + ರಸ್ತೆಯ ಪರಿಸ್ಥಿತಿಯಿಂದಾಗಿ ಅಪ್ಪ  ತಡ ಇದನ್ನೆಲ್ಲ ಸೇರಿಸಿ ಕಾಲನಿರ್ಣಯ ಮಾಡ್ತಿದ್ದ ಆವಾಗೆಲ್ಲವ. ಇದಕೆಲ್ಲ ಭಾರೀ ಟೀಮೇ ಇತ್ತನಪ !

ಹೌದು
ಸುಬ್ರಾಯ ಶೆಟ್ಟಿ ಹಂಗೇ  ಆಗಿದ್ದ

5 ಗಂಟೆಯ ಬಸ್ಸು ಹೇಳಾದ್ರೆ 10 ನಿಮಿಷ ಮೊದಲೇ ಬಂದು ಗಾಡಿ ಸ್ಟಾರ್ಟ್ ಮಾಡಿ... ಡುರ್ಡುರ್ ಗೆಡಸಿ... ಅದರ ಆವಾಜ್ ಮೇಲೇ ಗಾಡಿ ಸರಿ ಇದ್ದ ಇಲ್ಯ ನೋಡಿ ಗೊತ್ತಾಗ್ತಿತ್ತು ಅಂವಂಗೆ. ಸ್ಟಾರ್ಟ್ ಮಾಡಿದ ಮೇಲೆ ಮತ್ತೆ ಕೆಳಗಿಳದು ಹೋಗಿ ಪ್ರತೀ ಸಲ ಆರೂ ಚಕ್ರ ಸಮಾ ಇದ್ದ ಇಲ್ಯ ನೋಡ್ಕಂಡು... ಅದರ ಹವಾ ಚೆಕ್ ಮಾಡ್ಕ ಬಂದು ಮತ್ತೆ ಡ್ರೈವರ ಸೀಟಲ್ಲಿ ಕೂತ್ಗತಿದ್ದ ಪುಣ್ಯಾತ್ಮ ಅದು.

ಇಲ್ಲಿ‌ ಕೆಲವು ಮಾಹಿತಿಗಳು :
ಕುಮಟಾ ಡಿಪೋ
ಕೆ‍ಎಸ್ಸಾರ್ಟೀಸಿಯ ಕುಮಟಾ ಡಿಪೋ ಅಂದ್ರೆ ಕುಮಟಾ ಮತ್ತು ಹೊನ್ನಾವರ ಎರ್ಡೂ ತಾಲೂಕುಗಳೂ ಸೇರಿ ಒಂದು ಡಿಪೋ.

ಹೆಬ್ಬಾರ್ನಕೆರೆ ಬಸ್ಸು ಅಂದ್ರೆ -  ಕುಮಟಾ ಹೆಬ್ಬಾರ್ನಕೆರೆ ಮಾರ್ಗವಾಗಿ  ಹೊನ್ನಾವರ

ಚಿಪ್ಪಿಹಕ್ಕಲ ಬಸ್ಸು ಅಂದ್ರೆ - ಕುಮಟಾ ಚಿಪ್ಫಹಕ್ಕಲ ಹೆಬ್ಬಾರ್ನಕೆರೆ ಮಾರ್ಗವಾಗಿ ಹೊನ್ನಾವರ

ಎರ್ಡೂ ಬಸ್ಸುಗಳು ಈ ದೇವತೆಕೆರೆಯ ನಂತರ ರಾಮತೀರ್ಥದವರೆಗಿನ ಜನಕ್ಕೆ ಅನುಕೂಲವೇಯ.

ಕಥೆ ಅರ್ಥ ಅಪ್ಪಲೆ ಹೆಬ್ಬಾನಕೆರೆ ಯ ಗುರ್ತಿಲ್ದೋದವಕೆ ಈ ವಿವರ ಅಗತ್ಯ ಆದ್ದರಿಂದ ಹೇಳ್ದೆ‍.
ಆಗಲಿ
ಮುಂದೋಪನ ?

ಈ ಸುಬ್ರಾಯಶೆಟ್ಟಿಗೆ ಅದೊಂದು ಕರಾಳ ದಿನ.   ಆ ದಿನ ಯಾವಾಗನಂಗೇಯ ಸಮಯಾನುಸಾರ 5 ಗಂಟೆಯ ಹೆಬ್ಬಾನಕೆರೆ ಬಸ್ಸ್ ಹತ್ತಿ, ಸ್ಟಾರ್ಟ್ ಮಾಡಿ ತನ್ನ ದಿನಚರಿಯ ಕೆಲಸ ಮುಗಸಿ ಹೊರಟ - ಕುಮಟಾ ಬಸ್ ನಿಲ್ದಾಣದಿಂದವ.
ವಿಪರೀತ ಉಹೆಚ್ಚು ಮಳೆ ಆ ದಿನ.‌

ಕಂಡಕಂಡಲ್ಲಿ ರಸ್ತೆಯ ಮೇಲೆ ನೀರು ತುಂಬಿ ಹರೀತಿದ್ದದ್ದು ಚಂದಾವರ ಹೊಳೆಯ ನೆಗಸ ಮುಂದೆ ದೊಡ್ಡ ವಿಷ್ಯವೇ ಅಲ್ಲ.

ಚಂದಾವರ ಹೊಳೆಗೆ ಆಗ ಈಗಿಪ್ಪ ದೊಡ್ಡ ಬ್ರಿಜ್ ಆಗಿತ್ತಿಲ್ಲೆ. ಆಗ್ತಾ ಇದಿತ್ತು. ಕಟ್ಟುವ ಕೆಲಸ ನಡೀತಾ ಇತ್ತು. ಈಗಲೂ ಹೊಸ ಬ್ರಿಜ್‌ನಿಂದ ಕಾಂಬ ಹಳೇ ಸಣ್ಣ ಬ್ರಿಜ್ಜೇ ಆವಾಗಿನ ಸಂಪರ್ಕ ಸಾಧನ.

ತಗ ಸುಬ್ರಾಯ ಶೆಟ್ಟಿ ತನ್ನದೇ ವೇಗದಲ್ಲಿ  ವಾಲಗಳ್ಳಿ, ಕೂಜಳ್ಳಿ, ಮಲ್ಲಾಪುರ, ಚಂದಾವರ ನಾಕಾ ದಾಟಿ  ಹೊಳೆಯ ಹತ್ರ ತಂದ ತನ್ನ ಪ್ರೀತಿಯ ಬಸ್ಸ.‌

ಚಂದಾವರ ಹೊಳೆಯ ಪೂಲ್‌ ಮೇಲೇ  ನೆಗಸಿನ ನೀರು ತುಂಬಿ ಹರೀತಾ ಇದ್ದದ್ದ ಕಂಡ ಸುಬ್ರಾಯ ಶೆಟ್ಟಿ ಕಣ್ಣಳತೆಯಲ್ಲೇ ನೆಗಸ ಅರಿತು ಗಾಡಿ ನಿಲ್ಲಸದ್ದೊಂದೇ ಅಲ್ಲ.  ಸೈಡಿಗೆ ಹಚ್ಚಿ ಬಂದ್ ಮಾಡೇಬುಟ.

ಸಾಮಾನ್ಯವಾಗಿ ಆ ಬಸ್ಸಲ್ಲಿಪ್ಪದು 75% ಕಾಲೇಜ ಹುಡಗ್ರು. ನನ್ನ ಥರದ ಬಿಶಿರಕ್ತ ಮೇಲಿಂದ ಮ್ಯಾಣ.

"ಬಸ್ ದಾಟದೋದಂಥಾ ಮಹಾ ದೊಡ್ ನೆಗಸೆಲ್ಲ ಅಲ್ಲ ..‌ ದಾಟಿ ಹೋಗಲಕ್ಕ" ಅಂದ ವಬ್ಬಂವಾ

"ಬಸ್ಸಿನ ವಜ್ಜೆಗೆಲ್ಲ ನೆಗಸಲ್ವಾ.. ನಮ್ಮ ಗುಡ್ನಕಟ್ ನೆಗಸ ಮುಂದೆ ಇದೆಲ್ಲ ನೆಗಸ?!" ಅಂದ ನಾಯ್ಕರ ಪೋರ

"ತೊಂದ್ರಿಲ್ರಾ ದಾಟೋಗ್ತದೇ ಶೆಟ್ರೇ ..‌ಹೆದರುದ್ ಬೇಡ... ಹೊಡೀರಿ ಗಾಡಿ" ಅಂದ ಗಾಣಗರ ಪೋರ ಶ್ರೀನಾಥ.

" ಮಂಯಾತಾ... ಅಯ್ಯ ಸುಬ್ರಾಯ್ ಶೆಟ್ರು ಈ‌ ನೆಗಸಲ್ಲೆಲ್ಲ ಗಾಡಿ ಹೊಡದ್ರೆ.... ನರಿಯಣ್ಣ ಕಥೆ ಹೇಳ್ತದ್ಯೋ " ಅಂದ ಅಗ್ನೇತ್ರಿ ಮಾಣಿ.

"ಶೆಟ್ರಗೆ ಜೀಂವದ ಹೆದ್ರಕ್ಯ" ಅಂದ ನರಸಪ್ಪನ ಮನೆ ಮಾಣಿ.

"ನಾ 34 ವರ್ಷ ಡ್ರೈವರಕೆ ಮಾಡಿ ಅನುಭವ ಇದಿದ್ರೆ ಬಸ್ ನಿಲ್ಸೂದೇ ಇಲ್ಲಾಗಿತ್ತು" ಅಂದ ಎಲೆ ಸುಬ್ಬಣ್ಣ.

"ಅದಕೆಲ್ಲ ದಮ್ ಬೇಕಾ" ಅಂದ ಕೆಕ್ಕಾರ್ ಗಜು ಅಣ್ಣ.
ತಗ

ಪ್ವಾರಗಳ ಇಂಥ ಹಲವದ್ನೆಂಟು ಮಾತು ಮತ್ತೆ ಮೇಲಿಂದ ಕಂಡಕ್ಟರನೂ ಈ ಹುಡ್ಗಾಟಗತಿ ಹುಡುಗ್ರ ಸಾಥ್ ಕೊಟ್ನ ಇಲ್ಯ....
ಮೇಲಿಂದ ಅಲ್ಲೇ ನೆಗಸಿನ ಮಜ ನೋಡ್ತ ಇದ್ದ ಕೆಲವು ಲೋಕಲ್ ಮುಸಲ್ಮಾನ ಹುಡಗ್ರು "ಈಗ ಮಾತ್ರ ಮೋಹನ್ ಹೆಗಡ್ರ್ ಚಿಪ್ಪಿನ ಲಾರಿ ದಾಟಸ್ಗ ಹೋಗದೆ ಡ್ರೈವರೂ" ಅಂದ್ವ ಇಲ್ಯ...
ಸುಬ್ರಾಯ ಶೆಟ್ರ ಬಿಪಿ ಯೇರೋತು, ಸಹನೆ ಮೀರೋತು.

  ಹತ್ತೇಬುಟ್ರು ಗಾಡಿಯ.
ಸ್ಟಾರ್ಟ್ ಮಾಡಿ ಗುರ್ಗೆಡಸಿ ಫಸ್ಟ್ ಗೇರ್ ಹಾಕೇಬುಟ್ರು.

ಗಾಡಿ ಹೋತು ಮದಲು  ರಸ್ತೆಯ ಮೇಲೆ ....‌ಮತ್ತೆ ಆ ಶಿಥಿಲ ಸಣ್ಣ ಬ್ರಿಜ್ ಮೇಲೆ ..‌ ಸುಮಾರು ಅರ್ಧ ಬ್ರಿಜ್ ದಾಟದ್ದೇ ಆ ನೆಗಸಿನ ರಭಸಕ್ಕೆ ತಡದ್ದಿಲ್ಲೆ ಬಸ್ಸು. ಹೋಗೀ ಹೋಗಿ ತೇಲೋತು.

ಪುಣ್ಯಕ್ಕೆ ಹೊಸಾ ಬ್ರಿಜ್ ನ ಕನಸ್ಟ್ರಕ್ಷನ್ ನಡೀತಾ ಇತ್ತು. ಹೊಸ ಬ್ರಿಜ್ಜಿನ ಕಂಬಗಳು ಗಟ್ ಮುಟ್ಟಾಗಿತ್ತು... ಹೋಗಿ ಹೋಗಿ ಬಸ್ಸು ಆ ಹೊಸಾ ಬ್ರಿಜ್ಜಿನ (ಈಗಿನ ಬ್ರಿಜ್ಜು) ಕಂಬಕ್ಕೆ ತಾಡತು...

ದೇವರ ದಯವೋ,
ಸುಬ್ರಾಯ ಶೆಟ್ಟರ ಇಷ್ಟು ವರ್ಷಗಳ ಪ್ರಾಮಾಣಿಕ‌ ಸೇವೆಯ ಪುಣ್ಯದ ಫಲವೋ ವಂದೂ ಸಾವು ನೋವಾಜಿಲ್ಲೆ

ಅಕ್ಕ ಪಕ್ಕದ ಜನ ಬಂದು ಎಲ್ಲ ಪ್ರಯಾಣಿಕರನ್ನೂ ಬಚಾವ್ ಮಾಡದ.
ಆಗಬಹುದಿದ್ದ ಮಹಾ ದೊಡ್ಡ ದುರಂತವೊಂದು ತಪ್ಪಿತ್ತು.

ಆದರೆ ಈ ಘಟನೆಯಿಂದ ಇಡೀ ಜೀವಮಾನದ ಸೇವೆಯಲ್ಲಿ ವಂದೂ ತಪ್ಪು ಮಾಡದ, ಸೇವಾನಿವ್ರತ್ತಿಗೆ ಐದೋ ಆರೋ ತಿಂಗಳುಗಳು ಮಾತ್ರ ಬಾಕಿ ಇದ್ದ  ಸುಬ್ರಾಯ ಶೆಟ್ಟರ ವೃತ್ತಿ ಜೀವನದಲ್ಲೊಂದು ಕಪ್ಪು ಚುಕ್ಕೆ ಬಿದ್ದಾಗೋಗಿತ್ತು.

ಈ ಕಥೆಯ ನೀತಿ..
ನಮಗೆ ಸರಿಯಾಗಿ ಗೊತ್ತಿರುವ ಕೆಲಸದಲ್ಲಿ ಬೇರೆಯವರ ಸಲಹೆ ಅಥವಾ ಚಿತಾವಣೆಗೆ ಹೆಚ್ಚಿನ ಬೆಲೆ ಕೊಡಬಾರದು

ಅಡಿಬರಹ :
ಇದು ಸತ್ಯ ಘಟನೆ
ದಿನ ದಿನಾಂಕ ವರ್ಷ ಎಲ್ಲ ನೆನಪಿಲ್ಲೆ ಯಂಗೆ
ಹುಂ  ಆದರೆ ಕೆಲವು ಹೆಸರುಗಳು ಕಾಲ್ಪನಿಕ ( ಸೇರ್ಸಿದ್ದಿ)
ಜನ ಹೇಳ್ತ
ಹೇಳೂದೇ ಅವರ ಧರ್ಮ
ಹೇಳ್ಕಳ್ಳಿ ನಮಗೇನಡ !
ಆದರೆ ಕೊನೆಯಲ್ಲಿ ನಮಗೆ ಏನನಿಸ್ತೋ .. ನಮ್ಮ ಆತ್ಮ ಸಾಕ್ಷಿ ಏನು ಹೇಳ್ತೋ ಅದನ್ನೇ ಮಾಡವು ನಾವು

ನಮಸ್ಕಾರ
- ಶ್ಯಾಂ ಭಟ್
13/10/21
ದಿಲ್ಲಿ 

May 17, 2020

ಗುನಗನ ಕಷ್ಟ ಗುನಗಂಗೆ

ಹಣೆಬರಹ:
        'ಗುನಗ' ಎಂಬ ಅಡ್ಡ ಹೆಸರಿನ (Sirname) ಒಂದು ಪಂಗಡ ಇದೆ ಘಟ್ಟದ ಕೆಳಗೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ವಾಲಗಕ್ಕೆ ಬಂಡಾರರು ಇರುವಂತೆಯೇ ಮೂಲತಃ ಈ ಗುನಗರೂ ಕೂಡ ದೇವರ ಸೇವೆಗಾಗಿಯೇ ಮುಡಿಪಾದ ಪ್ರಾಮಾಣಿಕ ಜನಾಂಗ.
     ಕೆಲವು ದೇವಸ್ಥಾನ ಗಳಲ್ಲಿ ಅದೂ ಸಾಮಾನ್ಯವಾಗಿ ಹೊರಾಂಗಣದ ದೇವರುಗಳಾದ ಜಟಗ, ಮಾಸ್ತಿ, ನಾಗರ,
ಚೌಡಿ ಇತ್ಯಾದಿಗಳನ್ನು ಕ್ಷುದ್ರ ದೇವತೆಗಳು ಅಥವಾ ಪರಿವಾರ ದೇವತೆಗೆಂದು ಕರೆಯುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಕೀಳ್ ದೇವರು ಅಂತಾರೆ. ಆ ವಿಷಯಕ್ಕೆ ನಾ ಹೋಗುವುದಿಲ್ಲ.
       ಸಾಮಾನ್ಯವಾಗಿ ಈ ಕ್ಷುದ್ರದೇವತೆಗಳ ಸ್ಥಾನಗಳಲ್ಲಿ ವಾರ್ಷಿಕವಾಗಿ ಬಂಡಿ ಹಬ್ಬವೆಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಬಂಡಿ ಹಬ್ಬದ ಆಕರ್ಷಕ ಸಂಪ್ರದಾಯ ವಿಶೇಷವೆಂದರೆ ಶ್ರೀ ದೇವರ ಕಲಶ ಮತ್ತು ಕೆಂಡ ಹಾಯುವ ಪ್ರಕ್ರಿಯೆ.       
       ಸಾಮಾನ್ಯವಾಗಿ ಈ ಶ್ರೀ ದೇವರ ಅಲಂಕೃತ ಕಲಶ ಹೊರುವವರು ಮೂಲತಃ ಗುನಗರ ವಂಶಜರು. ಇನ್ನು ಕೆಲವೆಡೆ ಬ್ರಾಹ್ಮಣರೇ ಗುನಗರ ಕೆಲಸ ಮಾಡುವುದೂ ಇದೆ. 
      ಕೆಂಡ ಹಾಯುವವರು ಸಾಮಾನ್ಯವಾಗಿ ಗೌಡರು ಮತ್ತೆ ಪಟಗಾರರು.
------

     ವಂದಾನೊಂದು ಕಾಲದಲ್ಲಿ ಹೀಂಗಿರ್ಪ ವಂದು ಬಂಡಿ ಹಬ್ಬದಲ್ಲಿ ... ಗುನಗನ ಕಷ್ಟದ ಕಥೆ ವ್ಯಥೆ ಇದು.
      ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ವಂದ್ ವಾರ ಮದಲೇ ಎಲ್ಲಾ ತರದ ವೃತ ಮಾಡಿಕೊಂಡು... ದೇವಸ್ಥಾನ ಭಟ್ಟರೇ ಮಂತ್ರಿಸಿಕೊಟ್ಟ ಹೊಸ ಜನಿವಾರ ಧರಿಸಿ ಕಲಶ ಹೊರಲು ಸನ್ನದ್ಧರಾಗ್ತಾರೆ.
ಅವರ ಮಾತಿನಲ್ಲೇ ಹೇಳುವುದಾದರೆ "ರಾಶೀ ನಮನಿ ವೃತ ಅದೇ" ಎನ್ನುತ್ತಾರವರು.
ಆದರೆ ದೇವಸ್ಥಾನ ಭಟ್ಟರ ಕೇಳಿದರೆ "ಎಂತದೂ ಇಲ್ಲೇ ಬೆಳಿಗ್ಗೆ ಮಿಂದ್ಕ ಬಂದ್ರಾತು" ಎಂಬ ಉತ್ತರವಿರುತ್ತಿತ್ತು.

      ಆ ವರ್ಷದ ಬಂಡಿ ಹಬ್ಬದ ಸಮಯದಲ್ಲಿ ಪ್ರತೀ ವರ್ಷದಂತೇ ಕಲಶ ಹೊರುವ ಮುದುಕ ಗುನಗನ ಆರೋಗ್ಯ ಸರಿಯಿಲ್ಲದ ಕಾರಣ ಆತ ತನ್ನ ಮಗನಿಗೆ ಆ ಜವಾಬ್ದಾರಿ ವಹಿಸಿದ. ಈ ವರ್ಷ ಮೊದಲ ಬಾರಿಗೆ ಕಲಶ ಹೊರುವ ಅವಕಾಶ ಸಿಕ್ಕ ಮಗನಿಗಾದರೋ ಒಂಥರ ಹೆಮ್ಮೆ, ನೆಲದ ಮೇಲಿರಲಿಲ್ಲ ಆತ. ಹಾಗಾಗಿ ಈ ಮರಿ ಗುನಗ ಬಂಡಿ ಹಬ್ಬದ ದಿನ ಬೆಳಗಾ ಬೆಳಗ್ಗೆ ಎದ್ದು ಮಿಂದು ಗಿಂದು ತಯಾರಾದ.. ಅವಂಗೆ ಆ ದಿನ ಜೀವನದಲ್ಲೇ ಸಿಗದ ರಾಜ ಮರ್ಯಾದೆ. ಹಾರ ತುರಾಯಿ ಹಾಕಿ ದೇವರ ಹಂಗೇ ನೋಡುತ್ತಾರಲ್ಲ. ಆತನ ಖುಷಿಗೆ ಪಾರವೇ ಇಲ್ಲ.

     ಬೆಳಗಾ ಬೆಳಗ್ಗೆ ಎದ್ದು ಹೊಸದಾಗಿ ಖರೀದಿಸಿದ ಮಡಿಯನ್ನು ಭಟ್ಟರ ಹಂಗೇ ಉಡುವ ವಿಫಲ ಪ್ರಯತ್ನ ಮಾಡಿ.. ಅಂತೂ ಅಪ್ಪನ ಸಹಾಯದಿಂದ ಉಟ್ಟು... ದೇವಸ್ಥಾನದ ಬಾಗಿಲಲ್ಲಿ ಬಂದು ಕುಂತ ಮರಿ ಗುನಗ.
       ಭಟ್ಟರು ಯಾವಾಗಲೂ 'ಸಣ್ಣ ಗುನಗಾ ಬಂದ್ಯನಾ' ಎಂದು ಏಕವಚನದಲ್ಲಿ ಕರೆವವರು.. ಇಂದು ಮಡಿ ಉಟ್ಟ ಗುನಗಂಗೆ ಸಲ್ಪ ಜಾಸ್ತಿನೇ ಮರ್ಯಾದೆ ಕೊಟ್ಟು ಮಾತಾಡಿಸಿದರು.
"ಸಣ್ಣ ಗುನಗರೇ.. ಬಂದ್ರಾ?" ಎಂದು
"ಹೌದ್ರಾ ಭಟ್ರೇ" ಅಂದ ಗುನಗ.
"ಇಷ್ಟ್ ಬೇಗ ಮಡಿ ಹಚ್ಗ ಎಂತಾ ಮಾಡ್ತ್ರಿ ಗುನಗರೇ... ಮಧ್ಯಾಹ್ನ 4 ಗಂಟೆಗೆ ಮಡಿ ಹಚ್ಚಿರೆ ಸಾಕಾಗಿತ್ತನ" ಅಂದ್ರು ಭಟ್ಟರು
ಈತ ಇನ್ನೂ ಮೂರಿಂಚು ಏರಿ ಹೋದ.
"ಇಲ್ಲ ಇಲ್ರಾ.. ತೊಂದರಿಲ್ರಾ" ಅಂದ.
"ಸರಿ" ಅಂದ್ರು ಭಟ್ರು.
       ಸರಿ ಮಧ್ಯಾಹ್ನ ಕಲಶ ಹೊರುವ ಹೊತ್ತಾಯಿತು. ಮಡಿಯ ಸಮಸ್ಯೆ ಗೊತ್ತಿದ್ದ ಭಟ್ರು ಹೇಳಿದ್ರು... "ಗುನಗರೇ... ಮೂತ್ರ ಗೀತ್ರಕ್ಕೆ ಹೋಗುದಿದ್ರೆ ಮಡಿ ಬಿಚ್ಚಾಯ್ಕಂಡು ಹೋಗ್ ಬಂದ್ ಬುಡಿ.. ಕಡೆಗೆ ಕಲಶ ಹೊತ್ತ ಮೇಲೆ ಆಗೂದಿಲ್ಲ"
"ಇಲ್ರಾ ತೊಂದ್ರಿಲ್ಲರಾ" ಅಂದ ಗುನಗ

        ತಲೆಗೆ ಮಡಿಯನ್ನೇ ಮುಂಡಾಸಿನಂತೆ ಕಟ್ಟಿ ಕಲಶ ಇವನ ತಲೆ ಮೇಲಿಡಲಾಯ್ತು.
        ತಲೆಗೆ ಕಲಶ ಏರಿದ್ದೇ ತಡ... ತಗಳಿ ಗುನಗನಿಗೆ ಶುರುವಾಯ್ತು - 'ಭಾರ'.
'ಹುಂ ಹು ಹುಂ' ಎಂದು ನುಲಿತ ಶುರು ಮಾಡಿಕೊಂಡ.
         ಖಾಯಂ ಪದ್ದತಿ ಅದು ... ಅವನ ಅಜ್ಜನೂ.. ಅಪ್ಪನೂ ಹಾಗೆಯೇ ಮಾಡುವುದ ಚಿಕ್ಕಂದಿನಿಂದ ಕಂಡಿದ್ದ. ಹಾಂಗಾಗಿ ಇವನೂ ಮಾಡ್ದ.
         ಈ ಕಲಶ ಅಂದ್ರೆ .. ದೇವರ ಸಣ್ಣ ಮೂರ್ತಿಯ ಕಲಶದಲ್ಲಿಟ್ಟು ಶೃಂಗಾರಲಂಕಾರ ಮಾಡಿ ತಲೆಯ ಮೇಲೆ ಹೊತ್ತು ಇಡೀ ಊರ ತುಂಬ ನಿಗದಿತ ಸ್ಥಳಕ್ಕೆ ನಡೆದು ಹೋಗಿ... ಅಲ್ಲಲ್ಲಿ ಅದಕ್ಕೇ ಆದ ವಿಶೇಷ ಪೂಜೆ ಸ್ವೀಕರಿಸಿ ವಾಪಸ್ ಬರುತ್ತದೆ ಕಲಶ.
         ಈ ಪೂರಾ ಪ್ರಕ್ರಿಯೆಗೆ ಸುಮಾರು 5-6 ತಾಸಾದರೂ ಆಗುತ್ತದೆ. ಕಲ್ಪನೆ ಮಾಡಿಕೊಳ್ಳಿ... ಹೊತ್ತವನ ಅವಸ್ಥೆಯ. ಆ ಕಲಶ ಹೊತ್ತಷ್ಟು ಹೊತ್ತೂ ಆತ ಬಹಿರ್ದೆಶೆಗೆ ಕೂಡ ಹೋಗುವ ಹಾಗಿಲ್ಲ ಪಾಪ. ಅದಕ್ಕಾಗಿಯೇ ಭಟ್ಟರು ಆಗಲೇ ಹೇಳಿದ್ದರು. ಎಷ್ಟಂದ್ರೂ ಪೂಜೆ ಪುನಸ್ಕಾರಗಳ ಅನುಭವ ಅವರದ್ದು.

        ಹೀಗೆ ಕಲಶ ಹೊತ್ತು ಹೊರಟ ಗುನಗನಿಗೆ ಎರಡು ಮೂರು ಬದಿಯ ಪೂಜೆ ಪುನಸ್ಕಾರ ಮುಗಿಯುವಷ್ಟರಲ್ಲೇ ಮೂತ್ರ ಭಾಧೆ ಶುರುವಾಯ್ತು. ಪಾಪ ಬೆಳಗಿನಿಂದ ಭಟ್ರು ಹೇಳಿದರೂ ಕೇಳದೇ ಮಡಿ ಉಟ್ಟು ಕುಂತ ಪರಿಣಾಮ.
ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಅನುಭವಿಯಾದ ಆತನ ಅಪ್ಪನೂ ಹೇಳಿರಲಿಲ್ಲ. ಹೇಳಬೇಕಿತ್ತು ... ಆದರೆ ಮರೆತಿರಬೇಕು. ಇವನೇನು ಮಾಡಬೇಕು ಪಾಪ. ಗುನಗನಿಗೆ ತಡೆಯಲಾರದ ಒತ್ತಡ ಶುರುವಾಯ್ತು.
ತಲೆಯ ಮೇಲೆ ಶ್ರೀ ದೇವರ ಕಲಶ. ಭಕ್ತಿ ಭಾರ ಎರಡೂ ಬರ್ತ್ತಾ ಇಲ್ಲ. ಧ್ಯಾನವೆಲ್ಲ ಆ ಒತ್ತಡದ ಕಡೆಯೇ.

          ಆಗ ಅಚಾನಕ್ಕಾಗಿ ಆತನ ತಲೆಯಲಿ ಒಂದು ಉಪಾಯ ಹೊಳೆಯಿತು !!
       ಸಾಮಾನ್ಯವಾಗಿ ಕೆಲವು ಬಾರಿ ಕಲಶ ಹೊತ್ತಾಗ 'ಭಾರ' ಬರುತ್ತದೆ ಹೊತ್ತವನಿಗೆ. ಭಾರ ಅಂದ್ರೆ ದೇವರೇ ಮೈ ಮೇಲೆ ಆಹ್ವಾಹನೆಯಾಗುವುದು.

         ಅಲ್ಲೇ ದಾರಿಯ ಪಕ್ಕದಲ್ಲಿನ ಒಂದು ಕೆರೆಯ ಹತ್ತಿರ ಬಂದಿದ್ದೇ ತಡ.. ಕಲಶಕ್ಕೆ ವಿಪರೀತ 'ಭಾರ'ದ ಆಹ್ವಾಹನೆಯಾಯ್ತು. ಮುಂದೆ ಹೋಗದೇ ಅಲ್ಲೇ ಸುತ್ತ ಗಿರಿಗಿರಿ ಸುತ್ತಲು ಶುರು ಮಾಡಿದ ಗುನಗ.
ಏನೇ ಪ್ರಯತ್ನ ಮಾಡಿದರೂ ಮುಂದೆ ಹೋಗುತ್ತಿಲ್ಲ ಕಲಶ.
         ಇಂಥ 'ಭಾರ' ಬಂದ ಪರಿಸ್ಥಿತಿಯಲ್ಲಿ ಅರ್ಚಕರು ಆ ದೇವರ ಹತ್ರ ಹೇಳಾಣೇಳಿಕೆ ಮಾಡಿಕೊಳ್ಳುತ್ತಾರೆ.... ಅವರಿಗೆ ದೇವರ ಭಾಷೆ ಅರ್ಥ ಆಗ್ತದೆ.
         ಸರಿ... ಭಟ್ಟರು ಹೇಳಾಣೇಳಿಕೆ ಶುರು ಮಾಡಿಕೊಂಡರು.
"ಶಾಂತ ಆಗಬೇಕು.. ಶಾಂತ ಆಗಬೇಕು... ಎಂತಾ ತಪ್ಪು ಆಯ್ತು ಹೇಳಿ ಹೇಳಬೇಕು.. ಯಾರು ನೀವು?"
"ಚೌಡೀ" ಅಂತು ಕಲಶ.
"ಯಾವ ಚೌಡಿ? ಏನಾಯ್ತು? ಸರಿಯಾಗಿ ಹೇಳಬೇಕು" ಭಟ್ರು ಮತ್ತೆ ಕೈ ಮುಗಿದರು.
"ಪ್ರತಿಷ್ಠೆ... ಚೌಡಿ" ಎಂದಿತು ಮತ್ತೆ ಕಲಶ ಕುಣಿಯುತ್ತ.
"ಕಳೆದ ವರ್ಷ ಅಷ್ಟೇ.. ಕಳಾಹೀನ ಆದ ಚೌಡಿಯ ಮೂರ್ತಿ ತೆಗದು ಹೊಸ ಮೂರ್ತಿ ಯಥಾ ಯೋಗ್ಯ ಪ್ರತಿಷ್ಠೆ ಮಾಡಿ ಆಗದೆ.. ಮತ್ತೆಂತ ಆಗಬೇಕು ಸ್ವಾಮಿನ್" ಅಂದ್ರು ಭಟ್ರು.
"ಹಳೇ ಮೂರ್ತಿ..." ಎಂದಿತು ದೇವರು.

ಆಗ ಭಟ್ಟರಿಗೆ 'ಧಸಕ್' ಎಂದು ಅರ್ಥ ಆಗಿ ಹೋಯ್ತು. ಎಷ್ಟಂದ್ರೂ ಮಂತ್ರ ತಂತ್ರಗಳ ಅರಿವಿದ್ದ ಅನುಭವಸ್ತ ಪೂಜಾರಿ ಅವರು.
"ಹೌದು ಮಹಾ ದೇವರೇ.. ಹಳೇ ಮೂರ್ತಿ ಇಲ್ಲೇ ಇದೇ ಕೆರೆಯಲ್ಲೇ ವಿಸರ್ಜನೆ ಮಾಡಿ ಆಗದೆ... ಈಗ ಎಂತಾ ಆಗಬೇಕು?" ಭಟ್ಟರ ಪ್ರಶ್ನೆ ಮತ್ತೆ.
"ಸೊಂಟ ಮುಳುಗುವಷ್ಟು ಎದೆ ಮಟ್ಟಕ್ಕೆ ನಿಲ್ಸೂ" ದೇವರ ಆಗ್ರಹ
ತಗಳಿ, ಅಷ್ಟು ಹೇಳಿದ್ದೇ ತಡ... ಭಟ್ರು ಬಂಡಾರಿಗಳಿಗೆ ಸಂಜ್ಞೆ ಮಾಡಿದರು.
ಕಲಶ ಕೆರೆಯತ್ತ ಹೊರಟಿತು. 

....ಅಲ್ಲಿಗೆ.....
ಎದೆಮಟ್ಟ ನೀರಿನಲ್ಲಿ ನಿಂತ ಕಲಶ ಹೊತ್ತ ಗುನಗನ ಜಲಬಾಧೆಯೂ ತೀರಿತ್ತು... ಚೌಡಿಯೂ ಶಾಂತವಾಗಿದ್ದಳು.

ಹಾಗಾಗಿ ಅದಕ್ಕೂ ನಂತರ ಈ ಗಾದೆ ನಮ್ಮಲ್ಲಿ ಚಾಲ್ತಿಯಲ್ಲಿದೆ.
"ಗುನಗನ ಕಷ್ಟ ಗುನಗಂಗೆ"
-------

ಅಫಿಡವಿಟ್:
ಇದು ಕಥೆಯಲ್ಲ ... ನಡೆದ ಘಟನೆ ಎಂದು ಹಿರಿಯರು ಹೇಳ್ತಿದ್ದರು. ಹಲವು ದಿನಗಳ ಹಿಂದೆ ಹಿರಿಯ ಶ್ರೀಕಾಂತ ಭಟ್ಟರು ಅವರದ್ದೇ ಮೂಡ್ ನಲ್ಲಿ ಈ ಕಥೆ ಹೇಳಿ ಮತ್ತೆ ನೆನಪಿನ ಮೆಲುಕು ಹಾಕಿದ್ದರು. ಮತ್ತೆ ಮೊನ್ ಮೊನ್ನೆ ಆದಿತ್ಯ ಸುಬ್ರಹ್ಮಣ್ಯ ಮತ್ತೆ ನೆನಪು ಮಾಡಿಕೊಟ್ಟ. ಅವರೆಲ್ಲರಿಗೂ ಧನ್ಯ.
ಇಂತಹ ಗ್ರಾಮೀಣ ಕಥೆಗಳ ಕಾಪಿಡುವ ಪ್ರಯತ್ನ ಅಷ್ಟೇ. ಯಾವುದೇ ಜನಾಂಗವ ಟೀಕಿಸುವುದಾಗಲೀ ... ವಿಮರ್ಶಿಸುವುದಾಗಲೀ ಅಥವಾ ಪರಿಚಯಕ್ಕಾಗಲೀ ಈ ಬರಹ ಅಲ್ಲ.

ನಮಸ್ಕಾರ.
ಶ್ಯಾಂ ಭಟ್, ಭಡ್ತಿ
17-05-2020